ಕೃಷಿ ಪ್ರವಾಸೋದ್ಯಮ ನೀತಿಗೆ ಮನವಿ

0
ಕರ್ನಾಟಕ ರಾಜ್ಯ ಕೃಷಿ ಪ್ರವಾಸೋದ್ಯಮ ನೀತಿಗಾಗಿ ಕೃಷಿಕ ಪ್ರಶಾಂತ್ ಜಯರಾಮ್ ನೇತೃತ್ವದ ಕೃಷಿಕರ ನಿಯೋಗದವರು ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಅವರಿಗೆ ಮನವಿ ಸಲ್ಲಿಸುತ್ತಿರುವುದು

ಬೆಂಗಳೂರು (ಜೂನ್ 26 ) ರಾಜ್ಯದಲ್ಲಿ ಸಮರ್ಪಕ ಕೃಷಿ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಇದನ್ನು ಕರ್ನಾಟಕ ಸರ್ಕಾರ ರೂಪಿಸಿ ಜಾರಿಗೆ ತರಬೇಕೆಂದು ಕೃಷಿಕರ ನಿಯೋಗದವರು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಅವರನ್ನು ಕೃಷಿಕ ಪ್ರಶಾಂತ್ ಜಯರಾಮ್ ನೇತೃತ್ವದ ನಿಯೋಗ ಭೇಟಿ ಮಾಡಿ ರಾಜ್ಯದಲ್ಲಿ ಸೂಕ್ತ ಪ್ರವಾಸೋದ್ಯಮ ನೀತಿ ಇಲ್ಲದ ಕಾರಣ ಈಗಾಗಲೇ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು, ಮುಂದೆ ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ಆಗುತ್ತಿರುವ ಅನಾನುಕೂಲಗಳನ್ನು ವಿವರಿಸಿದರು.

ಕೃಷಿಯನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿ ಅವಲಂಬಿಸಿ ಆಸಕ್ತರಿಗೆ ಕೃಷಿ ಜೀವನದ ಆಯಾಮಗಳನ್ನು ಪರಿಚಯಿಸಲು ಕೃಷಿ ಪ್ರವಾಸೋದ್ಯಮ ಆರಂಭಿಸಿದವರು ನಿರಾಪೇಕ್ಷಣ ಪತ್ರಕ್ಕಾಗಿ ಹಲವು ಇಲಾಖೆಗಳು, ಗ್ರಾಮ ಪಂಚಾಯತಿ ಕಚೇರಿಗೆ ಅಲೆಯಬೇಕಾಗಿದೆ. ಇಲಾಖೆಗಳ, ಪಂಚಾಯತಿಗಳ ಅಧಿಕಾರಿಗಳು ಕೃಷಿ ಪ್ರವಾಸೋದ್ಯಮ ಎಂದರೆ ಮತ್ತೊಂದು ಹೋಮ್ ಸ್ಟೇ, ರೆಸಾರ್ಟ್ ಎನ್ನುವ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರಶಾಂತ್ ಜಯರಾಮ್ ವಿವರಿಸಿದರು.

ಭೂ ಪರಿವರ್ತನೆ, ಸ್ಥಳೀಯ ಆಡಳಿದ ಪರವಾನಗಿ ಅವಶ್ಯಕತೆ ಇಲ್ಲದ ಅಂಶಗಳು ನೀತಿಯಲ್ಲಿ ಇರುವ ಅವಶ್ಯಕತೆ ವಿವರಿಸಿದ ಪ್ರಶಾಂತ್ ಜಯರಾಮ್,ಈ ದಿಶೆಯಲ್ಲಿ ತಾವು ಅಧ್ಯಯನ ಮಾಡಿ ರೂಪಿಸಿದ ವಿಸ್ತೃತ ವರದಿಯನ್ನು ಸಲ್ಲಿಸಿದರು. ಕೃಷಿ ಪ್ರವಾಸೋದ್ಯಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳತ್ತ ವಲಸೆಯನ್ನು ಆದಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದೆ. ಇದರಿಂದ ಕೃಷಿಯಲ್ಲಿ ಯಶಸ್ಸು ಕಂಡ ಆಸಕ್ತರು ಕೃಷಿ ಪ್ರವಾಸೋದ್ಯಮದಲ್ಲಿಯೂ ಯಶಸ್ವಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿವರಿಸಿ ಅಲ್ಲಿನ ನೀತಿಯನ್ನು ಅಧ್ಯಯನ ಮಾಡುವಂತೆ ಕೋರಿದರು.

ನಿಯೋಗದ ಮನವಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಈಗಾಗಲೇ ತಮ್ಮ ಇಲಾಖೆಯು ಕೃಷಿ ಪ್ರವಾಸೋದ್ಯಮ ನೀತಿ ನಿರೂಪಿಸಲು ಚಿಂತನೆ ನಡೆಸುತ್ತಿದೆ. ಈ ದಿಶೆಯಲ್ಲಿ ಯಶಸ್ಸು ಕಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ನೀತಿಗಳನ್ನು ಸಹ ಅಧ್ಯಯನ ಮಾಡಲಾಗುತ್ತಿದೆ. ಈ ದಿಶೆಯಲ್ಲಿ ಪ್ರವಾಸೋದ್ಯಮ ಇಲಾಖೆಯ  ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ನಿಯೋಗದಲ್ಲಿದ್ದ ಸದಸ್ಯರು ಕೃಷಿ ಪ್ರವಾಸೋದ್ಯಮ ನೀತಿಯಿಂದಾಗುವ ಅನುಕೂಲಗಳ ಬಗ್ಗೆ ವಿವರಿಸಿ ಇದು ಮತ್ತೊಂದು ಹೋಮ್ ಸ್ಟೇ, ರೆಸಾರ್ಟ್ ಆಗದ ರೀತಿಯ ನೀತಿ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ನಿಯೋಗದಲ್ಲಿ ಕೃಷಿಕರಾದ ವೆಂಕಟೇಶ್, ಸುಸ್ಥಿರ ಕೃಷಿ ಜೊತೆಗೆ ಕೃಷಿ ಪ್ರವಾಸೋದ್ಯಮದಲ್ಲಿಯೂ ತೊಡಗಿಸಿಕೊಂಡು ಶಾಲಾಕಾಲೇಜು ವಿದ್ಯಾರ್ಥಿಗಳು, ಆಸಕ್ತರು ಕೃಷಿ ಬದುಕಿನ ಅನುಭವಗಳನ್ನು ತಿಳಿಯಲು ಅನುವು ಮಾಡಿಕೊಡುತ್ತಿರುವ ಶ್ರೀವತ್ಸ, ರಾಘವೇಂದ್ರ ಭಟ್, ದಯಾನಂದ್, ರಮೇಶ್ ಇದ್ದರು.

LEAVE A REPLY

Please enter your comment!
Please enter your name here