ಕಳೆದ ಮೂರು ದಿನಗಳ ಹಿಂದೆ ಕೃಷಿ ಯಂತ್ರೋಪಕರಣ ತಜ್ಞ ಡಾ. ನಾಗರಾಜ್ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ಅವರು ವಿನೂತನ ಮಾದರಿ ಪಪ್ಪಾಯಿ ಕೃಷಿ ಆರಂಭಿಸಿದ್ದೇನೆ ಇದೇ ಮಾದರಿಯನ್ನು ಹಿಂದೆ ತೊಗರಿ ಬೆಳೆ ಕೃಷಿಗೂ ಅಳವಡಿಸಿಕೊಂಡಿದ್ದೆ. ಅದು ಯಶಸ್ವಿಯಾದ್ದರಿಂದ ಅದೇ ಮಾದರಿಯನ್ನು ಪಪ್ಪಾಯಿಗೂ ಅಳವಡಿಸಿದ್ದೇನೆ ಎಂದರು. ನನಗೆ ಕುತೂಹಲವಾಯಿತು. ಅವರ ವಿವರಣೆ ನಿಮ್ಮ ಮುಂದಿದೆ.
-ಸಂಪಾದಕ

ಪಪ್ಪಾಯಿ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಪೌಷ್ಟಿಕಾಂಶವೂ ಇದೆ. ಮನೆ ಸುತ್ತಮುತ್ತ ಜಾಗವಿದ್ದರೆ ಎರಡು ಪಪ್ಪಾಯ ಗಿಡ ನೆಡಿ, ನಿಮ್ಮ ಕಣ್ನೀನ ದೃಷ್ಟಿ ಚೆನ್ನಾಗಿಟ್ಟುಕೊಳ್ಳಿ ಎನ್ನುವುದು ನಮ್ಮ ಕಡೆ ವಾಡಿಕೆ. ಆದರೆ ಈಗ ಬರುತ್ತಿರುವ ಬಹುತೇಕ ಈ ಹಣ್ಣುಗಳಲ್ಲಿ ಮೊದಲಿನ ಸತ್ವ, ರುಚಿ ಕಡಿಮೆಯಾಗಿದೆಯೆಂದೇ ನನ್ನ ಭಾವನೆ. ಬರೀ ನೀರುನೀರು ಥರ ಇರುತ್ತದೆ. ಇದನ್ನೆಲ್ಲ ಮನಗಂಡಿದ್ದ ನಾನು ಏಕೆ ಇದರಲ್ಲಿಯೂ ವಿನೂತನ ಮಾದರಿ ಅಳವಡಿಸಿಕೊಳ್ಳಬಾರದು ಎಂದು ನಿಶ್ಚಯಿಸಿದೆ. ಹಳೇ ಮಾದರಿ ರೀತಿಯೇ ಬೆಳೆಯಬೇಕು ಎಂದು ನಿಶ್ಚಯಿಸಿದೆ.
ನೀರು ಕೊಡುವುದಿಲ್ಲ
ನೀರು ಪೂರೈಕೆ ಇಲ್ಲ ಎಂದ ಕೂಡಲೇ ನಿಮಗೆ ಆಶ್ಚರ್ಯ ಆಗಬಹುದು. ನೀರು ಇಲ್ಲದೇ ಸಸ್ಯ ಬೆಳವಣಿಗೆ ಆಗಲು ಸಾಧ್ಯವೇ ಎಂದು. ಖಂಡಿತ ನೀರಿಲ್ಲದೇ ಯಾವ ಸಸ್ಯವೂ ಬೆಳವಣಿಗೆಯಾಗುವುದಿಲ್ಲ. ಆದರೆ ಕಾಡಿನಲ್ಲಿರುವ ಹಣ್ಣಿನ ಸಸ್ಯಗಳಿಗೆ ಯಾರೂ ನೀರು ನೀಡುವುದಿಲ್ಲ. ಮಳೆಯ ನೀರೇ ಅವುಗಳಿಗೆ ಆಧಾರ. ಉಳಿದ ಸಮಯದಲ್ಲಿ ಅವುಗಳು ಭೂಮಿಯೊಳಗೆ ತಮ್ಮ ಬೇರುಗಳನ್ನು ಆಳವಾಗಿ ಚಾಚಿಕೊಂಡು ನೀರಿನ ಸೆಲೆ ಹುಡುಕಿಕೊಂಡಿರುತ್ತವೆ. ಈ ಅಂಶವನ್ನು ಇಲ್ಲಿ ಅಳವಡಿಸಲು ನಿಶ್ಚಯಿಸಿದೆ. ಮುಂಗಾರು ಮಳೆ ಹಂಗಾಮಿನಲ್ಲಿ ಸಸಿಗಳನ್ನು ತಂದು ನೆಟ್ಟೆ. ಮಳೆ ನೀರಿನಿಂದಲೇ ಇಷ್ಟರ ಮಟ್ಟಿಗೆ ಬೆಳೆದು ನಿಂತಿವೆ.

ರಾಸಾಯನಿಕ ಗೊಬ್ಬರ ನೀಡುವುದಿಲ್ಲ
ಸಸಿಗಳ ನಾಟಿ ಹಂತದಲ್ಲಿ, ನಂತರದ ಹಂತಗಳಲ್ಲಿ ರಾಸಾಯನಿಕ ಪೋಷಕಾಂಶಗಳನ್ನು ಕೊಡುವ ವಾಡಿಕೆ ಇದೆ. ನಾನು ಈ ಥರದ ಯಾವುದೇ ಗೊಬ್ಬರ ನೀಡಿಲ್ಲ. ನೈಸರ್ಗಿಕ ಮಾದರಿಯಲ್ಲಿ ಬೆಳೆಯಲು ಗಿಡಗಳಿಗೆ ಅವಕಾಶ ನೀಡಬೇಕು. ಇದರಿಂದ ಅವುಗಳ ಇಳುವರಿ ಕಡಿಮೆಯಾಗಬಹುದು. ಅದರ ಬಗ್ಗೆ ಚಿಂತೆ ಮಾಡುತ್ತಿಲ್ಲ. ಉತ್ಕೃಷ್ಟ ಗುಣಮಟ್ಟದ ಹಣ್ಣುಗಳನ್ನು ಪಡೆಯಬೇಕು. ಅದರ ರುಚಿಯನ್ನು ಇಂದಿನ ನನ್ನ ಮೊಮ್ಮಕ್ಕಳು ಸವಿಯಬೇಕು ಎಂಬುದು ಅಪೇಕ್ಷೆ.ಅವರಿಗೆ ನಿಸರ್ಗದತ್ತವಾಗಿ ಬೆಳೆದ ಹಣ್ಣುಗಳ ರುಚಿ ಸವಿದೇ ಗೊತ್ತಿಲ್ಲ. ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಹಣ್ಣುಗಳನ್ನು ಸವಿದು ಅದೇ ಅವುಗಳ ರುಚಿ ಎಂದು ಕೊಂಡಿದ್ದಾರೆ.
ಮಣ್ಣಿನ ಹಂತಗಳು
ಕೃಷಿಭೂಮಿಯಲ್ಲಿ ಮೇಲು ಮಣ್ಣು (Top Soil)̤ ಕೆಳಗಿನ ಮಣ್ಣು ( Sub Soil) ಇರುತ್ತದೆ. ಟ್ರಾಕ್ಟರ್ ಗಳ ಭಾರಿ ಬಳಕೆಯಿಂದಾಗಿ ಟಾಪ್ ಸಾಯಿಲ್ ಕಡಿಮೆಯಾಗಿದೆ ಜೊತೆಗೆ ಆ ಭಾಗದ ಮಣ್ಣು, ಬಿದ್ದ ಮಳೆನೀರು ಇಂಗದಷ್ಟು ತುಂಬ ಕಠಿಣವಾಗಿದೆ. ಇವೆಲ್ಲದರಿಂದಾಗಿ ಸಬ್ ಸಾಯಿಲ್ ಕೂಡ ಗಟ್ಟಿಯಾಗಿದೆ. ಇದರಿಂದ ಬೇರುಗಳು ಆಳವಾಗಿ ಇಳಿಯಲು ಅವಕಾಶವಾಗುವುದಿಲ್ಲ.
ಇದರ ಪರಿಣಾಮ ಸಸ್ಯ ತನ್ನ ಸಾಮರ್ಥ್ಯ ಎಷ್ಟಿದೆಯೋ ಅಷ್ಟನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಬೆಳವಣಿಗೆ ಸೊರಗುತ್ತದೆ. ಇದರ ಪ್ರತಿಫಲ ಅದು ಬಿಡುವ ಎಲೆ, ಹೂವು, ಕಾಯಿ ಮತ್ತು ಹಣ್ಣುಗಳ ಗುಣಮಟ್ಟದ ಮೇಲೆಯೂ ಪ್ರತಿಫಲಿತವಾಗುತ್ತದೆ. ಮಣ್ಣು ಉತ್ತಮ ಗುಣಮಟ್ಟದಲ್ಲಿದ್ದರೆ ಸಸ್ಯದ ಬೇರುಗಳು ಸಹ ಉತ್ತಮವಾಗಿ ಬೆಳೆಯುತ್ತವೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಚೆನ್ನಾಗಿ ತೆಗೆದುಕೊಳ್ಳುತ್ತವೆ.

ಪಪ್ಪಾಯಿ ತುಂಬ ವೇಗವಾಗಿ ಬೆಳೆಯುವ ಸಸ್ಯಗಳಲ್ಲೊಂದು. ಹಣ್ಣು ಬಿಡಲು ಆರಂಭಿಸಿದಾಗ ವೈರಸ್ ಅಟ್ಯಾಕ್ ಆಗುತ್ತದೆ. ಇದು ಸಾಮಾನ್ಯ. ಆದರೆ ಗಿಡಗಳಲ್ಲಿ ರೋಗ ನಿರೋಧಕ ಅಂಶ ಇಲ್ಲದೇ ಇದ್ದಾಗ ಮಾತ್ರ ಈ ರೀತಿ ವೈರಸ್ ದಾಳಿ ಮಾಡುತ್ತದೆ. ಆದ್ದರಿಂದ ಗಿಡಗಳು ಸದೃಢವಾಗಿ ಬೆಳೆಯಲು ಆಸ್ಪದ ಇರುವ ವಾತಾವರಣ ಕಲ್ಪಿಸಬೇಕು. ಎಲ್ಲ ಅಂಶಗಳು ಸುಲಭವಾಗಿ ದಕ್ಕುತ್ತಿದ್ದರೆ ಅದು ತನ್ನ ಶಕ್ತಿ ಬಳಸುವುದಿಲ್ಲ.
ಗಿಡದ ಸುತ್ತಲೂ ಕುಳಿಗಳು
ಈ ನಿಟ್ಟಿನಲ್ಲಿ ಟಾಫ್ ಸಾಯಿಲ್ ಅನ್ನು ವೃದ್ಧಿ ಮಾಡುವ ಕಡೆ ಗಮನ ನೀಡಿದ್ದೇನೆ. ಇದಕ್ಕೆ ಗಿಡದ ಸುತ್ತಲೂ ಡ್ರಿಲಿಂಗ್ ಮಾಡಿ ಕುಳಿಗಳನ್ನು ಮಾಡಿದ್ದೇನೆ. ಇದರಿಂದ ಗಿಡದ ಬೇರುಗಳಿಗೆ ಹೆಚ್ಚು ಗಾಳಿ ಸಹ ಲಭಿಸುತ್ತದೆ. ಕ್ರಮೇಣ ಮಣ್ಣಿನ ಗುಣಮಟ್ಟವೂ ಬದಲಾಗುತ್ತದೆ. ಈ ಕುಳಿಗಳು ಆರು ಅಡಿ ಆಳ ಹೊಂದಿರುತ್ತವೆ. ಇದರಿಂದ ಭೂಮಿಯ ಒಳಗೆ ತೇವಾಂಶ ದೀರ್ಘ ಸಮಯ ಇರುತ್ತದೆ. ಇದೇ ತೇವಾಂಶವನ್ನು ಗಿಡಗಳು ಬಳಸಿಕೊಳ್ಳುತ್ತವೆ. ಜೊತೆಗೆ ಅಲ್ಲಿರುವ ಪೋಷಕಾಂಶ ಸತ್ವವನ್ನು ಬಳಸಿಕೊಳ್ಳುತ್ತವೆ. ಇದರ ಪರಿಣಾಮ ಅವುಗಳು ನೀಡುವ ಹಣ್ಣಿನ ಮೇಲಾಗುತ್ತದೆ.
ಈ ಮಾದರಿಯನ್ನು ಪ್ರಯೋಗಾರ್ಥವಾಗಿ ಮಾಡಿದ್ದೇನೆ. ಬೇರೆ ಬೆಳೆಯಲ್ಲಿ ಇದೇ ಪರಿಕಲ್ಪನೆ ಯಶಸ್ವಿಯಾಗಿರುವುದರಿಂದ ಪಪ್ಪಾಯಿಯಲ್ಲಿಯೂ ಯಶಸ್ವಿಯಾಗುತ್ತದೆ ಎಂದು ಕೊಂಡಿದ್ದೇನೆ. ಈ ಬಳಿಕ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆ ಇದೆ. ಈ ಪ್ರಯೋಗದಲ್ಲಿ ಆಗುವ ಬದಲಾವಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುತ್ತೇನೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಡಾ. ನಾಗರಾಜ್, ಮಾರುತಿ ಕೃಷಿ ಉದ್ಯೋಗ್, ಕೆರೆಕೋಡಿ, ನೆಲಮಂಗಲ, ಬೆಂಗಳೂರು ದೂರವಾಣಿ: 86186 93986
Excellent. Keep it up latest technology for farmers community