ತೋಟಕ್ಕೆ ಬಂದ ಅನಪೇಕ್ಷಿತ ಅತಿಥಿಗಳು

0
ಚಿತ್ರಲೇಖನ: ಮಹಾದೇವಿ ಕೆ.ಪಿ.

ನಾನು ವ್ಯವಸಾಯಕ್ಕೆ ಇಳಿದ ಕಾಲದಿಂದಲೂ ನಮ್ಮ ಅರಸೀಕರೆ ವಲಯದಲ್ಲಿ  ಕೊರತೆ ಎನ್ನುವಷ್ಟು ಮಳೆ  ಕಡಿಮೆ. ಈ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಸುರಿದ ಮಳೆ ಅತೀ ಹೆಚ್ಚೇ ಎನ್ನುವಂತೆ ಇತ್ತು.

ಆ ಕಾರಣಕ್ಕೇ ಇರಬೇಕು, ಮಿಡತೆಯಂತೆ ಕಾಣುವ ಆದರೆ ಗಾತ್ರದಲ್ಲಿ ಚಿಕ್ಕದಾದ ಕೀಟ ರಾಶಿಯೊಂದು, ತೆಂಗು, ಅಡಿಕೆ ಮತ್ತು ಬಾಳೆಯಿಂದ ಕೂಡಿ ಹೆಚ್ಚು ಹಸಿರು ತುಂಬಿ ಹುಲುಸಾಗಿದ್ದ ನಮ್ಮ ತೋಟವನ್ನು ಆಶ್ರಯ ತಾಣವನ್ನಾಗಿ ಮಾಡಿಕೊಂಡು ಬರೋಬ್ಬರಿ ಒಂದು ವರ್ಷ ಕಾಲ ಇದ್ದವು.

ಅವು ಬಂದದ್ದು ಹೀಗೆ…..

ಒಂದು ದಿನ ನೋಡನೋಡುತ್ತಲೇ ಕೆಲವು ಬಾಳೆಯ ಗಿಡದ ಎಲೆಗಳು ಯಾರೋ ನೀಟಾಗಿ ಕತ್ತರಿಸಿದಂತೆ ಮತ್ತು ಕೊಳವೆಯಂತೆ ಸುತ್ತಿಕೊಂಡಿದ್ದವು.

ವಾರ ಕಳೆದಂತೆ ಇಂತಹ ಕೊಳವೆಗಳು ಹಲವಾರು ಬಾಳೆಯ ಗಿಡದಲ್ಲಿ ನೇತಾಡತೊಡಗಿದವು.  ನಾನು ಗಾಬರಿಯಾಗಿದ್ದು ಮಾತ್ರ ಸುಳ್ಳಲ್ಲ. ಆದರೆ ಅವುಗಳನ್ನು ಓಡಿಸಲು ಕೊಲ್ಲುವ ಮಾರ್ಗ ಅನುಸರಿಸುವುದು ನನ್ನಿಂದ ಆಗದ ಮಾತು.

ಹಾಗಾಗಿ ನೋಡೇ ಬಿಡೋಣ ಎಂದು ಕಾದೆ. ತಿಂಗಳಾಗುವಷ್ಟರಲ್ಲಿ ಮಿಡತೆಗಳಂತೆ ಅಡಿಕೆ ಗಿಡದ ಮೇಲೆ ಕೂರತೊಡಗಿದವು.  ವಾರ ಕಳೆಯುವಷ್ಟರಲ್ಲಿ ಅವುಗಳ ಸಂಖ್ಯೆ ತುಂಬಾ ಜಾಸ್ತಿಯಾಯ್ತು.  ಆ ಕೀಟಗಳು ಅದೆಷ್ಟು ಸಂಖ್ಯೆಯಲ್ಲಿ ಇದ್ದವೆಂದರೆ, ನಾವು ತೋಟದಲ್ಲಿ ಓಡಾಡುವುದೇ ಕಷ್ಟ ಎನ್ನುವಷ್ಟು ಮಟ್ಟಿಗೆ. ಅಂದರೆ ತೆಂಗಿನ ಕಾಯಿ ಆರಿಸಲು ಮತ್ತು ಬಾಳೆಗೊನೆ ಕಡಿಯಲು ತೋಟದೊಳಗೆ ಇಳಿದ ಕೂಡಲೇ ಕಣ್ಣಿಗೆ ನೆಲ ಕಾಣದಷ್ಟು ಮುಖಕ್ಕೆ ಅಡ್ಡ ಬರುತ್ತಿದ್ದವು.

ಕೆಲಸಕ್ಕೆ ಬಂದ ಕಾರ್ಮಿಕರು, ನೀವು ಅರ್ಜೆಂಟಾಗಿ ಯಾವುದಾದರೂ ಕ್ರಿಮಿನಾಶಕವನ್ನು ಸಿಂಪಡಿಸದಿದ್ದರೆ ನಿಮ್ಮ ಅಡಿಕೆ ಮತ್ತು ಬಾಳೆ ಒಂದೂ ಉಳಿಯುವುದಿಲ್ಲ ಎಂದು ಒತ್ತಾಯ ಮಾಡತೊಡಗಿದರು. ಹೀಗೇ ಆದರೆ ನಮಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಭಯವನ್ನೂ ತೋರಿಸಿದರು.

 ನನ್ನ ಮಕ್ಕಳೂ ಕೂಡ, ಅಮ್ಮಾ ಮೊದಲು ಈ ಹುಳುಗಳಿಗೆ ಏನಾದರೂ ವ್ಯವಸ್ಥೆ ಮಾಡು ಇಲ್ಲದಿದ್ದರೆ ನಮ್ಮ ತೋಟದ ಗಿಡಗಳು ನಮ್ಮ ಕಣ್ಮುಂದೆಯೇ ಕಳೆದುಹೋಗುತ್ತವೆ ನೋಡು ಎನ್ನಲು ಶುರುವಾದರು.

ನಾನು ಯಾರ ಮಾತಿಗೂ ಕಿವಿಗೊಡದೆ ನೋಡಿಯೇ ಬಿಡೋಣವೆಂದು ಕಾದೆ. ಇವು ನಮ್ಮ ಅಡಿಕೆ ಮತ್ತು ಬಾಳೆಯನ್ನು ತಿನ್ನುತ್ತವೆನೋ ಎಂದು ಗಮನಿಸಿದೆ. ಆದರೆ ಅವುಗಳನ್ನು ತಿನ್ನುವುದು ಕಾಣಲಿಲ್ಲ. ಆದರೆ ಅಡಿಕೆ ಗಿಡದ ಸೋಗೆಯ ಮೇಲೆಯೇ ಕೂತಿರುತ್ತಿದ್ದ ಇವು ಸುಳಿ ಸೋಗೆಯಾದಿಯಾಗಿ ಬಿಡದೆ ಕುಳಿತ ಸೋಗೆಯ ರಸವನ್ನು ಹೀರತೊಡಗಿದವು.

ಒಂದು ವಾರ ಗಾಬರಿಯಾಯಿತು. ಇದಕ್ಕೆ ಪರ್ಯಾಯವಾಗಿ ಏನು ಮಾಡುವುದೆಂದು ಅಲ್ಲಿ ಇಲ್ಲಿ ತಡಕಿದೆ ಏನೂ ಸಿಗಲಿಲ್ಲ. ಅಷ್ಟರಲ್ಲಿ ತಿಂಗಳಾಗಿತ್ತು. ಅವುಗಳು ಕುಳಿತು ರಸ ಹೀರಿದ ಎಲ್ಲ ಸೋಗೆಗಳು ಸ್ವಲ್ಪ  ಕಂದು ಬಣ್ಣಕ್ಕೆ ತಿರುಗಿ ಕಳೆಗುಂದಿದಂತೆ ಕಂಡರೂ ಗಿಡದ ಬೆಳವಣಿಗೆಗೆ ತೊಂದರೆ ಆದಂತೆ ಕಾಣಲಿಲ್ಲ. ಧೈರ್ಯ ಬಂದಿತು. ಹೀಗೆ ಆರು ತಿಂಗಳಾದವು. ಅವುಗಳಿಗೆ ಒಂದು ಗತಿ ಕಾಣಿಸು ಎಂದು ಹೇಳಿದ ಜನ ಸೋತು ಸುಮ್ಮನಾದರು.

ನಾನು, ಜೋರು ಬಿಸಿಲು ಬಂದರೆ ಇವು ತೋಟ ಖಾಲಿ ಮಾಡುತ್ತವೆ ಎಂದು ಸುಮ್ಮನಾದೆ. ಮಳೆಗಾಲ ಕಳೆದು ಚಳಿಗಾಲವೂ ಕಳೆದು ಬೇಸಿಗೆ ಬಂದು ಬಿರುಬಿಸಿಲು ಹೊಡೆದರೂ ಈ ನೆಂಟರು ನಮ್ಮ ತೋಟ ಬಿಟ್ಟು ಹೊರಡಲೇ ಇಲ್ಲ.

ಕೊನೆಗೆ ಈ ವರ್ಷದ ಬಿರು ಬೇಸಿಗೆಯ ತಾಪದಲ್ಲಿ ತೋಟವನ್ನು ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಸಂಪೂರ್ಣವಾಗಿ ಆಕಡೆ ದೃಷ್ಟಿಯಿಟ್ಟು ಕೆಲಸ ಮಾಡುತ್ತಿರುವಾಗ ಈ ಒಂದು ತಿಂಗಳ ಹಿಂದೆಯೇ, ಒಂದು ವರ್ಷದವರೆಗೂ ಇದ್ದ ಈ ನೆಂಟರು ಒಂದು ಸೂಚನೆಯನ್ನೂ ಕೊಡದೆ ಹೊರಟೇ ಹೋಗಿದ್ದಾರೆ.

ಒಮ್ಮೆ ನಿರಾಳವಾಯಿತಾದರೂ ಮುಂದೆ ಹೋಗಿ ಇವು ಆಶ್ರಯ ಪಡೆಯುವ ಜಾಗ ನಿಜಕ್ಕೂ ಅವುಗಳಿಗೆ ಸುರಕ್ಷಿತವೇ…? ನೆನಪಿಸಿಕೊಂಡಾಗ ಪಾಪವೆನಿಸಿತು. ಇವತ್ತು ಬೆಳಿಗ್ಗೆಯಿಂದ ಸೋನೆ, ಬಿಡದೆ ಹಿಡಿದಿದೆ.

LEAVE A REPLY

Please enter your comment!
Please enter your name here