ಲೇಖಕರು: ರವಿಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ

ಕರ್ನಾಟಕದ ಡೈರಿ ಉದ್ಯಮದಲ್ಲಿ “ಅಕ್ಷಯಕಲ್ಪ” ಒಂದು ವಿಶಿಷ್ಟ ಮತ್ತು ಮಹತ್ವಪೂರ್ಣ ಪ್ರಯೋಗ. ಮೂಲಪ್ರವರ್ತಕರಾದ ಡಾ. ಜಿ.ಎನ್.ಎಸ್. ರೆಡ್ಡಿ ಮತ್ತು ಈಗಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕುಮಾರ್ ಅವರ ನೇತೃತ್ವದಲ್ಲಿ ಸರಿಯಾಗಿ ಹತ್ತು ವರ್ಷದ ಹಿಂದೆ ತಿಪಟೂರು, ಚನ್ನರಾಯಪಟ್ಟಣ, ಅರಸೀಕೆರೆ ಭಾಗದಲ್ಲಿ ಆರಂಭ ಇಂದು ಈ ಸಾವಯವ ಹಾಲು ಉದ್ಯಮ ಗಟ್ಟಿಯಾಗಿ ನೆಲೆಯೂರಿ, ಯಶಸ್ಸಿನತ್ತ ಸಾಗುತ್ತಿದೆ.
ಮೊದಲೇ ಹೇಳಿದಂತೆ ಅಕ್ಷಯಕಲ್ಪ ವಿಶಿಷ್ಟ ಪ್ರಯೋಗ. ಸುಮಾರು ನಾಲ್ಕೈದು ಎಕರೆ ಜಮೀನು ಇರುವ ರೈತ ಕುಟುಂಬವೊಂದು 15-25 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆ ಮಾಡಿ ಸಾವಯವ ಹಾಲು (Organic Milk) ಉತ್ಪಾದಿಸಬೇಕು. ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಗಳಿಸಬೇಕು, ಅವರು ಮಾಡುತ್ತಿರುವ ಹೈನುಗಾರಿಕೆ ಪರಿಸರಸ್ನೇಹಿಯೂ, ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯಕ್ಕೆ ಮಾದರಿಯೂ ಆಗಿರಬೇಕು.
ಕುಟುಂಬದ ಕೇವಲ ಇಬ್ಬರು ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಹಸುಗಳನ್ನು ಕಟ್ಟಿ ಸಾಕದೆ (ಯಾವುದೇ ಹಗ್ಗ/ಮೂಗುದಾರ ಇಲ್ಲದೆ) ಸ್ವತಂತ್ರ ವಾತಾವರಣದಲ್ಲಿ ಪೌಷ್ಟಿಕವಾದ ಆಹಾರ (ರಾಸಾಯನಿಕ ರಹಿತ ಹಸಿರುಮೇವು, ರಸಮೇವು/Silage, ರಾಗಿ ಹುಲ್ಲು, ಹಿಂಡಿ, ಉಪ್ಪು, ಖನಿಜ, ಲವಣ, ಬೆಲ್ಲ) ಕೊಟ್ಟು ಸಾಕಬೇಕು. ಗ್ರಾಹಕರಿಗೆ ಶುಚಿಯಾದ, ಶುದ್ಧವಾದ ಮತ್ತು ಸೋಂಕುರಹಿತ ಹಾಲು-ಹಾಲುತ್ಪನ್ನಗಳನ್ನು ಪೂರೈಸಬೇಕು.


ಇತರ ಸಾವಯವ ಉತ್ಪನ್ನಗಳಿಗೂ ಮಾರುಕಟ್ಟೆ ಸೃಷ್ಟಿಸಬೇಕು; ಆಧುನಿಕ ತಂತ್ರಜ್ಞಾನವನ್ನೂ ಸಮರ್ಥವಾಗಿ ಬಳಸಬೇಕು. ಇಡೀ ಉದ್ಯಮ ಲಾಭದಾಯಕವಾಗಿಯೂ ನಡೆಯಬೇಕು ಹಾಗೂ ಇತರೆ ಉದ್ಯಮಶೀಲರಿಗೆ ಪ್ರೇರಣಾದಾಯಿಯೂ ಆಗಬೇಕು.ಇಂತಹ ಉದಾತ್ತ ಉದ್ದೇಶ – ಆದರ್ಶಗಳನ್ನು ಇಟ್ಟುಕೊಂಡು ಸ್ಥಾಪಿಸಲ್ಪಟ್ಟ ಆಕ್ಷಯಕಲ್ಪ ಫಾರ್ಮ್ಸ್ ಅಂಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಆರಂಭದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತು.
ಭಾರತದಲ್ಲಿ ನವೋದ್ಯಮ (Startup)ಗಳಿಗೆ ಪೂರಕವಾದ ವಾತಾವರಣ ಹಿಂದೆಯೂ ಇರಲಿಲ್ಲ, ಈಗಲೂ ಇದೆ ಎಂದು ನನಗೆ ಅನ್ನಿಸಿಲ್ಲ. “ಆಕ್ಷಯಕಲ್ಪ”ಕ್ಕೆ ವ್ಯವಸ್ಥೆಯ ಅಸಹಕಾರ ಮತ್ತು ಭ್ರಷ್ಟಾಚಾರ ನಾನಾ ರೀತಿಯ ಅಡ್ಡಗಾಲು ಹಾಕಿದ್ದನ್ನು ನಾನು ಕೇಳಿ ನೋಡಿ ಬಲ್ಲೆ. ರಾಜೀಯಾಗದ ಮನೋಭಾವ ಮತ್ತು ನಿರಂತರ ಪ್ರಯತ್ನದ ಫಲವಾಗಿ ಇಂದು ಅಕ್ಷಯಕಲ್ಪ ಸಂಸ್ಥೆ ಪ್ರಯೋಗಾತ್ಮಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಯಶಸ್ಸಿನತ್ತ ಸಾಗುತ್ತಿದೆ.
ಈಗ ತಿಪಟೂರಿನಿಂದ ಸುಮಾರು 12 ಕಿ.ಮೀ. ದೂರದಲ್ಲಿ ಅತ್ಯಾಧುನಿಕವಾದ ಡೈರಿ ತಲೆಯೆತ್ತುತ್ತಿದೆ. ಸುಮಾರು 500 ರೈತರು ತಿಂಗಳಿಗೆ ಒಂದು ಲಕ್ಷದಿಂದ ಹಿಡಿದು ಐದು ಲಕ್ಷದ ತನಕ ಮಾಸಿಕ ಆದಾಯ ಗಳಿಸುತ್ತಿದ್ದಾರೆ. 400 ಜನ ನೇರ ಉದ್ಯೋಗಿಗಳಿದ್ದಾರೆ. 500ಕ್ಕಿಂತ ಹೆಚ್ಚು ಮಂದಿ ಅರೆಕಾಲಿಕ (ಹಾಲು ವಿತರಣೆ ಮಾಡುವವರು) ಕೆಲಸ ಮಾಡುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪರೋಕ್ಷ ನೌಕರಿಗಳೂ ಸೃಷ್ಟಿಯಾಗಿವೆ. ಬೆಂಗಳೂರಿನ ಅರ್ಧ ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಅಕ್ಷಯಕಲ್ಪದ ಸಾವಯವ ಹಾಲು, ಮೊಸರು, ತುಪ್ಪ, ಪನೀರ್, ಚೀಸ್ ಮುಂತಾದ ಉತ್ಪನ್ನಗಳ ಸಂತೃಪ್ತ ಗ್ರಾಹಕರಾಗಿದ್ದಾರೆ. ಚನ್ನರಾಯಪಟ್ಟಣದ ಹಾಲು ಈಗ ತಮಿಳುನಾಡಿನ ಚೆನ್ನೈ ತನಕ ಹೋಗುತ್ತಿದೆ.
ಇಲ್ಲಿನ ನೌಕರರಾಗಿರುವ ಸುಪ್ರಿತ, ದಿವ್ಯ, ತೇಜ; ಮೂವರೂ ಬಹುತೇಕ ಒಂದೇ ವಯೋಮಾನದ ಯುವತಿಯರು. ಇವರು ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪಶುಸಂಗೋಪನೆ ಡಿಪ್ಲೊಮಾ (ಪ್ಯಾರಾ ವೆಟ್) ಮಾಡಿದ್ದಾರೆ. ಇದು ಎಸ್.ಎಸ್.ಎಲ್.ಸಿ. ನಂತರ ಮಾಡುವ ಎರಡು ವರ್ಷದ ಕೋರ್ಸ್. ಕರ್ನಾಟಕದಲ್ಲಿ ಒಟ್ಟು ಐದು ಕಾಲೇಜುಗಳಿವೆ. ಅಲ್ಲಿನ ವಿದ್ಯಾರ್ಥಿಗಳಲ್ಲಿ ಶೇಕಡ 15-30% ಹುಡುಗಿಯರೇ ಕಲಿಯುತ್ತಿದ್ದಾರೆ ಎಂದಿವರು ಹೇಳಿದರು.

ಅಕ್ಷಯಕಲ್ಪ ನೌಕರರಾಗಿರುವ ಸುಪ್ರಿತ, ದಿವ್ಯ, ತೇಜ ಅವರುಗಳೊಂದಿಗೆ ಚರ್ಚಿಸುತ್ತಿರುವ ಲೇಖಕರು

ಇಲ್ಲಿಂದ ತೇರ್ಗಡೆಯಾದವರು ಡೈರಿ ಫಾರ್ಮ್, ಕೋಳಿ ಫಾರ್ಮ್, ಪೆಟ್ ಆಸ್ಪತ್ರೆಗಳು, ಪಶು ಆಸ್ಪತ್ರೆಗಳಲ್ಲಿ ಕೆಲವೊಮ್ಮೆ ಸ್ವತಂತ್ರವಾಗಿ ಮತ್ತು ಮತ್ತೆ ಕೆಲವು ಕಡೆ ಪಶು ವೈದ್ಯರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರಂತೆ. ಅಕ್ಷಯಕಲ್ಪದಲ್ಲಿ ಈ ಡಿಪ್ಲೊಮಾ ಮಾಡಿರುವ ಆರು ಜನ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಐವರು ಯುವತಿಯರು.
ಆಕ್ಷಯಕಲ್ಪದಲ್ಲಿ ಕೇವಲ ಹಸುಸಾಕಾಣಿಕೆ ಮಾತ್ರವಲ್ಲ, ಪಶುಸಂಗೋಪನೆ ವಿಚಾರದಲ್ಲಿ ಪ್ರಯೋಗ ಮತ್ತು ಸಂಶೋಧನೆಗಳನ್ನು ಸಹ ಮಾಡಲಾಗುತ್ತಿದೆ. ಅವುಗಳಿಗೆ ಕಟ್ಟುವ ಓಪನ್ ಶೆಡ್ ಹೇಗಿರಬೇಕು, ಯಾವ ಮೇವನ್ನು ಯಾವ ಪ್ರಮಾಣದಲ್ಲಿ ನೀಡಬೇಕು, ಯಾವ ಆಹಾರವನ್ನು ಯಾವ ರೀತಿ ಬೆಳೆಯಬೇಕು, ಫಾರ್ಮ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಗಂಜಲ, ಸಗಣಿಯನ್ನು ಹೇಗೆ ಪರಿಣಾಮಕಾರಿ ಗೊಬ್ಬರವಾಗಿ ಮಾರ್ಪಡಿಸಬೇಕು, ಗೋಬರ್ ಗ್ಯಾಸ್ ಅನ್ನು ಯಾವುದಕ್ಕೆಲ್ಲಾ ಬಳಸಬಹುದು, ವಿವಿಧ ಗೋ ತಳಿಗಳ ಅಭಿವೃದ್ಧಿ, ಡೈರಿಯ ಜೊತೆಗೆ ರೈತ ಹಿತ್ತಲಿನಲ್ಲಿ ಸಾವಯವ ಮತ್ತು ಲಾಭದಾಯಕ ತರಕಾರಿ ಕೃಷಿ ಮಾಡುವುದು ಹೇಗೆ, ತೆಂಗಿನಕಾಯಿಗೆ ಹೊಸ ಮಾರುಕಟ್ಟೆ; ಹೀಗೆ ಹತ್ತು ಹಲವು ಪ್ರಯೋಗ ಮತ್ತು ಸಂಶೋಧನೆಗಳು ಇಲ್ಲಿ ಬಹಳ ಕ್ರಮಬದ್ಧವಾಗಿ ಮತ್ತು ಪ್ರಾಯೋಗಿಕವಾಗಿ ನಡೆಯುತ್ತಿವೆ.

ಅಕ್ಷಯಕಲ್ಪ ಸಿಇಒ ಶಶಿಕುಮಾರ್ (ಗಡ್ಡಧಾರಿ) ಅವರಿಂದ ಮಾಹಿತಿ ಪಡೆಯುತ್ತಿರುವ ಲೇಖಕರು ಮತ್ತಿವರ ಕುಟುಂಬ

ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸ್ವತಂತ್ರ ಪ್ರವೃತ್ತಿ ಮತ್ತು ನಾಯಕತ್ವ ಗುಣವನ್ನು ಉತ್ತೇಜಿಸುವಂತಹ ತರಬೇತಿ ಕೊಡಲಾಗುತ್ತದೆ. ಇಲ್ಲಿಯ ವಾತಾವರಣ ಸ್ವಯಂಸೇವಾ ಸಂಸ್ಥೆಗಳಲ್ಲಿ (NGO) ಕಂಡು ಬರುವ ವಾತಾವರಣದಂತೆ ಕಂಡುಬಂದರೂ ಯಶಸ್ವಿ ಉದ್ಯಮ ನಡೆಸಲು ಅಗತ್ಯವಾದ ವೃತ್ತಿಪರ ಮತ್ತು ಕಾರ್ಪೊರೇಟ್ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಅಳವಡಿಸಿಕೊಂಡಿದ್ದಾರೆ.
ಈ ಡೈರಿ ಇರುವ ಜಾಗಕ್ಕೆ ಕಳೆದ ಹತ್ತು ವರ್ಷಗಳಲ್ಲಿ ನಾನು ಬಹುಶಃ ಆರೇಳು ಬಾರಿ ಬಂದಿದ್ದೇನೆ. ಕಳೆದ ಬಾರಿ ಬಂದದ್ದು ಸರಿಯಾಗಿ ಎರಡು ವರ್ಷದ ಹಿಂದೆ. ಈ ಎರಡು ವರ್ಷಗಳಲ್ಲಿ ಸಂಸ್ಥೆಯ ತ್ವರಿತಗತಿಯ ಅಭಿವೃದ್ಧಿ ನೋಡಿ ನನಗೆ ಖುಷಿ ಆಯಿತು. ಇದರ ಬೆಳವಣಿಗೆ ಮುಂದಿನ ಆರೇಳು ವರ್ಷಗಳಲ್ಲಿ ಇನ್ನೂ ಹಲವು ಪಟ್ಟು ಆಗಲಿದೆ ಎಂಬ ಮಾದರಿ ಕಾಣುತ್ತಿದೆ. ರೈತರಿಗೆ, ಗ್ರಾಹಕರಿಗೆ, ಸಿಬ್ಬಂದಿಗೆ, ಹೂಡಿಕೆದಾರರಿಗೆ ಒಳ್ಳೆಯದಾಗಲಿ. ಮೂಲಪ್ರವರ್ತಕರ ಆಶಯಗಳು ಈಡೇರಲಿ. ಈ ವಲಯದ ಉದ್ಯಮಶೀಲರಿಗೆ ಸ್ಥೈರ್ಯ ಮತ್ತು ಸ್ಫೂರ್ತಿ ನೀಡಲಿ.

11 COMMENTS

  1. ತುಂಬಾ ಸಂತೋಷ್ ನಮ್ಮಂತಹ ರೈತರಿಗೆ ತರಬೇತಿ ಕೋಡತೀರಾ ?

    • ಅಕ್ಷಯಕಲ್ಪದವರು ರೈತರಿಗೆ ತರಬೇತಿ ನೀಡುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ

  2. ನಾನು ಮಾಜಿ ಸೈನಿಕ ನಾನು ಈ ಉದ್ಯೋಗ ಮಾಡ ಬೇಕೆಂದು ಪ್ರಯತ್ನ ಮಾಡಬಹುದೇ.

    • ಖಂಡಿತ ಮಾಡಬಹುದು. ಇದು ಲಾಭದಾಯಕ ಕಾರ್ಯವೂ ಹೌದು. ಹೆಚ್ಚಿನ ಮಾಹಿತಿ ನೀಡುತ್ತೇವೆ.

  3. ಇಂತಹ ಪಾಮ೯ ಹೌಸ್ ಒಂದು ಇದೆ ಅಂತ ಸಂತೋಷ್ ವಾಯಿತು. ತರಬೇತಿ ಏನಾದರೂ ಸಿಗುತ್ತಾ.

    • ಅಕ್ಷಯಕಲ್ಪದವರು ಆಸಕ್ತರಿಗೆ ತರಬೇತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಅವರನ್ನು ಸಂಪರ್ಕಿಸಿ

LEAVE A REPLY

Please enter your comment!
Please enter your name here