
ಮನೆಯಲ್ಲಿರುವ ಬಾಕ್ಸ್ ರೂಪದ ದಿವಾನ ಕಾಟಿನೊಳಗೆ ನಿತ್ಯ ಬಳಸದ ಹಲವು ಬಗೆಯ ಸಾಮಾನುಗಳನ್ನು ತುಂಬಿಟ್ಟಿದ್ದೇವೆ. ಕೆಲವು ದಿನಗಳ ಹಿಂದೆ ಅದರೊಳಗೆ ಏನನ್ನೋ ಹುಡುಕುವಾಗ ಸುಮಾರು ಇಪ್ಪತೈದು ಸೇರುಗಳಷ್ಟಿದ್ದ ರಾಗಿಯ ಚೀಲವೊಂದಿತ್ತು. ಅದನ್ನು ಬಿಚ್ಚಿ ನೋಡಿದೆ. ಅದರಲ್ಲಿದ್ದ ರಾಗಿ ಬಳಸಲು ಯೋಗ್ಯವಾಗಿತ್ತು. 2017ರ ಆಗಸ್ಟ್‍ನಲ್ಲಿ ಬೆಂಗಳೂರಿನಿಂದ ಹೊನ್ನಾವರಕ್ಕೆ ವಾಸಸ್ಥಳ ಬದಲಿಸುವ ಒಂದೂವರೆ ವರ್ಶ ಮೊದಲು ಎರಡು ಕ್ವಿಂಟಾಲ್‍ನಶ್ಟು ಕ್ಲೀನ್ ಮಾಡಿಸಿದ ರಾಗಿಯನ್ನು ಊರಿಂದ ತಂದಿದ್ದೆ. ಮನೆಯಿಂದ ತರುವ ಒಂದು ವರ್ಶಕ್ಕೂ ಹಿಂದೆ ಬೆಳೆದ ರಾಗಿ ಅದಾಗಿತ್ತು. ಅಂದರೆ ಏಳು ವರ್ಶಗಳಿಗೂ ಹೆಚ್ಚು ಹಳೆಯ ರಾಗಿ !!
ರಾಗಿಹಿಟ್ಟಿನ ಅಗತ್ಯವಿದ್ದಾಗಲೆಲ್ಲಾ ಮಿಲ್‍ನಲ್ಲಿ ಬೀಸಿ ಬಳಸುತ್ತಿದ್ದೆವು. ಹೊನ್ನಾವರಕ್ಕೆ ಹೋದ ಮೇಲೆ ಅಲ್ಲಿಯೂ ಬೀಸಿ ಬಳಸುತ್ತಿದ್ದೆವು. ಅಲ್ಲಿಗೆ ಹೋದ ಒಂದು ವರ್ಶದ ನಂತರವೂ ಬಳಸಿದೆವು. ಕೊನೆಗೆ ಬಹಳ ದಿನಗಳಿಂದ ಚೀಲದಲ್ಲಿದ್ದ ರಾಗಿ ತನ್ನ ಮೈಮೇಲಿನ ಹೊಟ್ಟು ಬಿಟ್ಟುಕೊಂಡು ಕೊಂಚ ಧೂಳು ಎನ್ನಿಸಿತು. ಹಾಗಾಗಿ ಅದನ್ನು ಅಚ್ಚುಕಟ್ಟು ಮಾಡಿಸಿ ಬಳಸುವುದೆಂದು ಹಾಗೆಯೇ ಇಟ್ಟಿದ್ದೆವು. ಆದರೆ ಕ್ಲೀನ್ ಮಾಡಿಸುವುದು ಮರೆತು ವರ್ಶಗಳಿಂದಲೂ ಅದು ಹಾಗೇ ಉಳಿದಿತ್ತು. ಮೈಸೂರಿಗೆ ಬರುವಾಗ ಅದನ್ನು ಇಲ್ಲಿಗೆ ತಂದಿದ್ದೆವು. ಅದನ್ನು ಇಲ್ಲಿಯೂ ಕ್ಲಿನ್ ಮಾಡಿಸಿ ಬಳಸಿರಲಿಲ್ಲ. ಹಾಗೆಯೇ ಉಳಿದಿತ್ತು.
ಬೆಂಗಳೂರು ಹೊನ್ನಾವರ ಮೈಸೂರು ಸುತ್ತಿದ್ದ ಈ ರಾಗಿಗೆ ಏಳು ವರ್ಷ ವಯಸ್ಸಾದರೂ ಅದರ ಬಣ್ಣ ಮುಕ್ಕಾಗಿರಲಿಲ್ಲ. ಹುಳು ಬಿದ್ದು ಗೂಡು ಕಟ್ಟಿ ಹಾಳಾಗಿರಲಿಲ್ಲ. ಮೆತುವಾಗಿ ಮುಗ್ಗಿಯೂ ಇರಲಿಲ್ಲ. ಇಲಿ ಜಿರಲೆಗಳಿಂದಲೂ ಹಾಳಾಗಿರಲಿಲ್ಲ. ಅದರಲ್ಲಿನ ಧೂಳು ಕೇರಿ ತೆಗೆದು ಬಳಸಬೇಕಿತ್ತು. ಅದು ನಮಗೆ ಗೊತ್ತಿಲ್ಲದ ಕಾರಣ ಹಾಗೇ ಉಳಿದಿತ್ತು. ಕೊನೆಗೆ ಅದನ್ನು ಮಾಡಲಾಗದೆ ಮನೆಗೆಲದಾಕೆಗೆ ಕೊಟ್ಟು ಬಳಸಿಕೊಳ್ಳಲು ಹೇಳಿದೆವು. ಆಕೆ ಚೀಲದಲ್ಲಿದ್ದ ರಾಗಿಯನ್ನು ತೆಗೆದು ನೋಡಿ ಅದು ಚನ್ನಾಗಿದೆಯೆಂದು ಹೇಳಿ ಕೊಂಡೊಯ್ದಳು.
ಹೀಗೆ ವರ್ಶಗಟ್ಟಲೆ ರಾಗಿ ಉಳಿಸಲು ಯಾವುದೇ ಮದ್ದನ್ನು ಬಳಸಿರಲಿಲ್ಲ. ನಮ್ಮ ಊರಮನೆಯಲ್ಲಿ ರಾಗಿಯನ್ನು ಕೂಡಿಡಲು ಇದುವರೆಗೂ ಯಾವುದೇ ಮದ್ದನ್ನು ಬಳಸಿಲ್ಲ. ಹಲವು ವರ್ಷ ಕೂಡಿಟ್ಟರೂ ರಾಗಿ ಕೆಡದೆ ಉಳಿಯುವುದೇ ಒಂದು ಸೋಜಿಗದ ವಿಚಾರ.
ನಾಳೆ ಈ ಲೇಖನದ ಎರಡನೇ ಭಾಗ
ಹೆಚ್ಚು ವರ್ಷ ರಾಗಿ ಹಾಳಾಗದೇ ಉಳಿಯಲು ಹೇಗೆ ಸಾಧ್ಯ? ಪ್ರಕಟವಾಗುತ್ತದೆ.