ಆನೆ ಕಾಟವನ್ನು ಆಹ್ವಾನ ನೀಡಿ ಬರಮಾಡಿಕೊಳ್ಳಲಾಗಿದೆ

0
ಲೇಖಕರು: ನಂದಿನಿ ಹೆದ್ದುರ್ಗ, ಕಾಫಿ ಬೆಳೆಗಾರರು, ಖ್ಯಾತ ಸಾಹಿತಿ
 ‘ಅಜ್ಜಿಮನೆಗೆ ಬಂದಿದ್ದ ಮೊಮ್ಮಗನನ್ನು ಮನೆಯ ಅಂಗಳದಲ್ಲೇ ಆನೆ ಸೆಳೆದುಕೊಂಡು ದೇಹವನ್ನು ಛಿದ್ರವಾಗಿಸಿದೆ‌’

‘ಬಿಸಿಲೇರುವುದಕ್ಕೂ ಮುನ್ನ ಕಳೆ ಕೊಚ್ಚುವ ಸಲುವಾಗಿ ತೋಟಕ್ಕೆ ಹೋಗಿದ್ದ ಲಕ್ಷ್ಮಿ,  ಆನೆಗೆ ಸಿಕ್ಕಿ ಸತ್ತಳು. ಅವಳ ಎಳೆ ಮಕ್ಕಳ ಗೋಳು ಹೇಳತೀರದು.

‘ಸಂತೆ ಮುಗಿಸಿ ಬರುತ್ತಿದ್ದ ಮಾದಣ್ಣಜ್ಜ ನಡುಹಗಲೇ ಆನೆ ಕಾಲಿಗೆ ಸಿಲುಕಿ ಜವರಾಯನ ಪಾದ ಸೇರ್ಕೊಂಡ’

‘ಎಕರೆ ಗದ್ದೇಲಿ ಒಂದ್ ಕಾಳು ಭತ್ತಾನೂ ತರೋ ಗೋಳಿಲ್ಲ ಈಸರ್ತಿ ಈರಯ್ಯಂಗೆʼ

‘ಹೊಸದಾಗಿ ಮಾಡಿದ ಪೈಪಲೈನು ,ಕರೆಂಟ ಬೇಲಿ ಎಲ್ಲಾನೂ ನೆಲಸಮ ಮಾಡಾಕಿದವಂತೆ ‘

ಮೇಲಿನ ಬಿಡಿಬಿಡಿ ವಾಕ್ಯಗಳು ಯಾವುದೇ ಕಥೆಯಿಂದ ಎತ್ತಿಕೊಂಡು ಹಾಕಿರುವುದಲ್ಲ.ಬದಲಾಗಿ ಪಾರಂಪರಿಕ ಕಾಫಿ ಕಾಳುಮೆಣಸು ಮತ್ತು ಏಲಕ್ಕಿ ಹೆಸರಾದ ಕಾಫಿನಾಡು ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕಿನ ವ್ಯಥೆ. ಸಮೃದ್ಧಿಯೇ ಶಾಪವಾದ ಭಯಾನಕ ಕಥೆ!!

ಇಲ್ಲಿ ರಣಗುಡುವ ಬಿಸಿಲಿಲ್ಲ,ನೆರೆ ನುಗ್ಗುವ ನದಿಗಳಿಲ್ಲ. ಬೋಳುಬೆಟ್ಟಗಳಿಲ್ಲ. ಹಸುರಿರದೇ ಇರುವ ಜಾಗವೇ ಇಲ್ಲ.ಎಲ್ಲಿ ನೋಡಿದರಲ್ಲಿ ಸಿರಿ ,ಸಮೃದ್ಧಿ, ಹಸಿರು, ಅರಣ್ಯ, ಸಾವಿರಾರು ಎಕರೆ ಕಾಫಿ ತೋಟಗಳು, ಬತ್ತದ ಗದ್ದೆಗಳು. ಬದುಕು ವಿಶೇಷವೆನಿಸುವುದಕ್ಕೆ ಇದಕ್ಕಿಂತ ಇನ್ನೇನು ಬೇಕು. ಹೀಗೆ ಅನಿಸ್ತಿದ್ದದ್ದು ಬಹುಶಃ ಎರಡು ದಶಕದ ಹಿಂದೆ !

ಸರ್ಕಾರ ಹಾಸನ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಸಣ್ಣ ,ದೊಡ್ಡ ನದಿಗಳಿಗೆ ಅಣೆಕಟ್ಟು ಕಟ್ಟಿತು. ಹಿನ್ನಿರಿನಿಂದ ಜಲಪ್ರದೇಶ ವಿಸ್ತಾರವಾಯಿತು.  ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆ ,ಜಲವಿದ್ಯುತ್ ಯೊಜನೆಗಳಲ್ಲದೆ ಇತರೆ ಭಾರಿ ಯೋಜನೆಗಳು ಬಂದವು. ಎತ್ತಿನ ಹೊಳೆ ನದಿ ತಿರುವು ಯೋಜನೆಯಂತಹ ಅಪದ್ದ ಅಭಿವೃದ್ಧಿ ಕಾಮಗಾರಿ ಆರಂಭವಾಯಿತು. ಸರ್ಕಾರಿ ಕೃಪಾಪೋಷಿತ ಅರಣ್ಯ ಇಲಾಖೆಯ ನಾಟಕ ರಂಗದಿಂದ ಸಹಜ ವನಸಂಪತ್ತಿನಿಂದ ಕಂಗೋಳಿಸುತ್ತಿದ್ದ ಸರ್ಕಾರಿ ಅರಣ್ಯ ಜಾಗದಲ್ಲಿ ನೀಲಗಿರಿ, ಅಕೇಶಿಯಾ,ಸಾಗುವಾನಿ,ಮ್ಯಾಂಜಿಯಂ, ಕ್ಯಾಸುರಿನಾದಂತಹ ನಮ್ಮದಲ್ಲದ,ಅಗಾಧ ನೀರುಬೇಡುವ ಎಂದೂ ಯಾವ ಪ್ರಾಣಿಗೂ ಆಹಾರವಾಗಲಾರದ ಮರಗಳನ್ನು ನೆಡಲಾರಂಭಿಸಿದರು.

ಇವೆಲ್ಲವುಗಳ ದುಷ್ಪರಿಣಾಮದಿಂದ ಅರಣ್ಯದೊಳಗೆ ಅತ್ಯಂತ ಸಹಜವಾಗಿ, ಸ್ವಾಭಾವಿಕವಾಗಿ ವಾಸಿಸುತ್ತಿದ್ದ ವನ್ಯಪ್ರಾಣಿಗಳು ಅದರಲ್ಲೂ ಆನೆ ಮತ್ತು ಚಿರತೆ ನಾಡಿಗೆ ಆಹಾರ ಮತ್ತು ನೀರನ್ನರಸಿ ಬರಲಾಂಬಿಸಿದವು. ಅದಾವ ದೇವರ ದಯೆಯೋ ಗೊತ್ತಿಲ್ಲ, ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಐದು ವರ್ಷಗಳಷ್ಟು ಕಾಲ ಅತೀ ತೀವ್ರವಾಗಿದ್ದ ಚಿರತೆ ಮತ್ತು ನಾಯಿ ಕಿರುಬದ ಸಮಸ್ಯೆ ತಂತಾನೆ ಕ್ರಮೇಣ ಕಡಿಮೆಯಾಯ್ತು. ಇತ್ತೀಚಿನ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಚಿರತೆ,ನಾಯಿಗಿರುಬ ಮತ್ತವುಗಳ ಮರಿಗಳು ಕಾಣಿಸಿದರೂ ಹೃದಯವಂತ ರೈತರು ಜಾಣತನದಿಂದ ಆ ಜಾಗವನ್ನು ತೆರವು ಮಾಡಿಕೊಡುತ್ತಾರೆ..ಪ್ರಾಣಿಗಳು ಸುರಕ್ಷಿತ ಸ್ಥಳಗಳಿಗೆ ಚಲಿಸುತ್ತವೆ.

ಆನೆಗಳದ್ದು ಬೇರೆಯೇ ಆಯಿತು. ಇಪ್ಪತ್ತು ,ಇಪ್ಪತೈದು ವರ್ಷಗಳ ಹಿಂದೆ ಕಾಡಿನಿಂದ ನಾಡಿಗೆ ಬಂದಂಥ ಆನೆಗಳು ಮನುಷ್ಯರ ಮೋಡಿಗೆ ಒಳಗಾದಂತೆ ಊರನ್ನೇ ತವರು ಮಾಡಿಕೊಂಡವು. ಮರಳಿ ಅರಣ್ಯಕ್ಕೆ ಮರಳುವುದಿಲ್ಲಾಂತ ರಚ್ಚೆ ಹಿಡಿದು ಕುಂತವು. ತೊಂಬತ್ತರ ದಶಕದಲ್ಲಿ ಎರಡಿದ್ದ ಆನೆಗಳು ಹತ್ತು ವರ್ಷಗಳಲ್ಲಿ ಆಲೂರಿನಂಥ ಪುಟ್ಟ ತಾಲೂಕಿನಲ್ಲಿ ನಲ್ವತ್ತರಷ್ಟು ಹೆಚ್ಚಾದರೆ ಸಕಲೇಶಪುರ ದಲ್ಲಿ ಮುವ್ವತ್ತಾದವು.(ಇದು ಮೂರು ವರ್ಷದ ಹಿಂದಿನ ಗಣತಿ)

ಆನೆಗಳ ಸ್ವಭಾವದಲ್ಲಿ ಗಮನಿಸಬಹುದಾದ ಒಂದು ಮುಖ್ಯ ಅಂಶ ಎಂದರೆ ಅವುಗಳ ಚಲನಶೀಲ ಪ್ರವೃತ್ತಿ. ಒಂದು ಆನೆಗೆ ಸಂಚರಿಸಲು ಬೇಕಾಗುವ ವ್ಯಾಪ್ತಿ 1200ರಿಂದ 1500ಕಿಮಿಗಳು.ಇಷ್ಟೊಂದು ಅಗಾಧ ಸಂಚರಿಸುವ ಶಕ್ತಿ ಇರುವ ಈ ಆನೆಗಳು ಇತ್ತೀಚಿನ ‌ವರ್ಷಗಳಲ್ಲಿ ಆಲೂರು ಮತ್ತು ಸಕಲೇಶಪುರದ ವ್ಯಾಪ್ತಿಯಲ್ಲಿರುವ ಕೆಲವೇ ಕೆಲವು ಪ್ರದೇಶಗಳಿಗೆ ತಮ್ಮ ಸಂಚಾರವನ್ನು,ವಾಸ್ತವ್ಯವನ್ನು ಸೀಮಿತವಾಗಿವೆ. ಸಕಲೇಶಪುರ ವ್ಯಾಪ್ತಿಯ ಹೆತ್ತೂರು,ವಳಗರವಳ್ಳಿ,ಕಾಗಿನಹರೆ,ಅರಣಿ, ಮಂಕನಹಳ್ಳಿ,ಬೋಡನ ಮನೆ,ಎತ್ತಿನಹಳ್ಳ,ಕುಮುರಿ,ಬಾಳೆಹಳ್ಳ ದಂತಹ ಊರುಗಳಲ್ಲೂ, ಆಲೂರು ವ್ಯಾಪ್ತಿಯ ರಾಜೇಂದ್ರಪುರ,ಜಮ್ಮನಹಳ್ಳಿ,ಬಾಳ್ಳುಪೇಟೆ,ಅನಗಳಲೆ, ಮಲಗಳಲೆ,ಅಬ್ಬನ ,ಮಗ್ಗೆ,ಕಾರಗೋಡು ರಾಯರಕೊಪ್ಪಲಿನ ಸುತ್ತಮುತ್ತಲಿನ ಊರುಗಳಿಗೂ ಅವುಗಳ ಸಂಚಾರ ಸೀಮಿತಗೊಂಡಿದೆ.

ಏಕೆ ಈ ಆನೆಗಳು ಕೆಲವೇ ಕೆಲವು ಪ್ರದೇಶಗಳಿಗೆ ತಮ್ಮ ಸಂಚಾರ ಸೀಮಿತಗೊಳಿಸಿಕೊಂಡವು ಅನ್ನುವುದನ್ನ ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಭಾಗದಲ್ಲಿ ಅಡಗಲು ಮತ್ತು ಓಡಾಡಲು ರಂಗನಬೆಟ್ಟ, ಸಂಕ್ರಾಂತಿಬೆಟ್ಟದ ಜೊತೆಗೆ ಪಶ್ಚಿಮಘಟ್ಟಗಳಂತಹ ಪ್ರದೇಶಗಳು, ಜಲಕ್ರೀಡೆಗೆ ಹಿನ್ನೀರಿನ ಮೂಲಗಳು,ಕಾಫಿ ತೋಟದ ಮಾಲೀಕರು ನೀರಾವರಿಗಾಗಿ ನಿರ್ಮಿಸಿರುವ ಅಗಾಧ ಕೆರೆಗಳು,ಭತ್ತ,ಹಲಸು,ಬಾಳೆ,ಪಪ್ಪಾಯ, ಬೈನೆ,ಬಿದಿರಿನಂತಹ ಸಮೃದ್ಧ ಪ್ರೋಟಿನ್ ಭರಿತ ಆಹಾರದ ಲಭ್ಯತೆಯಂಥ ಮೂಲ ಕಾರಣಗಳೇ ಮೇಲುನೋಟಕ್ಕೆ ಕಾಣಿಸುತ್ತವೆ. ಆದರೆ ಇದಕ್ಕೆ ಮುಖ್ಯ ಕಾರಣ ಬೇರೆಯೇ ಇದೆ.

ಸಹಜ ಸ್ಥಳೀಯ ಮರಗಳಿಂದ ಕೂಡಿದ್ದ ನಮ್ಮ ಕಾಡನ್ನು ಅರಣ್ಯ ಇಲಾಖೆಯವರು ನೆಟ್ಟು ಬೆಳೆಸಿರುವ ನೀಲಗಿರಿ ,ಸಾಗುವಾನಿ,ಅಕೇಶಿಯದಂಥ ಮರಗಳು , ಒಂದು ಕಾಲದಲ್ಲಿ ಕಟ್ಟೆ ಬಂದು ನಾಶವಾದ ಬಿದಿರು ಮತ್ತೆ ಮೊಳೆಯುವ ಮೊದಲೆ ಆ ಜಾಗದಲ್ಲಿ ಬೆಳೆದ ಆನೆ ತಿನ್ನಲಾರದಂಥ ಸೊಪ್ಪಿನ ಮರಗಳು, ಜೊತೆಗೆ ಸಣ್ಣ ಪ್ರಮಾಣದಲ್ಲಿ ಕಾಫಿತೋಟದ ಮಾಲಿಕರು, ಇತರೆ ಕೃಷಿ ವ್ಯವಸ್ಥೆಯೂ ಕಾರಣವೆನಬಹುದು.

ನಮ್ಮ ಪರಿಸರದ ಮೂಲ ವೃಕ್ಷಗಳಾದ ಆಲ,ಅತ್ತಿ,ಗೋಣಿ,ಬಸುರಿ,ಧೂಪ,ಸಂಪಿಗೆ,ಹಲಸಿನಂಥ ಮರಗಳನ್ನು ಭಾಗಶಃ ಕಡಿದು ಸಿಲ್ವರ್ ಓಕ್ ಮರಗಳನ್ನು ಬೆಳೆಸಿದರು. ಏರುತ್ತಿರುವ ಜೀವನ ಕ್ರಮಕ್ಕೆ ಹೆಚ್ಚಿದ ಕೃಷಿ ಭೂಮಿ. ಇದೆಲ್ಲದರ ಜೊತೆಗೆ ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಗಾಧ ಗಣಿಗಾರಿಕೆ ಗಳು ಹಾಗೂ ಸರಕಾರದ ಬೃಹತ್ ಪ್ರಮಾಣದ ಯೋಜನೆ ಗಳಿಂದಾಗಿ ಆನೆ ಆಹಾರವನ್ನೋ , ಸುರಕ್ಷತೆಯನ್ನೊ ಅರಸಿ ನಾಡಿನತ್ತ ಬಂದವು. ರೈತರ ಬದುಕು ಮೂರಾಬಟ್ಟೆಯಾಯಿತು.!

ಗುಂಪಿನಲ್ಲಿ ಮರಿ ಆನೆಗಳಿದ್ದರೆ ಅವುಗಳ ಸುರಕ್ಷತಾ ದೃಷ್ಟಿಯಿಂದ ಆನೆಗಳು ಮಾಡುವ ಬೆಳೆನಾಶ ವಿಪರೀತ. ವಿಪರ್ಯಾಸವೆಂದರೆ ಇತ್ತೀಚೆಗೆ ಪ್ರತಿ ಆನೆ ಗುಂಪಿನಲ್ಲಿ ಎರಡಕ್ಕೂ ಹೆಚ್ಚು ಮರಿ ಆನೆಗಳಿರುತ್ತವೆ.

ಇನ್ನೂ ಯಾವುದಾದರೂ ಆನೆ ಮರಿ ಹಾಕುವ ಸಂದರ್ಭವಿದ್ದರೆ ಮುಗಿದೇ ಹೋಯ್ತು. ದಟ್ಟ ತೋಟವೊಂದನ್ನ ಹುಡುಕಿ ಎಕರೆಗೂ ಮೀರಿ ಜಾಗವನ್ನು ಸಪಾಟುಗೊಳಿಸಿ(ಕಾಫಿ ಗಿಡ ಕಿತ್ತು), ನೆಲ ಚೊಕ್ಕವಾಗಿಸಿ ಗುಂಪಿನ ಅಷ್ಟೂ ಆನೆಗಳು ಈಯುವ ಆನೆಯ ದೇಕರೇಖಿ ನೋಡಿಕೊಳ್ತವೆ.!!

ಓದುವಾಗ ಎಲ್ಲವೂ ಚಂದವೆನಿಸಬಹುದು. ಆದರೆ ಒಂದು ಕಾಲದಲ್ಲಿ ಸಮೃದ್ಧಿಯನ್ನೇ ನೋಡಿದ್ದ ಕಾಫಿ ಬೆಳೆಗಾರ ಇತ್ತೀಚಿನ ದಿನಗಳಲ್ಲಿ ಏರಿದ ಕಾರ್ಮಿಕರ ವೇತನ, ಬೆಲೆ ಕುಸಿತ, ಪ್ರಕೃತಿ ವಿಕೋಪ,ರೋಗ ಕೀಟಗಳ ಹಾವಳಿಯಿಂದ ತತ್ತರಿಸಿರುವಾಗ ಆನೆ ಸಮಸ್ಯೆ.!

ಹೆಚ್ಚುತ್ತಿರುವ ಒಂಟಿ ಸಲಗಗಳು ಮನುಷ್ಯನ ಮೇಲೆ ಆಕ್ರಮಣಕ್ಕೆ ಶುರು ಹಚ್ಚಿವೆ.ಗುಂಪಿನಿಂದ ಹೊರದೂಡಲ್ಪಟ್ಟ ಆನೆ ,ಮಕ್ಕಾನ ಆನೆ ಅಥವಾ ಮಸ್ತಿಗೆ ಬಂದಂಥ ಆನೆಗಳಲ್ಲಿ ಆವೇಶ ಅತೀ ಹೆಚ್ಚು. ಎದುರಿಗೆ ಸಿಕ್ಕಿದ ಯಾವುದನ್ನೂ, ವಿಶೇಷವಾಗಿ ಮನುಷ್ಯರನ್ನು ಉಳಿಸುವುದಿಲ್ಲ. ಈ ಇಪ್ಪತ್ತು ವರ್ಷಗಳಲ್ಲಿ ಆನೆ ದಾಳಿಗೆ ಸಿಕ್ಕಿ ಸತ್ತವರ ಸಂಖ್ಯೆ ನಾನೂರಕ್ಕೂ ಮೀರಿರಬಹುದು. ಇದರಲ್ಲಿ ಶೇಕಡಾ ಎರಡರಷ್ಟು ತಮ್ಮದೇ (ಸೆಲ್ಫಿ)ತಪ್ಪಿನಿಂದ ಮರಣಿಸಿದ್ದರೆ ಉಳಿದ ತೊಂಬತ್ತೆಂಟು ಶೇಕಡ ಆನೆಯ ಆವೇಶಕ್ಕೆ ಸಿಕ್ಕಿ ಮರಣ ಹೊಂದಿದವರು.

ಇಷ್ಟೆಲ್ಲಾ ಅನಾಹುತಗಳು ಸಂಭವಿಸಿದರೂ ವ್ಯವಸ್ಥೆ ಯಿಂದ ಆದ ಕೆಲಸವೇನು,?ಸಂತ್ರಸ್ಥರಿಗೆ ಸಿಕ್ಕಿದ ಪರಿಹಾರ ವೆಷ್ಟು ನೋಡಿದರೆ ಬಹುಶಃ ಶಾಕ್ ಆಗಬಹುದು. ರೈತನೊಬ್ಬ ಮರಣಿಸಿದರೆ ಇಪ್ಪತ್ತು ಸಾವಿರವಿದ್ದ ಮೊತ್ತ ಈಗ ಐದುಲಕ್ಷಕ್ಕೆ ಏರಿದೆ.!(ಈಚೆಗೆ ಸ್ವಲ್ಪ ಏರಿರಬಹುದು) ಆದರೆ ಅಧಿಕಾರಿ ಮರಣಿಸಿದರೆ ಸಿಗುವ ಪರಿಹಾರ ಐವತ್ತು ಲಕ್ಷ,ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಯಥಾ ಪಿಂಚಣಿ !!

ಕೋಟಿ ಮೀರಿ ತೂಗುವ ಅಧಿಕಾರಿ, ಐದು ಲಕ್ಷಕ್ಕೂ ಬೆಲೆ ಬಾಳದ ಬಡರೈತ!! ಇದು ಈ ಭಾಗದ ವಿಪರ್ಯಾಸ.ಬೆಳೆ ನಷ್ಟದಲ್ಲಿ ಇಪ್ಪತ್ತರಿಂದ ಐವತ್ತು ವರ್ಷ ಬೆಳೆಗಾರನನ್ನು ಸಲಹುವ ಕಾಫಿಗಿಡವೊಂದಕ್ಕೆ ನೂರಿನ್ನೂರು ರೂಪಾಯಿಗಳು.! ಎಕರೆ ಬತ್ತಕ್ಕೆ ಐನೂರರಿಂದ ಸಾವಿರ ರೂಪಾಯಿ !

ಇತ್ತೀಚೆಗೆ ಬೆಳೆನಷ್ಟದ ಪರಿಹಾರ ತುಸು ಏರಿಕೆಯಾಗಿದ್ದರೂ ಅದು ಬಹುವಾರ್ಷಿಕ ಬೆಳೆಯಾದ ಕಾಫಿಗೆ ನ್ಯಾಯ ಒದಗಿಸುವುದಿಲ್ಲ ಪರಿಹಾರವಾದರೂ ಸುಮ್ಮನೇ ಬರುವುದಿಲ್ಲ.ರೈತನೊಬ್ಬ ತನ್ನ ಸ್ವಾಭಿಮಾನವನ್ನೆಲ್ಲ ಹೊಳೆಗೆಸೆದು ಅಧಿಕಾರಿಗಳ ದರ್ಪಕ್ಕೆ ಬೆನ್ನು ಬಾಗಿಸಿ ಹತ್ತಾರು ಬಾರಿ ಅಲೆದಾಡಿದ ಮೇಲೆ ಅರ್ಧಬಾಗ ಬರುತ್ತದೆ.

LEAVE A REPLY

Please enter your comment!
Please enter your name here