
ಅಂದು ಭವಾನಕ್ಕ ಏನಿಲ್ಲವೆಂದರೂ ಎಂಟು ಬಾರಿ ಫೋನು ಮಾಡಿದ್ದರು. ಅವರದು ಸಾಗರದ ವಿಜಯನಗರ ಬಡಾವಣೆಯಲ್ಲಿ ವಿಶಾಲವಾದ ಸೈಟಿನಲ್ಲಿ ಚೆಂದದ ಮನೆಯಿದೆ. ಮನಕ್ಕೆ ಖುಷಿ ಕೊಡುವ ಹತ್ತಾರು ಬಗೆಯ ಗಿಡಮರಗಳ ನಡುವೆ ಸುಂದರ ಮನೆ. ಗಂಡ ವೆಂಕಪ್ಪನವರು ಮತ್ತು ಭವಾನಕ್ಕ ಇಬ್ಬರೂ ನಿವೃತ್ತ ನೌಕರರು. ನಿವೃತ್ತಿಯ ಬದುಕನ್ನು ಅದೆಷ್ಟು ಲವಲವಿಕೆಯಿಂದ ನಡೆಸುತ್ತಿದ್ದಾರೆ ಎಂದರೆ ಅದನ್ನು ನೋಡುವುದೇ ಒಂದು ಆನಂದ.
ಭವಾನಕ್ಕ, ಭವಾನಿ ಹೆಗಡೆ ಫೋನು ಮಾಡಿದ್ದರು ಎಂದೆನಲ್ಲಾ ಅದು ಜೇನಿನ ವಿಷಯಕ್ಕೆ ಆಗಿತ್ತು.. ಭವಾನಕ್ಕನಿಗೆ ಹಿಂದಿನ ದಿನವಷ್ಟೇ ಜೇನು ಪೆಟ್ಟಿಗೆ ಕೊಟ್ಟಿದ್ದೆ. ರಾತ್ರಿ ಆಗಿದ್ದರಿಂದ ಮೇಲು ಮೇಲೆ ಜೇನು ತೋರಿ ಜೇನಿಗೊಂದು ಬೆಲ್ಲದ ತುಣುಕು ಇರಿಸಿ ಬಂದಿದ್ದೆವು. ನಮ್ಮ ಮನೆ ಅಂಗಳದಿಂದ ಜೇನು ಆಸಕ್ತರ ಮನೆಗೆ ಜೇನು ಪೆಟ್ಟಿಗೆ ಸಾಗಿಸಿದಾಗ ಮಾರನೇ ದಿನ ಅವು ವಿಚಲಿತ ಆಗಬಾರದು ಎಂಬ ಕಾರಣಕ್ಕೆ ತತ್ಕಾಲಕ್ಕೆ ವ್ಯವಸ್ಥೆ ಮಾಡುತ್ತೇವೆ.
ಮಾರನೇ ದಿನದಿಂದ ಸಕ್ಕರೆ ನೀರು ಕೊಟ್ಟು ಜೇನು ಒಲಿಸಿಕೊಳ್ಳುವ ಪಾಠ. ಹೊಸ ಪರಿಸರಕ್ಕೆ ಜೇನು ಹೊಂದಿಕೊಂಡ ಮೇಲೆ ಕೃತಕ ಆಹಾರ ನೀಡುವುದು ಬಂದ್. ಸಕ್ಕರೆ ನೀರು ಕೊಡೋದು ಹೇಗೆ ಎಂದು ಹೇಳಿ ಕೊಡಬೇಕಲ್ಲ ಒಂದು ಹೆಜ್ಜೆ ಬಂದು ಹೋಗ್ತೀರಾ? ಹಾಗೆಯೇ ರಾಣಿ ಜೇನನ್ನು ತೋರಿಸುತ್ತೀರಾ? ಜೊತೆಗೆ ನಿಮ್ಮ ಜೊತೆಯಲ್ಲೇ ಊಟ ಮಾಡುವ ಎಂದು ಕಾಯುತ್ತಿದ್ದೇವೆ ಎಂದು ಮಾತೃ ಹೃದಯದ ಅಹವಾಲು. ನನ್ನೊಂದಿಗೆ ಊಟ ಎಂದು ಕಾದರೆ ನಿಮಗೂ ಒಣಗಣೇಶವೇ ಗತಿ.. ನೀವು ಊಟ ಮಾಡಿ. ನಾನು ಎಷ್ಟೊತ್ತಿಗಾದರೂ ಬರುತ್ತೇನೆ ಎಂದಿದ್ದೆ.

ಆಗಿದ್ದೂ ಹಾಗೆಯೇ. ಹೋದಾಗ ನಾಲ್ಕು ಗಂಟೆಯೇ ಆಗಿತ್ತು. ಜೊತೆಗೆ ನಮ್ಮ ಮಲೆನಾಡು ಗಿಡ್ಡ ಕಚೇರಿಯಲ್ಲಿ ಇರುವ ಹರ್ಷ. ಹೋಗುತ್ತಿದ್ದಂತೆ ಭವಾನಕ್ಕ ಶ್ರೀಧರ ಆಶ್ರಮದ ಪ್ರಸಾದ ರೂಪದ ಸಕ್ಕರೆಯ ದೊಡ್ಡ ಹರಳನ್ನು ಕರಗಿಸಿದ ಸಕ್ಕರೆ ಬಟ್ಟಲನ್ನು ತಂದರು.. ಸಕ್ಕರೆ ನೀರನ್ನು ಅವಕ್ಕೆ ತೋರುವ ಮುನ್ನ ಭವಾನಕ್ಕನಿಗೆ ರಾಣಿ ಜೇನನ್ನು ತೋರಿ ಜೇನಿನ ಕುಟುಂಬ ನಿರ್ವಹಿಸುವ ಪರಿಯನ್ನು ಹೇಳಿದೆ..ಹುಡುಗರನ್ನೂ ನಾಚಿಸುವಂತಹ ಭವಾನಕ್ಕನ ಉತ್ಸಾಹ ಕಂಡು ನಾನೂ ಹಿರಿ ಹಿರಿ ಹಿಗ್ಗಿದೆ.
ಜೇನಿನ ಪಾಠ ಮುಗಿಸಿ ಕಾಫಿ ಕುಡಿದು ಹೋಗುವ ಎಂದು ಒಳಗಡಿಯಿಟ್ಟೆವು. ಭವಾನಕ್ಕನೊಂದಿಗೆ ಜೇನಿನ ಮುಂದುವರೆದ ಪಾಠದ ಹೇಳಿಕೆಯಲ್ಲಿ ಇರುವಾಗ ಪತಿ ವೆಂಕಪ್ಪಣ್ಣ ಒಳಗಿಂದ ಬಿಸಿ ಬಿಸಿ ಕಾಫಿ ಮಾಡಿ ತಂದರು. ಅಡುಗೆ ಕೆಲಸ ಹೆಂಡತಿಯದೇ ಎಂಬ ಯಾವುದೇ ಬಿಗುಮಾನ ಇಲ್ಲ. ಅಕ್ಷರಶಃ ಒಬ್ಬರಿಗೊಬ್ಬರು ಆಗುವ ಬಹಳ ಅನ್ಯೋನ್ಯದ ಬದುಕು. ಕಾಫಿಯ ಸೊಬಗು ಅದೆಷ್ಟು ಹಿತವಾಯಿತು!
ನನ್ನ ಕೆಲಸ ಆಯಿತು, ಉದ್ದಾನುದ್ದದ ಕೆಲಸವಿದೆ, ನಾನಿನ್ನು ಹೊರಟೆ ಎಂದು ಎದ್ದೆ. ಏನಾದರೂ ಮಾಹಿತಿ ಬೇಕೆಂದರೆ ಫೋನು ಮಾಡಿ ಎಂದು ಹೊರಗಡಿ ಇಟ್ಟೆ. ಹೊರಗೆ ಜಗುಲಿಯಲ್ಲಿ ಅವರದೇ ಮರದಿಂದ ಹಕ್ಕಿ ತಿಂದು ಬಿಸುಟ ಚಿಕ್ಕು ಹಣ್ಣಿನ ತುಣುಕು ಬಿದ್ದಿತ್ತು. ಇನ್ನೂ ಸ್ವಲ್ಪ ಕಳಿತ ಮೇಲೆ ಕೊಂಚ ಸಕ್ಕರೆ ನೀರಿನಲ್ಲಿ ಅದ್ದಿ ಜೇನಿಗೆ ಕೊಡಿ.. ಅದೆಷ್ಟು ಇಷ್ಟು ಪಟ್ಟು ತಿನ್ನುತ್ತವೆ ನೋಡಿ. ಎಂದೆ. ಈಗ ಹಿಗ್ಗಾಗುವ ಸರದಿ ಅವರದಾಗಿತ್ತು.
ಮನೆಯ ಒಂದು ಮೂಲೆಯಲ್ಲಿ ಚಿಕ್ಕು ಮರವಿತ್ತು. ಎಲೆಯ ಮರೆಯಲ್ಲಿ ನೂರಾರು ಕಾಯಿ. ಹಿರಿಯ ದಂಪತಿಗಳಿಗೆ ಕೊಯ್ಯೋದು ಕಷ್ಟವಾದೀತು. ಒಂದಷ್ಟು ಕಾಯಿ ಕೊಯ್ದು ಕೊಡು ಎಂದು ಹರ್ಷನಿಗೆ ಹೇಳಿದೆ.. ಖುಷಿಯಾದ ದಂಪತಿಗಳು ಒಳಗಿನಿಂದ ಬುಟ್ಟಿ ಮತ್ತು ಕೆಳಗಿನಿಂದಲೇ ಹಣ್ಣು ಕೊಯ್ಲು ಮಾಡುವ ದೋಟಿಯಂತಹ ಸಾಧನ ತಂದರು.

ಮುಂದೆ ತಾಸರ್ಧ ಹೊತ್ತು ಹಣ್ಣು ಕೊಯ್ಲಿನ ಜೊತೆಗೆ ದಂಪತಿಗಳಿಬ್ಬರ ಇತ್ಯೋಪರಿ. ವೆಂಕಪ್ಪನವರು ಬಂದೀಖಾನೆ ಮೇಲ್ವಿಚಾರಕರಾಗಿ ನಿವೃತ್ತಿ ಆದವರು.ರಾಜ್ಯದ ಉದ್ದಗಲದಲ್ಲೂ ಸೇವೆ ಸಲ್ಲಿಸಿ ಈಗ ನಿವೃತ್ತಿಯ ಬಳಿಕ ಹಲವು ಚಟುವಟಿಕೆಯಲ್ಲಿ ನಿರತರು. ಊರು ಹತ್ತಿರದ ಮುಂಡಿಗೇಸರ.. ನಾಲ್ಕು ಗುಂಟೆ ತೋಟವಿದೆ. ಬಾಲ್ಯದ ಬಡತನದ ನೆನುಹಿಗಾಗಿ, ಕೃಷಿಯ ನಂಟು ಕಳದು ಹೋಗ ಕೂಡದು ಎನ್ನುವುದಕ್ಕಾಗಿ ಉಳಿಸಿ ಕೊಂಡಿದ್ದಾರೆ.
ವೃತ್ತಿಯಲ್ಲಿ ಇರುವಾಗಲೇ ಈ ಜಾಗ ಕೊಂಡದ್ದು. ಡಬಲ್ ಸೈಟು.. ಒಂದರಲ್ಲಿ ಮಹಡಿ ಮನೆ. ಮೇಲುಪ್ಪರಿಗೆ ಬಾಡಿಗೆಗೆ. ಒಬ್ಬರಿಗೆ ಒಬ್ಬರು ಆಗಲಿ ಎಂಬ ಆಶಯ. ಭವಾನಕ್ಕ ಶಿರಸಿ ಕಡೆಯವರು. ಅವರೂ ಸರಕಾರಿ ನೌಕರಿಯಲ್ಲಿ ಇದ್ದವರು. ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸವಿತ್ತು. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಭವಾನಕ್ಕ ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾದವರು. ಲವಲವಿಕೆಯಿಂದ, ಆತ್ಮಸ್ಥರ್ಯದಿಂದ ರೋಗವನ್ನು ಎದುರಿಸಿ ಗೆದ್ದವರು. ಆ ರೋಗವು ಅವರ ಲವಲವಿಕೆಯನ್ನು ಕಿಂಚಿತ್ತೂ ಕಿತ್ತು ಕೊಂಡಿಲ್ಲ. ಅವರ ಜೀವನೋತ್ಸಾಹದ ಎದುರು ಅದು ಬೆದರಿ ಗಪ್ಪನೆ ಅಡಗಿ ಕೂತಿದೆ.. ಕ್ಯಾನ್ಸರ್ರನ್ನು ಎದುರಿಸಿ ಗೆದ್ದು ಅದೇ ವರ್ಷ ವಿದೇಶದಲ್ಲಿ ಇರುವ ಮಗಳ ಮನೆಗೆ ಹೋಗಿ ಬಂದಿದ್ದಾರೆ..
ಮಗ ಬೆಂಗಳೂರಲ್ಲಿ ಇದ್ದಾನೆ. ಆಗಾಗ ಅಲ್ಲಿಗೂ ಹೋಗಿ ಬರುತ್ತಾರೆ. ದೇಶ ವಿದೇಶಗಳಿಗೆ ಹೋಲಿಸಿದರೆ ತಮ್ಮೂರೇ ತಮಗೆ ಸ್ವರ್ಗ ಎಂದು ಇವರು ಇರುವವರು. ಬೆಳ ಬೆಳಿಗ್ಗೆಯೇ ಎದ್ದು ವಾಕಿಂಗು.ಪತಿ ಕಿಲೋಮೀಟರ್ ದೂರದಲ್ಲಿ ಇರುವ ಹಾಲು ಸೊಸೈಟಿಯಿಂದ ಉಗ್ಗದಲ್ಲಿ ಫ್ರೆಶ್ ಹಾಲು ತಂದರೆ ಮಡದಿ ಎರಡು ಚೀಲ ಹಿಡಿದು ಅಲ್ಲಿಯೇ ಸುತ್ತ ಮುತ್ತ ವಾಕಿಂಗ್ ಹೋಗುತ್ತಾರೆ.
ಒಂದು ಚೀಲದಲ್ಲಿ ದನಕರುಗಳಿಗೆ ಕೊಡಲೆಂದು ತಿಂಡಿ ತಿನಿಸು, ಹಣ್ಣಿನ ಉಳಿಕೆಗಳು ಇದ್ದರೆ ಇನ್ನೊಂದು ಅವುಗಳು ಹಾಕಿದ ಸೆಗಣಿ ತರಲು.. ಕೆಲವೊಮ್ಮೆ ಅವುಗಳ ಮೂತ್ರ ತರಲು ಉಗ್ಗವೂ ಇರುತ್ತದೆ.ಹೀಗೆ ತಂದಿದ್ದು ಹಿತ್ತಲಿನ ಮೂಲೆಯಲ್ಲಿ ಕಳಿತು ಗೊಬ್ಬರ ಆಗಿದೆ. ಇಲ್ಲಿಗೂ, ಊರಲ್ಲಿ ಇರುವ ತುಂಡು ತೋಟಕ್ಕೆ ಇದೇ ಗೊಬ್ಬರ ಆಯಿತು. ಮೊನ್ನೆ ರೆಡೀಮೇಡ್ ಎರೆಗೊಬ್ಬರ ತೊಟ್ಟಿ ನೋಡಿ ಬಂದಿದ್ದಾರೆ.. ಅದಕ್ಕೊಂದು ವ್ಯವಸ್ಥೆ ಮಾಡಿಕೊಡಿ ಎಂದಿದ್ದಾರೆ.
ಅಷ್ಟೊತ್ತಿಗೆ ನಮ್ಮ ಹರ್ಷನ ಚಿಕ್ಕು ಹಣ್ಣಿನ ಕೊಯ್ಲೂ ಮುಗಿದಿತ್ತು. ಎಲ್ಲವನ್ನೂ ಚಂದದಿಂದ ತೊಳೆದು ನಾಲ್ಕು ನಾಲ್ಕು ಪಾಲು. ಪ್ರತೀ ಹಣ್ಣಿನ ತುಣುಕೂ ಒಬ್ಬೊಬ್ಬರಿಗೆ. ಎಲ್ಲರಿಗೂ ಎಲ್ಲದರ ತುಣುಕೂ ಸಿಗಬೇಕು. ಹೀಗೆ ಹಂಚಿ ತಿಂದರೇ ಹಣ್ಣಿನ ಸವಿ ಹೆಚ್ಚಾಗುವುದು ಎಂದು ಭವಾನಕ್ಕ ಹೇಳಿದರು. ಅದಂತೂ ನಿಜವೇ ಆಗಿತ್ತು.
ಹಣ್ಣು ತಿನ್ನಲು ಬರುವ ಪಶು ಪಕ್ಷಿಗಳು, ಅವುಗಳ ಖುಷಿ, ಅವುಗಳೊಂದಿಗೆ ತಮ್ಮ ಒಡನಾಟದ ಖುಷಿಯನ್ನು ಗಂಡ ಹೆಂಡತಿ ಬಣ್ಣಿಸುವಾಗ ನಮಗೂ ಇನ್ನಿಲ್ಲದ ಖುಷಿ..
ದಿನವಿಡೀ ಈ ರೀತಿಯ ಅರ್ಥಪೂರ್ಣದ ಸತ್ಸಂಗ. ಸಂಜೆ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಹೋಗಿ ಕರಸೇವೆ. ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತಿ ಆಗಿದೆ, ವಿಶ್ರಾಂತ ಜೀವನವನ್ನು ಕುಳಿತು ಕಳೆಯೋಣ ಎಂಬ ಅಲಸ್ಯದ ಜೀವನದ ಆಯ್ಕೆಯನ್ನು ಬದಿಗಿಟ್ಟು ಹೀಗೆ ಸದಾ ಕ್ರಿಯಾಶೀಲ ಬದುಕಿನ ಆಯ್ಕೆ ಮಾಡಿಕೊಂಡಿರುವ ಈ ಹೇಳಿ ಮಾಡಿಸಿದ ಜೋಡಿಯ ಬಗ್ಗೆ ನನಗೆ ಅಭಿಮಾನ ಉಕ್ಕಿದ್ದೂ ಸುಳ್ಳಲ್ಲ. ಹಾಗೆಯೇ ನನ್ನ ಉತ್ಸಾಹವೂ ಇಮ್ಮಡಿಸಿದ್ದೂ ಸುಳ್ಳಲ್ಲ.