ಕಬ್ಬಿನ ಬೆಳೆಗೆ ಬೇಕಾದ  ಸಾವಯವ ಗೊಬ್ಬರದ ಪ್ರಮಾಣ ತಿಳಿಯುವುದು ಹೇಗೆ?

0
ಲೇಖಕರು: ಪ್ರಶಾಂತ್‌ ಜಯರಾಮ್

ಬೆಳೆಯ ಬೆಳೆವಣಿಗೆ ಸರಿಯಾಗಿ ಆಗಲು ಮಣ್ಣಿನಲ್ಲಿ ಸಾವಯವ ಇಂಗಾಲ(Soil Carbon) ಕನಿಷ್ಠ 0.5% ಇರಬೇಕು ಮತ್ತು Ph(ರಸಸಾರ) ಮಟ್ಟ 6.5 ರಿಂದ 7.5 ಇರಬೇಕು,ಈ  ರೀತಿಯಿದಾಗ ನೀರು ಮತ್ತು ಪೋಷಕಾಂಶವನ್ನು ಗಿಡಗಳು ತೆಗೆದುಕೊಳ್ಳಲು ಅನುಕೂಲ.

ಬಹುತೇಕ ನಮ್ಮ ಮಣ್ಣಿನಲ್ಲಿ ಸಾವಯವ ಇಂಗಾಲ(0.3%) ಇದೆ. ಬೆಳೆ ಬೆಳೆಯುವ ಮುನ್ನ ಸಾವಯವ ಇಂಗಾಲ ಮತ್ತು Ph ಮಟ್ಟ ಗಮನಿಸಿ ಕೊರತೆ ಕಂಡಲ್ಲಿ  ಸಾವಯವ ಇಂಗಾಲವನ್ನು ಕನಿಷ್ಠ 0.5% ಹೆಚ್ಚಿಸಿಕೊಳ್ಳಬೇಕು.0.1% ಹೆಚ್ಚಿಸಲು ಕನಿಷ್ಠ 10 ಟನ್ ಸಾವಯವ ಗೊಬ್ಬರ ಸೇರಿಸಬೇಕು.

ಬೆಳೆಯ ಬೆಳವಣಿಗೆಗೆ ಬೇಕಾದ ಪ್ರಧಾನ ಪೋಷಕಾಂಶಗಳಾದ:ಸಾರಜನಕ,ರಂಜಕ,ಪೊಟಾಷ್ (ಎನ್.ಪಿ.ಕೆ) ದ್ವಿತೀಯ ಪೋಷಕಾಂಶಗಳಾದ: ಕ್ಯಾಲ್ಸಿಯಂ, ಮಗ್ನೇಸಿಯಂ, ಗಂಧಕ. ಸೂಕ್ಷ್ಮ ಪೋಷಕಾಂಶಗಳಾದ:ಬೋರನ್,ಜಿಂಕ್, ಮ್ಯಾಂಗನೀಸ್, ಕಬ್ಬಿಣ, ತಾಮ್ರ,ಮೊಲಿಬ್ದಿಯಂ, ಕ್ಲೋರಿನ್,ಸಿಲಿಕಾ ಇತ್ಯಾದಿಗಳನ್ನು ಹಸಿರೆಲೆ/ಕೊಟ್ಟಿಗೆ /ಕೋಳಿ /ಮೂಳೆ /ಕಂಪೋಸ್ಟ್ ಗೊಬ್ಬರ ಅಥವಾ ಎಣ್ಣೆ ಹಿಂಡಿಗಳ ಮೂಲಕ ಒದಗಿಸಬಹುದು.

ಹಸಿರು ಗೊಬ್ಬರ(ಸೆಣಬು, ಅಲಸಂದೆ, ಹಸಿರು, ಉದ್ದು, ಹುರಳಿ, ನವಧಾನ್ಯಗಳು,ಇತ್ಯಾದಿ) ಪ್ರತಿ ಎಕರೆ ಪ್ರದೇಶದಿಂದ 4 ರಿಂದ 10 ಟನ್  ಹಸಿರು ಗೊಬ್ಬರ ದೊರೆತು ಅದರಿಂದ 20 ರಿಂದ 30 ಕೆಜಿ ಸಾರಜನಕ ದೊರೆಯುತ್ತದೆ.

ಸಾವಯವ ಗೊಬ್ಬರ ಸೇರಿಸಿದ ನಂತರ ಅದರಲ್ಲಿರುವ ಪೋಷಕಾಂಶ ಮಣ್ಣಿಗೆ ಬಿಡುಗಡೆಯಾಗಲು ಕನಿಷ್ಠ 45 ದಿನಗಳು ಬೇಕಾಗುವುದರಿಂದ ಬೆಳೆ ಹಾಕುವ ಮುಂಚೆ ಇದನ್ನು ಗಮನದಲ್ಲಿಟ್ಟು ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸುವುದು.

ಶೇ 1% ಸಾವಯವ ಇಂಗಾಲ(Soil Carbon)

ಇರುವ ಮಣ್ಣಿನ ಪ್ರತಿ ಎಕರೆಯಲ್ಲಿ 15 ರಿಂದ 20 ಕೆಜಿ ಸಾರಾಜನಕ ಲಭ್ಯವಾಗುತ್ತದೆ. ಸಾವಯವ ಇಂಗಾಲ ಹೆಚ್ಚಾಗಿ ಇರುವ ಮಣ್ಣಿನಲ್ಲಿ ಸಾರಾಜನಕ ಹಿಡಿದಿಡುವ ಪ್ರಮಾಣ ಕೂಡ ಜಾಸ್ತಿಯಿರುವುದರಿಂದ ಬೆಳೆಗೆ ಬೇಕಾಗುವ ಸಾರಾಜನಕ ಬೇಡಿಕೆ ಕೂಡ ಕಡಿಮೆಯಾಗುತ್ತದೆ.

ಉತ್ತಮ ದರ್ಜೆಯ ಕಂಪೋಸ್ಟ್ ಗೊಬ್ಬರದಲ್ಲಿ ಎನ್. ಪಿ. ಕೆ ಪ್ರಮಾಣ (%):1.5:0.8:1.0

01 ಟನ್ ಕಾಂಪೋಸ್ಟ್ ಗೊಬ್ಬರದಲ್ಲಿ: 15 ಕೆಜಿ ಸಾರಜನಕ, 08 ಕೆಜಿ ರಂಜಕ 10 ಕೆಜಿ ಪೊಟಾಷ್ ದೊರೆಯುತ್ತದೆ.

ಎಣ್ಣೆ ಹಿಂಡಿಗಳಲ್ಲಿ (ಬೇವು/ಹೊಂಗೆ /ಹರಳು /ಕುಸುಬೆ /ಹತ್ತಿ /ಕಡ್ಲೆಕಾಯಿ ಇತ್ಯಾದಿ) ಎನ್.ಪಿ ಕೆ ಪ್ರಮಾಣ(%):04:01:1.3

01 ಟನ್ ಎಣ್ಣೆ ಹಿಂಡಿಗಳಲ್ಲಿ:40 ಕೆಜಿ ಸಾರಜನಕ, 10 ಕೆಜಿ ರಂಜಕ, 13 ಕೆಜಿ ಪೊಟಾಷ್ ದೊರೆಯುತ್ತದೆ.

ಸಾವಯವ ಗೊಬ್ಬರಗಳು ಮೊದಲ ವರ್ಷದಲ್ಲಿ ಸಾಮಾನ್ಯವಾಗಿ ಅವುಗಳ ಸಾರಜನಕ ,ರಂಜಕ,ಪೊಟಾಷ್ ಅಂಶದ ಮೂರನೇ ಒಂದು ಭಾಗವನ್ನು(1/3) ಬಿಡುಗಡೆ ಮಾಡುತ್ತವೆ.  ಅಂದರೆ ತಲಾ ಎನ್.ಪಿ.ಕೆ:30 ಕೆಜಿ ಸಾವಯವ ಗೊಬ್ಬರದ ಮೂಲಕ ಕೊಟ್ಟಾಗ ಮೊದಲ ವರ್ಷ ಎನ್.ಪಿ.ಕೆ ಪ್ರಮಾಣ 10 ಕೆಜಿ ಸಿಗುತ್ತದೆ,ಉಳಿದ 20 ಕೆಜಿ ಮುಂದಿನ ವರ್ಷದ ಬೆಳೆಗೆ ಲಭ್ಯವಾಗುತ್ತದೆ ಎಂದು ತಿಳಿಯುವುದು.

ರಾಸಾಯನಿಕ ಗೊಬ್ಬರದ ಮೂಲಕ ಎನ್.ಪಿ.ಕೆ ಒದಗಿಸಲು ಬೆಳೆಗೆ ಅಗತ್ಯವಿರುವ ಎನ್.ಪಿ.ಕೆ ಪ್ರಮಾಣವನ್ನು ದ್ವಿಗುಣ ಮಾಡಿ ನೀಡಲಾಗುತ್ತದೆ. ರಾಸಾಯನಿಕ ಗೊಬ್ಬರದ ಮೂಲಕ ನೀಡಿದಾಗ ಶೇ 50% ಗೊಬ್ಬರ ವಾತಾವರಣದಲ್ಲಿ ಆವಿಯಾಗುವುದು ಮತ್ತು ಭೂಮಿಯಲ್ಲಿ ಬಸಿದು ಹೋಗುತ್ತದೆ(Volatisation and Leaching)

ಪ್ರತಿಯೊಂದು ಬೆಳೆಗೆ ಅಗತ್ಯವಿರುವ ಪೋಷಕಾಂಶ ಮಟ್ಟವನ್ನು ವೈಜ್ಞಾನಿಕವಾಗಿ ತಿಳಿದು ಬೆಳೆವಣಿಗೆ ಅಂತದಲ್ಲಿ ನೀಡಿದಾಗ ನಿರೀಕ್ಷಿತ ಮಟ್ಟದ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ರಾಸಾಯನಿಕ ಗೊಬ್ಬರದಲ್ಲಿ ಎನ್.ಪಿ.ಕೆ ಪ್ರಮಾಣ ಪ್ರತ್ಯೇಕವಾಗಿ ಸಿಗುತ್ತದೆ. ಅದನ್ನು ಯೂರಿಯ(46%),ಸಿಂಗಲ್ ಸೂಪರ್ ಪಾಸ್ಪಾಟ್ (16%), ಮ್ಯೂರೇಟ್ ಆಫ್ ಪೊಟಾಷ್ (60%) ಇತ್ಯಾದಿ ಮೂಲಕ ಅಗತ್ಯಕ್ಕೆ ಅನುಗುಣವಾಗಿ ಕೊಡಲಾಗುತ್ತದೆ.

ಸಾವಯವ ಗೊಬ್ಬರದಲ್ಲಿ ಎನ್.ಪಿ.ಕೆ ಒಳಗೊಂಡಂತೆ ಎಲ್ಲ  ಪೋಷಕಾಂಶಗಳು ಸಂಯುಕ್ತವಾಗಿ (Composite) ಸಿಗವುದರಿಂದ ಬೆಳೆಗೆ ಬೇಕಾದ ಸಾರಜನಕ ಪ್ರಮಾಣವನ್ನು ಆಧಾರವಾಗಿ ಪರಿಗಣಿಸಿ ಆ ಪ್ರಕಾರ ಬೇಕಾಗುವ ಸಾವಯವ ಗೊಬ್ಬರದ ಪ್ರಮಾಣವನ್ನು ಅಂದಾಜಿಸಿ ನೀಡಬಹುದು.

ಕಬ್ಬು (Sugarcane)  

ಈಗ ನಾವು ಕಬ್ಬಿನ ಬೆಳೆ ಬಗ್ಗೆ ನೋಡೋಣ. ಯಾವುದೇ ರೀತಿಯ ಗೊಬ್ಬರ ಹಾಕದೇ ಕೂಡ ಕನಿಷ್ಠ ದರ್ಜೆಯ ಮಣ್ಣಿನಲ್ಲಿ ಕೂಡ 15 ರಿಂದ 20 ಟನ್ ಕಬ್ಬು ಬೆಳೆಯಬಹುದು. 01 ಟನ್ ಕಬ್ಬು ಬೆಳೆಯಲು ಮಣ್ಣಿನಿಂದ ತೆಗೆದುಕೊಳ್ಳುವ ಎನ್.ಪಿ.ಕೆ ಪ್ರಮಾಣ:1.0:0.6:2.25 (ಕೆಜಿ ) ಒಂದು ಎಕರೆಯಲ್ಲಿ 60 ಟನ್ ಕಬ್ಬು ಬೆಳೆಯಲು ಮಣ್ಣಿನಿಂದ ತೆಗೆದುಕೊಳ್ಳುವ ಎನ್.ಪಿ. ಕೆ ಪ್ರಮಾಣ :60:36:135(ಕೆಜಿ )

ಈ ಪ್ರಮಾಣದ ಎನ್.ಪಿ.ಕೆ ಮಣ್ಣಿಗೆ ಸೇರಿಸಲು ರಾಸಾಯನಿಕ ಗೊಬ್ಬರದ ಮೂಲಕ ನೀಡಲು ಬೇಗಾಗುವ ಪ್ರಮಾಣ ಇಂತಿದೆ: ಯೂರಿಯಾ(46%):130 ಕೆಜಿ, ಸಿಂಗಲ್ ಸೂಪರ್ ಪಾಸ್ಪಾಟ,  (16%):225 ಕೆಜಿ, ಮುರೇಟ್ ಅಪ್ ಪೊಟಾಷ್ (60%):225  ಕೆಜಿ

ಈ ಪ್ರಮಾಣದ ಎನ್.ಪಿ.ಕೆ ಕಾಂಪೋಸ್ಟ್ ಗೊಬ್ಬರದ ಮೂಲಕ ಕೊಡಲು 12 ಟನ್ ಮೊದಲ ವರ್ಷದ ಬೆಳೆಗೆ ನೀಡಬೇಕಾಗುತ್ತದೆ.ಸಗಣಿ ಗೊಬ್ಬರದಲ್ಲಿ ಸಾರಾಜನಕ ಶೇ 01% ಇರುವುದರಿಂದ 18 ಟನ್ ಸಗಣಿ ಗೊಬ್ಬರ ನೀಡಬೇಕು.ಕೊಟ್ಟಿಗೆ/ಸಗಣಿ/ಕಾಂಪೋಸ್ಟ್ ಗೊಬ್ಬರವನ್ನು ಕಡಿಮೆ ನೀಡಿ ಅದಕ್ಕೆ ಸರಿಸಮಾನವಾದ ಎಣ್ಣೆ ಹಿಂಡಿಗಳನ್ನು ಸಹ ಬಳಸಬಹುದು.

ನಂತರದ ಕೂಳೆ ಬೆಳೆಗೆ ಕಬ್ಬಿನ ತರಗು /ರವದಿ ಒಂದು ಸಾಲಿನಲ್ಲಿ ಮುಚ್ಚಿಗೆ ಮಾಡುವುದರಿಂದ ಒಂದು ಎಕರೆಗೆ 3 ರಿಂದ 4 ಟನ್ ದೊರೆಯುವ ಕಬ್ಬಿನ ತರಗಿನಿಂದ 15 ರಿಂದ 20 ಕೆಜಿ ಸಾರಾಜನಕ ಪೂರೈಸಬಹುದು, ಮತ್ತೊಂದು ಸಾಲಿನಲ್ಲಿ ದ್ವಿದಳ /ಹಸಿರೆಲೆ ಗೊಬ್ಬರ ಸೇರಿಸುವುದರಿಂದ 15 ರಿಂದ 20 ಕೆಜಿ ಸಾರಾಜನಕ ಲಭ್ಯವಾಗುತ್ತದೆ.ಇದರ ಜೊತೆಗೆ ಪ್ರತಿ ವರ್ಷ 04  ಟನ್ ಕಾಂಪೋಸ್ಟ್ /ಚೆನ್ನಾಗಿ ಕಳೆತ ಕೊಟ್ಟಿಗೆ ಗೊಬ್ಬರ ನೀಡುವುದರಿಂದ ಕಬ್ಬಿನಲ್ಲಿ ನಿರಂತರವಾಗಿ ಉತ್ತಮ ಇಳುವರಿ ಪಡೆಯಬಹುದು.

ಸಾವಯವ ಗೊಬ್ಬರದ ಮೂಲಕ 60 ಕೆಜಿ ಸಾರಜನಕ ಪೂರೈಸಲು ಅದರ 3 ಪಟ್ಟು ಅಂದರೆ 180 ಕೆಜಿ ನೀಡಬೇಕಾಗುತ್ತದೆ ಎಂದು ಮೇಲೆ ವಿವರಣೆ ನೀಡಲಾಗಿದೆ.01 ಟನ್ ಕಂಪೋಸ್ಟ್ ಗೊಬ್ಬರದಲ್ಲಿ 15 ಕೆಜಿ ಸಾರಜನಕ ಇರುತ್ತದೆ,180 ಕೆಜಿ ಪೂರೈಸಲು ಸುಮಾರು 12 ಟನ್ ಕಂಪೋಸ್ಟ್  ಗೊಬ್ಬರ ನೀಡಬೇಕಾಗುತ್ತದೆ.12 ಟನ್ ಗೊಬ್ಬರದಲ್ಲಿ ಮೂರನೇ ಒಂದು ಭಾಗ (1/3) ಅಂದರೆ 60 ಕೆಜಿ ಸಾರಾಜನಕ ಪೂರೈಕೆಯಾಗಿ ಉಳಿದ 120 ಕೆಜಿ ಮುಂದಿನ ವರ್ಷಗಳಲ್ಲಿ ಬೆಳೆಗೆ ಲಭ್ಯವಾಗುತ್ತದೆ.

ಕಬ್ಬು ಬೆಳೆಯುವ ಮುನ್ನ ಹಸಿರು ಗೊಬ್ಬರ ಸೇರಿಸುವುದರಿಂದ ಎಕರೆಗೆ 30 ಕೆಜಿ ಸಾರಾಜನಕ ಸಿಗುವುದರಿಂದ ಉಳಿಕೆ ಬೇಕಿರುವ 150 ಕೆಜಿ ಸಾರಜನಕವನ್ನು10 ಟನ್ ಕಂಪೋಸ್ಟ್ ಕೊಡುವುದರ ಮೂಲಕ ಸಹ ತುಂಬಬಹುದು.

ಹಸಿರು ಗೊಬ್ಬರದಿಂದ 30 ಕೆಜಿ,10 ಟನ್ ಕಂಪೋಸ್ಟ್ ಮೂಲಕ 150 ಕೆಜಿ ಹೀಗೆ ಒಟ್ಟು 180 ಕೆಜಿ ಸಾರಜನಕದಲ್ಲಿ ಕಬ್ಬಿನ ಬೆಳೆಗೆ ಬೇಕಾದ 60 ಕೆಜಿ ಸಾರಜನಕ ದೊರೆಯುತ್ತದೆ ಉಳಿದ 120 ಕೆಜಿ ಸಾರಜನಕ(ಬೇರೆ ಪೋಷಕಾಂಶ ಸಹ ಇರುತ್ತದೆ) ಮುಂದಿನ ವರ್ಷ/ಬೆಳೆಗೆ ಲಭ್ಯವಾಗುತ್ತದೆ. ಈ ರೀತಿಯಾಗಿ ಎಲ್ಲಾ ಬೆಳೆಗಳಿಗೆ ಅಂದಾಜು ಮಾಡಿ ಸಾವಯವ ಗೊಬ್ಬರದ ಪ್ರಮಾಣವನ್ನು ನೀಡುವ ಬಗ್ಗೆ ರೈತರು ನಿರ್ಧಾರ ಮಾಡಬಹುದು.

ಹೆಚ್ಚಿನ ಮಾಹಿತಿಗೆ : 9342434530

LEAVE A REPLY

Please enter your comment!
Please enter your name here