ಲೇಖಕರು: ಕುಮಾರ ರೈತ, ಪತ್ರಕರ್ತರು

ನೀವು ದಟ್ಟಡವಿಗೆ ಹೋಗಿ ಅಲ್ಲಿ ಹೆಜ್ಜೇನು ಗೂಡುಗಳಿರುವ ಮರಗಳಿಂದ ದೂರ ನಿಂತು ನೋಡುತ್ತೀರಿ. ಅಲ್ಲಿ ಕಾಡಿನ ಇತರ ಭಾಗಗಳಂತೆ ಮಂಗಗಳ ಜಿಗಿದಾಟ, ಕುಣಿದಾಟ, ರೆಂಬೆ-ಕೊಂಬೆ ಜಗ್ಗುವುದ್ಯಾವುದೂ ಇರುವುದಿಲ್ಲ. ಕಾಡಾನೆಗಳು ಆ ಮರಗಳಿಗೆ ಮೈ ಉಜ್ಜುವುದಿಲ್ಲ. ತಮ್ಮ ಮರಿಗಳನ್ನು ಆ ಮರಗಳ ಬಳಿ ಬಿಡುವುದೂ ಇಲ್ಲ. ಕಾಡಂದಿಗಳು ಸಹ ಅಂಥ ಮರಗಳ ಬುಡಗಳನ್ನು ಕೋರೆಹಲ್ಲುಗಳಿಂದ ಕೆದಕುವ ಕೆಲಸ ಮಾಡುವುದಿಲ್ಲ. ವಿಧೇಯ ವಿದ್ಯಾರ್ಥಿಗಳಂತೆ ತಲೆಬಗ್ಗಿಸಿ, ಅಲ್ಲಿಂದ ಪಲಾಯನ ಮಾಡುತ್ತವೆ. ಇದಕ್ಕೆ ಕಾರಣ ಜೇನುಹುಳಗಳ ಭಯ.


ಕಾಡಂಚಿನಲ್ಲಿ ವ್ಯವಸಾಯ ಮಾಡುತ್ತಿರುವವರು ಬೆಳೆಗಳನ್ನು ಸದಾ ಎಚ್ಚರಿಕೆಯಿಂದ ಕಾವಲು ಕಾಯಬೇಕಾಗುತ್ತದೆ. ಅದರಲ್ಲಿಯೂ ಕಬ್ಬು, ಭತ್ತ, ಬಾಳೆ ಬೆಳೆಗಳಿರುವ ಇರುವ ಕೃಷಿಭೂಮಿಗೆ ಕಾಡುಹಂದಿಗಳು, ಕಾಡಾನೆಗಳ ಕಾಟ ವಿಪರೀತ. ಇಂಥ ಜಾಗಗಳಲ್ಲಿ ಬೆಳೆಯನ್ನು ಬೆಳೆಯುವ ಶ್ರಮಕ್ಕಿಂತ ಅವುಗಳ ರಕ್ಷಣೆಯೇ ತೀವ್ರ ಪರಿಶ್ರಮದ ಕೆಲಸ. ಹಗಲಿರುಳೆನ್ನದೇ ಕಾಯಬೇಕು. ಹೀಗೆ ಕಾಯ್ದರೂ ಪ್ರಯೋಜನವಾಗುವುದಿಲ್ಲ.
ಇವೆಲ್ಲ ಕಾರಣಗಳಿಂದಾಗಿ ಕೃಷಿಕರು ಕೃಷಿಭೂಮಿ ಸುತ್ತ ಕಂದಕ ತೋಡುವುದು, ಸೌರಬೇಲಿ ಹಾಕಿಸುವುದು, ಕೆಲವು ಬಾರಿ ತಂತಿಬೇಲಿಗೆ ಹತ್ತಿರದ ಎಲೆಕ್ಟ್ರಿಕ್ ಕಂಭಗಳ ವೈರುಗಳಿಂದ ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾಡುತ್ತಾರೆ. ಹೀಗೆ ಮಾಡುವುದು ತಪ್ಪೆಂದು ಅವರಿಗೆ ತಿಳಿದಿರುತ್ತದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ ಎಂಬ ಕಾರಣಕ್ಕಾಗಿ ಬೆಳೆ ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತಾರೆ. ಆದರೆ ಕಾಡಾನೆಗಳು, ಕಾಡುಹಂದಿಗಳು, ಜಿಂಕೆಗಳು ಇದ್ಯಾವುದನ್ನೂ ಅರಿಯದೇ ತಂತಿಯನ್ನು ಸ್ಪರ್ಶಿಸಿ ಸಾವಿಗೀಡಾಗುತ್ತವೆ. ಸಹಜವಾಗಿ ಇದು ಸುದ್ದಿಯಾಗುತ್ತದೆ. ಅಕ್ರಮವಾಗಿ ವಿದ್ಯುತ್ ಹಾಯಿಸಿದ ಆರೋಪದ ಮೇಲೆ ಸಂಬಂಧಿಸಿದ ಕೃಷಿರನ್ನು ದಸ್ತಗಿರಿ ಮಾಡಲಾಗುತ್ತದೆ.
ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ. ಮಾನವ –ವನ್ಯಮೃಗಗಳ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಇಂಥವುಗಳಿಗೆ ಆಫ್ರಿಕಾದ ಕೃಷಿಕರು ಪರಿಹಾರ ಕಂಡುಕೊಳ್ಳುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಭಾರತಕ್ಕಿಂತಲೂ ಆಫ್ರಿಕಾದ ಕಾಡುಗಳ ವಿಸ್ತಾರ, ಮತ್ತು ಅಲ್ಲಿನ ವನ್ಯಮೃಗಗಳ ಸಂಖ್ಯೆಯೂ ಅಪಾರ. ಇಂಥ ಕಾಡುಗಳ ಅಂಚಿನಲ್ಲಿ ಇರುವ ಕೃಷಿಕರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮಾಡಿರುವ ಉಪಾಯಗಳಲ್ಲಿ ಜೇನುಬೇಲಿಯೂ ಒಂದಾಗಿದೆ.

ಇದ್ಯಾವ ರೀತಿಯ ಬೇಲಿ, ನಾವೆಂದೂ ಇಂಥದನ್ನು ಕೇಳಿಯೇ ಇಲ್ಲವಲ್ಲ ಎಂದು ಹುಬ್ಬೇರಿಸಬೇಡಿ. ಇದು ಸಜೀವ ಬೇಲಿ. ಜೇನುಹುಳುಗಳ ತಂಟೆಗೆ ಹೋದರೆ ಯಾವ ಪಾಡು ಪಡಬೇಕು, ಯಾವರೀತಿಯ ಹಿಂಸೆ ಅನುಭವಿಸಬೇಕು ಎಂಬುದು ಮನುಷ್ಯರಿಗಷ್ಟೆ ಅಲ್ಲ; ವನ್ಯಮೃಗಗಳಿಗೂ ಗೊತ್ತಿದೆ ಎಂಬುದನ್ನು ಆಫ್ರಿಕಾದ ರೈತರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.
ಆನೆಗಳು, ಕಾಡುಹಂದಿಗಳು ಮತ್ತು ಮಂಗಗಳು ಹುಲುಸಾದ ಬೆಳೆಗಳಿರುವ ಕೃಷಿಭೂಮಿಗೆ ದಾಳಿ ಮಾಡಿ ದಾಂಧಲೆ ಎಬ್ಬಿಸಿದಾಗ ರೊಚ್ಚಿಗೇಳುವ ಜೇನುಹುಳುಗಳು ತೀವ್ರರೀತಯಲ್ಲಿ ದಾಳಿ ಮಾಡುತ್ತವೆ. ಇವುಗ: ದಾಳಿ ರಭಸಕ್ಕೆ, ಕುಟುಕಿಸಿಕೊಂಡಾಗ ಆಗುವ ಉರಿಉರಿ, ನೋವಿನ ಬಾಧೆಗೆ ವನ್ಯಮೃಗಗಳು ಅರಚುತ್ತಾ ಅಲ್ಲಿಂದ ಪಲಾಯನ ಮಾಡುತ್ತವೆ. ಆದರೂ ಬಿಡದ ಜೇನುಹುಳುಗಳು ಸಾಕಷ್ಟು ದೂರ ಇವುಗಳ ಬೆನ್ನತ್ತುತ್ತವೆ.
ಆಫ್ರಿಕಾದ ರೈತರು ಜಮೀನಿನ ಸುತ್ತಲೂ ಇರುವ ಮರಗಳನ್ನು ಕಡಿಯಲು ಹೋಗುವುದಿಲ್ಲ. ಇಲ್ಲಿ ಅವರು ಹೆಜ್ಜೇನುಗಳು ಗೂಡು ಕಟ್ಟಿದರೆ ಜೇನಿಗಾಗಿ ಅವುಗಳಿಗೆ ಹೋಗಿ ಹಾಕಿ ಓಡಿಸುವ ಕೆಲಸ ಮಾಡುವುದಿಲ್ಲ. ತಮ್ಮ ಚಟುವಟಿಕೆಗೆ ಯಾವುದೇ ಬಾಧಕವೂ ಇಲ್ಲದೇ ಇರುವುದರಿಂದ ಮತ್ತು ಬೆಳೆಗಳಿಂದ ಮಕರಂದ ವಿಪುಲವಾಗಿ ದೊರೆಯುವ ಕಾರಣ ಹೆಜ್ಜೇನುಗಳು ಸಮೀಪದಲ್ಲಿಯೇ ನೂರಾರು ಸಂಖ್ಯೆಯಲ್ಲಿ ಗೂಡುಗಳನ್ನು ಕಟ್ಟಿಕೊಂಡಿರುವುದನ್ನು ಅಲ್ಲಿ ಗಮನಿಸಬಹುದು. ನಮ್ಮ ರೈತರೂ ಇಂಥ ತಂತ್ರಗಳನ್ನು ಅನುಸರಿಸಬಹುದು.
ಯಾರ ತಂಟೆಗೂ ಹೋಗುವುದಿಲ್ಲ; ಕೆಣಕಿದವರನ್ನು ಸುಮ್ಮನೆ ಬಿಡುವುದಿಲ್ಲ
ಹೆಜ್ಜೇನುಗಳು ಯಾರ ತಂಟೆಗೂ ಹೋಗುವುದಿಲ್ಲ; ಕೆಣಕಿದವರನ್ನು ಸುಮ್ಮನೆ ಬಿಡುವುದಿಲ್ಲ. ಹೆಜ್ಜೇನಿನ ವೈಜ್ಞಾನಿಕ ಹೆಸರು; “ಎಪಿಸ್ ಡಾರ್ಸೇಟ” ಜನರ ಬಳಕೆಯಲ್ಲಿ ಕಲ್ಲುಜೇನು, ಮರಜೇನು, ಹೆಜ್ಜೇನು ಎಂಬ ಹೆಸರುಗಳೂ ಇವೆ. ಗಾತ್ರದಲ್ಲಿ ಇತರ ಪ್ರಬೇಧದ ಜೇನುನೊಣಗಳಿಗಿಂತ ಇವು ದೊಡ್ಡದಾಗಿವೆ.
ಸಾಮಾನ್ಯವಾಗಿ ಹೆಜ್ಜೇನುಗಳು ಸಮುದ್ರಮಟ್ಟದಿಂದ 1, 000 ದಿಂದ 1, 200 ಮೀಟರ್ ಎತ್ತರವಿರುವ ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ. ಬೇಸಿಗೆಕಾಲದಲ್ಲಿ ಆಹಾರದ ಅಭಾವ ಉಂಟಾದರೆ ಅದನ್ನು ಹುಡುಕಿಕೊಂಡು ಬಹುದೂರದವರಿಗೂ ಇವು ವಲಸೆ ಹೋಗುತ್ತವೆ. ಇಂಥ ಸಂದರ್ಭದಲ್ಲಿ ಸಮುದ್ರಮಟ್ಟದಿಂದ 2, 100 ಮೀಟರ್ ಎತ್ತರದ ಪ್ರದೇಶಗಳಲ್ಲಿಯೂ ಗೂಡು ಕಟ್ಟುತ್ತವೆ. ವಲಸೆ ಹೋಗುವ ಹಾದಿ ಮಧ್ಯೆಮಧ್ಯೆ ಅಲ್ಲಲ್ಲಿ ಒಂದೆರಡು ದಿನ ತಂಗುತ್ತವೆ.
ಜನವಸತಿ ಇರುವ ಪ್ರದೇಶಗಳಲ್ಲಿಯೂ ಹೆಜ್ಜೇನುಗೂಡುಗಳನ್ನು ಕಾಣಬಹುದು. ಇಂಥ ಜಾಗಗಳಲ್ಲಿ ಇವು ಶತ್ರುಗಳು ಸುಲಭವಾಗಿ ದಾಳಿ ಮಾಡಲಾಗದಷ್ಟು ಎತ್ತರದಲ್ಲಿ ಗೂಡುಗಳನ್ನು ಕಟ್ಟುತ್ತವೆ. ಮಕರಂದ ಸಂಗ್ರಹಿಸಲು ಗೂಡಿರುವ ತಾಣದಿಂದ ಐದಾರು ಕಿಲೋ ಮೀಟರ್ ಸುತ್ತಳತೆಯವರೆಗೂ ಇವು ಹೋಗುತ್ತವೆ. ಬೆಳದಿಂಗಳ ರಾತ್ರಿಗಳಲ್ಲಿಯೂ ಇವುಗಳು ಮಕರಂದ ಸಂಗ್ರಹಿಸುವುದನ್ನು ಕಾಣಬಹುದು. ಇವುಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಬೆಳೆಗಳು, ಅರಣ್ಯದ ಬೆಳೆಗಳು ಸಮೃದ್ಧ ಫಸಲು ನೀಡುತ್ತವೆ.
ಉಗ್ರಸ್ವಭಾವ: ಗೂಡಿಗೆ ತೊಂದರೆ ಕೊಡುವ ಶತ್ರುವಿನ ಬಗ್ಗೆ ಕಾವಲುಗಾರ ಜೇನುನೊಣಗಳು ಇತರ ಜೇನುನೊಣಗಳಿಗೆ ಎಚ್ಚರಿಕೆ ನೀಡುತ್ತವೆ, ಗೂಡಿನ ಮೇಲ್ಭಾಗದಲ್ಲಿ ಸುತ್ತಲೂ ಹಾರಾಡುತ್ತಾ ಎಚ್ಚರಿಕೆ ಸಂದೇಶ ರವಾನಿಸುತ್ತವೆ. ಆಗ ಉಳಿದ ನೊಣಗಳು ಗೂಡಿನ ತಳಭಾಗದಲ್ಲಿ ಸೇರುತ್ತವೆ. ನಂತರ ಇವೆಲ್ಲವೂ ಒಟ್ಟಿಗೆ ಶತ್ರುವಿನ ಮೇಲೆ ದಾಳಿ ಮಾಡುತ್ತವೆ.ತಮ್ಮ ಶತ್ರುಗಳನ್ನು ಇವು ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಹೋಗಿ ಚುಚ್ಚುತ್ತವೆ. ಇದರಿಂದ ಚರ್ಮ ಊದಿಕೊಂಡು ಭಾರಿ ಯಾತನೆ ಉಂಟಾಗುತ್ತದೆ.

ಕೃಷಿಕರಿಗೆ ತೊಂದರೆಯಾಗುವುದಿಲ್ಲವೆ: ತೋಟಗಳು, ಕ್ಷೇತ್ರಬೆಳೆಗಳು ಇರುವ ಸ್ಥಳಗಳಲ್ಲಿ ಇವು ಇದ್ದರೆ ಕೃಷಿಕರಿಗೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಬವಿಸುವುದು ಸಹಜ. ಆದರೆ ಜೇನುನೊಣಗಳು ತಮ್ಮ ಗೂಡಿನ ಬಳಿ ನಡೆಯುವ ಚಟುವಟಿಕೆಗಳಿಗೆ ಹೊಂದಿಕೊಂಡಿರುತ್ತವೆ. ದಾಳಿ ಮಾಡುತ್ತವೆ. ಆದರೆ ವನ್ಯಮೃಗಗಳು ದಾಂಧಲೆ ಎಬ್ಬಿಸಿ ಗೂಡುಗಳ ಪ್ರಕ್ರಿಯೆಗೆ ಭಂಗ ತಂದಾಗ ಮಾತ್ರ ದಾಳಿ ಮಾಡುತ್ತವೆ.

ವಿಶಿಷ್ಟ ವಾಸನೆ: ಕಾವಲುಗಾರ/ ಸೈನಿಕ ನೊಣಗಳು ಮೊದಲು ದಾಳಿ ಮಾಡುತ್ತವೆ. ಹೀಗೆ ದಾಳಿಗೊಳಗಾದ ಜೀವಿಯಿಂದ ವಿಶಿಷ್ಟ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಜೇನುಹುಳುಗಳಿಗಷ್ಟೆ ಅರಿವಾಗುತ್ತದೆ. ಇಂಥ ವಾಸನೆ ಬರುತ್ತಿರುವತ್ತಲೇ ಅವು ಹೆಚ್ಚೆಚ್ಚು ದಾಳಿ ಮಾಡುತ್ತವೆ.

LEAVE A REPLY

Please enter your comment!
Please enter your name here