ಕರ್ನಾಟಕ ರಾಜ್ಯದಲ್ಲಿ ಹಲವೆಡೆ ಮುಂಗಾರು ಮಳೆ ಕೊರತೆಯಾಗಿದೆ. ಬರ ಪರಿಸ್ಥಿತಿ ಉಂಟಾಗಿದೆ. ಅವಶ್ಯಕತೆ ಇರುವ ತಾಲ್ಲೂಕುಗಳಲ್ಲಿ ರಾಜ್ಯ ಸರ್ಕಾರ ಬರ ಘೋಷಣೆ ಮಾಡಲು ಕೇಂದ್ರದ ನಿಯಮಗಳು ಅವಕಾಶ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಕೇಂದ್ರದ ಕೃಷಿ ಸಚಿವರಿಗೆ ಪತ್ರ ರವಾನೆಯಾಗಿದೆ. ಯಾವುದೇ ರಾಜ್ಯದಲ್ಲಿ ಬರ ಘೋಷಣೆ ಮಾಡಲು ಕೇಂದ್ರ ರೂಪಿಸಿರುವ ಮಾನದಂಡಗಳನ್ನು ಅನುಕರಿಸಬೇಕು. ಆದರೆ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಗಣನೀಯವಾಗಿ ಕುಂಠಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.
ಬರ ಘೋಷಣೆಯಾಗಬೇಕೆಂದರೆ ಸತತ ಮೂರು ವಾರಗಳವರೆಗೆ ಮಳೆ ಆಗಿರಬಾರದು, ಶೇಕಡ 60 ರಷ್ಟು ಮಳೆ ಕೊರತೆ ಆಗಿರಬೇಕು ಎಂದು ಕೇಂದ್ರದ ನಿಯಮ ಹೇಳುತ್ತದೆ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮಳೆ ಪ್ರಮಾಣದಲ್ಲಿ ವ್ಯತ್ಯಯಗಳಾಗಿದೆ. ರೈತರು ಸಕಾಲದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ನಡೆಸಲು ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬರ ಘೋಷಣೆ ಮಾನದಂಡಗಳನ್ನು ಮರು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.
ಇದುವರೆಗೂ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 336 ಮಿಲಿ ಮೀಟರ್ ಸಾಮಾನ್ಯ ಮಳೆಯಾಗಬೇಕಿತ್ತು. 234 ಮಿಲಿ ಮೀಟರ್ ಮಳೆಯಾಗಿದೆ. ಆದರೂ ಬರಪೀಡಿತ ಪ್ರದೇಶಗಳಲ್ಲಿ ಈ ಸಂಬಂಧದ ಘೋಷಣೆಗೆ ಕೇಂದ್ರದ ನಿಯಮಗಳು ಅಡ್ಡಿಯಾಗಿರುವುದರಿಂದ ಶೀಘ್ರ ಈ ಮಾನದಂಡಗಳನ್ನು ಬದಲಿಸಲು ಕೃಷಿ ಸಚಿವರು ಮಧ್ಯ ಪ್ರವೇಶಿಸಬೇಕೆಂದು ಹೇಳಲಾಗಿದೆ.
ಬರಪೀಡಿತ ಎಂದು ಘೋಷಿಸಲು ಬಿತ್ತನೆಯಾಗಿರುವುದರಲ್ಲಿ ಶೇಕಡ 50ರಷ್ಟು ಬೆಳೆಹಾನಿ ಆಗಿರಬೇಕು. ಜೊತೆಗೆ ಕೇಂದ್ರದ ಇತರ ಮಾನದಂಡಗಳಿಂದ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಕಾಲದಲ್ಲಿ ಧಾವಿಸಲು ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಈ ಪತ್ರ ಮಹತ್ವ ಪಡೆದುಕೊಂಡಿದೆ.