ಲೇಖಕರು: ರೇಖಾ ಹೆಗಡೆ

ಹುಟ್ಟಿದೂರನ್ನು ಬಿಟ್ಟು ಬಂದ ಮೇಲೆ ಹಲಸಿನ ಹಣ್ಣನ್ನು ತಿನ್ನುವ ಮಜವೇ ಮಾಯವಾಗಿದೆ. ಸಿಕ್ಕಿದರೆ ತಾನೇ ತಿನ್ನೋದು? ಬೆಂಗಳೂರಲ್ಲಿ ಸಿಗುವುದೆಲ್ಲಾ ಬಕ್ಕೆ ಹಣ್ಣು, ಹೆಸರು ಮಾತ್ರ ಹಲಸು. ಹೆಸರೇನೇ ಇರಲಿ, ನನಗೇನೂ ಮಹಾ ತಕರಾರಿಲ್ಲ. ಸಿಗೋಲ್ಲ ಎಂಬುದೇ ಸಮಸ್ಯೆ. ನಮ್ಮ ಉತ್ತರ ಕನ್ನಡದಲ್ಲಿ (ಘಟ್ಟದ ಮೇಲೆ) ಗಟ್ಟಿ ಸೊಳೆಯದು ಬಕ್ಕೆ, ಮೆತ್ತಗಿರೋದು ಹಲಸು. ಒಂದೊಂದು ಕಡೆ ಅದು ಚಕ್ಕೆ, ಕೆಲವೆಡೆ ಅಂಬಲಿ, . ಹಲವು ಹೆಸರು ಹಲಸಿಗೆ.

ಬಕ್ಕೆಯದು ಗಟ್ಟಿ ಸೊಳೆ, ಕೊಯ್ಯಲು ಚಾಕು, ಕತ್ತಿ, ಮೆಟ್ಟುಗತ್ತಿಯಂಥ ಹತಾರು ಬೇಕು. ಮೇಣ ಬೇರೆ ವಿಪರೀತ. ಚಾಕು, ಮೆಟ್ಟುಗತ್ತಿಗೆ ತೆಂಗಿನೆಣ್ಣೆ ಸವರಿ, ಕೈಗೆ ಧಾರಾಳ ಎಣ್ಣೆ ಪಳಚಿ, ಉದ್ದುದ್ದ ಅಡ್ಡಡ್ಡ ಕೊಯ್ದ ಮೇಲೆ ಒಂದು ಬಾಳೆ ಎಲೆಯೋ, ಕಾಗದವೋ ತೆಗೆದುಕೊಂಡು ಮೇಣ ತಿಕ್ಕಿ ಒರೆಸಿ ತೆಗೆದು ಆಮೇಲೆ ಸೊಳೆಗೆ ಕೈ ಹಚ್ಚಬೇಕು. ಕಡಿ ಮಾಡುವ ರಭಸಕ್ಕೆ ಅರ್ಧದಷ್ಟು ಸೊಳೆ ಚೂರು-ಭಾಗ ಆಗಿರುತ್ತದೆ. ಒಟ್ಟಿನಲ್ಲಿ ಸೊಳೆ ಬಿಡಿಸಿ ತಿನ್ನುವುದೆಂದರೆ ನಾಜೂಕಿನ ನರ್ತನ.

ಹಲಸಿಗೆ ಇಂಥ ಯಾವ ಬಡಿವಾರವೂ ಬೇಕಿಲ್ಲ. ಹದವಾಗಿ ಬೆಳೆದ ಕಾಯನ್ನು ಮರದಿಂದ ಇಳಿಸಿ ತಂದು ಇಟ್ಟರಾಯಿತು. ಒಂದೆರಡು ದಿನದಲ್ಲಿ ಅದರ ಪರಿಮಳ ಮನೆತುಂಬ ತುಂಬಿಕೊಳ್ಳುವ ಹೊತ್ತಿಗೆ ಒಂದು ಬಟ್ಟಲಲ್ಲಿ ಸೂಜಿ ಮೆಣಸು, ಉಪ್ಪು ನುರಿದು ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ, ಮೇಲಿಂದ ಒಂದು ಬಟ್ಟು ತೆಂಗೆನೆಣ್ಣೆ ಬಳಿಸಿ ಪಣಿಕಟ್ಟು ತಯಾರು ಮಾಡಲಡ್ಡಿಯಿಲ್ಲ ಎಂದರ್ಥ.

ಹಿತ್ಲಾಕಡಿಗೆ ಆ ಹಲಸಿನಣ್ಣು, ಉಪ್ಪು-ನಿಂಬೆಹುಳಿ ಬಟ್ಟಲು ಇಟ್ಟುಕೊಂಡು ಸುತ್ತ ನಾಕು ಜನ ಕುಂತರೆಂದರೆ ಫ್ಯಾಕ್ಟರಿ ಚಾಲೂ. ಮುಂದಿನ ಐದ್ಹತ್ತು ನಿಮಿಷ ಮಾತಿಗೆ ಬರ.  ಕೈಯುಂಟು, ಬಾಯುಂಟು. ಕೊನೆಯಲ್ಲುಳಿಯುವುದು ಬೀಜ, ಸ್ವಾರೆ ಅಷ್ಟೇ. ನಾಕು ಜನ ಇದ್ದಾಗ ಖಾಲಿ ಆದೀತೆಂಬ ಹೊಟ್ಟೆ ಉರಿಗೆ ಸರಸರ ತಿಂದರೂ ಹಲಸಿನ ರಸಾಸ್ವಾದನೆಯ ಮಜ ಬರುವುದು ನಿಧಾನವಾಗಿ, ಅನುಭವಿಸಿ ಸವಿದಾಗ ಮಾತ್ರ.

ಚಿತ್ರ: ವರುಣ ಉಂಚಳ್ಳಿ

ಕಳಿತ ಹಣ್ಣನ್ನು ಎರಡೂ ಕೈ ಬೆರಳುಗಳಲ್ಲಿ ನರಸಿಂಹ ಹಿರಣ್ಯ ಕಶಿಪುವಿನ ಹೊಟ್ಟೆ ಬಗೆದಂತೆ ಬಗೆಯಬೇಕು. ತೊಟ್ಟನ್ನು ಹಿಡಿದು ನಿಧಾನವಾಗಿ ಎತ್ತಿ ಇಡೀ ಗುಂಜನ್ನು (ಮಧ್ಯದ ದಂಟು) ಎತ್ತಬೇಕು. ಅದೇ ಗುಂಜಿನಿಂದ ಮೇಣ ಒರೆಸಿ ಸುರುಳಿ ಸುತ್ತಿ ಬದಿಗಿಡಬೇಕು. ಬಾಯ್ದೆರೆದು ಬಿದ್ದುಕೊಂಡ ಹಣ್ಣಿನೊಳಗಿಂದ ಒಂದೊಂದೇ ಸೊಳೆಯನ್ನು ತೋರು ಬೆರಳಿಂದ ಹೊರತೆಗೆದು, ಜೇನುರೊಟ್ಟಿಂದ ಜೇನುತುಪ್ಪ ಜಿನುಗುವ ರೀತಿ ರಸ ಜಿನುಗುವ ಆ ತೊಳೆಗಳನ್ನು ಉಪ್ಪು-ನಿಂಬೆಹುಳಿ ರಸದಲ್ಲಿ ಹೊರಳಾಡಿಸಿ ಬಾಯೊಳಿಡಬೇಕು.

ಆ ಮೃದು-ಮಧುರ ಸೊಳೆ ಎರಡೇ ಎರಡು ಸಲ ಆ ದವಡೆಯಿಂಡ ಈ ದವಡೆಗೆ ಬರುವುದರೊಳಗಾಗಿ ಮೆತ್ತನ್ನ ಗುಳವಾಗಿ ಒಂದೇ ಗುಟುಕಿಗೆ ಗಂಟಲ ಗಂಟು ದಾಟಿ ಅನ್ನನಾಳಕ್ಕಿಳಿಯಬೇಕು. ಹೊಟ್ಟೆ ತುಂಬಿ ಗಂಟಲ ಮಟ್ಟಕ್ಕೆ ಬಂದಿದ್ದರೂ, ಹಣ್ಣು ಖಾಲಿಯಾಗಿ ಸಿಪ್ಪೆ, ಸ್ವಾರೆ ಕೊಟ್ಟಿಗೆ/ಗೊಬ್ಬರಗುಂಡಿ ಸೇರಿದ್ದರೂ ‘ಇನ್ನೊಂಚೂರು ಇದ್ರೆ ಬೇಕಾಗಿತ್ತು’ ಎಂಬ ಹಂಬಲ ಮನಸ್ಸಲ್ಲುಳಿಯಬೇಕು. ಎಣ್ಣೆ ಹಚ್ಚಿ ಕೈ ತೊಳೆದ ಮೇಲೂ ಹಣ್ಣಿನ ಪರಿಮಳ ತಾಸೆರಡು ತಾಸು ಅಲ್ಲೇ ಉಳಿದು ಹಿತಾನುಭವ ನೀಡುತ್ತಿರಬೇಕು. ಆಗ, ಅಷ್ಟಾದಾಗಲೇ ಪರಮಾತ್ಮ ತೃಪ್ತನಾಗುವುದು. ಒಮ್ಮೊಮ್ಮೆ ಈ ಉಪ್ಪು-ನಿಂಬೆಹುಳಿಯೂ ಅನಗತ್ಯವೇ. ಹಸಿವಾದಾಗ ಮರ ಹತ್ತಿ ಹಣ್ಣಿನ್ನೂ ತೂಗಾಡುತ್ತಿರುವಂತೆಯೇ ಅಲ್ಲೇ ಬಿರಿದು ಸೊಳೆ ಹೊಟ್ಟೆಗಿಳಿಸುವ ಶೂರರು ಊರ ಕಡೆ ಎಷ್ಟು ಜನರಿಲ್ಲ.

ಇಲ್ಲಿ ಬೆಂಗಳೂರಲ್ಲಿ ಪತಿದೇವರು ವಾರಕ್ಕೆ ನಾಲ್ಕು ದಿನ ಬಕ್ಕೆ ಹಣ್ಣು ತರುತ್ತಾರೆ. ಬೆಳಗಿನ ತಿಂಡಿಯಿಂದ ಆರಂಭಿಸಿ ಹತ್ತುಗಂಟೆ ಕಡೆಗಿನ ತಿಂಡಿ, ಮಧ್ಯಾಹ್ನದ ಮೇಲಿನ ಆಸ್ರಿಗೆ ಎಂದೆಲ್ಲ ಗಂಡ-ಹೆಂಡತಿ ಅದನ್ನು ಗುಳುಂ ಮಾಡುತ್ತೇವೆ. ಅಷ್ಟಾದರೂ ನನ್ನ ಹಲಸಿನ ಹಂಬಲ ತಣಿಯುವುದಿಲ್ಲ. ಎಷ್ಟು ತಿಂದರೂ ಬಕ್ಕೆ ಬಕ್ಕೆಯೇ, ಬರೀ ಸುಕ್ಕಾ. ರಸ ಜಿನುಗದ ಹಣ್ಣೊಂದು ಹಣ್ಣೇ? ನನ್ನ ಮನ ಬಿಟ್ಟು ಬಂದ ಊರಲ್ಲಿ ಅಪ್ಪ ನೆಟ್ಟು ಬೆಳೆಸಿದ್ದ ಮರವೇರಿ ಹಣ್ಣಾಗಲಿರುವ ಹಲಸನ್ನು ಹುಡುಕುತ್ತದೆ. ರಸಭರಿತ ಸೊಳೆ ನೆನೆದು ಬಾಯಲ್ಲಿ ಚೌಳು ನೀರೇಳುತ್ತದೆ.

LEAVE A REPLY

Please enter your comment!
Please enter your name here