ರಾಷ್ಟ್ರದಲ್ಲಿ ರಾಜಸ್ಥಾನ ರಾಜ್ಯ ನಂತರ ಅತಿಹೆಚ್ಚು ವಿಸ್ತಾರದ ಒಣಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಇಂಥ ಜಮೀನುಗಳನ್ನು ಅವಲಂಬಿಸಿ ಸಾಗುವಳಿ ಮಾಡುತ್ತಿರುವವರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಸಂಖ್ಯೆ ಅಧಿಕ. ಇವರು ಸುಸ್ಥಿರ ಮಾದರಿಯಲ್ಲಿ ಕೃಷಿ ಮಾಡಲು ಸಹಾಯಕವಾಗುವಂತೆ ವಿವಿಧ ಪದ್ಧತಿಗಳು ಅಭಿವೃದ್ಧಿಯಾಗಿವೆ.
ರಾಷ್ಟ್ರದಲ್ಲಿನ ಕೃಷಿಯನ್ನು ಮುಂಗಾರು ಮಳೆಯೊಂದಿಗಿನ ಜೂಜಾಟ ಎಂತಲೇ ಕರೆಯಲಾಗುತ್ತದೆ. ಮಳೆ ಅನಿಶ್ಚತತೆ ಇದ್ದ ಸಂದರ್ಭಗಳಲ್ಲಿ ಅದು ಕೃಷಿಯ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮಳೆ ತಡವಾಗಿ ಬಂದು ಅದರ ಹಂಗಾಮು ಮುಕ್ತಾಯವಾಗುವ ಹಂತದಲ್ಲಿ ತೀವ್ರತೆ ಹೆಚ್ಚಿದ ಉದಾಹರಣೆಗಳು ಸಾಕಷ್ಟು. ಇಂಥ ಸಂದರ್ಭಗಳಲ್ಲಿ ಅನುಸರಿಸಬೇಕಾದ ಬೆಳೆ ಪದ್ಧತಿಗಳು, ಪೂರಕ ಬೆಳೆಗಳು, ಮಿಶ್ರ ಬೇಸಾಯ, ಅಂತರ ಬೆಳೆ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಬೆಳೆ ತಳಿಗಳು, ಸುಧಾರಿತ ತಳಿಗಳು, ಸಂಕರಣ ತಳಿಗಳು, ಮಣ್ಣು ಮತ್ತು ನೀರು ಸಂರಕ್ಷಣೆ ಇತ್ಯಾದಿ ಕಾರ್ಯದ ಕುರಿತಂತೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಸಾಕಷ್ಟು ಕೆಲಸ ಮಾಡಿದೆ.
ರಾಗಿ ಬೆಳೆ ಮೂಲತಃ ಮಳೆಯಾಶ್ರಿತದ ಒಣಭೂಮಿ ಬೆಳೆ. ರಾಜ್ಯದಲ್ಲಿ ರಾಗಿಯನ್ನೇ ಪ್ರಧಾನವಾಗಿ ಬೆಳೆಯುವ ಜಿಲ್ಲೆಗಳಿವೆ. ಕೆಂಪು, ಕಪ್ಪು ರಾಗಿಗಳು ಇಲ್ಲಿವೆ. ಈ ಬೆಳೆಯಲ್ಲಿ ಬೇರೆಬೇರೆ ಪದ್ಧತಿಗಳೂ ಅಭಿವೃದ್ಧಿಗೊಂಡಿವೆ. ವರ್ಷದ ಯಾವಯಾವ ಹಂತದಲ್ಲಿ ಇವುಗಳಲ್ಲಿ ಯಾವ ತಳಿಗಳನ್ನು ಬಿತ್ತಬೇಕು ಎಂಬ ಪಾರಂಪಾರಕ ಜ್ಞಾನವೂ ಕೃಷಿಕ ಸಮುದಾಯದಲ್ಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳೆಯಾಶ್ರಿತ ಬೆಳೆ ವಿಭಾಗದ ಕೃಷಿವಿಜ್ಞಾನಿಗಳು ಸಾಕಷ್ಟು ಸಂಶೋಧನೆ ಮಾಡಿದ್ದಾರೆ.
ಇಳುವರಿ ಕುಂಠಿತವಾಗಲು ಮತ್ತು ಇಳುವರಿ ಹೆಚ್ಚಾಗಲು ಏನೇನು ಕಾರಣಗಳಿವೆ ಎಂಬ ಬಗ್ಗೆಯೂ ಸಾಕಷ್ಟು ಅಧ್ಯಯನಗಳು ಆಗಿವೆ. ಸಾಲಿನಿಂದ ಸಾಲಿಗೆ ಕಡಿಮೆ ಅಂತರ ನೀಡಿದಾಗ ಏನೇನು ಪರಿಣಾಮ, ಪೈರಿನ ಬೆಳವಣಿಗೆ ಹೇಗಿರುತ್ತದೆ. ಹೆಚ್ಚು ಅಂತರ ನೀಡಿದಾಗ ಏನೇನು ಪರಿಣಾಮಗಳಾಗುತ್ತವೆ. ಬೇರು ಮತ್ತು ಪೈರಿನ ಬೆಳವಣಿಗೆ ಯಾವ ರೀತಿ ಇರುತ್ತದೆ ಎಂಬ ಕುರಿತು ತಿಳಿದುಕೊಂಡು ಬೇರೆಬೇರೆ ವಿಧಾನಗಳನ್ನು ಪರಿಚಯಿಸಲಾಗಿದೆ.
ರಾಗಿಯಲ್ಲಿ ಗಿಡ್ಡ, ಮಧ್ಯಮ ಮತ್ತು ಹೆಚ್ಚು ಎತ್ತರ ಬೆಳೆಯುವ ಪೈರುಗಳಿವೆ. ಇವುಗಳಲ್ಲಿ ಬಿತ್ತನೆಗೆ ಸೂಕ್ತವಾದ ರಾಗಿಯನ್ನು ತೆನೆ ಹಂತದಲ್ಲಿಯೇ ಕೃಷಿಕರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದಲ್ಲದೇ ಭಿನ್ನ ತಳಿಗಳಿದ್ದು ಅವುಗಳು ತಮ್ಮದೇ ಆದ ವೈಶಿಷ್ಟಗಳನ್ನು ಹೊಂದಿರುತ್ತಿದ್ದವು. ಅತಿಕಡಿಮೆ ನೀರಿನಲ್ಲಿಯೂ ಬೆಳೆಯುವಂಥ ತಳಿಗಳು ಇವೆ. ಇವುಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ.
ಯಾವಯಾವ ತಿಂಗಳಿಗೆ ಯಾವ ಯಾವ ತಳಿಗಳು ಸೂಕ್ತ, ಒಣ ಪ್ರದೇಶದಲ್ಲಿ ಅತ್ಯುತ್ತಮ ಬೆಳವಣಿಗೆ ಹೊಂದುವ ತಳಿಗಳು ಯಾವುದು, ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ಆಯಾ ಹವಾಮಾನಕ್ಕೆ ಹೊಂದಿಕೊಂಡು ಹೆಚ್ಚು ಇಳುವರಿ ನೀಡುವ ತಳಿಗಳ ಬಗ್ಗೆಯೂ ಅಧ್ಯಯನಗಳು ಆಗಿವೆ. ಇಂಥ ತಳಿಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ ಅಂಥ ಬಿತ್ತನೆ ರಾಗಿ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವ ಕಾರ್ಯಗಳು ಆಗಿವೆ.
ಒಮ್ಮೆ ಉತ್ತಮ ಗುಣಮಟ್ಟದ ಬಿತ್ತನೆ ರಾಗಿ ಆಯ್ಕೆ ಮಾಡಿದರೆ ಅದನ್ನು ಜತನವಾಗಿ ಸಂರಕ್ಷಿಸುವ ಕಾರ್ಯ ಆಗುತ್ತಿತ್ತು. ಅವಶ್ಯಕತೆ ಇರುವವರಿಗೆ ಬಿತ್ತನೆ ಮಾಡಲು ಅವುಗಳನ್ನು ನೀಡುತ್ತಿದ್ದರು. ಇಂಥ ಬಿತ್ತನೆ ರಾಗಿಯನ್ನು ಐದರಿಂದ ಹತ್ತು ವರ್ಷ ಬೆಳೆಯಲು ಬಳಸಲಾಗುತ್ತಿತ್ತು. ಇವೆಲ್ಲ ಗುಣಮಟ್ಟದ ತಳಿಗಳಾಗಿದ್ದು ಉತ್ತಮ ಇಳುವರಿ ನೀಡುತ್ತವೆ. ಇಂಥ ಪಾರಂಪಾರಿಕ ಜ್ಞಾನವನ್ನು ಗುರುತಿಸುವ ಕಾರ್ಯವೂ ಆಗಿದೆ.
ಮಳೆಯಾಶ್ರಿತ ಒಣಭೂಮಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಾಡಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮತ್ತು ಬೆಳೆಯಬಹುದಾಗ ಬೇರೆಬೇರೆ ಬೆಳಗಳ ಬಗ್ಗೆ ಕೃಷಿವಿಜ್ಞಾನಿಗಳು ಮಾಹಿತಿ ನೀಡುತ್ತಿರುತ್ತಾರೆ. ಈ ಎರಡು ಮಳೆ ಹಂಗಾಮಿಗೆ ಸೂಕ್ತವಾದ ಮತ್ತು ಅಲ್ಪಾವಧಿಯ ಎರಡು ಬೆಳೆ ತೆಗೆದುಕೊಳ್ಳಬಹುದಾದ ಬೆಳೆಗಳ ತಳಿಗಳನ್ನು ಸಹ ಅಭಿವೃದ್ಧಿ ಪಡಿಸಲಾಗಿದೆ.