ಏಕಬೆಳೆ ಪದ್ಧತಿಯನ್ನು ಅವಲಂಬಿಸುವುದು ಯಾವಾಗಲೂ ಅಪಾಯಕಾರಿ. ಒಂದೇ ಬೇಳೆ ಹಾಕುವ ಬದಲು ಎರಡು ಅಥವಾ ಹೆಚ್ಚು ಬೆಳೆಗಳನ್ನು ಹಾಕುವುದು ಸೂಕ್ತ. ಇವುಗಳಲ್ಲಿ ಯಾವುದೇ ಒಂದು ಬೆಳೆ ವಿಫಲವಾದರೂ ಉಳಿದ ಬೆಳೆಗಳು ಕೈ ಹಿಡಿಯುತ್ತವೆ. ರೈತರು ನಷ್ಟಕ್ಕೀಡಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಪೂರಕ ಬೆಳೆಗಳ ಬಗ್ಗೆ, ಅವುಗಳ ಪದ್ಧತಿಗಳ ಬಗ್ಗೆ ಕೃಷಿ ವಿಜ್ಙಾನಿಗಳು ಸಂಶೋಧನೆ ಮಾಡಿದ್ದಾರೆ.
ರಾಸಾಯನಿಕ ಪದ್ಧತಿ ಕೃಷಿ ಹೆಚ್ಚು ಚಾಲ್ತಿಗೆ ಬಂದ ನಂತರವೇ ಏಕಬೆಳೆ ಪದ್ಧತಿಯೂ ಹೆಚ್ಚಾಯಿತು. ನಿರ್ವಹಣೆ ಸುಲಭವಾಗುವುದು ಕೂಡ ಇದಕ್ಕೆ ಕಾರಣವಾದ ಅಂಶ. ಆದರೆ ಏಕಬೆಳೆ ಪದ್ಧತಿಯಿಂದ ಆಗುವ ತೊಂದರೆಗಳು ಅಪಾರ. ರೋಗಬಾಧೆ-ಕೀಟಬಾಧೆ ಹೆಚ್ಚಾಗುತ್ತದೆ. ಬೆಳೆ ಇಳುವರಿಯೂ ಕುಗ್ಗುತ್ತದೆ. ಬೆಳೆ ವಿಫಲವಾದರೆ ನಷ್ಟ ಉಂಟಾಗುತ್ತದೆ. ಆದರೆ ಅಂತರ ಬೇಸಾಯ ಮತ್ತು ಮಿಶ್ರಬೆಳೆ ಪದ್ಧತಿಯಲ್ಲಿ ಇಂಥ ಅಪಾಯಗಳು ಇರುವುದಿಲ್ಲ.
ಬಸಿಗಾಲುವೆಗಳ ಪಾತ್ರ: ಮಣ್ಣಿನ ಫಲವತ್ತೆಯನ್ನು ಕಾಪಾಡಿ, ಬೆಳೆಯನ್ನು ಸಂರಕ್ಷಿಸುವಲ್ಲಿ ಬಸಿಗಾಲುವೆಗಳ ಪಾತ್ರ ಅಪಾರ. ಮಳೆಯಾಶ್ರಿತ ಪ್ರದೇಶವೇ ಆಗಲಿ ಅಥವಾ ನೀರಾವರಿ ಆಶ್ರಿತ ಪ್ರದೇಶವೇ ಆಗಲಿ ಅಲ್ಲಿ ಬಸಿಗಾಲುವೆಗಳು ಇರುವುದು ಅತ್ಯವಶ್ಯಕ. ಇದರಿಂದ ಅಧಿಕ ಪ್ರಮಾಣದ ನೀರು ಕೃಷಿಭೂಮಿಯಲ್ಲಿ ನಿಲ್ಲದೇ ಹೊರಗೆ ಹರಿದು ಹೋಗುತ್ತದೆ. ರಾಗಿ ಮತ್ತು ತೊಗರಿ ಇರುವ ಹೊಲದಲ್ಲಿ ದೋಣಿ ಸಾಲುಗಳನ್ನು ಮಾಡುವುದರಿಂದ ಹೆಚ್ಚುವರಿ ನೀರನ್ನು ಹೊರ ಹಾಕಲು ಸಹಾಯಕವಾಗುತ್ತದೆ.
ತೊಗರಿಗೆ ರೋಗ ಮತ್ತು ಕೀಟಬಾಧೆ ಹೆಚ್ಚು. ಮಳೆ ಪ್ರಮಾಣ ತೀರಾ ಕಡಿಮೆಯಾದರೂ ಇಳುವರಿ ಕಡಿಮೆಯಾಗುವ ಅಥವಾ ಬೆಳೆ ವಿಫಲವಾಗುವ ಸಾಧ್ಯತೆಗಳು ಇರುತ್ತವೆ. ಅಂತರ ಬೆಳೆ ಅಥವಾ ಮಿಶ್ರ ಬೆಳೆ ಇದ್ದಾಗ ತೊಗರಿಯಲ್ಲಿ ಕಡಿಮೆ ಇಳುವರಿ ಬಂದರೂ ನಷ್ಟವಾಗುವುದಿಲ್ಲ. ತೊಗರಿ ಮತ್ತು ರಾಗಿಯನ್ನು ಒಂದೇ ತಾಕಿನಲ್ಲಿ ಮಿಶ್ರ ಬೆಳೆಗಳಾಗಿ ಬೆಳೆದಾಗ ಉತ್ತಮ ಫಲಿತಾಂಶವೂ ಬರುತ್ತದೆ.
ಪ್ರಸ್ತುತ ದಿನಗಳಲ್ಲಿ ಕೃಷಿಕಾರ್ಮಿಕರ ಕೊರತೆ ಹೆಚ್ಚಾಗಿದೆ. ಒಣಬೇಸಾಯ ಪ್ರದೇಶಗಳಲ್ಲಿ ಇದರಿಂದ ಬಹಳ ತೊಂದರೆಯಾಗುತ್ತಿದೆ. ಸಕಾಲದಲ್ಲಿ ಬಿತ್ತನೆ ಮಾಡುವುದು, ಕಳೆ ನಿವಾರಣೆ ಮತ್ತು ಕೊಯ್ಲು ಕಾರ್ಯ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಗಮನ ಹರಿಸಿರುವ ಕೃಷಿ ವಿಜ್ಞಾನಿಗಳು ಒಣ ಬೇಸಾಯದ ಪ್ರದೇಶಕ್ಕೆ ಸೂಕ್ತವಾದ ಸರಳ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇಲ್ಲಿನ ಜಿಕೆವಿಕೆ ಆವರಣದಲ್ಲಿ ಇರುವ ಒಣ ಬೇಸಾಯ ಕೃಷಿ ವಿಭಾಗದಲ್ಲಿ ಬೇರೆಬೇರೆ ಬೆಳೆಗಳನ್ನು ಹಾಕಲಾಗಿದೆ. ರೈತರು ಅನುಸರಿಸಲು ಸುಲಭವಾಗುವ ಪದ್ಧತಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಗಿ, ತೊಗರಿ, ಸೂರ್ಯಕಾಂತಿ, ಹುಚ್ಚೆಳ್ಳು, ಮೆಣಸಿನಕಾಯಿ, ಅಕ್ಕಿ ಅವರೆ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಮಾದರಿಗಳು ಯಶಸ್ವಿಯೆಂದು ಮನವರಿಕೆಯಾದ ನಂತರವೇ ಅವುಗಳನ್ನು ರೈತ ಸಮುದಾಯಕ್ಕೆ ಪರಿಚಯಿಸಲಾಗುತ್ತಿದೆ.