ದಾಳಿಂಬೆಯನ್ನು ಉಷ್ಣವಲಯ ಹಾಗೂ ಉಪೋಷ್ಣವಲಯದ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಯು ಪೋಷಾಕಾಂಶ ಹಾಗೂ ಔಷಧಿಯ ಗುಣಗಳಿಂದ ಹೆಚ್ಚು ಜನಪ್ರಿಯ. ಇದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಠಗಳು, ಸಸಾರಜನಕ, ಖನಿಜ ಪದಾರ್ಥಗಳು, ನಾರು, ಸಿ-ಜೀವಾಸತ್ವ ಮತ್ತು ಆಕ್ಸಾಲಿಕ ಆಮ್ಲಗಳಿವೆ ಈ ಬೆಳೆಯನ್ನು ಮುಖ್ಯವಾಗಿ ಮಹಾರಾಷ್ಟ್ರ, ಗುಜುರಾತ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದು ಔಷಧಿಯ ಗುಣಗಳನ್ನು ಹೊಂದಿದ್ದು ಗಿಡದ ಎಲೆ, ಬೇರು, ಕಾಂಡ ಹಣ್ಣಿನ ತೊಗಟೆ ಮತ್ತು ಹಣ್ಣಿನ ರಸವನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ದಾಳಿಂಬೆ ಬೆಳೆಯು ಹಲವಾರು ರೋಗಗಳಿಂದ ಬಳಲುತ್ತಿದೆ. ಅದರಲ್ಲಿಯೂ ಅತೀ ಹೆಚ್ಚು ನಷ್ಟವನ್ನುಂಟು ಮಾಡುವ ರೋಗಗಳು ಎಂದರೆ ಸೊರಗು ರೋಗ, ದುಂಡಾಣು ಅಂಗಮಾರಿ ರೋಗ ಮತ್ತು ಬೇರು ಗಂಟು ಜಂತು ರೋಗ. ಇತ್ತೀಚಿಗೆ ಕರ್ನಾಟಕದಲ್ಲಿ ದಾಳಿಂಬೆಯನ್ನು ಬೆಳೆಯುವ ಪ್ರಮುಖ ಜಿಲ್ಲೆಗಳಾದ ಬಾಗಲಕೋಟ, ವಿಜಯಪುರ, ಚಿತ್ರದುರ್ಗ ತುಮಕೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದಾಳಿಂಬೆಯ ಬೇರುಗಂಟು ಜಂತು ರೋಗದ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು ಬೇರು ಗಂಟು ಜಂತು ರೋಗದ ತೀವ್ರತೆ ಕಂಡು ಬಂದಿದೆ. ಈ ಬೇರು ಗಂಟು ಜಂತುವು ಸೊರಗು ರೋಗದ ತೀವ್ರತೆಯನ್ನು ಹೆಚ್ಚು ಮಾಡುತ್ತದೆ, ಇದು ದಾಳಿಂಬೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ರೋಗದ ಕಾರಣ ಜಂತುಹುಳು: ಬೇರುಗಂಟು ರೋಗಾವು ಸಸ್ಯ ಜಂತುಹುಳು (ಮೆಲಾಯಿಡೋಗೈನ್ ಇನ್ಕಾಗ್ನಿಟ)ನಿಂದ ಬರುತ್ತದೆ. ಸಸ್ಯ ಜಂತುಹುಳು ಬರಿಯ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ ಜೀವಿಯಾಗಿರುತ್ತದೆ. ಈ ಜಂತು ಹುಳು ಪ್ರಮುಖವಾಗಿ ಮಣ್ಣಿನಲ್ಲಿ ಮತ್ತು ಬೇರುವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪ್ರತಿಯೊಂದು ಹೆಣ್ಣು ಜಂತುಹುಳು ಸುಮಾರು 250 ರಿಂದ 300 ಮೊಟ್ಟೆಗಳನ್ನು ಒಂದು ಜಿಗುಟಿನಂತಹ ಚೀಲದಲ್ಲಿ ಇಟ್ಟು ಬೇರು ಗಂಟಿನಿಂದ ಸ್ರವಿಸುತ್ತದೆ. ಈ ಜಂತುಹುಳುಗಳು ಸರಾಸರಿ 10 ರಿಂದ 29 ದಿನಗಳ ಜೀವನ ಚಕ್ರವನ್ನು ಹೊಂದಿರುತ್ತವೆ.
ದಾಳಿಂಬೆ ಬೇರು ಗಂಟು ರೋಗಾದ ಮುಖ್ಯ ಲಕ್ಷಣಗಳು:
ಅ) ಗಿಡದ ಮೇಲಿನ ಭಾಗದ ಲಕ್ಷಣಗಳು: ರೋಗ ಪೀಡಿತ ಗಿಡಗಳಲ್ಲಿ ಅಲ್ಲಲ್ಲಿ ಹಳದಿಯಾಗಿ ಸೊರಗಿ ಕೆಳಮುಖವಾಗಿ ಬಾಡಿದಂತಹ ಎಲೆಗಳನ್ನು ಗಮನಿಸಬಹುದು ಹಲವು ಬಾರಿ ರೋಗಸ್ಥ ಗಿಡಗಳು ಸೂಕ್ತ ಬೆಳವಣಿಗೆ ಇಲ್ಲದೆ ಕುಂಠಿತಗೊಂಡು ರೋಗರಹಿತ ಗಿಡಗಳಿಗಿಂತ ಗಿಡ್ಡದಾಗಿ/ ಚಿಕ್ಕದಾಗಿ ಇರುವುದನ್ನು ಕಾಣಬಹುದು. ಈ ಲಕ್ಷಗಳಿಂದ ಜಂತುಹುಳುಗಳ ಇರುವಿಕೆಯನ್ನು ಸಲಭವಾಗಿ ಪತ್ತೆ ಹಚ್ಚಬಹುದು.
ಆ) ಬೇರುಗಳ ಮೇಲಿನ ಲಕ್ಷಣಗಳು: ಜಂತುಹುಳಗಳು ಗಿಡಗಳ ಬೇರನ್ನು ಆಕ್ರಮಿಸಿ ನಾಶಪಡಿಸುವದರಿಂದ ಅದರ ಬೆಳವಣಿಗೆಯು ಗಮನಾರ್ಹವಾಗಿ ಕುಂಠಿತಗೊಳ್ಳುತ್ತದೆ. ಅನೇಕ ಗಾತ್ರದ ಗಂಟುಗಳು ಬೇರಿನ ಮೇಲೆ ಕಂಡು ಬರುತ್ತದೆ. ಬೇರಿನ ಭಾಗವು ಸಹಜವಾಗಿರದೆ ಇದೆ ಬೇರು ಕಬ್ಜಗೊಂಡಿರುತ್ತದೆ. ರೋಗಗ್ರಸ್ಥ ಗಿಡಗಳ ಮುಖ್ಯ ಬೇರು ಮಾತ್ರ ಇದ್ದು, ಮರಿಬೇರುಗಳ ಸಂಖ್ಯೆ ಕಡಿಮೆವಾಗುತ್ತದೆ. ಇದರಿಂದ ನೀರು ಹಾಗೂ ಪೋಷಾಕಾಂಶ ಹೀರುಕೊಳ್ಳುತ್ತದೆ, ಗಿಡವು ಕುಠಿತ ಬೆಳವಣಿಗೆಯನ್ನು ಹೊಂದುತ್ತದೆ ಹಾಗೂ ಈ ಗಿಡದ ಗುಣಮಟ್ಟ ಮತ್ತು ಇಳುವರಿಯು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಗಿಡದ ಯಾವುದೇ ಬೆಳವಣಿಗೆ ಹಂತದಲ್ಲಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು ಆದ್ದರಿಂದ ಬೆಳೆಗಾರರು ಇದನ್ನು ಪತ್ತೆಹಚ್ಚಿ ಸೂಕ್ತ ಕ್ರಮವನ್ನು ಅನುಸರಿಸುವುದರಿಂದ ಬೇರು ಗಂಟು ರೋಗವನ್ನು ತಡೆಗಟ್ಟಬಹುದು.
ದಾಳಿಂಬೆ ಬೇರು ಗಂಟು ರೋಗಾದ ಸಮಗ್ರ ನಿರ್ವಹಣೆ: ಮಣ್ಣಿನ ಪರೀಕ್ಷೆ ಮಾಡಿಸಿ ಜಂತುಹುಳುವಿನ ಇರುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುವುದು.ಜಂತು ರಹಿತ ಭೂಮಿಯಲ್ಲಿ ಬೆಳೆಯನ್ನು ಬೆಳೇಯುವದು. ಜಂತು ರೋಗ ರಹಿತ ಸಸಿಗಳನ್ನು ಆಯ್ಕೆ ಮಾಡುವುದು ಮತ್ತು ಅವುಗಳನ್ನು ಮಾತ್ರ ಉಪಯೋಗಿಸುವದು.ಜಂತುಹುಳುವಿನ ಪತ್ತಗೆ ನಿಯಮಿತವಾಗಿ ಬೆಳೆಯ ಮಣ್ಣಿನ ಪರೀಕ್ಷೆ ಮಾಡಿಸುವದು. ಉತ್ತಮ ಮಟ್ಟದ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಎಲೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸುವದು. ಇದರಿಂದ ಜಂತುಹುಳುಗಳ ಸಂಖ್ಯೆಯನ್ನು ಕ್ರಮೇಣವಾಗಿ ಕಡಿಮೆ ಮಾಡಬಹುದು.ಬೇವಿನ ಹಿಂಡಿ/ ಹರಳಿನಹಿಂಡಿಯನ್ನು ಪ್ರತಿಗಿಡಕ್ಕೆ 1 ಕೆ.ಜಿ.ಯನ್ನು ಹಾಕಬೇಕು. ಜಂತುಹುಳುವಿನ ವಿರೋಧಿ ಬೆಳೆಗಳಾದ ಚೆಂಡುಹೂ, ಸಾಸಿವೆ, ಹುಚ್ಚೆಳ್ಳು ಇವುಗಳನ್ನು ಅಂತರ ಬೆಳೆಯಾಗಿ ಬೆಳೆಯುವದರಿಂದ ಜಂತುಹುಳಗಳನ್ನು ತಡೆಗಟ್ಟಬಹುದು.
ಪೆಸಿಲೋಮೈಸಿಸ್ ಲಿಲೇಸಿನಾಸ್ನನ್ನು (50 ಗ್ರಾಂ. ಪ್ರತಿ ಗಿಡಕ್ಕೆ) ಗಿಡದ ಬುಡಕ್ಕೆ ಸುತ್ತಲೂ ಹಾಕಬೇಕು.ಕಾರ್ಬೊರ್ಫ್ಯೂರಾನ್ 3 ಜಿ ಹರಳುಗಳನ್ನು ಎಕೆರಿಗೆ 18- 20 ಕೆ. ಜಿ. ಯಂತೆ ಹಾಕುವುದರಿಂದ ಬೇರು ಗಂಟು ರೋಗವನ್ನು ನಿಯಂತ್ರಿಸಬಹುದು.
ಲೇಖಕರು: ಮಧುಶ್ರೀ ಕೆರಕಲಮಟ್ಟಿ,, ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟ
ಶೃತಿ ಟಿ. ಎಚ್., ಕೃಷಿ ವಿಶ್ವವಿದ್ಯಾಲಯ ರಾಯಚೂರು