ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ತರಕಾರಿಗಳು ನೆರೆ ರಾಜ್ಯ ಗೋವಾ, ಮಹಾರಾಷ್ಟ್ರದ ಸತಾರಾ, ಪೂನಾ, ಮುಂಬೈ ಹೀಗೆ ಹತ್ತು ಹಲವು ಕಡೆ ಸರಬರಾಜು ಆಗುತ್ತವೆ. ರುಚಿಗೆ ಇವುಗಳು ಪ್ರಸಿದ್ದಿ.
ಹೀಗೆ ಹೆಚ್ಚು ಪ್ರಸಿದ್ಧಿ ಹೊಂದಿರುವುದು ಹೈಬ್ರೀಡ್ ಅಥವಾ ಬಿ.ಟಿ. ತಳಿಗಳಲ್ಲ. ಬದಲಾಗಿ ದೇಸೀ ತಳಿ ತರಕಾರಿಗಳು. ಈ ದೇಸೀ ತಳಿ ತರಕಾರಿಗಳಲ್ಲಿ ಅವರಾದಿಯ ಬದನೆ ಕೂಡ ಸೇರಿದೆ. ಆದರೆ ಪ್ರಚಾರವಿಲ್ಲ. ಬೆಳಗಾವಿ ಜಿಲ್ಲೆಯ ಜನರಿಗೂ ಅವರಾದಿ ಬದನೆಯಿಂದ ಮಾಡಿದ ಖಾದ್ಯಗಳೆಂದರೆ ಬಲು ಅಚ್ಚುಮೆಚ್ಚು. ಅಬ್ಬರದ ಆಧುನಿಕ ತಳಿ ಬೀಜಗಳ ನಡುವೆ ಇದು ತನ್ನ ಖದರನ್ನು ಕಳೆದುಕೊಳ್ಳದೆ ಬಿ.ಟಿ ಗೆ ಸೆಡ್ಡು ಹೊಡೆದು ನಿಂತಿದೆ.
ಪಾರಂಪಾರಿಕ ದೇಸೀ ಬೀಜಗಳು
ಬೆಳಗಾವಿಯಲ್ಲಿ ಕಬ್ಬನ್ನು ಹೆಚ್ಚು ಬೆಳೆಯುತ್ತಾರೆ. ಇದರ ಮಧ್ಯೆ ದೇಸೀ ತರಕಾರಿಗಳನ್ನೂ ಬೆಳೆಯುತ್ತಾರೆ. ಕೆಲವು ಗ್ರಾಮಗಳಲ್ಲಿ ನಾಟಿ ತಳಿಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇವುಗಳಿಂದ ಇಲ್ಲಿಯ ಅವರಾದಿ ಬದನೆಯ ಖಾದ್ಯದ ರುಚಿ ಜನರ ನಾಲಿಗೆಯ ಮೇಲೆ ನಲಿದಾಡುತ್ತಿದೆ. ಕಿತ್ತೂರ ತಾಲೂಕಿನ ಅವರಾದಿಯ ಬದನೆ ಕಿತ್ತೂರಿನ ಸೋಮವಾರ ಪೇಟೆಯ ರಾಜ ಎಂದು ಕರೆಸಿಕೊಳ್ಳುತ್ತದೆ.
ಬದನೆಯನ್ನು ಮಳೆಯಾಶ್ರಿತ, ನೀರಾವರಿಯಲ್ಲೂ ಬೆಳೆಯಬಹುದು. ಅಗಸ್ಟ್‌ನಲ್ಲಿ ನಾಟಿ ಮಾಡುತ್ತಾರೆ. ಏಕರೆಗೆ 250 ಗ್ರಾಂ ನಾಟಿ ಮಾಡುತ್ತಾರೆ ಜನೇವರಿಯಿಂದ ಇದರ ಫಲ ನಮಗೆ ದೊರೆಯತ್ತದೆ. ವಾರದಲ್ಲಿ 2 ಬಾರಿ ಇದನ್ನು ಕೊಯ್ಲು ಮಾಡುತ್ತಾರೆ.
ರೋಗ ನಿರೋಧಕ ಗುಣ
ಈ ವಿಶೇಷ ಬದನೆ ರೋಗ ನಿರೋಧಕ ಹಾಗೂ ಕೀಟಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಹೀಗಾಗಿ ಔಷಧಗಳಿಗೆ ಖರ್ಚು ಮಾಡುವ ಹಣ ಉಳಿತಾಯವಾಗುತ್ತದೆ. ಅಬ್ಬರದಿಂದ ಬೆಳೆಯುವ ಈ ದೇಸಿ ತಳಿ ಬದನೆಗೆ ಹೆಚ್ಚು ಗೊಬ್ಬರದ ಅವಶ್ಯಕತೆಯೂ ಇಲ್ಲ.
ಬಣ್ಣ ಮತ್ತು ರುಚಿ :
ಬದನೆಯು ಹಸಿರು ಮಿಶ್ರಿತ ಬಿಳಿ ಬಣ್ಣ ಹೊಂದಿದ್ದು ಇದರಿಂದ ಮಾಡಿದ ಎಳೆಯ ಕಾಯಿಯ ಏನಗಾಯಿ ಬಲು ರುಚಿ. ಹಬ್ಬ ಹರಿದಿನಗಳಲ್ಲಿ ಇದು ವಿಶೇಷ ಖಾದ್ಯವಾಗಿದೆ. ಬಾಗೇವಾಡಿ ಎಮ್.ಕೆ.ಹುಬ್ಬಳಿ , ಸಂಪಗಾಂವ ಸಂತೆಗಳಲ್ಲಿ ಇದನ್ನು ಹೆಚ್ಚಾಗಿ ಮಾರಾಟ ಮಾಡುತ್ತಾರೆ.