ಲೇಖಕರು: ವಿನೋದ ರಾ ಪಾಟೀಲ ಚಿಕ್ಕಬಾಗೇವಾಡಿ, ಶಿಕ್ಷಕರು

ಬೆಳಗಾವಿಯ ಗ್ರಾಮೀಣ ಹಿರಿಯರ ಬಾಯಲ್ಲಿ ಅನೇಕ ದೇಸಿ ಬೀಜಗಳ ಹೆಸರು ಪ್ರಚಲಿತದಲ್ಲಿವೆ. ಅದರಲ್ಲಿ ಕೆಲವು ನಶಸಿ ಹೋಗಿವೆ. ಇನ್ನೂ ಕೆಲವು ಇಂದಿಗೂ ತಮ್ಮ ಅಸ್ಮಿತೆ ಉಳಿಸಿಕೊಂಡಿವೆ. ಅದರಲ್ಲಿ ಖನಗಾಂವ ಸವತೆ, ಗಿರಿಯಾಲ ಸವತೆ ಅವರಾದಿ ಬದನೆ,ಇವುಗಳು ತಮ್ಮ ಗುಣವಿಶೇಷತೆಯಿಂದ ಹೆಸರುವಾಸಿಯಾಗಿವೆ. ಹೀಗೆ ಇವುಗಳಿಂದ ಗುಣಮಟ್ಟದ ಆಹಾರ ದೊರೆಯುತ್ತಿದೆ. ಅವುಗಳಲ್ಲಿ ಈ ಮುಚ್ಚಂಡಿ ಸವತೆಯೂ ಒಂದಾಗಿದೆ.
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಚಂದ್ರಕಾಂತ ವಿರುಪಾಕ್ಷಪ್ಪ ಕೋಟಗಿ ಅವರು ಈ ಸವತೆಯನ್ನು ಮಿಶ್ರಬೆಳೆಯಾಗಿ ಬೆಳೆದು ಯಶ ಕಂಡಿದ್ದಾರೆ. ಇವರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಪಿಕೆಪಿಯಸ್ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 3 ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.


ಇವರದ್ದು ಅವಿಭಕ್ತ ಕುಟುಂಬ. 12 ಏಕರೆ ಜಮೀನು ಹೊಂದಿದ್ದಾರೆ ಇದರಲ್ಲಿ 7 ಏಕರೆ ಭೂಮಿಯಲ್ಲಿ ನೀರಾವರಿ ಬೇಸಾಯ. ಮುಖ್ಯವಾಗಿ ನೀರಾವರಿಯಲ್ಲಿ ಕಬ್ಬು,ಸವತೆ,ಶೇಂಗಾ,ಜೋಳವನ್ನು ಬೆಳೆದರೆ ಒಣಬೇಸಾಯದಲ್ಲಿ ಸೋಯಾ,ಜೋಳವನ್ನು ಬೆಳೆಯುತ್ತಾರೆ. ಎರಡು ಬೋರ್ವೆಲ್ ಇದೆ. ಅದರಲ್ಲಿ ಈಗ ಒಂದು ಚಾಲ್ತಿಯಲ್ಲಿದ್ದು 1.5 ಇಂಚು ನೀರನ್ನು ಯೋಜನಾಬದ್ದವಾಗಿ ಬಳಸುತ್ತಾರೆ. 4 ಏಕರೆ ಕಬ್ಬಿನ ಬೆಳೆಗೆ ಹನಿ ನೀರಾವರಿ ಮೂಲಕ ನೀರುಣಿಸಲು ಸಾಕಾಗುತ್ತದೆ. 4 ಭಾಗ ಮಾಡಿ ನೀರುಣಿಸಲಾಗುವುದರಿಂದ ಸದಾ ತೇವ ಇರುವುದನ್ನು ಕಾಣಬಹುದಾಗಿದೆ.ಇನ್ನು ಕಬ್ಬಿನ ರವದಿಯನ್ನು ಸುಡದೆ ಭೂಮಿಯಲ್ಲಿ ಸಾವಯವ ಗೊಬ್ಬರವಾಗಿ ಮಾಡಿಕೊಂಡಿದ್ದಾರೆ. ಇದು ಕೂಡಾ ತೇವವನ್ನು ಕಾಪಾಡಲು ಸಹಾಯವಾಗಿದೆ.
ಇನ್ನುಳಿದ ಜಮೀನಿನ ತಾಜ್ಯವನ್ನು ಹಾಗೂ ಬದುವಿನ ಮರಗಳ ಎಲೆಗಳನ್ನು ಹುಂಡಿಗಳಲ್ಲಿ ಸಂಗ್ರಹಿಸಿ ಗೊಬ್ಬರ ಮಾಡಿಕೊಂಡು ಬಳಸುತ್ತಾರೆ. ಈಗ ಪ್ರಸ್ತುತವಿರುವ ಕಬ್ಬು 3 ನೇಯ ಕುಳೆಯಾಗಿದೆ.ಕಬ್ಬು ನಾಟಿ ಮಾಡುವ ಮೊದಲು ಕೊಟ್ಟಿಗೆ ಗೊಬ್ಬರ ಹಾಕಲಾಗಿದೆ. ಸಾಲಿನಿಂದ ಸಾಲಿಗೆ 4 ಪೂಟ್ ಅಂತರವಿದೆ.ಸಸಿಯಿಂದ ಸಸಿಗೆ 1.5 ಪೂಟ್ ಅಂತರದಲ್ಲಿ ಕಬ್ಬಿನ ಸಸಿ ಹಚ್ಚುವದರಿಂದ ಇಳುವರಿಯಲ್ಲಿ ಏರಿಕೆ ಕಂಡುಕೊಂಡಿದ್ದಾರೆ.ಮೊದಲ ವರ್ಷ 186 ಟನ್ ಇಳುವರಿ ಬಂದರೆ ಎರಡನೇಯ ವರ್ಷ 150 ಟನ್ ಇಳುವರಿ ಬಂದಿದೆ.
ಅಂತರ ಬೇಸಾಯ: ಜಮೀನು ಕಪ್ಪು ಮಣ್ಣಿನಿಂದ ಕೂಡಿದೆ.ಹೀಗಾಗಿ ತರಕಾರಿ ಬೆಳೆಯಲು ಕೂಡಾ ಪ್ರಸಕ್ತವಾಗಿದೆ.ಕಬ್ಬಿನಲ್ಲಿ ಅಂತರಬೆಳೆಯಾಗಿ ಟೊಮ್ಯಾಟೋ,ಬೆಣಚು ಬೆಳೆದು ಮೊದಲವರ್ಷ 1 ಲಕ್ಷ ಆದಾಯ ಪಡೆದರೆ ಇನ್ನೂ ಈ ವರ್ಷ ಮುಚ್ಚಂಡಿ ದೇಸಿ ಸವತೆಯನ್ನು ಬೆಳೆಯಲಾಗಿದೆ.ಅಂತರಬೆಳೆ ಬೆಳೆಯುವದರಿಂದ ಆದಾಯದ ಜೊತೆಗೆ ಭೂಮಿಯ ತೇವಾಂಶ ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯಕವಾಗಿದೆ.
ದೇಸಿ ಸವತೆಯ ಗುಣವಿಶೇಷತೆ: ಸವತೆ ದೇಸಿ ತಳಿಯಾಗಿದೆ.ಇಲ್ಲಿಯ ಸಮೀಪದ ಮುಚ್ಚಂಡಿ ಉರಿನಿಂದ ಬೀಜನ್ನು ತರಲಾಗಿದೆ.ಎಕರೆಗೆ 200 ಗ್ರಾಂ ಬೀಜ ಬೇಕಾಗುತ್ತದೆ, ಕಪ್ಪುಭೂಮಿಗೆ ಇದು ಯೋಗ್ಯ ತಳಿಯಾಗಿದೆ.ಒಂದು ತಿಂಗಳ 10 ದಿನದಿಂದ ಇದು ಕೊಯ್ಲಿಗೆ ಬರುವುದು. ವಾರಕ್ಕೆ 3 ಬಾರಿ ಕೊಯ್ಲು ಮಾಡುತ್ತಾರೆ.ಇನ್ನು ಎಲೆಚುಕ್ಕಿ ರೋಗದ ನಿಯಂತ್ರಣವನ್ನು ಆಕಳ ಗೋಮೂತ್ರ ಸಿಂಪಡಣೆ ಮಾಡಿ ಹತೋಟಿ ಮಾಡಲಾಗುತ್ತದೆ.


ಈ ಸವತೆ ಚಿಕ್ಕದಾಗಿ ಉದ್ದವಾಗಿ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಬೆಳಗಾವಿ ಮಾರುಕಟ್ಟೆಗೆ ಬುಟ್ಟಿಯಲ್ಲಿ ತುಂಬಿ ಮಾರಾಟ ಮಾಡುತ್ತಾರೆ.ಇನ್ನು ಸಾಯಂಕಾಲ ಸಮಯ ಸವತೆ ಬಳ್ಳಿಗೆ ಹೊಗೆಯನ್ನು ಹಾಕಲಾಗುತ್ತದೆ.ಇದರ ಪರಿಣಾಮ ಹೆಚ್ಚು ಹೂ ಬಿಡುವುದು ಹಾಗೂ ಬಿಟ್ಟ ಹೂಗಳೆಲ್ಲ ಫಲ ನೀಡುತ್ತವೆ ಎನ್ನುತ್ತಾರೆ.
ಚಂದ್ರಕಾಂತ ಕೋಟಗಿ ಅವರ ಸಂಪರ್ಕ ಸಂಖ್ಯೆ: 96204415886

LEAVE A REPLY

Please enter your comment!
Please enter your name here