ಹತ್ತು ದಿನದೊಳಗೆ ಬೆಳೆ ನಾಶಕ್ಕೆ ಪರಿಹಾರ ಪಾವತಿ

0

ರಾಮನಗರ, ಆಗಸ್ಟ್  29: ಜುಲೈ ತಿಂಗಳು ಮತ್ತು ಆಗಸ್ಟ್ ಮೊದಲನೇ ವಾರದಲ್ಲಿ ಆದ ಬೆಳೆನಾಶದ ಪರಿಹಾರ ಪಾವತಿಗೆ ಕಂದಾಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನು ಹತ್ತು ದಿನಗಳೊಳಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ರಾಮನಗರ ಮತ್ತು ಚೆನ್ನಪಟ್ಟಣ ತಾಲ್ಲೂಕುಗಳ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ  ಪತ್ರಿಕಾ ಗೋಷ್ಟಿ ನಡೆಸಿದರು.

ಬೆಳೆನಾಶದ ಬಗ್ಗೆ ಕೂಡಲೇ ಜಂಟಿ ಸರ್ವೆ, ದಾಖಲೆಗಳನ್ನು ಅಪಲೋಡ್ ಮಾಡಲಾಗುತ್ತಿದೆ. ಕಳೆದ 3 ದಿನದಿಂದ ಆಗಿರುವ ಹಾನಿಯ ವರದಿ ಸಲ್ಲಿಸಲು ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರದ ಎರಡುಪಟ್ಟು ಹೆಚ್ಚಿಸಿ ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಒಣಬೇಸಾಯಕ್ಕೆ 13,600 ರೂ., ತೋಟಗಾರಿಕೆ ಬೆಳೆಗೆ 28,000 ರೂ. , ನೀರಾವರಿಗೆ  25, 000 ರೂ.  ಪರಿಹಾರ ನೀಡಲಾಗುತ್ತಿದೆ. ಕಳೆದ ಬಾರಿ ನಾಶವಾದ 14 ಲಕ್ಷ ಎಕರೆ ನಾಶಕ್ಕೆ 1100 ಕೋಟಿಗೂ ಹೆಚ್ಚುವರಿ ಪರಿಹಾರವನ್ನು ಕೇವಲ ಒಂದೂವರೆ ತಿಂಗಳಲ್ಲಿ ವಿತರಣೆ ಮಾಡಲಾಗಿದೆ. ಈ ಬಾರಿಯೂ ಒಂದೂವರೆ ತಿಂಗಳಲ್ಲಿ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ವಿಶೇಷ ಪ್ರಕರಣವೆಂದು ಪರಿಗಣಿಸಿ ರೇಷ್ಮೆ ಬೆಳೆ ನಾಶಕ್ಕೆ ಪರಿಹಾರ :

ರಾಮನಗರ ಟೌನ್ ನಲ್ಲಿ ಮನೆ ವಸ್ತುಗಳು ನಷ್ಟವಾಗಿರುವ ಜೊತೆಗೆ ರೇಷ್ಮೆ ರೀಲಿಂಗ್ ಕಾರ್ಖಾನೆ, ರೇಷ್ಮೆ ದಾಸ್ತಾನು ನಾಶವಾಗಿದ್ದು, ಸರ್ವೇ ಮಾಡಲು ಸೂಚಿಸಲಾಗಿದೆ. ಸರ್ವೇ ವರದಿ ಬಂದ ನಂತರ ಎನ್ ಡಿ ಆರ್ ಎಫ್ ಮಾರ್ಗಸೂಚಿಯಲ್ಲಿ ಇಲ್ಲವಾದ ಕಾರಣ ವಿಶೇಷ ಪ್ರಕರಣ ಎಂದು ಪರಿಗಣಿಸಿ  ಈ ನಷ್ಟವನ್ನು ಭರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನೀರು ನುಗ್ಗಿರುವ ಮನೆಗಳಿಗೆ ಪರಿಹಾರ:

ಬೇರೆ ಬೇರೆ ಜಿಲ್ಲೆಗಳಲ್ಲಿ ಹಾನಿಯಾಗಿರುವ ಮನೆಗಳಿಗೆ 10 ಸಾವಿರ ರೂ.ಗಳನ್ನು ನೀಡಲು ಆದೇಶ ಮಾಡಲಾಗಿದೆ. ಮನೆ ಹಾನಿಯಾಗಿರುವ ಪ್ರಮಾಣವನ್ನು ಎ, ಬಿ, ಸಿ ಎಂದು ವರ್ಗೀಕರಿಸಿ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಭಾಗಶಃ ಬಿದ್ದ ಮನೆಗಳಿಗೆ 3 ಲಕ್ಷ, ಸ್ವಲ್ಪ ಹಾನಿಯಾಗಿರುವ ಮನೆಗಳಿಗೆ 50,000 ರೂ.ಗಳನ್ನು ಕೇಂದ್ರಸರ್ಕಾರದ ಮಾರ್ಗಸೂಚಿಯಂತೆ ನೀಡಲಾಗುತ್ತಿದೆ ಎಂದರು.

ಬೆಳೆನಾಶ ಸರ್ವೆ :

ರಾಮನಗರ ಜಿಲ್ಲೆ, ಚೆನ್ನಪಟ್ಟಣ, ಮಾಗಡಿಯಲ್ಲಿ ಕೆಲವು ಸೇತುವೆಗಳು ನಷ್ಟವಾಗಿವೆ. ರಾಮನಗರದಲ್ಲಿ ದೊಡ್ಡ ಕೆರೆ ಒಡೆದು ಊರಿಗೆ ನೀರು ಹರಿದು,ಮನೆಗಳಿಗೆ ನಷ್ಟವಾಗಿದೆ. ಸುಮಾರು ಒಟ್ಟು ಭಾಗಶ: ನಾಶ 2222 ಮನೆಗಳು, ರಾಮನಗರ ನಗರ ಟೌನ್ ನಲ್ಲಿ 133 ಮನೆಗಳು, ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳು 3863 ಮನೆಗಳು, ಪ್ರಾಣಹಾನಿ ರಾಮನಗರ ಹಾಗೂ ಚೆನ್ನಪಟ್ಟಣ ತಾಲ್ಲೂಕಿನಲ್ಲಿ ತಲಾ ಒಂದು ಪ್ರಾಣಹಾನಿ ಸಂಭವಿಸಿದೆ. ಸಣ್ಣ ಪ್ರಾಣಿಗಳಾದ 459ಕುರಿ,ಮೇಕೆ, 16ಹಸು, 5500 ಕೋಳಿಗಳು ಸಾವಾಗಿದೆ. ಬೆಳೆಹಾನಿ ಸುಮಾರು ಕೃಷಿ ಬೆಳೆ 600 ಎಕರೆಯಷ್ಟು ಬೆಳೆನಾಶ, ತೋಟಗಾರಿಕಾ ಬೆಳೆ 500 ಎಕರೆ ಬೆಳೆನಾಶ, ಸರ್ವೆ ನಂತರ ಹೆಚ್ಚಿನ ವಿವರಗಳು ದೊರೆಯಲಿವೆ ಎಂದರು.

LEAVE A REPLY

Please enter your comment!
Please enter your name here