ಮೀನುಕೃಷಿಯೂ ಆದಾಯದ ಮೂಲವಾಗಿರಲಿ

0

ಒಳನಾಡು ಮೀನುಗಾರಿಕೆ ಪರಿಚಯ:

ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಮೀನುಗಾರಿಕೆ ಹೇಳಿ ಮಾಡಿಸಿದ ಕೃಷಿ ವಲಯ. ಒಳನಾಡು ಮೀನುಗಾರಿಕೆಯಿಂದ ಲಕ್ಷಾಂತರ ಜನರು ಮೀನುಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಸಮುದಾಯ ಕೆರೆಗಳು, ಜಲಾನಯನದ ಕೃಷಿಹೊಂಡ, ತಡೆ ಆಣೆಕಟ್ಟು, ಗೋಕಟ್ಟಿ, ನಾಲಾಬದು, ಬೋರ್ ವೆಲ್ ಆಧಾರಿತ ನೀರು ಸಂಗ್ರಹಣ ಕೊಳಗಳು, ಕಲ್ಯಾಣಿ ಕೊಳಗಳು, ನೀರಾವರಿಯ ತೆರೆದ ಬಾವಿಗಳು ತಗ್ಗು ಪ್ರದೇಶದ ಹಳ್ಳ – ಕೊಳ್ಳಗಳು ಮತ್ತು ಕೃಷಿ ಹೊಂಡಗಳು ಮುಂತಾದವು ಜಲಕೃಷಿ ಮಾಡಲು ಪೂರಕವಾಗಿರುತ್ತದೆ.

ಪೌಷ್ಠಿಕ ಆಹಾರ :

ಮೀನು  ಉತ್ತಮ ಪೌಷ್ಠಿಕ ಆಹಾರ. ಇತರ ಮಾಂಸಗಳಿಗಿಂತ ಪಚನ ಕ್ರಿಯೆ ಬೇಗ ಆಗುತ್ತದೆ. ಆರೋಗ್ಯದ ದೃಷ್ಠಿಯಿಂದ ಉತ್ತಮ ಮತ್ತು ಕಡಿಮೆ ಖರ್ಚಿನಲ್ಲಿ ದೊರೆಯುವಂತ ಆಹಾರ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಓಮೇಗ 3 ಗುಂಪಿನ ಅಪರಿಪಕ್ಷ ಕೊಬ್ಬಿನ ಆಮ್ಲ, ಕೊಬ್ಬಿನಲ್ಲಿ ಕರಗಿರುವ ಎ,ಡಿ,ಇ,ಕೆ ಜೀವ ಸತ್ವಗಳು ಹಾಗೂ ಲವಣಣಾಂಶ ಹೊಂದಿದೆ. ಇಷ್ಠೆ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಮೀನು ಸಾಕಣೆಯನ್ನು

ಖರ್ಚು ಕಡಿಮೆ – ಲಾಭ ಹೆಚ್ಚು:

ಮೀನು ಕೃಷಿಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭದಾಯಕ ಕ್ಷೇತ್ರವಾಗಿದ್ದು, ಗ್ರಾಮಿಣ ಪ್ರದೇಶದ ರೈತರು ಮೀನುಗಾರಿಕೆಯನ್ನು ಒಂದು ಮುಖ್ಯ ಕೃಷಿಯಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾದರೆ ಉತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸಬಹುದು.

ಸ್ಥಳದ ಆಯ್ಕೆ :

ಉತ್ತಮ ನೀರಿನ ಸೌಲಭ್ಯವಿರುವ ಹಾಗೂ ನೀರು ನಿಲ್ಲವಂತಹ ಜೇಡಿ ಮೀಶ್ರಿತ ಮಣ್ಣು ಹೊಂದಿರುವ ಯಾವುದೇ ಸ್ಥಳಗಳು ಮೀನು ಕೃಷಿಗೆ ಯೋಗ್ಯವಾಗಿರುತ್ತದೆ.

ಕೃಷಿ ಹೊಂಡಗಳು, ನಾಲಾಬದುಗಳು, ಸಮುದಾಯ ಕೆರೆಗಳು, ನೀರು ಸಂಗ್ರಹಣ ಕೊಳಗಳು, ಕೆರೆ – ಕುಂಟೆಗಳು,

ಉಪಜಲಾನಯನ ತಗ್ಗು ಪ್ರದೇಶಗಳು ಇತ್ಯಾದಿ. ಜೊತೆಗೆ ಇತರೆ ಮೂಲ ಕೃಷಿಗೆ ಯೋಗ್ಯವಲ್ಲದ, ಅತೀ ತೇವಾಂಶವಿರುವ ಮತ್ತು ಜಾಗು ತಗ್ಗು ಪ್ರದೇಶವನ್ನು ಮೀನು ಕೃಷಿಗೆ ಉಪಯೋಗಿಸುವುದರಿಂದ ಭೂಮಿಯ ಸದ್ಬಳಕೆ ಮಾಡಿದಂತಾಗುತ್ತದೆ.

ಕೊಳದ ನಿರ್ಮಾಣ :

ಆಯತಾಕಾರದ ಯಾವುದೇ ವಿಸ್ತೀರ್ಣದ ಕೊಳಗಳನ್ನು ನಿರ್ಮಾಣ ಮಾಡಬಹುದು.

ಕೊಳದ ಇಳಿಜಾರು 1:2:5 ರಷ್ಡಿದ್ದು, ಕೊಳದ ವಿಸ್ತೀರ್ಣ ಕನಿಷ್ಠ 0.25 ರಿಂದ 2.5 ಎಕರೆ ಹೊಂದಿರಬೇಕು ಅಥವಾ ಅದಕ್ಕಿಂತ ಹೆಚ್ಚು ಪ್ರದೇಶವಿದ್ದರೆ ನಿರ್ವಹಣೆ ಸುಲಭ.

ಕೊಳದಲ್ಲಿ ನೀರು ನಿಲ್ಲುವ ಆಳ 4 ರಿಂದ 6 ಅಡಿ ಇದ್ದು, ಕೊಳದ ಬದು ನೀರಿನ ಮಟ್ಟಕಿಂತ ಸುಮಾರು 1 ರಿಂದ 2 ಅಡಿ ಎತ್ತರವಿರಬೇಕು.

ಕೊಳಗಳಿಗೆ ಒಳ ತೂಬು ಮತ್ತು ಹೊರತೂಬುಗಳನ್ನು ಅಳವಡಿಸಬೇಕು.

ಕೊಳದ ಬದುಗಳ ಸಂರಕ್ಷಣೆಗೆ ಹುಲ್ಲುಗಳನ್ನು ಬೆಳಸಬೇಕು ಹಾಗೂ ಕೊಳದ ಬದುಗಳ ಮಣ್ಣು ಸವಕಳಿಯನ್ನು ತಡೆಯಲು ಕೊಳದ ಸುತ್ತ ಅಗಸೆ, ಸುಬಬುಲ್ಲಾ, ನುಗ್ಗೆ ಇತ್ಯಾದಿ ಬಹುವಾರ್ಷಿಕ ಮೇವಿನ ಬೆಳೆಯನ್ನು ಹಾಕುವುದರಿಂದ, ಇವುಗಳ ಜಾನುವಾರುಗಳಿಗೆ ಆಹಾರವಾಗುವ ಜೊತೆಗೆ ಕೊಳದ ಬದುವಿನ ಸವಕಳಿಯನ್ನು ತಡೆಯಬಹುದು.

 ಕೊಳದ ಸಿದ್ದತೆ :

*ಕೊಳದ ನೀರನ್ನು ಸಂಪೂರ್ಣವಾಗಿ ಹೊರಹಾಕಿ ತಳಭಾಗವನ್ನು ಆಳವಾಗಿ ಉಳುಮೆ ಮಾಡಿ ಬಿಸಿಲಿಗೆ ಒಣಗಿಸಬೇಕು. ಇದರಿಂದ ಮಾರಕ ರೋಗಾಣುಗಳನ್ನು ತಡೆಯಬಹುದು.

*ಒಂದು ಎಕರೆಗೆ ಸುಮಾರು 80-150 ಕೆ.ಜಿ ದಷ್ಟು ವ್ಯವಸಾಯಯದ ಅಥವಾ ಸುಟ್ಟ ಸುಣ್ಣವನ್ನು ಆಮ್ಲೀಯ ಗುಣವನ್ನು ಹೊಂದಿರುವ ಕೊಳಕ್ಕೆ ಹಾಕಬೇಕು.

*ನೀರನ ಬಗ್ಗಡತೆಯನ್ನು ಕಡಿಮೆ ಮಾಡಲು ಸೂಫರ್ ಫಾಸ್ಪೇಟ್ ಇಲ್ಲದೇ ಜಿಪ್ಸಂ ಸಹ ಬಳಸಬಹುದು.

*ಕೊಳದ ಮಣ್ಣಿನ ಪೋಷಕಾಂಶಕ್ಕೆ ಅನುಗುಣವಾಗಿ ವರ್ಷಕ್ಕೆ 2-3 ಟನ್ ಹಸಿ ಸಗಣೆ ಗೊಬ್ಬರವನ್ನು ಹಂತ ಹಂತವಾಗಿ ಹಾಕಬೇಕು.

*ಹಸಿರೆಲೆ ಗೊಬ್ಬರಗಳಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು.

*ಕೊಳಕ್ಕೆ ಸುಮಾರು 30ಸೆಂ.ಮೀ ನಷ್ಟ ನೀರನ್ನು ಬಿಟ್ಟು, ಮೀನು ಮರಿಗಳನ್ನು ಬಿತ್ತನೆ ಮಾಡುವ ಎರಡು ದಿನಗಳ ಮೊದಲು ನೀರನ್ನು 4-5 ಅಡಿಯವರೆಗೆ ನೀರನ್ನು ಏರಿಸಬೇಕು.

ಸೂಕ್ತ ತಳಿಗಳ ಆಯ್ಕೆ :

ಮೀನು ಕೃಷಿಯಲ್ಲಿ ಪ್ರಚಲಿತದಲ್ಲಿರುವ ಭಾರತೀಯ ಗೆಂಡೆ ಮೀನುಗಳಾದ ಕಾಟ್ಲಾ, ರೋಹು ಮತ್ತು ಮೃಗಾಲ್ ಚೀನಾ ದೇಶದ ಗೆಂಡೆ ಮೀನುಗಳಾದ ಬೆಳ್ಳಿಗೆಂಡೆ, ಹುಲ್ಲುಗೆಂಡೆ ಮತ್ತು ಸಾಮಾನ್ಯ ಗೆಂಡೆಗಳು ಸಾಕಣೆಗೆ ಯೋಗ್ಯ ತಳಿಗಳು.ಮೀನುಗಳು ಪದರವಾಸಿಗಳಾಗಿದ್ದು ಆಹಾರಕ್ಕಾಗಿ ಮತ್ತು ಸ್ಥಳಗಳಿಗಾಗಿ ಒಂದಕ್ಕೊಂದು ಸ್ಪರ್ಧಿಸುವುದಿಲ್ಲ. ಆದ್ದರಿಂದ ಮಿಶ್ರ ಮೀನು ಪಾಲನೆಯಿಂದ ಉತ್ತಮ ಇಳುವರಿ ಪಡೆಯಬಹುದು.

ಮೀನು ಮರಿಗಳ ಬಿತ್ತನೆ :

ಸುಧಾರಿತ ಪದ್ದತಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು, ಮೀನು ಮರಿಗಳ ಲಭ್ಯತೆಯ ಮೇರೆಗೆ ಸುಮಾರು 4-6 ತಳಿಗಳನ್ನು ಒಟ್ಟಿಗೆ ಸಾಕಾಣೆ ಮಾಡಬಹುದು. ಮೀನು ಮರಿಗಳು ಜೂನ್ ತಿಂಗಳಿಂದ ಸೆಪ್ಟಂಬರ್ ತಿಂಗಳವರೆಗೆ ಮೀನು ಮರಿ ಉತ್ಪಾದನಾ ಕೇಂದ್ರಗಳಲ್ಲಿ ದೊರಕುತ್ತವೆ. ಸುಮಾರು 4 ರಿಂದ 5 ಸೆಂ.ಮೀ ಉದ್ದದ ಅಥವಾ ಬೆರಳುದ್ದು ಗಾತ್ರದ ಮೀನು ಮರಿಗಳನೇ ಬಿತ್ತಬೇಕು.

ಮೀನು ಮರಿಗಳನ್ನು ಬಿತ್ತುವ ಮುನ್ನ ಆಮ್ಲಜನಕ ತುಂಬಿದ ಮೀನು ಮರಿಗಳ ಚೀಲವನ್ನು ಕೊಳದ ನೀರಿನ ಮೇಲೆ ತೇಲಿ ಬಿಡಬೇಕು. ಸುಮಾರು 10-15 ನಿಮಿಷಗಳ ನಂತರ ಕೊಳದ ಉಷ್ಣತೆ ಮತ್ತು  ಮೀನು ಮರಿ ಚೀಲದ ಉಷ್ಣತೆಯು ಸರಿಹೊಂದಿದ ನಂತರ, ಸಾಕಣೆ ಕೊಳದ ನೀರನ್ನು ಸ್ವಲ್ಪ ಸ್ವಲ್ಪವೇ ನಿಧಾನವಾಗಿ ಬೆರಸಿ ಕೊಳಕ್ಕೆ ಮೀನು ಮರಿಗಳನ್ನು ಬಿಡಬೇಕು.

ಕೇವಲ ನೈಸರ್ಗಿಕ ಆಹಾರದ ಮೇಲೆ ಸಾಕಣೆ ಮಾಡುವುದರಿಂದ ಎಕರೆಗೆ 1500-2000 ಮರಿಗಳನ್ನು ಬಿತ್ತಬೇಕು. ಕೃತಕ ಆಹಾರವನ್ನು ಒದಗಿಸಿ ಸಾಕಾಣೆ ಮಾಡುವುದರಿಂದ ಎಕರೆಗೆ 3000-4000 ಮೀನು ಮರಿಗಳನ್ನು ಬಿತ್ತನೆ ಮಾಡಬಹುದು.

ಕೊಳದ ನಿರ್ವಹಣೆ :

ಶೆಂಗಾ ಹಿಂಡಿ ಹಾಗೂ ಅಕ್ಕಿ ತೌಡನ್ನು 1:1 ರ ಅನುಪಾತದಲ್ಲಿ ಮರಿ ಬಿತ್ತನೆ ಮಾಡಿದ ಮೊದಲ 2-3 ತಿಂಗಳು ದೇಹ ತೂಕದ ಶೇಕಡಾ 5 ರಷ್ಟು ಪ್ರತಿದಿನ ನೀಡಬೇಕು.ಪ್ರತಿ ತಿಂಗಳು ಮೀನುಗಳನ್ನು ಹಿಡಿದು ಅವುಗಳ ಬೆಳವಣೆಗೆಯ ಅನುಗುಣವಾಗಿ ಆಹಾರವನ್ನು ಹೆಚ್ಚು ಕಡಿಮೆ ಮಾಡಬೇಕು.

ಪ್ರತಿ ತಿಂಗಳು 500 ಕಿ.ಗ್ರಾಂ ಸಗಣಿಗೊಬ್ಬರ ಇಲ್ಲವೇ 200 ಕಿ.ಗ್ರಾಂ ಕೋಳಿಗೊಬ್ಬರ, 10 ಗ್ರಾಂ ಸಿಂಗಲ್ ಸೂಪರ್ ಫಾಸ್ಪೇಟ್ ಹಾಗೂ 7.5 ಕಿ.ಗ್ರಾಂ ಯೂರಿಯಾವನ್ನು ಹತ ಹಂತವಾಗಿ ನೀರಿನ ಪೋಷಕಾಂಶಕ್ಕೆ ಅನುಗುಣವಾಗಿ ಹಾಕುವುದರಿಂದ ಕೊಳದ ನೈಸರ್ಗಿಕ ಆಹಾರದ ಉತ್ಪಾದನೆಯನ್ನು ಕಾಯ್ದುಕೊಳ್ಳಬಹುದು.

ನೀರಿನ ಬಣ್ಣ ತಿಳಿಪಚ್ಚೆ ಬಣ್ಣದ್ದಾಗಿರಬೇಕು, ನೀರಿನ ಪಾರದರ್ಶಕತೆ 25-30 ಸೆಂ.ಮೀ ನಷ್ಟು ಇರಬೇಕು ಮತ್ತು ನೀರಿನ ರಸಸಾರ 7-8 ರಷ್ಟಿರಬೇಕು. ಮೋಡ ಕವಿದ ವಾತಾವರಣವಿರುವಾಗ, ನೀರಿನಲ್ಲಿ ಆಮ್ಲಜನಕ ಕೊರತೆಯಿಂದಾಗ ಮತ್ತು ಮೀನುಗಳು ಅನಾರೋಗ್ಯವಿದ್ದಾಗ ಆಹಾರ ಹಾಕುವುದನ್ನು ಶೇಕಡಾ 20-30 ರಷ್ಟು ಕಡಿಮೆಮಾಡಬೇಕು. ನೀರಿನ ಗುಣದರ್ಮಗಳಿಗೆ ಅನುಸಾರವಾಗಿ ಶೇ.10 -20 ರಷ್ಟು ನೀರನ್ನು ಬದಲಾಯಿಸಿದರೆ ಉತ್ತಮ ಬೆಳೆವಣೆಗೆಯನ್ನು  ನೀರಿಕ್ಷಿಸಬಹುದು.

ಲೇಖಕರು: ಡಾ.ಎಸ್.ವಿಜಯಕುಮಾರ,  ಗಣೇಶ ಪ್ರಸಾದ. ಎಲ್.,  ಹರಿಶ್ಚಂದ್ರ.ಎಸ್.ಜಾಧವ ಮತ್ತು ಡಾ.ವಿಜಯ.ಎಸ್. ಅತನೂರ

LEAVE A REPLY

Please enter your comment!
Please enter your name here