ಸಾವಯವ ಕೃಷಿ ಉತ್ತಮ ಆದಾಯ ಖುಷಿ

0

ಲೇಖಕರು: ಡಾ. ಮುಕುಂದ ಜೋಶಿ, ಡಾ. ಮಲ್ಲಾರೆಡ್ಡಿ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು, ಕೃಷಿ ಇಲಾಖೆ, ಬೆಂಗಳೂರು

ಸಾವಯವ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆ ಬೆಳೆಯುವುದು ಸಾಧ್ಯವೇ ಇಲ್ಲ ಎಂದೇ ಬಹಳಷ್ಟು ಜನರ ಅಭಿಪ್ರಾಯ. ಸಾವಯವ ಕೃಷಿ ಬರೀ ಹೇಳಲಿಕ್ಕೆ ಚೆಂದ, ಮಾಡಲಿಕ್ಕಲ್ಲ; ಸಾವಯವ ಕೃಷಿ ಮಾಡಿದವರು ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡಂತೆ ಮುಂತಾದ ಅನೇಕ ಅಭಿಪ್ರಾಯಗಳು ಜನಜನಿತವಾಗಿದೆ. ಮುಖ್ಯವಾಗಿ, ರಾಸಾಯನಿಕ ವಸ್ತುಗಳಿಲ್ಲದೇ ಬೆಳೆ ಬೆಳೆಯಲು ಅಸಾಧ್ಯ ಎಂಬ ನಿರ್ಣಯಕ್ಕೆ ಸಾಮಾನ್ಯ ರೈತರು ಬದ್ಧರಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಉಪಯೋಗಿಸುವ ಅನಿವಾರ್ಯತೆ ಬಹಳಷ್ಟು ರೈತರನ್ನು ಕಾಡುತ್ತಿರುವ ಸಮಸ್ಯೆ.

ಇಂಥ ಎಲ್ಲ ರೈತರುಗಳ ಸಾಮಾನ್ಯ ಅಂಶವೆಂದರೆ ಅವರು ಸಾವಯವ ಗೊಬ್ಬರಗಳನ್ನು ಉಪಯೋಗಿಸದಿರುವುದು ಅಥವಾ 2-4 ವರ್ಷಕ್ಕೊಮ್ಮೆ ಉಪಯೋಗಿಸುವುದು; ಚೆನ್ನಾಗಿ ಕೊಳೆಯದಿರುವ ತ್ಯಾಜ್ಯ ವಸ್ತುಗಳನ್ನು /ಸಗಣಿಯನ್ನು ಇಡಿಯಾಗಿ ಉಪಯೋಗಿಸುವುದು; ಸಾಮಾನ್ಯ ರೈತರು ಹೋಗಲಿ, ಅನೇಕ ಈ ಬಗೆಯ ಕೃಷಿಯ ಸ್ಪಷ್ಟ ಜ್ಞಾನವಿಲ್ಲದ ವಿಜ್ಞಾನಿಗಳಿಗೂ ಸಾವಯವ ಕೃಷಿ ಸಾಧ್ಯವೇ ಎಂಬುದು ಪ್ರೆಶ್ನೆಯಾಗಿಯೇ ಉಳಿದಿದೆ. ಜನಸಾಮಾನ್ಯರಿಗಂತೂ ಸಾವಯವ ಕೃಷಿಯ ಸತ್ಯಾಸತ್ಯತೆಗಳೇ ಅನೇಕ ಬಾರಿ ಗೊತ್ತಿರುವುದಿಲ್ಲ.

ಸಾವಯವ ಕೃಷಿಯನ್ನು ವಿರೋಧಿಸುವ ಇನ್ನೊಂದು ಗುಂಪೂ ಇದೆ. ಸಾವಯವ ಕೃಷಿಕರೆಲ್ಲ ಡಾಂಭಿಕರು, ಅವರೆಲ್ಲ ಸಾವಯವ ಕೃಷಿಯಲ್ಲಿ ತೊಡಗಿದ್ದೇವೆ ಎಂದು ಸಾರಿಕೊಂಡರೂ ಯಾರಿಗೂ ಗೊತ್ತಾಗದ ಹಾಗೆ ರಾಸಾಯನಿಕ ಗೊಬ್ಬರಗಳನ್ನು / ಔಷಧಿಗಳನ್ನು ಉಪಯೋಗಿಸಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ ಎಂದು ನಿರ್ಣಯಿಸಿರುವ ಈ ಗುಂಪಿನ ಜನ ಸಾವಯವ ಕೃಷಿಯ ಯಾವ ಯಶಸ್ಸನ್ನು ನಂಬದಿರುವ ಮಟ್ಟಕ್ಕೆ ಅವಾಸ್ತವಿಕತೆಯಲ್ಲಿ ಹುದುಗಿರುತ್ತಾರೆ.

ಮೂರನೇ ಗುಂಪೊಂದು ಅಪ್ಪಟ ಸಾವಯವ ಪರಿಕರಗಳೊಂದಿಗೆ ಜೊತೆಗೆ ರಾಸಾಯನಿಕ ವಸ್ತುಗಳ ಬಳಕೆ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಇಂಥ ಜನರು ಸಾವಯವ ಕೃಷಿಯೊಂದೇ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂಬ ಧೋರಣೆ ಹೊಂದಿರುತ್ತಾರೆ. ಅವರ ಪ್ರಕಾರ ಸಮಗ್ರ ಪೋಷಕಾಂಶ ಅಂದರೆ ರಾಸಾಯನಿಕ ಗೊಬ್ಬರ ಹಾಗೂ ಸಾವಯವ ಗೊಬ್ಬರದ ಒಟ್ಟು ಬಳಕೆ ಕೃಷಿಯ ಯಶಸ್ಸಿಗೆ ಕಾರಣ ಎಂದುಕೊಂಡಿರುತ್ತಾರೆ.

ಈ ಮೂರು ಗುಂಪಿನ ಜನರು ಬಯಸುವುದು ಮಾತ್ರ ಕಲುಷಿತ ರಹಿತ ಆಹಾರ ಪದಾರ್ಥಗಳನ್ನು, ಶುದ್ಧವಾದ ನೈಟ್ರೇಟ್ ರಹಿತ ನೀರನ್ನು,ಔಷಧ ರಹಿತ ತರಕಾರಿ/ ಹಣ್ಣುಗಳನ್ನು. ಈ ಮೂರು ಗುಂಪಿನ ಜನರು ರಾಸಾಯನಿಕ ವಸ್ತುಗಳಿಂದ ಆಗುವ /ಆಗಿರುವ ಅನಾಹುತಗಳ ಬಗ್ಗೆ ಅನೇಕ ಬಾರಿ ತಿಳಿದಿರುತ್ತಾರೆ. ಇವರೆಲ್ಲರಿಗೂ ರಾಸಾಯನಿಕ ವಸ್ತುಗಳ ಸತತ ಬಳಕೆಯಿಂದ ಮಣ್ಣಿನ ಜೈವಿಕ ಕ್ರಿಯೆ / ಫಲವತ್ತತೆ ಕಡಿಮೆಯಾಗಿರುವ ಅನೇಕ ಜ್ವಲಂತ ಉದಾಹರಣೆಗಳೂ ತಿಳಿದಿವೆ.

ಹೀಗೆಲ್ಲ ಇದ್ದಾಗ್ಯೂ ಸಾವಯವ ಕೃಷಿಯನ್ನು ಅನುಸರಿಸಬಹುದು ಎಂಬ ಅಂಶವನ್ನು ಈ ಮೂರು ಗುಂಪಿನ ಜನ ಒಪ್ಪದೇ ಹೋಗುವುದಕ್ಕೆ ಅವರು ಯಶಸ್ವಿ ಸಾವಯವ ಬೇಸಾಯವನ್ನು ನೋಡದಿರುವುದು / ಮಾಡದಿರುವುದು ಕಾರಣವಾಗಿದೆ. ವಾಸ್ತವವಾಗಿ, ಸಾವಯವ ಕೃಷಿ ಎಂಬುದು ರಸಗೊಬ್ಬರಗಳ / ಕ್ರಿಮಿನಾಶಕಗಳ ನಿರುಪಯೋಗಕ್ಕೆ ಸೀಮಿತವಾಗಿಲ್ಲ. ಅಥವಾ ಯಾವುದೇ ಒಂದು ಬೆಳೆಗೆ ಸೀಮಿತವಾಗಿಲ್ಲ.

ರಸಗೊಬ್ಬರ / ಕ್ರಿಮಿನಾಶಕಗಳನ್ನು ಬಳಕೆ ಮಾಡದೇ ಇರುವುದು ಸಾವಯವ ಕೃಷಿಯ ಒಂದು ಭಾಗವೇ ಆದರೂ ಅವುಗಳಿಗೆ ಪರ್ಯಾಯವಾಗಿ ನೈಸರ್ಗಿಕ ಮೂಲಗಳಿಂದ ಸಿಗುವ ಅನೇಕ ವಸ್ತುಗಳನ್ನು ಉಪಯೋಗಿಸುವುದು ಅದರ ಮೂಲ ತತ್ವವಾಗಿದೆ. ಮೂಲತಃ ಸಾವಯವ ಕೃಷಿ ಎನ್ನುವುದು ಯಾವುದೇ ಕೆಲವು ಪರಿಕರಗಳಿಗೆ ಸೀಮಿತವಾಗಿರದೇ ಅದು ಇಡೀ ಜಮೀನಿನ ಅಭಿವೃದ್ಧಿಯ ಹಾದಿಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.

ಸಾವಯವ ಬೇಸಾಯವು ಯಶಸ್ವಿಯಾಗಬಲ್ಲದು, ಲಾಭ ತಂದು ಕೊಡಬಲ್ಲದು, ಫಲವತ್ತತೆ ಹೆಚ್ಚಿಸಬಲ್ಲದು, ಎಂಬ ತಿಳುವಳಿಕೆ ಬರಬೇಕಾದರೆ ಸಾವಯವ ಕೃಷಿಕರ ಯಶೋಗಾಥೆಗಳನ್ನು ಕೇಳಬೇಕು, ಓದಬೇಕು. ಅಂಥ ರೈತರ ಕಳಕಳಿಯ ಬಗ್ಗೆ ತಿಳಿಯಬೇಕು, ಅವರು ಪಡುವ ಶ್ರಮದ ಬಗ್ಗೆ ತಿಳಿಯಬೇಕು. ಅವರ ಇಡಿ ಜಮೀನು ಹೇಗೆ ಪರಿವರ್ತನೆಗೊಂಡಿತು ಎಂಬುದನ್ನು ತಿಳಿಯಬೇಕು. ಈ ದಿಶೆಯಲ್ಲಿ ದಕ್ಷಿಣ ಕರ್ನಾಟಕದ 6 ಕೃಷಿ ವಲಯಗಳಲ್ಲಿನ ಆರು ಆಯ್ದ ರೈತರ ಯಶೋಗಾಥೆಯನ್ನು ಚಿತ್ರಿಸಲಾಗಿದೆ.

ಈ ರೈತರು ಬದಲಾವಣೆ ತರಲು ಹರ ಸಾಹಸವನ್ನೇ ಮಾಡಿರಬಹುದು.ಎರಡು ಮೂರು ವರ್ಷ ಕಾಯ್ದಿರಬಹುದು. ಆದರೆ ಅವರು ಸುಸ್ಥಿರತೆಯನ್ನು ತಲುಪಿದ್ದಾರೆ. ಅವರ ಭೂಮಿಯ ಫಲವತ್ತತೆಯು ನಿರಂತರವಾಗಿ ಹೆಚ್ಚಾಗುತ್ತಲೇ ಹೋಗುತ್ತಲಿದೆ. ಅವರು ಉಳಿದ ರೈತರಿಗಿಂತ ಹೆಚ್ಚಿನ ನಿವ್ವಳ ಲಾಭ ಪಡೆಯುತ್ತಿದ್ದಾರೆ ಎಂಬ ಅಂಶ ಅವರ ಪರಿಶ್ರಮಕ್ಕೆ ಸಂದ ಸೂಕ್ತ ಪ್ರತಿಫಲ ಎಂದು ಸುಲಭವಾಗಿ ತಿಳಿಯಬಹುದು. ಇವನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಈ ಯಶಸ್ವಿ ರೈತರ ಯಶೋಗಾಥೆಯನ್ನು ಓದಬೇಕು.

ಲೇಖಕರು: ಡಾ. ಮುಕುಂದ ಜೋಶಿ, ಡಾ. ಮಲ್ಲಾರೆಡ್ಡಿ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು, ಕೃಷಿ ಇಲಾಖೆ, ಬೆಂಗಳೂರು
ನಾಳೆಯಿಂದ ಸಾವಯವ ಕೃಷಿಪದ್ಧತಿಯಲ್ಲಿ ಯಶಸ್ಸು ಸಾಧಿಸಿದ ರೈತರ ಯಶೋಗಾಥೆ ಸರಣಿ

LEAVE A REPLY

Please enter your comment!
Please enter your name here