ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ ಸೇರಿ ರಾಜ್ಯದ ಹೆಚ್ಚಿನ ಅರಣ್ಯಗಳಲ್ಲಿ ಇಂದು ಅತ್ಯಂತ ವ್ಯಾಪಕವಾಗಿ, ವೇಗವಾಗಿ ಹರಡಿರುವ, ಹರಡುತ್ತಿರುವ ಅಪಾಯಕಾರಿ, ವಿದೇಶಿ ಮೂಲದ ಆಕ್ರಮಣಕಾರಿ (Invasive) ಕಳೆ ಸಸ್ಯ ಲಂಟಾನ. ಲಂಟಾನದಿಂದ ಕಾಡಿನ ಹುಲ್ಲುಗಾವಲು ನಾಶವಾಗಿ ಅಲ್ಲಿನ ಸಸ್ಯಹಾರಿಗಳಿಗೆ ಆಹಾರ ಸಮಸ್ಯೆ ಎದುರಾಗುತ್ತದೆ.
ಹಲವು ಅಪರೂಪದ, ವನ್ಯಜೀವಿಗಳಿಗೆ ಉಪಯುಕ್ತವಾಗಿರುವ ಸ್ಥಳೀಯ ಪ್ರಭೇದದ ಗಿಡಮೂಲಿಕೆಗಳ ನಾಶಕ್ಕೆ ಲಂಟಾನ ಕಾರಣವಾಗುತ್ತದೆ. ಇದರ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇದು ಕಾಡ್ಗಿಚ್ಚಿನ ಪ್ರಮಾಣವನ್ನು ವೃದ್ಧಿಸುತ್ತದೆ. ಲಂಟಾನ ಇರುವ ಕಡೆ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಬೆಂಕಿ ಹೆಚ್ಚು ತೀಕ್ಷ್ಣವಾಗಿ, ವೇಗವಾಗಿ ವ್ಯಾಪಿಸುತ್ತದೆ.
ದೂರದ ಮೆಕ್ಸಿಕೋದಿಂದ ಅಲಂಕಾರಿಕ ಗಿಡವಾಗಿ ಪರಿಚಯವಾದ ಲಂಟಾನ ಇಂದು ಇಂದು ಭಾರತದ ಕಾಡುಗಳಲ್ಲಿ ಅಕ್ಷರಶಃ ತನ್ನ ವಸಾಹತು ಸ್ಥಾಪಿಸಿದೆ. ಹಾಗಾಗಿ ಲಂಟಾನವನ್ನು ಕಡಿಮೆ ಮಾಡುವ ಹಿನ್ನಲೆಯಲ್ಲಿ ಅದರ ನೀಲವಾದ ಕಡ್ಡಿಗಳನ್ನು ಬಳಸಿಕೊಂಡು ವಿವಿಧ ಗೃಹಬಳಕೆ ವಸ್ತುಗಳನ್ನು ತಯಾರಿಸುವ ಕಾರ್ಯವನ್ನು ಬಂಡೀಪುರದ ಸುತ್ತಮುತ್ತಲಿನ ಗ್ರಾಮದ ಕೆಲವು ಗ್ರಾಮಗಳಲ್ಲಿ ಬಹಳ ದಿನಗಳಿಂದ ಮಾಡಲಾಗುತ್ತಿದೆ.
ನಾನು ಬಂಡೀಪುರದಲ್ಲಿ ಕೆಲಸ ಮಾಡುವಾಗ ಅಲ್ಲಿನ ಕಾಡಂಚಿನ ಗ್ರಾಮವಾದ ಲೊಕ್ಕೊರೆಯಲ್ಲಿನ ಈ ಲಂಟಾನದಿಂದ ಕರಕುಶಲ/ ಗೃಹಬಳಕೆಯ ವಸ್ತುಗಳ ತಯಾರಿಕಾ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ ಬಂದಿದ್ದೆ. ಬೆತ್ತದ ಕಡ್ಡಿಗಳಂತೆ ಇರುವ ಇವುಗಳ ಕಡ್ಡಿಗಳ ಗೃಹ ಬಳಕೆಯ ವಸ್ತುಗಳ ತಯಾರಿಕೆಗೆ ಅರಣ್ಯ ಇಲಾಖೆ ಇಲ್ಲಿನ ಕಾಡಂಚಿನ ಬುಡಕಟ್ಟು ಜನರಿಗೆ ಈಗ ತರಬೇತಿ ನೀಡಿ ಏಕಕಾಲಕ್ಕೆ ಕಾಡಿನ ಲಂಟಾನ ಸಮಸ್ಯೆ ನಿವಾರಣೆ ಮತ್ತು ಕಾಡಂಚಿನ ಗ್ರಾಮದ ಜನರಿಗೆ ಜೀವನೋಪಾಯ ವ್ಯವಸ್ಥೆ ರೂಪಿಸುವ ಒಂದು ಅತ್ಯುತ್ತಮ ಕೆಲಸ ಮಾಡುತ್ತಿದೆ.
ಜನ ಸಾಮಾನ್ಯರು ಈ ಲಂಟಾನದಿಂದ ತಯಾರಿಸಿದ ವಸ್ತುಗಳ ಬಳಕೆಯಿಂದಲೂ ಕೂಡ ಈಗ ಹೇಳಿದ ಎರಡು ಪರಿಣಾಮಗಳು ಈಡೇರುತ್ತವೆ. ಹಾಗಾಗಿ ಸಾಧ್ಯವಾದವರು, ಈ ವಸ್ತುಗಳ ಖರೀದಿ ಮಾಡಿ ಸಹಕಾರ ನೀಡಬಹುದು.ಇಲ್ಲಿನ ಲಂಟಾನ ವಸ್ತುಗಳ ಬಗೆಗಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.
ಜಡೆಯಪ್ಪ 9480907180