ಬೆಂಗಳೂರು ಕೃಷಿಮೇಳಕ್ಕೆ ಬಂದವರು ವಿಶ್ವವಿದ್ಯಾಲಯವೇ ಮುತುವರ್ಜಿ ವಹಿಸಿ ವ್ಯವಸ್ಥೆ ಮಾಡುವ ಸಾಂಪ್ರದಾಯಿಕ ಶೈಲಿಯ ಊಟ ಮಾಡದೇ ಹಿಂದಿರುಗಲಾರರು. ಬೆಂಗಳೂರಿನ ಪಾರಂಪಾರಿಕ ಶೈಲಿಯ ಆಹಾರವೇ ಅದಕ್ಕೆ ಕಾರಣ. ವಿದೇಶಿಯರು ಸಹ ಇಲ್ಲಿನ ಊಟದ ರುಚಿಗೆ ಮಾರು ಹೋಗಿದ್ದಾರೆ.
ಇಂದು ಕೃಷಿಮೇಳದ ಉದ್ಘಾಟನೆ. ಮೇಳವನ್ನು ನೋಡಿ, ಕೃಷಿಜ್ಞಾನ ಹೆಚ್ಚಿಸಿಕೊಳ್ಳಲು ನಾಡಿನ ಮೂಲೆಮೂಲೆಯಿಂದ ಕೃಷಿಕರು-ಆಸಕ್ತರು ಬಂದಿದ್ದರು. ಮಧ್ಯಾಹ್ನದ ವೇಳೆಗೆ ಅವರೇಕಾಳು ಸಾರಿನ ಘಮ ಎಲ್ಲೆಡೆ ಹರಡಿತು. ಆ ಹೊತ್ತಿಗೆ ಹೊಟ್ಟೆಯೂ ತಾಳ ಹಾಕತೊಡಗಿತು. ಊಟ ಬಡಿಸುವ ಪೆಂಡಾಲಿನ ಮುಂದೆ ಆಗಲೇ ಬಹು ಉದ್ದದ ಕ್ಯೂ. ಒಂದು ಊಟಕ್ಕೆ 50 ರೂ.


ಇದು ಮಿನಿಮಿಲ್ಸ್ ಅಲ್ಲ; ಪುಲ್ ಮಿಲ್ಸ್ !
ಬೆಂಗಳೂರಿನಲ್ಲಿ ಇವತ್ತಿನ ದಿನಗಳಲ್ಲಿ 50 ರೂಪಾಯಿಗೆ ಮಿನಿ ಮಿಲ್ಸ್ ಕೂಡ ಸಿಗಲಾರದೇನೊ. ಆದರೆ ಇಲ್ಲಿ ಅದೇ ಬೆಲೆಗೆ ಪುಲ್ ಮಿಲ್ಸ್ ಜೊತೆಗೆ ಬಹುಸವಿಯಾದ ಸಿಹಿತಿಂಡಿ. ಇಂದು ಸುಮಾರು 1 ಗಂಟೆಗೆ ಶುರುವಾದ ಊಟದ ಸರದಿಗಳು ನಿರಂತರವಾಗಿ ನಡೆದೇ ಇದ್ದವು. ವೃತ್ತಿಪರ ಪಾಕಪ್ರವೀಣರು, ಊಟ ಬಡಿಸುವವರಿಗೆ ಸಹಕಾರಿಯಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹಕಾರ ನೀಡಿದರು. ಊಟದ ಬೃಹತ್ ತಾಣದಲ್ಲಿ ಅಚ್ಚುಕಟ್ಟು ಎದ್ದು ಕಾಣುತ್ತಿತ್ತು.


ಇವತ್ತಿನ ಊಟದ ವಿಶೇಷ
ರಾಗಿಮುದ್ದೆ, ಅವರೇಕಾಳು, ಮೈಸೂರು ಬದನೆ, ಆಲೂ, ನುಗ್ಗೆಕಾಯಿ ಹಾಕಿದ ಸಾರು, ಮೊಟ್ಟೆ, ರಸಂ, ಮೊಸರನ್ನ, ಮೈಸೂರು ಪಾಕ್. ಪ್ರತಿಯೊಂದು ಬಹುರುಚಿಯಾಗಿತ್ತು. ಇವುಗಳನ್ನೆಲ್ಲ ಸವಿದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಯ ಅಧಿಕಾರಿಗಳು, ವಿಜ್ಞಾನಿಗಳು ಮಾಹಿತಿ ವಿಭಾಗದ ಮುಖ್ಯಸ್ಥ ಡಾ. ಶಿವರಾಮು ಕೂಡ ಹಾಜರಿದ್ದರು. ಇದಕ್ಕೂ ಮುನ್ನ ಕುಲಪತಿ, ಮಾಹಿತಿ ವಿಭಾಗದ ಮುಖ್ಯಸ್ಥರು ಊಟ ಮಾಡಿದ ಸಾರ್ವಜನಿಕರನ್ನು ಮಾತನಾಡಿಸಿ ಅವರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸಿದರು.


“ಅಗ್ರಿಕಲ್ಚರ್ ಇಂಡಿಯಾ” ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಾಮೀಣರು, ವಿಶೇಷವಾಗಿ ಬೆಂಗಳೂರು ನಗರದ ಸಾಕಷ್ಟು ಮಂದಿ ನಾಗರಿಕರು ಇದು ಹೆಸರಿಗಷ್ಟೇ ವಿಶೇಷವಾಗಿರದೇ ನಿಜವಾಗಿಯೂ ವಿಶೇಷವಾಗಿದೆ ಎಂದರು.

LEAVE A REPLY

Please enter your comment!
Please enter your name here