ಹಾರ್ನ್ ಬಿಲ್ ಗೂಡು ಹಾಗೂ ಹದಿನೇಳು ರಾಮಪತ್ರೆ ಸಸಿಗಳು!

0
ಲೇಖಕರು: ಶಿವಾನಂದ ಕಳವೆ

ನಮ್ಮ ಸೊಪ್ಪಿನ ಬೆಟ್ಟದ ನೇರಳೆ ಮರದ ಕೆಳಗಡೆ ಹದಿನೇಳು ರಾಮಪತ್ರೆ ಸಸಿಗಳು ಎರಡು ಅಡಿ ಜಾಗದಲ್ಲಿ ಈಗ ಸೊಂಪಾಗಿ ಬೆಳೆದಿವೆ. ಒಂದಕ್ಕೆ ಒಂದು ಮೈ ತಾಗಿಸಿಕೊಂಡು ಎರಡು ಮೂರು ಅಡಿ ಎತ್ತರ ಎದ್ದಿವೆ. ನಮ್ಮ ಕಾಡಿನ ಕಾಡು ಜಾಯಿಕಾಯಿ (ವೈಲ್ಡ್ ನಟ್ ಮೆಗ್) ಕುಲದ ಇವು ಈಗ ವಿನಾಶದ ಅಂಚಿನಲ್ಲಿದೆ. ಆದರೆ ಈ ಮರದಡಿ ಮರುಜನ್ಮ ಪಡೆದ ಕಥೆ ಸೋಜಿಗವಾಗಿದೆ.

ಸೊಪ್ಪಿನ ಬೆಟ್ಟದ ರಾಮಪತ್ರೆ ಸಸ್ಯ ಗುಂಪುಗಳ ಬಗ್ಗೆ ಒಂದು ವಿಶೇಷ ಹೇಳಬೇಕು. ಇಲ್ಲಿನ ನೇರಳೆ ಮರದ ಪೊಟರೆಯಲ್ಲಿ ಸುಮಾರು ಹತ್ತು ಹನ್ನೆರಡು ವರ್ಷ ನಿರಂತರವಾಗಿ ಬೂದು ಮಂಗಟ್ಟೆ ಹಕ್ಕಿ ಗೂಡು ಮಾಡಿತ್ತು. ಪ್ರತೀ ವರ್ಷ ಇವುಗಳ ಮರಿಗಳ ಲಾಲನೆ ಪಾಲನೆ ಗಮನಿಸುತ್ತಿದ್ದೆ. ಕೆಲವು ಚಿತ್ರ ಕೂಡಾ ದಾಖಲಿಸಿದೆ.

ಕಾಡಿನ ರಾಮಪತ್ರೆ ಕಾಯಿಗಳು ಮರಗಳ ಕೆಳಗೆ ಆಗಾಗ ಬೀಳುತ್ತಿದ್ದವು. ರಾಮ ಪತ್ರೆ ಕಾಯಿಯ ಕೆಂಪನೆಯ ಪತ್ರೆ . ಹಾರ್ನ್ ಬಿಲ್ ಹಕ್ಕಿಗಳ ಆಹಾರ,ಹೀಗಾಗಿ ಗೂಡಿಗೆ ತಂದಿದ್ದು ಕೆಲವು ಕೆಳಗಡೆ ಅಚಾನಕ್ ಬೀಳುತ್ತಿದ್ದವು. ನಮ್ಮ ಮನೆ ಸನಿಹದ ಕಾಡಿನ ರಾಮಪತ್ರೆ ಮರದಡಿ ಸಸಿ ಹುಟ್ಟಿದ್ದು ಕಡಿಮೆ, ಆದರೆ ಈ ನೇರಳೆ ಮರದಡಿ ಹಾರ್ನ್ ಬಿಲ್ ಗೂಡಿನ ಕೆಳಗಡೆ ಸಸಿ ಹುಟ್ಟುವುದು ನೋಡ್ತಾ ಇದ್ದೆ.

ಎರಡು ವರ್ಷಗಳ ಹಿಂದೆ ಜೋರಾದ ಗಾಳಿ ಪ್ರಹಾರಕ್ಕೆ ನೇರಳೆ ಮರ ಅರ್ಧಕ್ಕೆ ಮುರಿದು ಬಿತ್ತು.ಅಲ್ಲಿಗೆ ಹಾರ್ನ್ ಬಿಲ್ ಗೂಡು ನಾಶವಾಯಿತು. ಇವತ್ತು ಅದೇ ನೇರಳೆ ಕೆಳಗಡೆ ಬರೋಬ್ಬರಿ 17ಸಸಿ ಖುಷಿಯಲ್ಲಿ ಬೆಳೆಯುತ್ತಿವೆ. ವಿನಾಶದ ಅಂಚಿನಲ್ಲಿರುವ ರಾಮಪತ್ರೆ ಹಾಗೂ ನೇರಳೆ ಮರದ ಪೊಟರೆಯಲ್ಲಿ ಗೂಡು ಮಾಡಿದ್ದ ಮಂಗಟ್ಟೆ ಸಂಬಂಧಗಳನ್ನು ಸಸಿಗಳು ನೆನಪಿಸಿದವು.

ನೆಲದ ಪ್ರತೀ ಸಸ್ಯ, ಜೀವಿಗೂ ಇಂಥ ಕೊಡುಕೊಳ್ಳುವಿಕೆ ಸಂಬಂಧ ಇದ್ದೇ ಇರುತ್ತದೆ. ನಾವು ನಮ್ಮದೇ ವ್ಯಥೆ ಕಥೆಗಳಲ್ಲಿ ಇವನ್ನು ನೋಡುವುದು ಮರೆತಿದ್ದೇವೆ.

ನಿಸರ್ಗದ ನೆರೆಹೊರೆಯವರನ್ನು ಕಣ್ಣೆತ್ತಿ ನೋಡದ ನಮ್ಮ ಅವಸರದ ಓಟಕ್ಕೆ ನಿತ್ಯ ಅಪಘಾತ ನಡೀತಾ ಇದೆ. ಆದರೆ ವಿಚಿತ್ರ ಗೊತ್ತಾ? ಗಾಳಿಯ ರಭಸಕ್ಕೆ ನೇರಳೆ ಮರ ತುಂಡಾಗಿ ಬಿತ್ತು, ಆಲ್ಲಿಂದ ನೆಲದಲ್ಲಿ ಮೊಳೆತಿದ್ದ ರಾಮಪತ್ರೆ ಗಿಡಗಳಿಗೆ ಸೂರ್ಯನ ಕಿರಣಗಳು ಸಿಕ್ಕವು, ಅದು ಹೊಸ ಪ್ರಚೋದನೆ ದೊರೆತು ಎದ್ದು ಬೆಳೆಯಲು ಸಾಧ್ಯವಾಯ್ತು. ಬಿದ್ದೋರ್ ಪಕ್ಕ ತಕ್ಷಣ ಎದ್ದು ನಿಲ್ಲೋದನ್ನು ನಿಸರ್ಗವೇ ಚನ್ನಾಗಿ ಹೇಳುತ್ತೆ!

ನಾವು ಕೈ ಕಟ್ಟಿ ಕಣ್ತೆರೆದು ಸುಮ್ಮನೇ ಕುಳಿತರೆ ಕಾಡು ಪಾಠ ಮಾಡ್ತಾ ಇರುತ್ತೆ ನೋಡಿ.

ಚಿತ್ರಗಳು: ಶಿವಾನಂದ ಕಳವೆ

LEAVE A REPLY

Please enter your comment!
Please enter your name here