ಚಿನ್ನಸ್ವಾಮಿ ವಡ್ಡಗೆರೆ, ಪತ್ರಕರ್ತರು, ಕೃಷಿಕರು

ಪತ್ರಕರ್ತ, ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ಅವರು ದಾರ್ಶನಿಕ, ಸಹಜ ಕೃಷಿಕ ಜಾನ್ ಜಾನ್ದಾಯ್ ಅವರನ್ನು ಥೈಲ್ಯಾಂಡಿನಲ್ಲಿ ಸಂದರ್ಶಿಸಿದ್ದರು. ತಂಪಾದ ಮಣ್ಣಿನ ಮನೆಗಳನ್ನು ನಿರ್ಮಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ `ಪನ್ ಪನ್ ಸೆಂಟರ್’ ನಲ್ಲಿ ಭೇಟಿಮಾಡಿ, ಇಡಿ ದಿನ ಅವರೊಂದಿಗಿದ್ದು ಅವರ ಜೀವನಾನುಭವಗಳನ್ನು ಕೇಳಿಸಿಕೊಂಡಿದ್ದರು. ಸಂವಾದ ನಡೆಸಿದ್ದರು. ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕೃಷಿ ಪ್ರವಾಸಗಳು ಹಲವು ಪಾಠ ಕಲಿಸುತ್ತವೆ. ಈ ಬಾರಿ ಹನ್ನೆರಡು ಮಂದಿ ರೈತ ತಂಡದೊಂದಿಗೆ ನಾನು ಹೋಗಿ ಬಂದದ್ದು `ಪ್ಯಾರಡೈಸ್ ಆಫ್ ಅಥರ್ ‘ ಎಂದೇ ಕರೆಯುವ ಥೈಲ್ಯಾಂಡ್ ದೇಶಕ್ಕೆ. ಹತ್ತು ದಿನಗಳ ಈ ಅರ್ಥಪೂರ್ಣ ಪ್ರವಾಸಕ್ಕೆ ಕಾರಣವಾದವರು `ಸಹಜ ಸಮೃದ್ಧ’ ಸಾವಯವ ಕೃಷಿ ಬಳಗದ ಕೃಷ್ಣಪ್ರಸಾದ್ ಮತ್ತು ಗ್ರೀನ್ ನೆಟ್ ಆರ್ಗ್ಯಾನಿಕ್ ಸೆಂಟರ್ ಮೈಕೆಲ್. ಬೆಳವಲ ಫೌಂಡೇಷನ್ ಸಂಸ್ಥಾಪಕ ರಾಮಕೃಷ್ಣಪ್ಪ.

`ಪನ್ ಪನ್ ಸೆಂಟರ್’ ಹೊಸ ತಲೆಮಾರಿನ ಯುವಕರಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ಇದು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ ಸುಸ್ಥಿ-ಸ್ವಾವಲಂಬನೆ ಕೃಷಿ ಕಲಿಸುವ ಕೇಂದ್ರ. 2003ರಲ್ಲಿ ಜಾನ್ ಜಾನ್ದಾಯ್ ಮತ್ತು ಪೆಗ್ಗಿ ರೀಂಟ್ಸ್ ಅವರಿಂದ ಸ್ಥಾಪನೆಯಾಗಿದೆ. `ಲೈಫ್ ಇಸ್ ಈಜಿ ; ವೈ ಡು ವೀ ಮೇಕ್ ಇಟ್ ಸೊ ಹಾರ್ಡ್”‘ ಎನ್ನುವ ಸರಳ ವಿಚಾರಧಾರೆಗಳಿಂದ ಗಮನ ಸೆಳೆದಿದೆ.

“ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಒಂದು ಸಾಧನವಾಗಿ ಹಣ ಬಳಸಿ.  ಆದರೆ ಅದೊಂದೆ ನಿಮಗೆ ಆರೋಗ್ಯ,ನೆಮ್ಮದಿ,ರಕ್ಷಣೆ ತಂದು ಕೊಡಲಾರದು. ಮರ ಗಿಡ ಪ್ರಕೃತಿಯಿಂದ ಮಾತ್ರ ರಕ್ಷಣೆ,ನೆಮ್ಮದಿ ನಿರೀಕ್ಷೆ ಮಾಡಬಹುದು. ಪ್ರಾಕೃತಿಕ ಸಂಪನ್ಮೂಲಗಳು ನಿಮಗೆ ಹೆಚ್ಚು ರಕ್ಷಣೆ ನೀಡಬಲ್ಲವು. ನೀವು ಸಂಪಾದಿಸುವ ಹಣವನ್ನು ಹೆಚ್ಚಾಗಿ ಜ್ಞಾನಾರ್ಜನೆಗೆ ಬಳಸಿ. ಸದಾ ಅದರ ಹಿಂದೆ ಓಡಬೇಡಿ. ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸಿ”

===================

“ಹೆಚ್ಚು ಹಣವಿದ್ದರೆ ಬ್ಯಾಂಕ್ನಲ್ಲಿ ಠೇವಣಿ ಇಡುವ ಬದಲು ಒಂದೆರಡು ಎಕರೆ ಜಮೀನು ಖರೀದಿಸಿ. ವಿಷಮುಕ್ತ ಆಹಾರ ಬೆಳೆಯಿರಿ.ಮರಗಿಡಗಳನ್ನು ನೆಡಿ. ಪ್ರಕೃತಿಯೊಂದಿಗೆ ಸರಳವಾಗಿ ಬದುಕಿ. ನೀವು ನೆಟ್ಟ ಸಸಿಗಳೆ ಮುಂದೆ ಹೆಮ್ಮರವಾಗಿ ಬೆಳೆದು ಬ್ಯಾಂಕ್ ಬಡ್ಡಿದರಕ್ಕಿಂತಲ್ಲೂ ಹೆಚ್ಚಿನ ಆದಾಯ ತಂದುಕೊಡುತ್ತವೆ. ಪರಿಸರಕ್ಕೂ ಕೊಡುಗೆ ನೀಡಿದಂತಾಗುತ್ತದೆ” ಎಂದು ಹೇಳುವ ಪನ್ ಪನ್ ಸೆಂಟರ್ನ ಜಾನ್ ಜಾನ್ದಾಯ್ ಮಾತುಗಳು ಗಾಂಧಿ ವಿಚಾರಧಾರೆಯಂತೆ ಕೇಳಿಸುತ್ತವೆ. ಈಶಾನ್ಯ ಥೈಲ್ಯಾಂಡಿನ ಚಾಂಗ್ ಮಾಯಿ ಪ್ರಾಂತ್ಯದಲ್ಲಿರುವ ಮೆಜೋ ಎಂಬ ಪುಟ್ಟಹಳ್ಳಿಯಲ್ಲಿ ಸಹಜ ಕೃಷಿಕರಾಗಿರುವ ಇವರು ತಮ್ಮ ಒತ್ತಡ ರಹಿತ, ಸುಸ್ಥಿರ ಬದುಕಿನ ಜೀವನಶೈಲಿಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಇವರನ್ನು ಜೋ ಎಂದೂ ಕರೆಯಲಾಗುತ್ತದೆ.

===================

ಥೈಲ್ಯಾಂಡ್ ದೇಶದ ಸಾವಯವ ರೈತ ಮಾರುಕಟ್ಟೆಗಳು,ಮೌಲ್ಯವರ್ಧನೆ,ಸುಸ್ಥಿರ ವಾಹಿವಾಟನ್ನು ಕುರಿತು ಅಧ್ಯಯನ ಮಾಡಲು ಹತ್ತು ದಿನಗಳ ಕಾಲ ನಾವು ಚಾಂಗ್ಮಾಯಿ,ಬ್ಯಾಂಕಾಕ್, ಪಟ್ಟಾಯ ಮತ್ತು ಮೆಜೋ, ಮೇಥಾ ಎಂಬ ಹಳ್ಳಿಗಳಲ್ಲಿ ರೈತರ ತಾಕುಗಳು, ಮಾರುಕಟ್ಟೆಗಳಲ್ಲಿ ಸುತ್ತಾಡಿ ಕಲಿತ ಪಾಠಗಳು ಹಲವು.

ಅಲ್ಲಿನ ರೈತರ ಮನೆಗಳಲ್ಲಿ ಉಳಿದುಕೊಂಡಿದ್ದು, ಅವರ ತೋಟಗಳಲ್ಲಿ ಸುತ್ತಾಡಿದ್ದು, ಸಾವಯವ ಕೃಷಿಯ ಬಗ್ಗೆ ಅವರ ಬದ್ಧತೆ, ದೇಸಿ ಬೀಜ ಸಂರಕ್ಷಣೆಯಲ್ಲಿ ಅವರ ಕಾಳಜಿ, ಜೀವನದ ಬಗ್ಗೆ ಅವರ ಧೋರಣೆ ಪ್ರತಿಯೊಂದು ಮಹಾತ್ಮ ಗಾಂಧಿ ಪ್ರಣೀತ ಅರ್ಥಶಾಸ್ತ್ರದಿಂದ ಪ್ರೇರಣೆ ಪಡೆದಂತೆ ಇವೆ. ಸರಳತೆಯಲ್ಲಿ ಸೌಂದರ್ಯ ಕಂಡುಕೊಂಡ ಅವರ ಜೀವನ ದೃಷ್ಠಿ ನೋಡಿ ಗಾಂಧಿ ನಾಡಿನಲ್ಲಿ ಹುಟ್ಟಿದ ನಾವೇ ಕ್ಷಣ ನಾಚುವಂತಾಯಿತು.

ನಾನು, ಕಳೆದ ಒಂದು ವರ್ಷದಿಂದ ಕೃಷಿಯ ವಿಭಿನ್ನ ಸಾಧ್ಯತೆಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದೇನೆ. ಜಾನ್ ಜಾನ್ದಾಯ್ ಅವರನ್ನು ಭೇಟಿಮಾಡಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ `ಕೃಷಿಗಿಂತ ಶ್ರೇಷ್ಠವಾದ ವೃತ್ತಿ ಬೇರೊಂದಿಲ್ಲ. ಸ್ವಾವಲಂಬನೆ,ಸ್ವಾತಂತ್ರ,ಆರೋಗ್ಯ, ನೆಮ್ಮದಿಯ ಕನಸು ಕಾಣುವವರಿಗೆ, ಸೃಜನಶೀಲತೆಗೆ ಸಾಣಿ ಹಿಡಿಯಲು ಬಯಸುವವರಿಗೆ ಕೃಷಿ ಬಿಟ್ಟರೆ ಬೇರೆ ಯಾವ ವೃತ್ತಿಯಿಂದಲ್ಲೂ ಸಾಧ್ಯವಿಲ್ಲ’ ಎನಿಸಿತು.

    ======================

ಪನ್ ಪನ್ ಸೆಂಟರ್ : ಉಣಲು ವಿಷಮುಕ್ತ ಆಹಾರ, ವಾಸಕ್ಕೆ ತಂಪಾದ ಮಣ್ಣಿನ ಮನೆ,ಸುತ್ತಲ್ಲೂ ಹಸಿರು ತುಂಬಿದ ಮರಗಿಡಗಳು,ತೋಟದ ಸಣ್ಣ ಸಣ್ಣ ತಾಕುಗಳಲ್ಲಿ ಬೆಳೆದ ವಿವಿಧ ಬಗೆಯ ಸಾವಯವ ಸೊಪ್ಪು ತರಕಾರಿಗಳು. ದಿನದಲ್ಲಿ ಒಂದೆರಡು ಗಂಟೆ ಮಾತ್ರ ಕೃಷಿ ಕೆಲಸಕ್ಕೆ ಮೀಸಲು. ಉಳಿದ ಸಮಯದಲ್ಲಿ ದೇಸಿ ಬೀಜೋತ್ಪೋದಾನೆ, ಸಂಗೀತ ಆಸ್ವಾದನೆ, ಪುಸ್ತಕ ಓದು, ಕರಕುಶಲ ಕೆಲಸ, ಫೋಟೊಗ್ರಫಿ. ಹೀಗೆ ತಮಗಿಷ್ಟವಾದ ಸೃಜನಶೀಲ ಚಟುವಟಿಕೆಗಳಲ್ಲಿ ನಿರತವಾಗಿರುವ ಜನ. ಒಟ್ಟಿನಲ್ಲಿ ಅವರದು ಒತ್ತಡ ರಹಿತ,ಸ್ವಾವಲಂಬನೆಯ ಸ್ವಾತಂತ್ರ ಬದುಕು. ಇಂತಹ ಸುಂದರ ಬದುಕು ಯಾರಿಗೆ ತಾನೇ ಬೇಡ ಹೇಳಿ. ಇಂತಹ ಬದಕನ್ನು ತಮ್ಮದಾಗಿಸಿಕೊಳ್ಳಲು ಎಲ್ಲರಿಗೂ ಆಸೆ ಇರುತ್ತದೆ.

    ======================

ಭಾರತ ಸೇರಿದಂತೆ ಅಮೇರಿಕಾ,ಜಪಾನ್,ಚೀನಾ,ರಷ್ಯಾ ಮುಂತಾದ ದೇಶಗಳ ಹೊಸ ತಲೆಮಾರಿನ ಯುವಕರು ಇಂತಹ ಒತ್ತಡರಹಿತ ಸುಂದರ ಬದುಕಿನ ಕನಸು ಹೊತ್ತು ಕೃಷಿಯತ್ತ ಮುಖಮಾಡುತ್ತಿದ್ದಾರೆ. ಇಂತಹ ಹೊಸ ತಲೆಮಾರಿನ ಯುವಕರ ಆದರ್ಶ, ಸ್ಫೂರ್ತಿ ಜೋ.  ಇವರು ತಮ್ಮ ಪತ್ನಿ ಪೆಗ್ಗಿ ರೀಂಟ್ಸ್ ಮತ್ತು ಮಕ್ಕಳೊಂದಿಗೆ  ಬೆಟ್ಟಕಣಿವೆಗಳ ನಡುವೆ ಪ್ರಕೃತಿಯ ಮಡಿಲಲ್ಲಿ ಸಾವಯವ ಕೃಷಿ, ಮಣ್ಣಿನ ಮನೆಗಳ ನಿರ್ಮಾಣ, ದೇಸಿ ಬೀಜೋತ್ಪಾದನೆ ಸೇರಿದಂತೆ ಹಲವು ಸದಭಿರುಚಿಯ ಸೃಜನಶೀಲ ಚಟುವಟಿಕೆಗಳಲ್ಲಿ ಪನ್ ಪನ್ ಸೆಂಟರ್ ಎಂಬ ಕೃಷಿ ಪ್ರಯೋಗಶಾಲೆ ಮೂಲಕ ತೊಡಗಿಸಿಕೊಂಡಿದ್ದಾರೆ.

    ======================

ಇವರನ್ನು ಕಂಡಾಗ ನನಗೆ ಎಚ್ಡಿ ಕೋಟೆಯ ಸಾವಯವ ಕೃಷಿಕ ವಿವೇಕ್ ಕಾರ್ಯಪ್ಪ, ಜೂಲಿ ಕಾರ್ಯಪ್ಪ ದಂಪತಿ ನೆನಪಾದರು. ಶಿವನಂಜಯ್ಯ ಬಾಳೆಕಾಯಿ, ಹೊಸಹಳ್ಳಿಯ ಕುಳ್ಳೇಗೌಡ, ದೇವಗಳ್ಳಿಯ ಶಂಕರೇಗೌಡ ಎಲ್ಲರೂ ಕಣ್ಣಮುಂದೆ ಮೆರವಣಿಗೆ ಹೊರಟರು. ನಮ್ಮವರೆಲ್ಲ ವ್ಯಯಕ್ತಿಕವಾಗಿ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿ ಸರಳವಾಗಿ ಬದುಕುತ್ತಿದ್ದರೆ ಜೋ ಉದಾತ್ತ ಬದುಕೊಂದನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸದಲ್ಲಿ ನಿರತನಾಗಿರುವ ಯೋಗಿಯಂತೆ ಕಾಣುತ್ತಾರೆ. 

    ======================

ಭ್ರಮೆಯ ಬೆನ್ನೇರಿ : ಜೋ ಮೂಲತಃ ಕೃಷಿ ಕುಟುಂಬದಿಂದಲೇ ಬಂದವರು. ಹಿರಿಯರು ಮನೆಗೆ ಬೇಕಾದ ವೈವಿಧ್ಯಮಯ ಆಹಾರವನ್ನು ಬೆಳೆಯುತ್ತಿದ್ದರು. ಬೀಜ, ಗೊಬ್ಬರದಲ್ಲಿ ಸ್ವಾವಲಂಭಿಗಳಾಗಿದ್ದರು. ಹಳ್ಳಿಗಳಿಗೆ ಟಿವಿಗಳು ಬಂದ ಮೇಲೆ “ರೈತರನ್ನು ನೀನು ಬಡವ. ನಿನ್ನ ಬಳಿ ಆಸೆಗಳನ್ನು ಪೂರೈಸಿಕೊಳ್ಳುವಷ್ಟು ಹಣ ಇಲ್ಲ. ನಗರಗಳಿಗೆ ಹೋಗಿ ದುಡಿದು ಹಣ ಸಂಪಾದಿಸಿ ಶ್ರೀಮಂತನಾಗು. ಆಸೆಗಳನ್ನು ತೀರಿಸಿಕೊ’ ಎಂದು ಹೇಳತೊಡಗಿದವು.

ಟಿವಿ ಮಾಧ್ಯಮಗಳು ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದು ನಂಬಿದ ಜೋ ಹಳ್ಳಿಬಿಟ್ಟು ಬ್ಯಾಂಕಾಕ್ ನಗರಕ್ಕೆ ಹೋಗಿ,ವಿದ್ಯಾಭ್ಯಾಸ ಮಾಡಿ ಖಾಸಗಿ ಕಂಪನಿ ಸೇರಿ ಏಳು ವರ್ಷ ದುಡಿದರು. ಎಷ್ಟೇ ಹಣ ಸಂಪಾದಿಸಿದರು ನೆಮ್ಮದಿ ಮಾತ್ರ ಸಿಗಲಿಲ್ಲ. ಮಾಧ್ಯಮಗಳು ಹೇಳುತ್ತಿರುವುದು ಭ್ರಮೆ,ಸುಳ್ಳುಗಳ ಕಂತೆ ಎನ್ನುವುದು ಗೊತ್ತಾಯಿತು. ನಗರದ್ದು ಒತ್ತಡದ ಬದುಕು. ಮಾನವೀಯತೆ,ಕರುಣೆಗಳಿಗೆ ಅಲ್ಲಿ ಜಾಗವಿಲ್ಲ. ಪರಸ್ಪರ ಒಬ್ಬರನ್ನೊಬ್ಬರು ನಂಬಲಾಗದ ಸ್ಥಿತಿ. ತಿನ್ನುವ ಆಹಾರ ಕೂಡ ವಿಷ. ಸ್ವಾತಂತ್ರ್ಯವಿಲ್ಲದ ಸದಾ ಒತ್ತಡದಲ್ಲೇ ಬೇರೆಯವರ ಆಸೆಪೂರೈಸಲು ಗುಲಾಮರಾಗಿ ದುಡಿಯಬೇಕಾದ ಪರಾವಲಂಭಿ ಬದುಕು. ಇದರಿಂದ ಪಾರಾಗಿ ಸ್ವಾಂತಂತ್ರವಾಗಿ ಜೀವಿಸಲು ನಿರ್ಧರಿಸಿದ ಜೋ ಮರಳಿ ಹಳ್ಳಿಗೆ ಬಂದರು.

ಇಂಥ ಒಂದು ನಿರ್ಧಾರ ಜೋ ಅವರನ್ನು ಹೊಸ ತಲೆಮಾರಿನ ಯುವಕರ ರೋಲ್ ಮಾಡೆಲ್ ಆಗಿಸಿದೆ. ಪ್ರಪಂಚದ ವಿವಿಧ ದೇಶಗಳ ಜನ ಈಗ ಜೋ ಅವರ ವಿಚಾರಧಾರೆಗಳನ್ನು ಕೇಳಲು,ಸುಸ್ಥಿರ ಬದುಕಿನ ಬಗ್ಗೆ ತರಬೇತಿ ಪಡೆಯಲು ಥೈಲ್ಯಾಂಡ್ ದೇಶದ ಮೆಜೋ ಎಂಬ ಪುಟ್ಟ ಹಳ್ಳಿಯಲ್ಲಿರುವ `ಪನ್ ಪನ್ ಸೆಂಟರ್’ ಅನ್ನು ಗೂಗಲ್ನಲ್ಲಿ ಹುಡುಕಿ ಹೋಗುತ್ತಾರೆ.

=========================

1997 ರಲ್ಲಿ ಕೃಷಿಕನಾಗಲು ನಿರ್ಧರಿಸಿ ಮೆಜೋಹಳ್ಳಿಗೆ ಜೋ ಕಾಲಿಟ್ಟಾಗ ಅದೊಂದು ಮರಗಿಡಗಳಿಲ್ಲದ ಬೆಂಗಾಡು ಪ್ರದೇಶ. “ಸಮಾಜ ಹೇಳಿದಂತೆ ನಾನು ಕೇಳಬೇಕಿಲ್ಲ. ನನ್ನ ಇಚ್ಛೆ ಬಂದಂತೆ ಬದುಕುವ ಸ್ವಾತಂತ್ರ ನನಗಿದೆ. ಯಾವುದು ಬೇಕು,ಯಾವುದು ಬೇಡ ಎನ್ನುವ ಆಯ್ಕೆಯ ಸ್ವಾತಂತ್ರ್ಯ ನನ್ನದೇ ಆಗಿರಬೇಕು” ಎಂಬ ನಿರ್ಧಾರದೊಂದಿಗೆ ಹಳ್ಳಿಗೆ ಮರಳಿದರು.

========================

 ಜೋ ಕೃಷಿ ಆರಂಭಿಸಿದಾಗ ಅಲ್ಲಿನ ಜನ ಅವರನ್ನು ಅರೆಹುಚ್ಚ ಎಂದರು. ಮೊದಲ ದಿನ ತಮ್ಮ ಕನಸಿನ ಜಮೀನಿನಲ್ಲಿ ಒಬ್ಬರೇ ಇಡೀ ರಾತ್ರಿ ಕಳೆದರು. ಎರಡನೇ ದಿನ ಆರ್ಕಿಟೆಕ್ಟ್ ಒಬ್ಬರು ಆರು ತಿಂಗಳು ನಿನ್ನ ಜೊತೆ ನಾನೂ ಕೆಲಸಮಾಡುತ್ತೇನೆ ಎಂದು ಜೊತೆಯಾದರು. ಹಾಗೆ ಆರು ತಿಂಗಳು ಇರಲು ಬಂದ ಆರ್ಕಿಟೆಕ್ಟ್ ಇಂದಿಗೂ ಜೋ ಅವರೊಂದಿಗೆ ಪನ್ ಪನ್ ಸೆಂಟರ್ನ ಒಬ್ಬ ಸದಸ್ಯನಾಗಿ ಇದ್ದಾರೆ.

    ======================

ಈಗ ಅಲ್ಲಿ 60 ಕುಟುಂಬಗಳು 20 ಎಕರೆಯಷ್ಟು ವಿಶಾಲವಾದ ಜಮೀನಿನಲ್ಲಿ ಸಹಕಾರಿ ತತ್ವದಡಿ ಸಮುದಾಯ  ಆಧರಿತ ಕೃಷಿ ಮಾಡುತ್ತಾ ಆನಂದವಾಗಿದ್ದಾರೆ. ಅರವತ್ತು ಕುಟುಂಬಗಳಿಗೂ ಒಂದೇ ಅಡುಗೆ ಮನೆ. ಸರ್ವರಿಗೂ ಸಮಬಾಳು, ಸಮಪಾಲು. ಪ್ರತಿನಿತ್ಯ ಒಂದೆರಡು ಗಂಟೆಗಳ ಕಾಲ ಕೃಷಿ ಕೆಲಸಮಾಡುವ ಅವರು ವಿರಾಮ ಕಾಲವನ್ನು ತಮ್ಮಿಚ್ಛೆಯಂತೆ ಕಳೆಯುತ್ತಾರೆ.

    ======================

ಸಹಜ ಕೃಷಿ, ದೇಸಿ ಬೀಜೋತ್ಪಾದನೆ,ಮಣ್ಣಿನ ಮನೆಗಳ ನಿರ್ಮಾಣ ಕಲೆ ಕಲಿಸುವ ತರಬೇತಿ ಶಿಬಿರಗಳು 2002 ರಿಂದ ನಡೆಯುತ್ತಿವೆ. 2003 ರಲ್ಲಿ ಪನ್ ಪನ್ ಸೆಂಟರ್ ಆರಂಭಿಸಲಾಗಿದೆ. ತಿಂಗಳಿಗೆ ಪನ್ ಪನ್ ಸೆಂಟರ್ನಲ್ಲಿ ಎರಡು ತರಬೇತಿ ಶಿಬಿರಗಳು ನಡೆಯುತ್ತವೆ. ಕನಿಷ್ಠ 60 ಮಂದಿ ಭಾಗವಹಿಸಿ ಸುಸ್ಥಿರ ಸ್ವಾವಲಂಬನೆಯ ಖುಷಿಯ ಕೃಷಿ ಸಂಸ್ಕೃತಿ ಕಲಿಯುತ್ತಾರೆ.

ಮಾರುಕಟ್ಟೆ ಸೃಷ್ಠಿ : ಭಾರತ ದೇಶದಂತೆ ರೈತರು ಬೆಳೆದ ಉತ್ಪನ್ನಗಳಿಗೆ ಥೈಲ್ಯಾಂಡ್ನಲ್ಲೂ ಮಾರುಕಟ್ಟೆಯ ಸಮಸ್ಯೆ ಇದ್ದೇ ಇದೆ. ಅದಕ್ಕೆ ಅವರು ಫಾರ್ಮರ್ ಮಾರ್ಕೇಟ್ ಎಂಬ ಸಮುದಾಯ ಆಧರಿತ ಸಣ್ಣ ಸಣ್ಣ ಸಾವಯವ ಮಾರುಕಟ್ಟೆಗಳನ್ನು ನಡೆಸುವ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಪನ್ ಪನ್ ಸೆಂಟರ್ ವತಿಯಿಂದ ಕಂಪನಿಯೊಂದನ್ನು ಶುರುಮಾಡಲಾಗಿದೆ. ರೈತರು, ಗ್ರಾಹಕರು, ಮಾರಾಟಗಾರರು,ಮೌಲ್ಯವರ್ಧನೆ ಮಾಡುವ ಕೈಗಾರಿಕೋದ್ಯಮಿಗಳು ಈ ಕಂಪನಿಗೆ ಷೇರುದಾರರು. ಸಹಕಾರ ತತ್ವದಡಿ ಕೆಲಸ ನಿರ್ವಹಿಸುವ ಈ ಕಂಪನಿ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುತ್ತದೆ. ಸೆಂಟರ್ನಿಂದ ಚಾಂಗ್ಮಾಯಿ ನಗರದಲ್ಲಿ ಪನ್ ಪನ್ ಆರ್ಗ್ಯಾನಿಕ್  ರೆಸ್ಟೋರೆಂಟ್  ಕೂಡ ಇದೆ.

                                 ======================

ಇಲ್ಲಿನ ರೈತರು ಮೊದಲು ತಮಗೆ ಬೇಕಾದ ವಿಷಮುಕ್ತ ಆಹಾರವನ್ನು ಬೆಳೆದುಕೊಳ್ಳಲು, ದೇಸಿ ಬೀಜೋತ್ಪಾದನೆ ಮಾಡಲು ಆದ್ಯತೆ ನೀಡುತ್ತಾರೆ. ಹೆಚ್ಚಾದ ಉತ್ಪನ್ನವನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಇರುವ ಭೂಮಿಯನ್ನು ವಿಭಾಗ ಮಾಡಿಕೊಂಡು ವಾರ್ಷಿಕವಾಗಿ ಹಣ ತರುವ ತೋಟಗಾರಿಕಾ ಹಣ್ಣಿನ ಬೆಳೆಗಳನ್ನು ಬೆಳೆಯಲು, ಅರಣ್ಯಧಾರಿತ ಬೇಸಾಯ ಮಾಡಲು ಮೀಸಲಿಟ್ಟಿದ್ದಾರೆ. ಕಡಿಮೆ ಪ್ರದೇಶದಲ್ಲಿ ವೈವಿಧ್ಯಮಯ ವಿವಿಧ ತರಕಾರಿ ಬೆಳೆದು ಪ್ರತಿವಾರ ಆದಾಯ ಬರುವಂತೆ ಬೆಳೆ ಪದ್ಧತಿ ರೂಢಿಸಿಕೊಂಡಿದ್ದಾರೆ.

                                    ======================

ಪನ್ ಪನ್ ಸೆಂಟರ್ನಲ್ಲಿ ನಡೆಯುವ ತರಬೇತಿ ಶಿಬಿರಗಳಲ್ಲಿ ರೈತರಷ್ಟೇ ಅಲ್ಲದೆ ಬ್ಯಾಂಕಾಕ್,ಚಾಂಗ್ಮಾಯಿ ನಗರದ ಶ್ರೀಮಂತ ವರ್ಗದ ಗ್ರಾಹಕರು ಭಾಗವಹಿಸಿ ತಾವು ಸೇವಿಸುವ ಆಹಾರದ ಗುಣಮಟ್ಟದ ಆಹಾರದ ಉತ್ಪಾದನೆ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರೂ ಕಂಪನಿಯ ಷೇರುದಾರರಾಗಿದ್ದಾರೆ.

    ======================

ಮಣ್ಣಿನ ಮನೆಗಳ ನಿರ್ಮಾಣ : ಈಶಾನ್ಯ ಥೈಲ್ಯಾಂಡ್ನಲ್ಲಿ ಮೊದಲ ಬಾರಿಗೆ ಸರಳ,ಸುಲಭ ಮತ್ತು ಕಡಿಮೆ ವೆಚ್ಚದ ಆಕರ್ಷಕ ಮಣ್ಣಿನ ಮನೆಗಳ ನಿರ್ಮಾಣವನ್ನು ಜೋ ಆರಂಭಿಸಿದ್ದಾರೆ. ಅವರೀಗ ಮಣ್ಣಿನ ಮನೆಗಳ ಬಿಲ್ಡರ್ ಎಂದೇ ಪ್ರಖ್ಯಾತರಾಗಿದ್ದಾರೆ. ಬಿಸಿಲಿನಲ್ಲಿ ತಂಪಾಗಿರುವ,ಚಳಿಗಾಲದಲ್ಲಿ ಬೆಚ್ಚಾಗಿಡುವ ಆಕರ್ಷಕ ಮಣ್ಣಿನ ಮನೆಗಳು ಅಲ್ಲಿ ಜನಪ್ರಿಯವಾಗಿದೆ. ಥೈಲ್ಯಾಂಡಿನ ಹೊಸ ತಲೆಮಾರಿನ ಐಟಿಬಿಟಿ ಯುವಕರು, ಯುವತಿಯರು ಹೆಚ್ಚಾಗಿ ಜೋ ಅವರ ಚಿಂತನೆಗಳಿಗೆ ಮಾರುಹೋಗಿ ಮರಳಿ ಹಳ್ಳಿಗೆ ಬಂದು ಕೃಷಿಕರಾಗುತ್ತಿರುವುದು ಆ ದೇಶದಲ್ಲಿ ಸಂಚಲನ ಉಂಟುಮಾಡಿದೆ. ಒತ್ತಡರಹಿತ. ಆರೋಗ್ಯಕರ ಬದುಕಿಗೆ ಕೃಷಿ ಶ್ರೇಷ್ಠ ವೃತ್ತಿ ಎಂಬ ಮನೋಭಾವ ಬೆಳೆಯುತ್ತಿದೆ.ಅದೊಂದು ಚಳವಳಿಯಾಗಿ ರೂಪುಗೊಳ್ಳುತ್ತಿದೆ.

    ======================

1 COMMENT

  1. ತುಂಬಾ ಉತ್ತಮ ಮಾಹಿತಿ ನೀಡಿದ್ದು ಉಪಯುಕ್ತವಾಗದೆ

LEAVE A REPLY

Please enter your comment!
Please enter your name here