ದೇಶದಲ್ಲಿ ನೈಸರ್ಗಿಕ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸಲು ನೇರ ನಗದು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ನೈಸರ್ಗಿಕ ಕೃಷಿಯ ಆರಂಭಿಕ 1-2 ವರ್ಷಗಳಲ್ಲಿ ಕಡಿಮೆ ಉತ್ಪಾದಕತೆಯಿಂದ ಆಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಮೊತ್ತವನ್ನು ವರ್ಗಾಯಿಸುವ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನೈಸರ್ಗಿಕ ಕೃಷಿಯ ಕುರಿತು ಪ್ರಾದೇಶಿಕ ಸಲಹಾ ಕಾರ್ಯಕ್ರಮದಲ್ಲಿ ಚೌಹಾಣ್ ಭಾಗವಹಿಸಿ ಮಾತನಾಡಿದರು. ನೈಸರ್ಗಿಕ ಕೃಷಿಗೂ ಮೊದಲಿನ ಮಣ್ಣಿನ ಗುಣಮಟ್ಟದಿಂದಾಗಿ ಮೊದಲ 1-2 ವರ್ಷಗಳಲ್ಲಿ ಉತ್ಪಾದಕತೆ ಕಡಿಮೆಯಾಗಬಹುದು. ಇದು ರೈತರಿಗೆ ಹೊರೆಯಾಗುತ್ತದೆ. ಕೇಂದ್ರ ನೀಡುವ ಸಹಾಯಧನ ನಷ್ಟವನ್ನು ಸರಿದೂಗಿಸುತ್ತದೆ. ಮೂರನೇ ವರ್ಷದಿಂದ ಇಳುವರಿ ಸುಧಾರಿಸುತ್ತದೆ” ಎಂದು ಕೇಂದ್ರ ಸಚಿವ ಚೌಹಾಣ್ ಹೇಳಿದ್ದಾರೆ.
“ನೈಸರ್ಗಿಕ ಕೃಷಿಯ ಕುರಿತ ಎಲ್ಲ ಸಂಬಂಧಿತ ಸಂಗತಿಗಳನ್ನು ತಿಳಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಲು ನಾವು ವ್ಯಾಪಕವಾದ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಕನಿಷ್ಠ 1.8 ಮಿಲಿಯನ್ ರೈತರು ತಮ್ಮತಮ್ಮ ಕೃಷಿಭೂಮಿಗಳಲ್ಲಿ ನೈಸರ್ಗಿಕ ಕೃಷಿಗೆ ಬದ್ಧರಾಗುವಂತೆ ಮನವೊಲಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.
“ನಾವು ರೈತರಿಗೆ ಮನವರಿಕೆ ಮಾಡುವ ಮೂಲಕ ಮತ್ತು ಸಮಾಲೋಚನಾ ಕಾರ್ಯವಿಧಾನದ ಮೂಲಕ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ಯಾಬಿನೆಟ್ ಟಿಪ್ಪಣಿಗೆ ಅಂತಿಮ ರೂಪವನ್ನು ನೀಡಲಾಗುತ್ತಿದೆ ಎಂದು ಚೌಹಾಣ್ ಹೇಳಿದ್ದಾರೆ.
ಭಾರತದಲ್ಲಿ ರಾಸಾಯನಿಕ ಮುಕ್ತ ಕೃಷಿಯ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಆರೋಗ್ಯಕರ ಕೃಷಿ ಉತ್ಪನ್ನಗಳ ಉತ್ಪಾದನೆಯನ್ನು ಸುಲಭಗೊಳಿಸಲು, ನೀರಿನ ಬಳಕೆಯನ್ನು ಕಡಿಮೆ ಮಾಡಲು ಜೊತೆಗೆ ಕೃಷಿ ಒಳಸುರಿಗಳ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನೈಸರ್ಗಿಕ ಕೃಷಿಗೆ ಹೆಚ್ಚು ಉತ್ತೇಜನ ನೀಡಲು ಯೋಜಿಸಿದೆ.
ನೈಸರ್ಗಿಕ ಕೃಷಿಯ ಲಾಭಗಳನ್ನು ಮನಗಂಡ ನಂತರ ಹೆಚ್ಚೆಚ್ಚು ರೈತರು ಅದನ್ನು ಸ್ವಇಚ್ಛೆಯಿಂದ ದೇಶಾದ್ಯಂತ ಅಳವಡಿಸಿಕೊಳ್ಳುತ್ತಾರೆ ಎಂದು ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.