
ಕಾಡು ಪ್ರಾಣಿಗಳೆಲ್ಲ ಊರೊಳಗಿನ ಕೃಷಿ ಆವರಣಗಳಿಗೆ ದಿನಾ ದಾಳಿ ಇಡುತ್ತಿವೆ. ಕಷ್ಟಪಟ್ಟು ಬೆಳೆಸಿದ ಉತ್ಪನ್ನಗಳನ್ನು ಯಾವ ಮಟ್ಟಕ್ಕೆ ಹಾಳು ಮಾಡುತ್ತಿವೆ. ಇದು ಬರೀ ನನ್ನ ತೋಟವೊಂದರ ಪರಿಸ್ಥಿತಿಯಲ್ಲ. ಮಲೆನಾಡು ಕರಾವಳಿ; ಆ ಕಡೆ ಬಯಲು ಸೀಮೆಯಲ್ಲೂ ಇದೇ ಸಮಸ್ಯೆ. ಹಂದಿ, ಮುಳ್ಳು ಹಂದಿ, ಆನೆ ,ಜಿಂಕೆ, ಕಾಡುಕೋಣ ,ಮಂಗ, ನವಿಲು, ಇಲಿ, ಹೆಗ್ಗಣ, ಚಿರತೆ ಕಾಡುಕೋಣ ಹೀಗೆ ನೂರಾರು ಜೀವ ಜಂತುಗಳ ಜೊತೆಗೆ ರೈತ ತಮ್ಮ ಕೃಷಿಯನ್ನು ಉಳಿಸಲು ಸತತ ಪ್ರಯತ್ನ ಪಡಬೇಕಾಗಿದೆ.
ನಾಲ್ಕು ನಾಲ್ಕೈದು ವರ್ಷಗಳಿಂದ ಈ ಮೇಲಿನ ಎಲ್ಲವುಗಳನ್ನು ನನ್ನಂಥ ರೈತರೇ ಸಾಕುವ ಹೊಣೆ ಹೊತ್ತಂತೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇವುಗಳೊಂದಿಗೆ ಪ್ರಾಕೃತಿಕ ಅತಿವೃಷ್ಟಿ ಅನಾವೃಷ್ಟಿ ಗರಿಷ್ಠ ತಾಪಮಾನ ನೂರಾರು ದಂಶಕ ಕೀಟಗಳು ಇವುಗಳ ನಡುವೆ ಒಬ್ಬ ರೈತ ಸ್ವಾವಲಂಬಿಯಾಗಿ ಹೇಗೆ ಬದುಕಬೇಕು? ತನ್ನನ್ನು ಉಳಿದು ಈ ಭೂಮಿ ಮೇಲಿನ ಯಾವುದನ್ನೆಲ್ಲ ಸಾಕಬೇಕು?
ಬಿದ್ದ ಅಡಿಕೆಯನ್ನು ದಿನವಹಿ ಹೆಕ್ಕುವಷ್ಟು ರಖಾವಳೆ ಮಾಡುವಷ್ಟು ಕೂಲಿ ಕಾರ್ಮಿಕರ ಸೌಲಭ್ಯ ಈಗ ಎಲ್ಲೂ ಇಲ್ಲ. ಹಾಗಂತ ಬಿದ್ದ ಅಡಿಕೆಯನ್ನು ವಾರಕ್ಕೊಮ್ಮೆ ಹೆಕ್ಕುವ ಎಂದು ಹೋದರೆ ಅಡಿಕೆ ಸಿಪ್ಪೆ ಸಮೇತ ಪೂರ್ಣ ಸ್ಥಿತಿಯಲ್ಲಿಲ್ಲ . ಭಾಗಶ: ಪುಡಿಪುಡಿಯಾಗಿ ಅನುಪಯುಕ್ತವಾಗಿರುತ್ತವೆ. ಕಾರಣ ರಾತ್ರಿ ಕಾಡಿಳಿದು ತೋಟಕ್ಕಿಳಿಯುವ ಕಾಡು ಹಂದಿ ಹಣ್ಣಡಿಕೆಯನ್ನು ಜಬ್ಬುವಾಗ ಶೇಕಡ 20ರಷ್ಟು ಅಡಿಕೆ ಪುಡಿ ಆಗುತ್ತದೆ. ರಸ ಹೀರುವ ಖುಷಿಯಲ್ಲಿ ಕಾಡು ಹಂದಿ ರಣರಂಪ ಮಾಡುತ್ತವೆ.
ಕುಬೇ ಏರಿ ಮಂಗಗಳು ಒಂದಷ್ಟು ಎಳೆ ಹೀಚು ಅಡಿಕೆಯನ್ನು ಹೀರಿದರೆ ಅವುಗಳನ್ನು ತಪ್ಪಿಸಿಕೊಂಡು ಬೆಳೆದು ದೊಡ್ಡದಾಗಿ ಹಣ್ಣಾಗಿ ಉರುಳುವ ಅಡಿಕೆ ಈ ಪರಿಯಲ್ಲಿ ಮಂಗಗಳ ಪಾಲಾಗುತ್ತಿವೆ. ಇನ್ನು ಅಡಿಕೆಯ ಬುಡಬುಡಗಳಿಗೆ ಹಾಕಿದ ಗೊಬ್ಬರದ ಸ್ಥಿತಿ ದೇವರಿಗೆ ಪ್ರೀತಿ! ಮುಚ್ಚಿಗೆ ಅಡಿಯಲ್ಲಿರುವ ಎರೆಹುಳುಗಳನ್ನು ಹುಡುಕುವ ಉದ್ದೇಶಕ್ಕಾಗಿ ಹಾಕಿದ ಗೊಬ್ಬರವನ್ನು ಅಡ್ಡಾದಿಡ್ಡಿ ಎಳೆಯುವ ಕಾಡುಹoದಿಗಳ ರಣರೋಚಕ ಆಟಗಳನ್ನು ದಿನ ನೋಡಿ ಪರಿತಪಿಸುವ ಸ್ಥಿತಿ ನನ್ನಂತ ರೈತರದ್ದು.
ಹಂದಿ ಜಬ್ಬಿದ ಅಡಿಕೆಯನ್ನು ಹೆಕ್ಕುತ್ತಾ ತಲೆ ಎತ್ತಿ ನೋಡಿದರೆ ಪ್ರಶ್ನಾರ್ಥಕ ಚಿಹ್ನೆಯ ಹಾಗೆ ಕಾಡುವ ಖಾಲೀ ಬಾಳೆಗೊನೆಯ ದಂಡು. ಕಡಿಯುವ ಮುಂಚೆ ಇನ್ನೆರಡು ದಿನ ಬೆಳೆಯಲಿ ಮತ್ತೆ ಕಡಿದು ಮಾರುವ ಅಥವಾ ಹಣ್ಣು ಮಾಡಿ ತಿನ್ನಬೇಕೆಂದು ಬಯಸಿದ್ದವನಿಗೆ ಬರೀ ದಿಂಡನ್ನು ಕಂಡು ಅಳುವ ಸ್ಥಿತಿ ಎಲ್ಲರದ್ದು. ಅಪ್ಪಿ ತಪ್ಪಿ ಆ ಗೊನೆ ಬೆಳೆದು ಬಿಟ್ಟು ಬಾಗಿ ನೆಲಕ್ಕೆ ಉರುಳಿದರೆ ಅಯ್ಯೋ ಅದೊಂದು ಬೇರೆಯೇ ಸ್ಥಿತಿ . ಗುಂಪು ಗುಂಪಾಗಿ ಬರುವ ನವಿಲುಗಳು ನೆಲಕ್ಕೆ ಬಿದ್ದ ಆ ಕಾಯಿಯನ್ನು ಕ್ಷಣಾರ್ಧದಲ್ಲಿ ಯಾವ ಸಾಕ್ಷಿಯನ್ನೂ ಬಿಡದೆ ಮುಕ್ಕುತ್ತವೆ.
ಇನ್ನೇನು ಅದೇ ತೋಟದ ಕರೆ ಮುರೆಯಲ್ಲಿರುವ ತೆಂಗಿನ ಮರದಿಂದ ಬಿದ್ದ ಕಾಯಿಯನ್ನಾದರೂ ಹೆಕ್ಕುವ ಎಂದು ಆ ಕಡೆಗೆ ಸರಿದರೆ ಅದೇ ಹಂದಿಯ ಜೊತೆಗೆ ಮುಳ್ಳುಹಂದಿಯೂ ಸೇರಿ ಕಾಯಿಯನ್ನು ಇಬ್ಬಗೆಯಲ್ಲಿ ಸುಳಿದು ಇಡೀ ಕಾಯಿಯನ್ನು ಅಲ್ಲೇ ಎಲ್ಲೋ ಬಿದ್ದಿರುವ ಕಲ್ಲಿಗೆ ಗುದ್ದಿ ಪುಡಿ ಮಾಡಿ ತಿನ್ನುತ್ತವೆ. ಇಷ್ಟಕ್ಕೆ ಮುಗಿದು ಹೋಯಿತು ಎಂದು ಭಾವಿಸುವ ಹಾಗಿಲ್ಲ !! ಕಳೆದ ಎಪ್ರಿಲ್ ತಿಂಗಳಲ್ಲಿ ಹಳೆ ತೋಟ ತೆಗೆದು ಸುಮಾರು 400 ಹೊಸ ಅಡಿಕೆಗಿಡ ಹಾಕಿದ್ದೆ .ಚೆನ್ನಾಗಿ ಬಂದಿತ್ತು. ಕೈ ಅಳತೆ ದಪ್ಪಕ್ಕೇ ಬೆಳೆದ ಆ ಅಡಿಕೆ ಗಿಡಗಳನ್ನು ನಡುವೆಯೇ ಮುರಿದು ತಿರುಳು ತಿನ್ನುವ ಕಾಡು ಹಂದಿ ಯಾವ ಹಂತಕ್ಕೆ ರೈತನ ಸ್ವತ್ತನ್ನು ವಿನಾಶಕ್ಕೆ ತಳ್ಳುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯೇ ಸಾಕು.
ಮೊದಲು ತೋಟದ ಸುತ್ತ ಎರಡೆರಡು ತಂತಿ, ಪ್ಲಾಸ್ಟಿಕ್ ಬಳ್ಳಿ ಎಳೆದು ಕೋಟೆ ಕಟ್ಟಿ ಆಯಿತು. ಅದರ ಅಡಿಯಿಂದಲೇ ನುಗ್ಗಿ ಬಂದು ಹಂದಿ ಗಿಡ ಮುರಿಯುತ್ತವೆ ಎಂದಾದ ಮೇಲೆ ಪ್ರತಿ ಗಿಡಗಳನ್ನು ಕೇಂದ್ರೀಕರಿಸಿ ಪ್ಲಾಸ್ಟಿಕ್ ಗೋಣಿಯನ್ನು ಸುತ್ತು ಕಟ್ಟಿಯೂ ಆಯ್ತು. ಇದೀಗ ಪ್ಲಾಸ್ಟಿಕ್ ಪೊರೆ ಇರುವ ಹಾಗೆಯೇ ಗಿಡವನ್ನು ಮುರಿದು ಸಿರಿ ಮುಕ್ಕಳಿಸುವ ಪರಿ ನೋಡಿದರೆ ಬೇರೆ ಉಳಿಕೆಯ ಹೊಸ ದಾರಿಗಳು ಗೋಚರವಾಗುತ್ತಿಲ್ಲ.
ಇರುವೆಯಿಂದ ಹಿಡಿದು ತಿಮಿಂಗಿಲದವರೆಗೆ ಅದು ಕಾಡಿರಬಹುದು, ನೀರಬಹುದು, ಬಾನಿರಬಹುದು… ಅವು ಎಲ್ಲೇ ಹುಟ್ಟಿರಲಿ, ಅವುಗಳ ಬದುಕಿಗೆ ಬೇಕಾಗುವ ಅಗತ್ಯ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಆ ಪರಿಸರದ್ದೇ ಆಗಿರುತ್ತದೆ. ಇದು ಜೀವ ಪರಿಸರ ಮಾಡಿಕೊಂಡ ಸೂಕ್ಷ್ಮ ವ್ಯವಸ್ಥೆ. ಯಾವುದು ಎಲ್ಲಿ ಹುಟ್ಟಿ ಬದುಕುತ್ತವೋ ಅಲ್ಲಿಂದಲೇ ಅವು ಅನ್ನ ಆಹಾರ ಜೀವ ರಕ್ಷಕ ಒಳಸುರಿಗಳನ್ನು ಪೂರೈಸಿಕೊಳ್ಳುತ್ತವೆ.
ಮೊದಮೊದಲು ಮನುಷ್ಯ ಆಹಾರಕ್ಕಾಗಿ ಕಾಡನ್ನೇ ಅವಲಂಬಿಸಿದ್ದ. ಗೆಡ್ಡೆ ಗೆಣಸು ನಾರು ಬೇರು ಮಾಂಸ ಬೇಟೆ ಎಲ್ಲವೂ ಅಲ್ಲಿಂದಲೇ. ನಿಧಾನವಾಗಿ ಹೊರಗಡೆ ಬಂದು ಊರು ಕಟ್ಟಿಕೊಂಡ .ಮುಂದೆ ನಾಡು ನಗರ ಮಹಾನಗರ ಎಲ್ಲವೂ ಬೆಳೆಯುತ್ತಾ ಹೋಯಿತು. ಅಣೆಕಟ್ಟು ಕೈಗಾರಿಕೆ ರಸ್ತೆ ಸೇತುವೆ ಕಟ್ಟಡಗಳು …. ಈ ಎಲ್ಲದಕ್ಕೂ ಆತ ಅತಿಕ್ರಮಿಸಿದ್ದು ತಾನು ಮೊದಲಿದ್ದ ಕಾಡನ್ನೇ. ಮನುಷ್ಯ ಅದೇ ಜೀವ ಪರಿಸರವನ್ನು ನಾಡು ಎಂದು ಕಟ್ಟಿಕೊಂಡರೆ, ವಿಸ್ತರಿಸಿದರೆ ಕಾಡನ್ನೇ ಅವಲಂಬಿಸಿದ್ದ ಪ್ರಾಣಿಗಳಿಗೆ ಬೇರೆ ಪರ್ಯಾಯಗಳಿರಲಿಲ್ಲ. ಅವು ಆಹಾರ ನೀರಿಗಾಗಿ ಏನಿದ್ದರೂ ಅಲ್ಲೇ ಹುಡುಕಾಡಬೇಕು. ಅವು ಮನೆ ಕಟ್ಟಿಕೊಳ್ಳುವುದಿಲ್ಲ ,ಭತ್ತ ಬೆಳೆಸುವುದಿಲ್ಲ ,ಅಡಿಕೆ ತೆಂಗು ನೆಡುವುದಿಲ್ಲ .ಅವುಗಳಿಗೆ ಬೇಕಾಗುವ ಎಲ್ಲವೂ ಅದೇ ಕಾಡಿನಲ್ಲಿ ಸಿಗಬೇಕಲ್ವಾ? ಅಂತ ಕಾಡಿನಲ್ಲಿ ತನ್ನದಲ್ಲದ ಮನುಷ್ಯ ಪಾಲು ಪಡೆಯುತ್ತ ಹೋದಾಗ ಸಹಜವಾಗಿಯೇ ಕಾಡುಪ್ರಾಣಿಗಳು ಮನುಷ್ಯ ಲೋಕಕ್ಕೆ ಪ್ರವೇಶಿಸಬೇಕಾಯಿತು.
ಇವತ್ತು ಆಗುತ್ತಿರುವುದು ಅದೇ. ಒಂದು ಕಾಲದಲ್ಲಿ ಶೇಕಡ 80ಕ್ಕಿಂತ ಹೆಚ್ಚು ಜೀವಿಗಳೇ ಈ ಭೂಮಿಯ ಮೇಲೆ ಇದ್ದು ಮನುಷ್ಯನ ಪ್ರಮಾಣ ಬಹಳ ಕಡಿಮೆ ಇತ್ತು. ಬ್ರಿಟಿಷರು ಭಾರತದ ಕಾಡುಗಳನ್ನು ವನ್ಯಜೀವಿಗಳಿಂದ ತುಂಬಿ ತುಳುಕುತ್ತಿರುವ ಹಸಿರು ಸಮುದ್ರ ಎಂದರು. ಬ್ರಿಟಿಷರ ಕಾಲದಲ್ಲಿ ಕಾಡು ಹಂದಿಗಳನ್ನು ಭೇಟಿಯಾಡಿ ಅವುಗಳ ರೋಮಗಳಿಂದ ಬ್ರಷ್ ಮಾಡುವ ಉದ್ಯಮ ಒಂದರ ಸ್ಥಾಪನೆಯ ಯೋಚನೆಯು ಇತ್ತಂತೆ. ಇವತ್ತು ಮನುಷ್ಯನ ಪ್ರಮಾಣ ಜಾಸ್ತಿಯಾಗಿ ಜೀವಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇರುವ ಜೀವಿಗಳೆಲ್ಲ ಕಾಡಿನಿಂದ ಹೊರಗಡೆ ಬಂದು ಮನುಷ್ಯ ಜೀವ ಪರಿಸರದಲ್ಲಿ ಅಡ್ಡಾಡುವ ,ಅತಿಕ್ರಮಿಸುವ ಕಾರಣಗಳಿಗಾಗಿ ಈ ಭೂಮಿ ಮೇಲೆ ಬರೀ ಕಾಡು ಪ್ರಾಣಿಗಳೇ ತುಂಬಿಕೊಂಡಿವೆ ಅನಿಸುತ್ತಿದೆ .
ನನ್ನ ಬಾಲ್ಯದಲ್ಲಿ ಶಾಲೆಯ ದಾರಿಗುಂಟ ಒಂದು ನವಿಲುಗರಿ ಬಿದ್ದಿದ್ದರೆ ಅದು ನಮಗೆ ಅಪೂರ್ವ ದ್ರವ್ಯ ಸಿಕ್ಕಿದ ಹಾಗೆ . ಅವುಗಳನ್ನು ಪುಸ್ತಕದ ಎಡೆಯಲ್ಲಿಟ್ಟು ರಕ್ಷಿಸುವ, ಆಗಾಗ ಮುಟ್ಟಿ ನೋಡುವ, ಕಣ್ಣಿಗೆ ತಾಗಿಸಿ ನವಿರು ಸುಖ ಅನುಭವಿಸುವ ನೆನಪೇ ಅದ್ಭುತ. ಈಗ ಬರೀ ನನ್ನೊಬ್ಬನ ತೋಟದಲ್ಲಿ ಆರೇಳು ನವಿಲುಗಳು ಪ್ರತಿ ದಿವಸ ಅಡ್ಡಾಡುತ್ತವೆ. ಕ್ಯಾರೆ ಇಲ್ಲದೆ ಓಡಾಡುತ್ತವೆ.
ಕೃಷಿ ಉತ್ಪನ್ನಗಳಿಗೆ ದಾಳಿ ಮಾಡುವ ಮಂಗಗಳನ್ನು ಗುಂಪಾಗಿ ಹಿಡಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುರಿದರೆ ಮತ್ತೊಂದು ರೀತಿಯಲ್ಲಿ ಅಲ್ಲಿಯ ರೈತರಿಗೆ ತೊಂದರೆಯೇ. ಸರಕಾರ ರೈತರ ಕೈಗೆ ಕೋವಿ ಕೊಟ್ಟಿದೆ, ಸಾಯಿಸುವ ಅಧಿಕಾರ ಕೊಟ್ಟಿಲ್ಲ .ಒಂದು ವೇಳೆ ಮತ್ತೆ ಬೇಟೆಯಾಡುವ ಅವಕಾಶ ಕಲ್ಪಿಸಿದರೂ ಜನ ಬೇಟೆಯಾಡಿ ಕಾಡು ಪ್ರಾಣಿಗಳನ್ನ ಸಾಯಿಸುವ ಮನಸ್ಥಿತಿಯಲ್ಲಿ ಈಗ ಇಲ್ಲ. ಅದು ಸಾಧುವೂ ಅಲ್ಲ. ಭೂಮಿ ಪಾಲನೆಯಲ್ಲಿ ಪ್ರತಿ ಜೀವ ತಂತುವಿನ ಪಾತ್ರ ಗಣನೀಯವಾಗಿರುವುದರಿಂದ ಮೃಗನಾಶ ಭೂಮಿಯ ಅಸಮತೋಲನಕ್ಕೆ ಕಾರಣವಾಗುತ್ತದೆ. ಪ್ರಾಣಿಗಳಿಗೆ ಬೇಕಾಗುವ ಒಳಸುರಿಗಳನ್ನು ನೀಡುವ ಕಾಡೇ ಸೊರಗಿದ ಮೇಲೆ ಪ್ರಾಣಿಗಳಾದರೂ ಏನು ಮಾಡುವುದು?
ಮೇಘಾಲಯದಲ್ಲಿ ಈಗಾಗಲೇ ಆನೆಗಳು ಬಯಸುವ ಕಾಡು ಹುಲ್ಲನ್ನು ಅರಣ್ಯದೊಳಗೆ ಸಮೃದ್ಧವಾಗಿ ಬೆಳೆಸಲಾಗುತ್ತದೆ ಹಾಗೆ ಕಾಡೊಳಗಡೆಯ ಇತರ ಪ್ರಾಣಿಗಳಿಗೂ ಆಹಾರ ಲಭ್ಯವಾದರೆ ಊರಿಗೆ ನುಗ್ಗುವ ಖಗ ಮೃಗಗಳನ್ನು ತಪ್ಪಿಸಬಹುದು.