ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಅಕ್ಲೂಜ್ ಗ್ರಾಮದ ಯುವಕೃಷಿಕ ಶಂಕರ್ ಪಾಟೀಲ್ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಎರಡುವರ್ಷದ ಹಿಂದೆ ಇದೇ ಸಮಯದಲ್ಲಿ ಇದೇಖುಷಿ ಅವರಲ್ಲಿ ಕಾಣುತ್ತಿರಲಿಲ್ಲ. “ಏನು ಭಾರಿ ಖುಷಿಯಲ್ಲಿದ್ದೀರಾ” ಎಂದಾಗ ಮುಗುಳ್ನಗೆಯೊಡನೆ ಮಾತು ಆರಂಭಿಸಿದರು.

“ಕಳೆದ ಹತ್ತು ವರ್ಷಗಳಿಂದ ಬಾಳೆ ಬೆಳೆಯುತ್ತಿದ್ದೇವೆ. ಪ್ರತಿವರ್ಷ ಏನಾದರೊಂದು ತೊಂದರೆ. ಅಷ್ಟು ಉತ್ತಮವಾದ ಇಳುವರಿ ಸಿಗುತ್ತಿರಲಿಲ್ಲ. ಕೀಟಬಾಧೆ, ರೋಗಬಾಧೆ ಹೀಗೆ ಏನಾದರೊಂದು ಸಮಸ್ಯೆ ಇದ್ದೇಇರುತ್ತಿತ್ತು. ಆದರೆ ಈ ಬಾರಿಯ ಬಾಳೆ ಇವೆಲ್ಲದರಿಂದ ಮುಕ್ತವಾಗಿದೆ. ಮುಖ್ಯವಾಗಿ ಗಣನೀಯ ಪ್ರಮಾಣದಲ್ಲಿ ಖರ್ಚು ಕಡಿಮೆಯಾಗಿದೆ” ಎಂದರು.

ಮಾತನಾಡುತ್ತಲೇ ಬಾಳೆತೋಟದಲ್ಲಿ ಮೂರು ಸುತ್ತು ಬಂದಾಗಿತ್ತು. ನಾಲ್ಕು ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ತೋಟವದು. ಎಲೆಗಳು ವಿಶಾಲವಾಗಿ ಹರಡಿಕೊಂಡು ಕಣ್ಣಿಗೆ, ಮನಸಿಗೆ ಮುದನೀಡುವ ಹಚ್ಚಹಸಿರು ಬಣ್ಣ ಹೊಂದಿದ್ದವು. ಬಾಳೆಗಿಡಗಳು ಭಾರಿಗಾತ್ರದ ಗೊನೆಗಳನ್ನು ಹೊತ್ತು ನಿಂತಿದ್ದವು.

ಸಾಮಾನ್ಯವಾಗಿ ಭಾರಿಗಾತ್ರದ ಗೊನೆಗಳಿದ್ದಾಗ ಅವುಗಳಿಗೆ ಬೊಂಬು, ಅಥವಾ ಸರ್ವೇಮರದ ಆಧಾರ ನೀಡುತ್ತಾರೆ. ಆದರಲ್ಲಿ ಹಾಗೆ ಮಾಡಿರಲಿಲ್ಲ. ಇಷ್ಟು ಭಾರಿಗಾತ್ರದ ಗೊನೆಗಳಿರುವಾಗ ಅದರ “ಭಾರ ತಡೆಯದೇ ಗಿಡದ ಕಾಂಡ ಮುರಿಯುವ ಸಂಭವ ಇಲ್ಲವೇ” ಎಂದಾಗ ಈ ಬಾರಿಯ ವಿಶೇಷತೆಗಳಲ್ಲಿ ಇದೂ ಒಂದು. ಈಗ ಇರುವುದರಲ್ಲಿ ಅರ್ಧದಷ್ಟು ತೂಕದ ಗೊನೆಗಳು ಇದ್ದಾಗಲೂ ಅವುಗಳಿಗೆ ಆಧಾರ ಕೊಟ್ಟಂಥ ವರ್ಷಗಳೇ ಹೆಚ್ಚು.  ಆದರೆ ಈ ಬಾರಿ ಅದರ ಅವಶ್ಯಕತೆ ಬರಲಿಲ್ಲ ಎಂದರು.

“ಇಲ್ಲಿ ಐದು ಸಾವಿರ ಗಿಡಗಳಿವೆ. ಸಸಿಯಿಂದ ಸಸಿಗೆ 6 ಅಡಿ ಅಂತರ ನೀಡಿರುತ್ತೇವೆ. ಒಂದು ಎಕರೆಗೆ 1200 ಗಿಡಗಳಿರುತ್ತವೆ. ಇವುಗಳು ಯಾವರೀತಿಯ ಗೊನೆಗಳನ್ನು ಬಿಡಬಹುದು ಎಂಬ ಅಂದಾಜು, ಗಿಡಗಳ ಬೆಳವಣಿಗೆಯಿಂದಲೇ ದಕ್ಕಿರುತ್ತದೆ. ಬುಡ ಹೆಚ್ಚು ದಪ್ಪ ಇಲ್ಲದಿದ್ದಾಗ ಬೊಂಬು ಅಥವಾ ಕತ್ತರಿಸಿದ ಸರ್ವೇಮರಗಳ ಆಧಾರ ಕೊಡುವುದು ಅನಿವಾರ್ಯ. ಇವುಗಳನ್ನು ಹೆಚ್ಚಿನ ಬೆಲೆಕೊಟ್ಟು ಖರೀದಿಸಿ ತರಬೇಕು. ಇದರಿಂದ ಬಾಳೆಕೃಷಿ ದುಬಾರಿಯಾಗುತ್ತದೆ. ಪ್ರಸಕ್ತವರ್ಷ ಇಂಥ ಪ್ರಮೇಯ ಬಾರದೇ ಇರುವುದರಿಂದ ಗಣನೀಯ ಪ್ರಮಾಣದಲ್ಲಿ ಖರ್ಚು ಕಡಿಮೆಯಾಗಿದೆ” ಎಂದರು.

ಬಾಳೆಸಸಿ ನಾಟಿ ಮಾಡುವುದಕ್ಕೂ ಮೊದಲೇ ಭೂಮಿಯನ್ನು ಹದಮಾಡಿ, ಸಾವಯವ ಗೊಬ್ಬರ ಮಿಶ್ರಣ ಮಾಡಿರುತ್ತೇವೆ. ನಂತರ ಗುಂಡಿ ತೆಗೆದು ಅಲ್ಲಿಯೂ ಅವಶ್ಯಕ ಪ್ರಮಾಣದ ಸಾವಯವಗೊಬ್ಬರ ಹಾಕಿ ನಾಟಿ ಮಾಡಿರುತ್ತೇವೆ. ಮತ್ತೆ ಮೂರುಹಂತಗಳಲ್ಲಿ ಗೊಬ್ಬರ ಕೊಡುತ್ತೇವೆ. ಗಿಡಗಳಿಗೆ ರೋಗನಿರೋಧಕ ಶಕ್ತಿ ಇಲ್ಲದಿದ್ದರೆ ಕಷ್ಟ. ರೋಗದ ಬಾಧೆ ಕಾಣಿಸಿಕೊಂಡರೆ ಅದರ ನಿಯಂತ್ರಣಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇನ್ನು ಬೇರುಹುಳ ಬಾಧೆ ಶುರುವಾದರೆ ಅವುಗಳ ನಿಯಂತ್ರಣ ಇನ್ನೂ ಕಷ್ಟ. ಗಿಡಗಳು ತುಂಬ ಆರೋಗ್ಯಯುತವಾಗಿರುವ ಕಾರಣದಿಂದಲೋ ಏನೋ ಈ ಬಾರಿ ಇವ್ಯಾವುದೂ ಇಲ್ಲ ಎಂದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ನಾಟಿ ಮಾಡಿದ್ದೆವು. ಆಗ ವಿಪರೀತ ಬಿಸಿಲು, ಜೂನ್ ನಂತರ ಶುರುವಾದ ಮಳೆಗಾಲವೂ ವಿಫಲವಾಯಿತು, ಕೊಳವೆಬಾವಿಯಲ್ಲಿದ್ದ ಅಲ್ಪಪ್ರಮಾಣದ ನೀರನ್ನೇ ನಿಯಮಿತವಾಗಿ ಪೂರೈಸುತ್ತಾ ಗಿಡಗಳನ್ನು ಉಳಿಸಿಕೊಂಡೆವು. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಗಿಡಗಳು ಬೆಳವಣಿಗೆಯಾಗಿ, ಉತ್ತಮ ಇಳುವರಿ ಕೊಟ್ಟಿವೆ. ಐದು ಸಾವಿರ ಸಸಿಗಳನ್ನು ನಾಟಿ ಮಾಡಬೇಕಿದ್ದರೆ ಮುನ್ನೂರು ಗಿಡ ಹೆಚ್ಚಿಗೆ ತಂದಿರುತ್ತೇವೆ. ಏಕೆಂದರೆ ಎಲ್ಲ ಸಸಿಗಳು ಆರೋಗ್ಯವಾಗಿರುವುದಿಲ್ಲ. ಅಂಥ ಸಸಿಗಳನ್ನು ಕಿತ್ತುಹಾಕಿ, ಚೆನ್ನಾಗಿರುವ ಸಸಿಗಳನ್ನು ನಾಟಿ ಮಾಡಬೇಕಾಗುತ್ತದೆ.

ಇದು ಸಹ ಖರ್ಚಿನ ಬಾಬತ್ತು. ಈ ಬಾರಿ ತಂದಿದ್ದು ಐದು ಸಾವಿರ ಸಸಿಗಳು. ಅವುಗಳಲ್ಲಿ ಶೇಕಡ 99ರಷ್ಟು ಸಸಿಗಳು ಚೆನ್ನಾಗಿ ಬಂದಿವೆ. ಪ್ರತಿವರ್ಷ ಇಲ್ಲೇ ಹತ್ತಿರದ ಕಂಪನಿಯೊಂದರಿಂದ ಸಸಿಗಳನ್ನು ತರುತ್ತಿದ್ದೆವು. ಈ ಬಾರಿ ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಗುಗ್ಲೆ ಬಯೋಟೆಕ್ ಕಂಪನಿಯಿಂದ ಜಿ9 ಬಾಳೆಸಸಿಗಳನ್ನು ತರಿಸಿದ್ದೆವು” ಎಂದರು.

“ಪ್ರತಿಗೊನೆಯಲ್ಲಿಯೂ 10 ರಿಂದ 12 ಗೊಂಚಲುಗಳಿವೆ. ಬಾಳೆಯ ಉದ್ದ ಮತ್ತು ಶೈನಿಂಗ್ ತುಂಬ ಚೆನ್ನಾಗಿದೆ. ಪ್ರತಿಗೊನೆಯೂ ಸರಾಸರಿ 35ಕೆಜಿಗಿಂತಲೂ ಹೆಚ್ಚು ತೂಗಬಹುದು ಎಂಬ ನಿರೀಕ್ಷೆಯಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿಯೂ ಒಳ್ಳೆಯ ದರವಿದೆ. ಇದು ಕೂಡ ನಮ್ಮ ಖುಷಿ ಹೆಚ್ಚಲು ಕಾರಣವಾಗಿದೆ. ಒಳ್ಳೆಯ ಬೆಳೆ, ಒಳ್ಳೆಯ ದರ ಸಿಕ್ಕರೆ ಕೃಷಿಕರಿಗೆ ಅದಕ್ಕಿಂತ ಹೆಚ್ಚಿನ ಖುಷಿಯೇನಿದೆ ಹೇಳಿ” ಎಂದರು.

“ಯಾವುದೇ ಕೃಷಿ ಮಾಡಲಿ, ಸಾಧ್ಯವಾದಷ್ಟೂ ಖರ್ಚು ಕಡಿಮೆ ಮಾಡಬೇಕು. ನಾನಂತೂ ಈ ಅಂಶದತ್ತ ಹೆಚ್ಚು ಗಮನ ಹರಿಸಿದ್ದೇನೆ. ಹೀಗೆ ಮಾಡುವುದು ನಮ್ಮ ಲಾಭಾಂಶವನ್ನು ಹೆಚ್ಚಿಸುತ್ತದೆ” ಎಂದರು. ನಿಮ್ಮ ಯೋಜನೆಗಳು, ಖುಷಿ ಹೀಗೆ ಇರಲಿ ಎಂದು ಹಾರೈಸುತ್ತಾ ಬಂದೆವು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  99806 45151 / 94480 09717

LEAVE A REPLY

Please enter your comment!
Please enter your name here