ಜಲ ಜೀವನ್ ಮಿಷನ್ ಯಶಸ್ವಿಯಾಗದಿರಲು ಕಾರಣಗಳು

0
ಲೇಖಕರು: ಉಜ್ಜಜ್ಜಿ ರಾಜಣ್ಣ

ಜಲ ಜೀವನ್ ಮಿಷನ್ ದೇಶದಲ್ಲಿ ಜಾರಿಯಲ್ಲದೆ. ಬಹುಕೋಟಿಗಳನ್ನು ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸುರಿಯಲಾಗುತ್ತಿದೆ. ಜನರ ಅಭಿಪ್ರಾಯಗಳಿಗೆ ಮಾನ್ಯತೆಯಿಲ್ಲ. ಗ್ರಾಮ ಪಂಚಾಯ್ತಿಗಳ ಅಭಿಪ್ರಾಯಗಳಿಗೆ ಸೊಪ್ಪು ಹಾಕುತ್ತಿಲ್ಲ. ಗ್ರಾಮವಿನ್ಯಾಸವನ್ನು ಅನುಸರಿಸಿ ಕಾಮಗಾರಿಗಳು ನಡೆಯುತ್ತಿಲ್ಲ ಎನ್ನುವ ಜನರ ಆಕ್ಷೇಪಗಳು ಮುಂದುರಿದಿವೆ.
ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ನೀರಿನ ಅಯವ್ಯಯ ಮತ್ತು ನೀರಿನ ಇಳುವರಿ ಕುರಿತು ವಾರ್ಷಿಕ ಕ್ರಿಯಾಯೋಜನೆಗಳಾಗಬೇಕು. ಆದರೆ ಗ್ರಾಮಪಂಚಾಯ್ತಿ ಹಂತದ ಜಲಜೀವನ್ ಮಿಷನ್ ಸಮಿತಿಗಳು ಕಿಮ್ಮತ್ತು ಕಳೆದುಕೊಂಡಿವೆ.
ಮೂರು ದಶಕಗಳಿಂದ ಜಲಾನಯನ ಕಾರ್ಯಕ್ರಮಗಳಾಗುತ್ತಿವೆ. ರಾಜ್ಯದಲ್ಲಿ ಜಲಾನಯನ ಇಲಾಖೆಯೇ ಇತ್ತು. ಅದರ ಗುರಿಸಾಧನೆಗಳು ಆಗಿವೆ ಎಂದು ಅದನ್ನು ಮುಚ್ಚಲಾಯಿತು. ಅದರ ಗುರಿ ಸಾಧನೆಗಳು ಆಗಿ, ರಾಜ್ಯದಲ್ಲಿ ಸಮಗ್ರ ಜಲಾನಯನ ಅಭಿವೃದ್ದಿ ಹಾಗೂ ಅಂತರ್ಜಲ ಅಭಿವೃದ್ದಿ ಆಗಿದ್ದರೆ, ಇರುವ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಬಹಳ ಇರಬೇಕಾಗಿತ್ತು. ಭವಿಷ್ಯದ ಇಪ್ಪತ್ತು ಐವತ್ತು ವರ್ಷಗಳ ಜನಸಂಖ್ಯೆಗೆ ಆಧರಿಸಿದ ಸಾವಿರಾರು ಕೋಟಿಗಳ ಯೋಜನೆಗಳು ಏಕೆ ತಲೆ ಎತ್ತಿದವು? ಅಂತರ್ಜಲ ಅಭಿವೃದ್ದಿ ಇಲಾಖೆಯನ್ನೇ ಮುಚ್ಚಿ, ಅಂತರ್ಜಲ ಅಭಿವೃದ್ದಿಯಾಗಿದೆ ಎಂದು ತೀರ್ಮಾನಕ್ಕೆ ಬಂದ ಮೇಲೆ?
ನದಿಗಳ ಹಿನ್ನೀರನ್ನು ಕುಡಿಯುವ ನೀರಿಗೆ, ಹಳ್ಳಗಳ ನೀರನ್ನು ಬಳಸಲು ಎತ್ತಿನ ಹೊಳೆ ಯೋಜನೆ, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ, ಜೊತೆಯಲ್ಲಿ ಜಲಜೀವನ್ ಮಿಷನ್. ಇವೆಲ್ಲಾ ನೋಡಿದಾಗ ಜಲಾನಯನ ಇಲಾಖೆಯ ಮೂಲಕ ದಶಕಗಳ ಅವದಿಗೆ ಸುರಿದ ಕೋಟಿಗಳು ಅಂತರ್ಜಲ ಹೆಚ್ಚಿಸಿಲ್ಲ. ಕನಿಷ್ಟ ಕುಡಿಯುವ ನೀರನ್ನಾದರೂ ಪೂರೈಸಿಕೊಳ್ಳುವ ಮಟ್ಟಿಗಾದರೂ ಇವೆಯೇ ?.
ಪ್ರಾದೇಶಿಕವಾಗಿ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಾದರೂ ಕುಡಿಯುವ ನೀರಿಗಾಗುವಷ್ಟಾದರೂ ನೀರಿನ ಇಳುವರಿ ಸುಧಾರಿಸಿಲ್ಲ ಎಂದರ್ಥ ತಾನೆ. ಮಳೆ ನೀರಿನ ಬಳಕೆ, ಪೂರಕ ಹಸಿರು ಹೊದಿಕೆ, ಜಲಾನಯನ ಇಲಾಖೆಯ ಬಯಕೆ ಈಡೇರಿದ್ದರೆ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯ ಹೆಬ್ಬಯಕೆಗಳು ಜಲಾನಯನ ಇಲಾಖೆಯ ಮೂಲಕವೇ ಈಡೇರಿರಬೇಕಾಗಿತ್ತು.
ಅರಣ್ಯ ಬೆಳೆಸುವ ಬಹುಬೇಡಿಕೆಯ ಈಡೇರಿಕೆಯನ್ನು ಜಲಾನಯನ ಇಲಾಖೆ ಹೊಂದಿತ್ತು. ಆದರೆ ಅದು ಈಡೇರಿದ್ದರೆ, ಬಯಲು ಸೀಮೆಯಲ್ಲಿ ಮರಮಂಡಿಗಳು ದಟ್ಟವಾಗಿ ಬೆಳೆಯಬೇಕಾಗಿತ್ತು. ಹಾಗಾಗಿ ಮತ್ತೆಮತ್ತೆ ಮಶ್ಚಿಮ ಘಟ್ಟಗಳ ಹಳ್ಳಗಳು, ನದಿಗಳಿಗೆ ಕುಡಿಯುವ ನೀರಿಗೆ ಕೈಯ್ಯಿಡುವ ದುರ್ಗತಿ ಎದುರಾಗುತ್ತಿರಲಿಲ್ಲವೇನೋ ಎನಿಸುತ್ತದೆ.
ಪ್ರಾದೇಶಿಕವಾಗಿ, ಸ್ಥಳೀಯವಾಗಿ ನಿಗದಿತ ಅವಧಿಯ ಯೋಜನೆಗಳ ಉದ್ದೇಶಗಳು ಈಡೇರುವುದರ, ಅವುಗಳು ಹಿನ್ನಡೆಯಾಗುವುದರ ಕುರಿತು ಯೋಚಿಸುವ ಅವಶ್ಯಕತೆ ಇದೆ. ಭಾರಿ ನೀರಾವರಿ ಯೋಜನೆಗಳು ಆದರೂ ನೀರಿನ ಕಷ್ಟಗಳು ಎಕೆ ತಪ್ಪುತ್ತಿಲ್ಲ ಎನ್ನುವುದರ ಬಗ್ಗೆ ನಿರ್ಧಿಷ್ಟ ಚರ್ಚೆಗಳಾಗುವುದರತ್ತ ಗಮನಹರಿಸುವ ಅವಶ್ಯಕತೆಯಿದೆ.
ಲೇಖಕರು: ಉಜ್ಜಜ್ಜಿ ರಾಜಣ್ಣ
ಈ ಲೇಖನಕ್ಕೆ ಬಂದ ಪ್ರತಿಕ್ರಿಯೆ ಮತ್ತು ಲೇಖಕರ ಉತ್ತರಗಳು
ಈ ಯೋಜನೆಯಲ್ಲಿ ಹಣದ ಹೊಳೆ ಹರಿದಿದೆ. ನಿಜ. ಆದರೆ ಉಳಿದ ಅಂಶಗಳು ಕೊಂಚ ಬೀಸು ಹೇಳಿಕೆಯಾಗಿವೆ.
1. ಪರಮ ಪರಿಪೂರ್ಣ ಜಲಾನಯನ ಅಭಿವೃದ್ಧಿ ಮಾಡಿದರೂ ನಮ್ಮ ರೈತರು ಕೊಳವೆ ಬಾವಿಯಿಂದ ನೀರೆತ್ತುವ ಪರಿಗೆ ಬಯಲು ಸೀಮೆಯಲ್ಲೂ 100 ಇಂಚುಮಳೆಯಾದರೆ ಮಾತ್ರ ಬ್ಯಾಲೆನ್ಸ್ ಆದೀತು. ರೈತರಿಗೆ ಬುದ್ಧಿ ಹೇಳಲು ಸರಕಾರಕ್ಕೆ ಧೈರ್ಯ ಇಲ್ಲ. ಬಹುತೇಕ ರೈತರು ಜಲ ಮರು ಪೂರಣ ವ್ಯವಸ್ಥೆ ಮಾಡಿಲ್ಲ.
2. ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ವೆಚ್ಚದಾಯಕವಾದರೂ ಅಂಥ ಊರುಗಳ ನೀರಿನ ಡೆಪಾಸಿಟ್ ಹೆಚ್ಚಿದೆ.
ನಮ್ಮ ಕುಡಿಯುವ ನೀರಿನ ಶೇಕಡ 72 ಅಂತರ್ಜಲ. ಅದರ ಗುಣಮಟ್ಟ ಗೊತ್ತಿಲ್ಲ. ಅದರ ಪರೀಕ್ಷೆ ಮಾಡಿಸಲು ಪರಿಸರ ಆಸಕ್ತರು ಒತ್ತ ಡ ತರಬಹುದಲ್ಲ? ಅದರ ಮಟ್ಟ ಏರಿಸಲು ಯತ್ನಿಸಬಹುದು. ಕೆಲವರು ಊರಿನ ಬ್ರಹ್ಮಾಂಡ ಅಂತರ್ಜಲ ಲೂಟಿ ಮಾಡ್ತಾ, ಕುಡಿಯುವ ನೀರಿಗೆ ದುರ್ಭಿಕ್ಷ ಅಂದರೆ ಹೇಗೆ?
– ಕೆ.ಪಿ. ಸುರೇಶ

===
ಬಿಡುವಾದಾಗ ಪಂಚಾಯ್ತಿಗಳಿಗೆ ಹೋಗಬಹುದೇನೋ. ಅಲ್ಲಿ ನಮ್ಮ ಕುಡಿಯುವ ನೀರಿನ ಪಾಡು ಏನಾಗಿದೆ ನೋಡಬಹುದು. ಕುಡಿಯುವ ನೀರಿಗೂ ಪರಿಸರಕ್ಕೂ ಸಂಬಂದವಿದೆ ಎಂಬುದು ಗೊತ್ತಿದೆ. ಹಾಗಾದರೆ, ಬಹುಗ್ರಾಮಗಳ ಮತ್ತು ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯ ಪರಿಸ್ತಿತಿ ಗ್ರಾಮ ಪಂಚಾಯ್ತಿಗಳಲ್ಲಿ ಎನಾಗುತ್ತಿದೆ ನೋಡಬೇಕಾಗಿದೆ.
ನೀರಿನ ಇಳುವರಿ ಮತ್ತು ನೀರಿನ ಅಯವ್ಯಯ ವೈಜ್ಞಾನಿಕ ರೀತಿಯಲ್ಲಿ ಆಗಿವೆ ಎಂಬುದನ್ನು ಪರಿಶೀಲಿಸದಿದ್ದರೆ ಈ ಬಹುಕೋಟಿಗಳ ವ್ಯಯ, ಜಲಪರಿಸರ ಬಳಕೆಯ ಉದ್ದೇಶಗಳು ಈಡೇರಲಾರವೇನೋ?
ಜನರ, ಜಲಜೀವನ ಸುಧಾರಿಸದೆ, ಕೇವಲ ಭೌತಿಕ ಸುಧಾರಣೆಯ ಅಂಕಿ ಅಂಶಗಳ ನೀಡಿ ಟಾಟಾ ಹೇಳಿ ಹೋದ ಜಲಾನಯನ ಇಲಾಖೆಯ ಪಾಡು ಈಗ ಚಾಲ್ತಿಯಲ್ಲಿರುವ ಯೋಜನೆಗಳದ್ದೂ ಆಗಬಾರದೇನೋ?
ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಹೇಳಬೇಕು. ಇವರು ವಾರ್ಷಿಕ ನೀರಿನ ಇಳುವರಿಯ ಅಂದಾಜು ಪಟ್ಟಿಯನ್ನು ತಯಾರಿಸಲು ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲೂ ಕಾರ್ಯೋಪಯುಕ್ತ ಜಾಗ್ರತೆ ವಹಿಸಬೇಕು.
-ಲೇಖಕ ಉಜ್ಜಜ್ಜಿ ರಾಜಣ್ಣ
—-
ಗ್ರಾಮಸ್ಥರು, NGOಗಳು ಪ್ರಶ್ನಿಸಲು ಶುರು ಮಾಡಬೇಕಲ್ಲವೇ? ನೀರಿನ ಇಳುವರಿ ಅಲ್ಲ. ಪಂಚಾಯತಿನ ಕೊಳವೆ ಬಾವಿ ನೀರಿಗೆ ಕನ್ನ ಹಾಕುತ್ತಿರುವವರು ಯಾರು ಅಂತ ಹುಡುಕಿದರೆ ಸಾಕು!
-ಕೆ.ಪಿ.ಸುರೇಶ

LEAVE A REPLY

Please enter your comment!
Please enter your name here