ಕೋಳಿಯ ಮೊಟ್ಟೆ ಅಥವಾ ತತ್ತಿ ಒಂದು ಕಲಬೆರಕೆ ಮಾಡಲಾಗದ ಹೆಚ್ಚು ಪ್ರೊಟೀನ್‌ಯುಕ್ತ ಆಹಾರಗಳಲ್ಲಿ ಒಂದು. ಮಕ್ಕಳಿಗೆ, ವಯಸ್ಸಾದವರಿಗೆ, ಯುವಕರಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ಎಲ್ಲರಿಗೂ ಉತ್ತಮ ಗುಣಮಟ್ಟದ ಕಲಬೆರಕೆ ಮಾಡಲಾಗದ ಪ್ರೊಟೀನ್ ಹೊಂದಿದ ಪೌಷ್ಟಿಕ ಆಹಾರ.
ಭಾರತದಲ್ಲಿ ಅನೇಕ ವಿಷಯಗಳ ಬಗ್ಗೆ ಹೇಗೆ ಇನ್ನೂ 50 ವರ್ಷಗಳು ಕಳೆದರೂ ನಾಶವಾಗದಂತ ಮೌಢ್ಯಗಳಿವೆಯೋ ಹಾಗೆಯೇ ಮೊಟ್ಟೆಯ ಬಗ್ಗೆ ಮೌಢ್ಯಗಳು ಮತ್ತು ಮಿಥ್ಯಗಳು ಹರಡಿವೆ. ಆ ಕುರಿತು ವೈಜ್ಞಾನಿಕ ಬೆಳಕು ಚೆಲ್ಲಬೇಕಿದೆ. ಆ ಕುರಿತು ಒಂದು ಪ್ರಯತ್ನ.
ಮಿಥ್ಯ 1: ಮೊಟ್ಟೆ, ಮಾಂಸಾಹಾರ
ಸೂಕ್ತ ಗ್ರಹಿಕೆ: ತತ್ತಿ ಮಾಂಸಾಹಾರ ಅಲ್ಲ. ಮಾಂಸವೆಂದರೆ ಅಂಗಾಂಶಗಳ ಸಮೂಹ. ತತ್ತಿ ಏಕಕೋಶ ಹೊಂದಿದ ಪಕ್ಷಿಜನ್ಯ ವಸ್ತು. ಹಾಗೆಂದ ಮಾತ್ರಕ್ಕೆ ಇದು ಸಸ್ಯಾಹಾರವೂ ಅಲ್ಲ. ಪಕ್ಷಿಜನ್ಯ ಆಹಾರ.
ಮಿಥ್ಯ 2: ಹಸಿ ಮೊಟ್ಟೆ ಬೇಯಿಸಿದ ಮೊಟ್ಟೆಗಿಂತ ಜಾಸ್ತಿ ಪೌಷ್ಟಿಕ.
ಸೂಕ್ತ ಗ್ರಹಿಕೆ: ಹಸಿ ಮೊಟ್ಟೆ ಅಥವಾ ತತ್ತಿ ಬೇಯಿಸಿದ ತತ್ತಿಗಿಂತ ಜಾಸ್ತಿ ಪೌಷ್ಟಿಕವಲ್ಲ. ಬದಲಾಗಿ ಅದರಿಂದ ಸಾಲ್ಮೊನೆಲ್ಲಾ ಇತ್ಯಾದಿ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ತತ್ತಿಯನ್ನು ಬೇಯಿಸುವುದರಿಂದ ಬ್ಯಾಕ್ಟಿರಿಯಾಗಳು ನಾಶವಾಗಿ ಪ್ರೊಟೀನುಗಳು ಸುಲಭವಾಗಿ ಜೀರ್ಣವಾಗುತ್ತವೆ
ಮಿಥ್ಯ 3: ನಾಟಿ ಮೊಟ್ಟೆಗಳು ಸಾವಯವ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಗಿಂತ ಪೌಷ್ಟಿಕ
ಸೂಕ್ತ ಗ್ರಹಿಕೆ: ನಿಜವಲ್ಲ. ನಾಟಿಕೋಳಿಗಳ ಮೊಟ್ಟೆ ಗಾತ್ರದಲ್ಲಿ ಚಿಕ್ಕದು ಮತ್ತು ಪೌಷ್ಟಿಕ ಮಟ್ಟದಲ್ಲಿ ಹೈಬ್ರಿಡ್ ಕೋಳಿಗಿಂತ ಯಾವುದೇ ಪೌಷ್ಟಿಕಾಂಶ ಹೊಂದಿಲ್ಲ. ಅದರ ಪರಿಮಳ ಮತ್ತು ರುಚಿಯಲ್ಲಿ ಒಂದಿಷ್ಟು ವ್ಯತ್ಯಾಸ ಇರಬಹುದು ಅಷ್ಟೇ.
ಮಿಥ್ಯ 4: ನಾಟಿ ಮೊಟ್ಟೆಗಳು ಸಾವಯವ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಗಳಲ್ಲಿ ಔಷಧಗಳ ಉಳಿಕೆ ಇದೆ.
ಸೂಕ್ತ ಗ್ರಹಿಕೆ: ಮೊಟ್ಟೆಗಳಲ್ಲಿ ಯಾವುದೇ ಔಷಧಿಯ ಅಂಶ ಗಣನೀಯವಾಗಿ ಇರುವುದಿಲ್ಲ. ಇದ್ದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಮನುಷ್ಯರ ಜೀವಕ್ಕೆ ಯಾವುದೇ ಅಡ್ಡ ಪರಿಣಾಮ ಮಾಡುವುದಿಲ್ಲ. ಬೇಯಿಸಿದಾಗ ಬಹುತೇಕ ಔಷಧಗಳು ನಿಷ್ಕಿçಯಗೊಳ್ಳುತ್ತವೆ.
ಮಿಥ್ಯ 5: ಹೈಬ್ರಿಡ್ ಕೋಳಿ ಮೊಟ್ಟೆಗಳ ಉತ್ಪಾದನೆಯಲ್ಲಿ ಹಾರ್ಮೋನುಗಳ ಬಳಕೆ ಜಾಸ್ತಿ.
ಸೂಕ್ತ ಗ್ರಹಿಕೆ: ಮೊಟ್ಟೆ ಕೋಳಿಗಳಲ್ಲಿ ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸಲು ಯಾವುದೇ ಹಾರ್ಮೋನು ಬಳಸುವುದಿಲ್ಲ ಮತ್ತು ಅದು ಲಾಭದಾಯಕವೂ ಅಲ್ಲ. ಬದಲಾಗಿ ಹೆಚ್ಚು ಮೊಟ್ಟೆ ಉತ್ಪಾದಿಸುವ ತಳಿಗಳ ಸಂಕರಣ ಮಾಡಿ ಅವುಗಳಿಗೆ ಪೌಷ್ಟಿಕಾಂಶ ಹೊಂದಿದ ಆಹಾರ ನೀಡಿ ಮೊಟ್ಟೆಯ ಗಾತ್ರ ಮತ್ತು ಉತ್ಪಾದನೆ ಜಾಸ್ತಿ ಮಾಡಲಾಗುತ್ತದೆ. ಮೊಟ್ಟೆಯಲ್ಲಿ ಯಾವುದೇ ಹಾರ್ಮೋನು ಪಳಿಯುಳಿಕೆಯಾಗಿ ಬರುವುದಿಲ್ಲ.
ಮಿಥ್ಯ 6: ಕಂದು ಬಣ್ಣದ ಮೊಟ್ಟೆಗಳು ಮತ್ತು ನಾಟಿಕೋಳಿಗಳ ಮೊಟ್ಟೆಗಳು ಸಾವಯವ ಮತ್ತು ಜಾಸ್ತಿ ಪೌಷ್ಟಿಕ.
ಸೂಕ್ತ ಗ್ರಹಿಕೆ: ಮೊಟ್ಟೆಯ ಬಣ್ಣವು ಅದನ್ನು ಇಡುವ ಕೋಳಿಯ ಮೇಲೆ ಅವಲಂಬಿತವಾಗಿದೆ. ರಾಸಾಯನಿಕ ಮುಕ್ತ ಆಹಾರ ತಿಂದು ಉತ್ಪಾದನೆಯಾದ ತತ್ತಿಗಳೆಲ್ಲಾ ಸಾವಯವವೇ ಸರಿ. ಬಣ್ಣದಲ್ಲಿನ ವ್ಯತ್ಯಾಸ ಹೊರತು ಪಡಿಸಿ ನಾಟಿಕೋಳಿಯ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಮತ್ತು ಹೈಬ್ರಿಡ್ ಕೋಳಿ ಮೊಟ್ಟೆಯ ಪೌಷ್ಟಿಕಾಂಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಬದಲಾಗಿ ನಾಟಿ ಕೋಳಿಯ ಮೊಟ್ಟೆ ಜಾಸ್ತಿ ದುಬಾರಿ ಮತ್ತು ತೂಕ ಕಡಿಮೆ.
ಮಿಥ್ಯ 7: ತತ್ತಿಗಳಿಗೆ ಜೀವವಿದೆ ಮತ್ತು ಅದನ್ನು ತಿನ್ನುವುದು ಪ್ರಾಣಿಹತ್ಯೆ ಮಾಡಿದಂತೆ.
ಸೂಕ್ತ ಗ್ರಹಿಕೆ: ಮೊಟ್ಟೆಯನ್ನು ಕೋಳಿಗಳು ಇಡೀ ವರ್ಷ ಗಂಡುಕೋಳಿಯ ಸಂಪರ್ಕವಿಲ್ಲದಿದ್ದರೂ ಸಹ ಇಡುತ್ತಲೇ ಇರುತ್ತವೆ. ಕಾರಣ ತತ್ತಿ ಏಕಕೋಶವನ್ನು ಹೊಂದಿದ್ದು ಇದಕ್ಕೆ ಜೀವ ಇರುವುದಿಲ್ಲ ಮತ್ತು ಇದನ್ನು ತಿನ್ನುವುದು ಜೀವ ಹತ್ಯೆಯಲ್ಲ.
ಮಿಥ್ಯ 8: ತತ್ತಿಯನ್ನು ತಿನ್ನುವುದರಿಂದ ದೇಹದ ಕೊಲೆಸ್ಟೆರೊಲ್ ಜಾಸ್ತಿಯಾಗಿ ಹೃದಯದ ತೊಂದರೆ ಜಾಸ್ತಿಯಾಗುತ್ತದೆ.
ಸೂಕ್ತ ಗ್ರಹಿಕೆ: ತತ್ತಿಯನ್ನು ತಿನ್ನುವುದರಿಂದ ಕೊಲೆಸ್ಟೆರೋಲ್ ಅಥವಾ ಕೊಬ್ಬು ಜಾಸ್ತಿಯಾಗುವುದಿಲ್ಲ. ಮನುಷ್ಯನ ದೇಹಕ್ಕೆ ಒಂದಿಷ್ಟು ಪ್ರಮಾಣದಲ್ಲಿ ಕೊಲೆಸ್ಟೆರೊಲ್ ಅವಶ್ಯ. ತತ್ತಿ ತಿನ್ನುವುದರಿಂದ ಜಾಸ್ತಿ ಕೊಲೆಸ್ಟಿರೋಲ್ ನೀಡಿದ ಹಾಗಾಗುವುದಿಲ್ಲ. ಅದನ್ನು ದೇಹವೇ ಉತ್ಪಾದಿಸುತ್ತದೆ. ಕೊಲೆಸ್ಟಿರಾಲ್ ಅಂಶವೇ ಇರದ ಆಹಾರವನ್ನು ಸೇವಿಸಿದರೂ ಸಹ ಕೊಲೆಸ್ಟಿರಾಲ್ ಉತ್ಪಾದನೆಯಾಗಿ ಹೃದಯದ ತೊಂದರೆಯಾದ ನಿದರ್ಶನಗಳು ಸಾಕಷ್ಟು ಇವೆ.
ಮಿಥ್ಯ 9: ತತ್ತಿಯ ಕವಚ ಹೊಟ್ಟೆಗೆ ಹೋದರೆ ಪ್ರಾಣಕ್ಕೆ ಅಪಾಯ.
ಸೂಕ್ತ ಗ್ರಹಿಕೆ: ತತ್ತಿಯ ಗಟ್ಟಿಯಾದ ಕವಚ ಹೊಟ್ಟೆಗೆ ಹೋಗುವುದು ಅಗಾಗ್ಗೆ ಸಾಮಾನ್ಯ ಮತ್ತು ಇದರಿಂದ ಯಾವುದೇ ತೊಂದರೆ ಇಲ್ಲ.
ಮಿಥ್ಯ 10: ಗಂಡು ಮತ್ತು ಹೆಣ್ಣು ಕೋಳಿಗಳ ಸಂಪರ್ಕದಿ೦ದ ಫಲ ಹೊಂದಿದ ಮೊಟ್ಟೆ ಬಹಳ ಪೌಷ್ಟಿಕ
ಸೂಕ್ತ ಗ್ರಹಿಕೆ: ಫಲ ಹೊಂದಿದ ಅಥವಾ ಫಲ ಹೊಂದಿರದ ಮೊಟ್ಟೆಗಳ ಪೌಷ್ಟಿಕಾಂಶಗಳಲ್ಲಿ ಒಂದಿಷ್ಟೂ ವ್ಯತ್ಯಾಸ ಇಲ್ಲ. ಫಲಹೊಂದಿದ ತತ್ತಿಗೆ ಕಾವು ನೀಡಿದರೆ ಮರಿ ಹೊರಬರುತ್ತದೆ ಅಷ್ಟೆ.
ಮಿಥ್ಯ 11: ಬೇಸಿಗೆಯಲ್ಲಿ ತತ್ತಿ ಸೇವಿಸಿದರೆ ದೇಹಕ್ಕೆ ಬಹಳ ಹೀಟಾಗುತ್ತದೆ
ಸೂಕ್ತ ಗ್ರಹಿಕೆ: ಹೀಟಾಗುತ್ತದೆ, ಉಷ್ಣವಾಗುತ್ತದೆ ಅಥವಾ ಗರಮಿಯಾಗುತ್ತದೆ ಎಂಬುದೇ ಒಂದು ದೊಡ್ಡ ತಪ್ಪು ಕಲ್ಪನೆ. ತತ್ತಿ ಮತ್ತು ಕೆಲವೊಂದು ಔಷಧಿ ಅಥವಾ ತರಕಾರಿ ಸೇವಿಸಿದರೆ ಹೀಟಾಗುತ್ತದೆ ಎಂಬುದು ತಪುö್ಪ ಕಲ್ಪನೆ. ಕೆಲವೊಂದು ಆಹಾರ, ಔಷಧಿ ಸೇವಿಸಿದಾಗ ಜಠರದಲ್ಲಿ ಆಮ್ಲತೆ ಜಾಸ್ತಿಯಾಗಿ ಕಸಿವಿಸಿಯಾಗಬಹುದು. ಇದನ್ನು ಹೀಟೆಂದು ಕರೆದರೆ ಇದಕ್ಕೂ ಹೀಟಿಗೂ ಯಾವುದೇ ಸಂಬ೦ಧವಿಲ್ಲ.
ಮಿಥ್ಯ 12: ಜಾಸ್ತಿ ತತ್ತಿ ಸೇವಿಸಿದರೆ ಮಕ್ಕಳಾಗಲು ತೊಂದರೆಯಿದೆ.
ಸೂಕ್ತ ಗ್ರಹಿಕೆ: ಇದೆಲ್ಲಾ ಶುದ್ಧ ಸುಳ್ಳು. ಅಸಲಿನಲ್ಲಿ ತತ್ತಿಯ ಮೂಲದ ಪ್ರೊಟೀನ್ ಸೇವಿಸಿದರೆ ಪ್ರಜನನ ಕ್ರಿಯೆ ಜಾಸ್ತಿಯಾಗಬಹುದೇ ಹೊರತು ಪುರುಷತ್ವಕ್ಕೂ ಯಾವುದೇ ತೊಂದರೆ ಇಲ್ಲ.
ಮಿಥ್ಯ 13:ಕೋಳಿಗೆ ಜಾಸ್ತಿ ಮೊಟ್ಟೆ ಇಡಲು ಮತ್ತು ಬೆಳವಣಿಗೆ ವೇಗವಾಗಿ ಬರಲು ಬೆಳವಣಿಗೆಯ ಹಾರ್ಮೋನು (“ಗ್ರೋತ್ ಹಾರ್ಮೋನ್”) ನೀಡುತ್ತಾರೆ.
ಸೂಕ್ತ ಗ್ರಹಿಕೆ: ಇದು ಶುದ್ಧ ಅಸತ್ಯ. ಮಾಂಸದ ಕೋಳಿಗಳು ವೇಗವಾಗಿ ಬೆಳೆಯಲು ಉತ್ತಮ ಪೌಷ್ಟಿಕ ಆಹಾರ, ಪ್ರೊಬಯೋಟಿಕ್ಸ್ ಮತ್ತು ಕೆಲವೊಮ್ಮೆ ಜೀವನಿರೋಧಕಗಳನ್ನು ನೀಡುತ್ತಾರೆ. ಬೇಗ ಬೆಳೆಯುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಳವಣಿಗೆಯ ಹಾರ್ಮೋನು ನೀಡುವುದರಿಂದ ಬೆಳವಣಿಗೆ ಬರುವುದಿಲ್ಲ. ಹಾರ್ಮೋನು ನೀಡುವುದು ಅತ್ಯಂತ ದುಬಾರಿ. ಬೆಳವಣಿಗೆಯ ಹಾರ್ಮೋನನ್ನು ಸಹಸ್ರಾರು ಕೋಳಿಗಳಿಗೆ ನೀಡುವುದು ಕುಕ್ಕುಟ ಉಧ್ಯಮದಲ್ಲಿ ಕಷ್ಟಸಾಧ್ಯ ವಿಚಾರ. ಬೆಳವಣಿಗೆಯ ಹಾರ್ಮೋನು ಬಾಯಿಯ ಮೂಲಕ ನೀಡಿದಾಗ ಯಾವುದೇ ಕಾರಣಕ್ಕೂ ದೇಹಕ್ಕೆ ಸೇರುವುದಿಲ್ಲ. ದೇಹಕ್ಕೇ ಸೇರದ ಮೇಲೆ ಮಾಂಸದಲ್ಲಾಗಲಿ ಅಥವಾ ಮೊಟ್ಟೆಯಲ್ಲಾಗಲಿ ಬರುವ ಸಾಧ್ಯತೆಯೇ ಇಲ್ಲ. ಕಾರಣ ಇವುಗಳಿಂದ ಮನುಷ್ಯನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯೇ ಇಲ್ಲ.
ಮಿಥ್ಯ 14: ಔಷಧಿಗಳ ಪಳಿಯುಳಿಕೆಗಳು ಕೋಳಿಗಳ ಮೊಟ್ಟೆಯಲ್ಲಿ ಉಳಿದು ಮನುಷ್ಯರಲ್ಲಿ ತೊಂದರೆಯನ್ನು೦ಟು ಮಾಡುತ್ತವೆ.
ಸೂಕ್ತ ಗ್ರಹಿಕೆ: ಇದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಸತ್ಯವಲ್ಲ. ಮೊಟ್ಟೆ ಕೋಳಿಗಳಿಗೆ ವೇಗದ ಬೆಳವಣಿಗೆ ಅವಶ್ಯಕತೆ ಇಲ್ಲ. ಅವು ಮೊಟ್ಟೆ ಇಡಲು ಅವಶ್ಯಕತೆ ಇದ್ದಷ್ಟು ಆಹಾರ ನೀಡಲಾಗುತ್ತದೆ. ಅವು ಯಾವುದೇ ಆಹಾರ, ಔಷಧಿ ನೀಡಿದರೂ ಒಮ್ಮೆಯೇ ಎರಡು ಮೊಟ್ಟೆ ನೀಡುವುದಿಲ್ಲ ಅಥವಾ ಜಾಸ್ತಿ ಮೊಟ್ಟೆ ಇಡುವುದಿಲ್ಲ. ಮೊಟ್ಟೆಗಳಲ್ಲಿ ಒಂದೊಮ್ಮೆ ಔಷಧ ಇದ್ದರೂ ಸಹ ಅದರ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ವಿಶ್ವಮಟ್ಟದಲ್ಲಿ ನಿಗದಿಪಡಿಸಿದ ಪ್ರತಿ ದಿನ ಸೇವನೆಯ ಮಿತಿಯಲ್ಲಿಯೇ ಇರುತ್ತದೆ. ಮೊಟ್ಟೆಯನ್ನು ಬೇಯಿಸಿದಲ್ಲಿ ಅದು ಹೊರಟು ಹೋಗುತ್ತದೆ ಇಲ್ಲವೇ ಜಠರದ ಆಮ್ಲತೆಯಲ್ಲಿ ನಿಷ್ಕಿçಯಗೊಳ್ಳುತ್ತದೆ. ಕಾರಣ ಇದು ಮನುಷ್ಯರಿಗೆ ಅಪಾಯ ತಂದ ಯಾವ ನಿದರ್ಶನಗಳೂ ಇಲ್ಲ.
ಈ ಪಟ್ಟಿ ಹೀಗೆಯೇ ಬೆಳೆಯುತ್ತದೆ. ನಿಮಗೆ ಗೊತ್ತಿರುವ ಅಥವಾ ಕೇಳಿರುವ ಈ ರೀತಿಯ ನಂಬಿಕೆಗಳ ಪಟ್ಟಿ ಇದ್ದರೆ ಇದಕ್ಕೆ ಸೇರಿಸಿ. ಓದುಗರಿಗೆ ಅನುಕೂಲವಾಗಲಿ.
ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204