ನಾನು ಹುಟ್ಟಿ ಬೆಳೆದದ್ದು ಪಕ್ಕಾ ಕೃಷಿ ಪಂಡಿತರ ಮಗಳಾಗಿಯಾದರೂ, ಸ್ವತಂತ್ರವಾಗಿ ಕೃಷಿಯ ಬದುಕನ್ನು ಅಪ್ಪಿಕೊಂಡು ಬರೋಬ್ಬರಿ 23 ವರ್ಷಗಳಾದವು. ಮೊದಮೊದಲು ಸಂಪೂರ್ಣ ಜ್ಞಾನವಿಲ್ಲದಿದ್ದರೂ ಅದರೊಳಗೆ ತೊಡಗಿಸಿಕೊಳ್ಳುತ್ತಾ ಮಣ್ಣು ಮತ್ತು ಬೆಳೆಗಳ ಬಗ್ಗೆ ತಿಳಿಯತೊಡಗಿದೆ.
ಸಾಂಪ್ರದಾಯಿಕ ಬೆಳೆ ತೆಂಗು
ನಮ್ಮ ಸೀಮೆಯ ಕೃಷಿ ಎಂದರೆ, ತೋಟಗಾರಿಕಾ ಬೆಳೆಯಾಗಿ ಮುಖ್ಯವಾಗಿ ತೆಂಗು ಬೆಳೆಯುತ್ತಿದ್ದರು. ನೀರಿನ ಸೌಕರ್ಯ ಇದ್ದವರು ವಾಣಿಜ್ಯ ಬೆಳೆಗಳಾಗಿ ಬಾಳೆ ಹಾಗೂ ತರಕಾರಿಗಳ ಕೃಷಿ ಮಾಡುತ್ತಿದ್ದರು. ಮಳೆಯಾಧಾರಿತ ಬೆಳೆಗಳಾಗಿ ರಾಗಿ, ಜೋಳ, ಅವರೆ, ತೊಗರಿ, ಹೆಸರು, ಉದ್ದು, ಹುರುಳಿ, ಅಲಸಂದೆಗಳನ್ನು ಸಾಮಾನ್ಯ ಬೆಳೆಗಳಾಗಿ ಬೆಳೆಯುತ್ತಿದ್ದರು.
ಕೀಟನಾಶಕಗಳು
ಈಗ ಹಲವಾರು ರೈತರ ಕೃಷಿಯಲ್ಲಿ ಇದೆಲ್ಲಾ ಬದಲಾಗಿ, ಭೂಮಿಯೇ ಕರಗಿ ಹೋಗುವಷ್ಟು ಕೀಟನಾಶಕಗಳನ್ನೂ ಮಾರಕ ರಾಸಾಯನಿಕಗಳನ್ನೂ ಸುರಿದು ಹಲವಾರು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಯುತ್ತಿದ್ದಾರೆ ಅನ್ನುವುದಕ್ಕಿಂತ ಕಂಪನಿಗಳವರು ಹಣದ ದುರಾಸೆಯಿಂದ ರೈತರನ್ನು ಮರುಳು ಮಾಡಿ ಮರೀಚಿಕೆಯ ಹಿಂದೆ ಓಡಿಸುತ್ತಾ ಮರದ ತುದಿಯಲ್ಲಿ ನಿಂತು ಬುಡವನ್ನು ಕಡಿಯುವಂತೆ ಮಾಡುತ್ತಿದ್ದಾರೆ.
ಮಣ್ಣೆಂದರೆ” ಬರೀ ಮಣ್ಣಲ್ಲ
ನಮ್ಮ ಹಲವು ರೈತರಿಗಾದರೂ “ಮಣ್ಣೆಂದರೆ” ಬರೀ ಮಣ್ಣಲ್ಲ, ಎಂದಿಗೂ ಅದು ನಮ್ಮೆಲ್ಲರ “ಜೀವ” ಅದನ್ನು ದೇವರ ಮನೆಗಿಂತಲೂ ಪವಿತ್ರವಾಗಿ ಇಟ್ಟುಕೊಳ್ಳುಬೇಕು, ಅದಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸುವ ದಾತಿಕರಂತೂ ಇಲ್ಲವೇ ಇಲ್ಲ. ಆದ್ದರಿಂದ ಸರ್ವನಾಶದ ಹಾದಿಯನ್ನು ಹಿಡಿದು ನಾಗಾಲೋಟದಲ್ಲಿ ಓಡುತ್ತಿದ್ದಾರೆ.
ನಾನೂ ಯಾಮಾರಿದೆ
ಹೀಗಿರುವಾಗ, ಮಣ್ಣನ್ನು ಅಂದಿನಿಂದ ಇಂದಿನವರೆಗೂ ಹಾಗೆಯೇ ಕಾಪಾಡಿಕೊಂಡು ಬಂದಿದ್ದ ನಾನೂ ಕೂಡಾ ಎರಡು ವರ್ಷಗಳ ಹಿಂದೆ ಯಾಮಾರಿಬಿಟ್ಟೆ. ನಮ್ಮನೆ ಯಜಮಾನರು, ಐದು ವರ್ಷಗಳಿಂದ ಶುಂಠಿ ಬೆಳೆಯಲೇಬೇಕೆಂದು ತೀವ್ರವಾಗಿ ಕಾಟ ಕಾಡುತ್ತಲೇ ಇದ್ದರು. ನಾನೂ ಕೂಡ ತಾಳಲಾರದೆ ಯಾವುದೇ ಕೀಟನಾಶಕ ಬಳಸದೆ ಬೆಳಯುವ ಶರತ್ತಿನಲ್ಲಿ ಒಪ್ಪಿಕೊಂಡೆ.
ಪ್ರಾರಂಭದಿಂದಲೂ ಸಾವಯವ ಪದ್ದತಿಯನ್ನೇ ಅನುಸರಿಸಿ ಬಿತ್ತನೆ ಮಾಡಿದ್ದಾಯ್ತು. ಆದರೆ ಖರ್ಚು ಮಾತ್ರ ಕಡಿಮೆಯದೇನಾಗಿರಲಿಲ್ಲ. ಆದರೆ ನನ್ನ ಗ್ರಹಚಾರಕ್ಕೆ ಅಷ್ಟೂ ವರ್ಷಗಳಿಂದ ಇಲ್ಲದ ಮಳೆ ಆ ವರ್ಷ ಬಿಡದೆ ಹಿಡಿಯಿತು. ಬಂಗಾರದಂತೆ ಬಂದ ಶುಂಠಿ ಕೊಳೆಯಲು ಶುರುವಾಯಿತು.
ಕೀಟನಾಶಕ ಬಳಕೆಗೆ ಒತ್ತಡ
ಅಷ್ಟೊತ್ತಿಗೆ ನನ್ನ ಖರ್ಚು 5 ಲಕ್ಷಗಳನ್ನು ದಾಟಿತ್ತು. ನಿಜವಾಗಿಯೂ ಕಂಗಾಲಾದೆ. ಅವರಿವರನ್ನು ಸಂಪರ್ಕಿಸಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಅದಕ್ಕಾಗಿ ಈಗಲಾದರೂ ಕೀಟನಾಶಕ ಬಳಸಿ ಉಳಿಸಿಕೊಳ್ಳಲು ಒತ್ತಡ ಶುರುವಾಯಿತು. ಒಪ್ಪದ ಮನಸ್ಸು ಸುಣ್ಣದ ಸಿಂಪಡಣೆ ಮುಂತಾದ ಸೊಂಟ ಮುರಿದು ಹೋಗುವಷ್ಟು ಯಾವ್ಯಾವೋ ಹತೋಟಿ ಕ್ರಮಗಳನ್ನು ಮಾಡಿದೆ. ಪ್ರಯೋಜನ ಆಗಲಿಲ್ಲ. ಕೊನೆಗೆ ಯಾರೋ ಕಿಡಿಗೇಡಿ ಸಾವಯವ ಔಷಧೀಯೇ ಇದೆ, ಸಿಂಪಡಿಸಿದರೆ ಖಂಡಿತ ಹತೋಟಿಗೆ ಬರುತ್ತದೆ ಅಂದಾಗ ಸಂತೋಷದಿಂದ ಮಾಡಿದೆ.
ಸಾವಯವ ಎಂದಿದ್ದು ರಾಸಾಯನಿಕವಾಗಿತ್ತು
ಹತೋಟಿಗೆ ಬರುವುದು ಎರಡನೇ ವಿಷಯ ಆದರೆ ಇಡೀ ಒಂದೂವರೆ ವರ್ಷ ಕಾದರೂ ಬಂದ ಬೆಳೆಗೆ ಸಿಕ್ಕಿದ್ದು ಮೂರು ಕಾಸಿನ ಬೆಲೆ…!! ಆದರೆ, ಕೊನೆಗೆ ತಿಳಿದದ್ದು ಸಾವಯವ ಎಂದು ಸಿಂಪಡಿಸಿದ್ದು ” ರಾಸಾಯನಿಕ ಕೀಟನಾಶಕ” ಎಂದು ತಿಳಿದಾಗ ಮಾತ್ರ ಎದೆಯೊಡೆದು ಹೋಯಿತು. ಇವತ್ತಿಗೂ ಅದರ ನೋವು ಕಾಡುತ್ತಿದೆ. ಮತ್ತು ಎಂದೂ ಮರೆಯದ ನೋವು ಅದು.
ಕಾಣುತ್ತಿರುವ ಪರಿಣಾಮ
ಈ ವರ್ಷ ಅದರ ಪರಿಣಾಮ ಎದ್ದು ಕಾಣುತ್ತಿದೆ. ಕಳೆದ ವರ್ಷ ಹಾಕಿದ ಬಾಳೆಯು ಈ ವರ್ಷ ಗೊನೆಗೆ ರೆಡಿಯಾಗಿ ನಿಂತಿವೆ. ಆದರೆ ಈ ವರ್ಷ ಕೂಡ ಮೂರು ತಿಂಗಳಿನಿಂದ ಮಳೆ ಬಿಡದೇ ಹಿಡಿದಿದೆ. ಕೆರೆಗೆ ಒಂದನಿ ನೀರಾಗದ ಮಳೆಯಾದರೂ ಬೆಳೆಗಾದರೂ ಒಳ್ಳೆಯದೆ ಆದರೆ, ಬಿಸಿಲು ಇರದೆ ಮೋಡ ತುಂಬಿದ ಜುಮುರು ಮಳೆ ಯಾವ ಬೆಳೆಯನ್ನೂ ಆರೋಗ್ಯವಾಗಿ ಉಳಿಯಗೊಡುವುದಿಲ್ಲ.
ಅದರಲ್ಲೂ ಫಲವತ್ತು ಕಡಿಮೆ ಇರುವ ಅಂದರೆ, ಕೀಟನಾಶಕ ಹಾಗೂ ರಾಸಾಯನಿಕಗಳಿಂದ ಸಂತ್ರಸ್ತಗೊಂಡ ಭೂಮಿಯಾದರಂತೂ ಬೆಳೆಗಳು ಕೊಳೆಯಲು ಪ್ರಾರಂಭವಾಗುತ್ತವೆ. ಯಾವ ಹೊಲದಲ್ಲಿ ಕೀಟನಾಶಕ ಸಿಂಪಡಣೆಯಾಗಿತ್ತೋ ಆ ಹೊಲದ ಬಾಳೆಗಳು ಬುಡದಿಂದ ತುದಿಯವರೆಗೂ ಎಲೆಸಮೇತ ಹಣ್ಣಾಗಿ ಸತ್ತು ಹೋಗುತ್ತಿವೆ.
ಮಣ್ಣಿಗೆ ಶಕ್ತಿ ಇಲ್ಲದೇ ಇದ್ದಾಗ !
ಇದರ ಅರ್ಥ ಶಕ್ತಿಯಿಲ್ಲದ ಮಣ್ಣಿಗೆ ಯಾವ ವಿಕೋಪಗಳನ್ನೂ ತಡೆಯುವ ಶಕ್ತಿ ಇರುವುದಿಲ್ಲ. ಆದರೆ ಈಗಿನ ಬಾಳೆ ಬೆಳೆಯನ್ನು ಉಳಿಸಿಕೊಳ್ಳಲು ಹಲವಾರು ಜನ ಈಗಲೂ ವಿಷವಿಕ್ಕುವ ಉಪಾಯವನ್ನು ಧಾರಾಳವಾಗಿ ನೀಡುತ್ತಿದ್ದಾರೆ. ನಾನಂತೂ ಒಂದೇ ಒಂದು ಬಾಳೆ ಗೊನೆ ಬರದಿದ್ದರೂ ಚಿಂತೆಯಿಲ್ಲ. ಮತ್ತೆಂದೂ ನನ್ನ ಮಣ್ಣಿಗೆ ಒಂದೇ ಒಂದು ಕಣ ವಿಷ ಸೋಕದಂತೆ ಕಾಪಾಡುತ್ತೇನೆ ಎಂದು ಪಣ ತೊಟ್ಟಿದ್ದೇನೆ.
ರೋಗಲಕ್ಷಣ ಕಡಿಮೆಯಾಗತೊಡಗಿದೆ
ದೇವರ ದಯೆ, ಭೂತಾಯಿ ನಿಜವಾಗಿಯೂ ಬಂಜೆಯಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿ ಕಳೆದವಾರ ಒಂದೆರಡು ದಿನ ಬಿಸಿಲು ಬಂದ ಕಾರಣ ರೋಗದ ಲಕ್ಷಣಗಳು ಗಮನೀಯವಾಗಿ ಕಡಿಮೆಯಾಗಿದೆ. ನನ್ನ 23 ವರ್ಷಗಳ ಕೃಷಿ ಬದುಕಿಗೆ ಸಂತೃಪ್ತಿಯನ್ನು ನೀಡಿದೆ.
ಲೇಖಕರು: ಮಹಾದೇವಿ ಕೆ.ಪಿ.
ಮಹಾದೇವಿ ರವರ ಮಾತುಗಳು ಅಕ್ಷರ: ನಿಜ. ನಾನೂ ಶುಂಠಿ ಬೆಳೆದೆ.೪೫ ಟನ್,ಖರ್ಚು ೭ ಲಕ್ಷ. ಎಲ್ಲ ರಾಸಾಯನಿಕ ಬಳಸಿದೆ.ಉತ್ತಮ ಬೆಳೆ ಬಂತು.ಆದರೆ ಬೆಲೆ ೧೫ ರೂಗೆ ಕೆಜಿ ಯಂತೆ ಮಾರಬೇಕಾಯ್ತು. ನಾನು ಕೃಷಿಗೆ ಇಳಿದು ಕೇವಲ ೨ ವರ್ಷ. ಮೇಡಂ ನಿಮ್ಮಂತೆಯೇ ಲಾಸ್ ಅನುಭವಿಸಿದ್ದೇನೆ. ಈಗ ಎಲ್ಲ 6.5 ಎಕರೆಗೆ ಬಾಳೆ ಹಾಕಿ, ನಿಮ್ಮಂತೆಯೇ ಬಯೋ ಆರ್ಗಾನಿಕ್ ಜಾಲಕ್ಕೆ ಬಿದ್ದೆ.ಬಾಳೆಗೀಗ ೨ ತಿಂಗಳು ಆದರೆ ಈಗ ನಾನು ನೈಸರ್ಗಿಕ ಕೃಷಿಗೆ ಇಳಿಯುತ್ತಿದ್ದೇನೆ. ಬಾಳೆಗೆ ಸ್ವಾಬಾವಿಕವಾಗಿ ಬೆಳೆಯಲು ದಾರಿ ಎನಾದರೂ ಇದೆಯೇ?