ಶೀರ್ಷಿಕೆ ನೋಡಿ ಆಶ್ಚರ್ಯ- ಕುತೂಹಲವಾಗಿರಬಹುದಲ್ಲವೇ ? ಹಿರಿಯರು “ಮನೆಗೆದ್ದು ಮಾರುಗೆಲ್ಲು” ಎನ್ನುತ್ತಾರೆ. ಇದರ ಅರ್ಥ ವಿಶಾಲವಾಗಿದೆ. ಯಾವುದೇ ಪ್ರಕಾರದ ವಿಜ್ಞಾನಿಗಳಾಗಲಿ ಮೊದಲು ನಾವಿರುವ ಭೂ ಗ್ರಹವನ್ನು ಸಂಪೂರ್ಣ ಅರ್ಥಮಾಡಿಕೊಳ್ಳಬೇಕು. ಈ ನಂತರವೇ ಅನ್ಯಗ್ರಹಗಳ ಒಳಗೆ ಇಣುಕಿ ನೋಡಬೇಕು. ಪ್ರಜೆಗಳ ಅಪಾರ ಮೊತ್ತದ ತೆರಿಗೆ ಹಣವನ್ನೂ ಇದಕ್ಕಾಗಿ ವ್ಯಯಿಸುವ ಸರ್ಕಾರ ಕೂಡ ಇದಕ್ಕೆ ಆದ್ಯತೆ ನೀಡಬೇಕು. ಆದರೆ ನಮ್ಮಲ್ಲಿ ಇದು ಉಲ್ಟಾ ಆಗಿದೆ. ರೈತರು ಕೃಷಿ ಮಾಡುತ್ತಿರುವ ಸಾಕಷ್ಟು ಸಸ್ಯಗಳಿಗೆ ರೋಗ ತಗುಲಿದೆ. ಇದರ ಮೂಲ ಮತ್ತು ಔಷಧ ಸಂಶೋಧಿಸಲು ಇಂಬು ನೀಡಬೇಕಾದ ಸರ್ಕಾರ ಚಂದ್ರಗ್ರಹದತ್ತ ದೃಷ್ಟಿನೆಟ್ಟು ಕುಳಿತಿದೆ.
ನಾಲ್ಕೈದು ದಶಕ ಹಿಂದೆಯೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ತಾಲೂಕುಗಳ ಪಶ್ಚಿಮ ಭಾಗದ ಅಡಿಕೆ ತೋಟಗಳಲ್ಲಿ ತೊಂಡೆ ರೋಗ ಎಂದು ಸ್ಥಳೀಯವಾಗಿ ಕರೆಯಲಾಗುವ ಹಳದಿ ಎಲೆ ರೋಗ yellow leaf disease – YLD) ಕಂಡುಬಂತು. ಅದು ಸಾವಿರಾರು ಎಕರೆ ತೋಟವನ್ನು ಬಲಿ ತೆಗೆದುಕೊಂಡಿದೆ. ಅತಿವೃಷ್ಟಿಯಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ರೋಗ ಇನ್ನಷ್ಟು ಉಲ್ಬಣಗೊಂಡು ವೇಗವಾಗಿ ಹರಡುತ್ತಲೇ ಇದೆ.ಅಡಿಕೆ ಬೆಳೆಯೇ ಗ್ರಾಮೀಣ ಅರ್ಥ ವ್ಯವಸ್ಥೆಯ ಮೂಲಾಧಾರವಾಗಿರುವ ಇಲ್ಲಿನ ರೈತಾಪಿ ವರ್ಗವನ್ನು ಕಂಗೆಡಿಸಿದೆ.
ಅತಿ ಮಳೆ, ಫಲವತ್ತಲ್ಲದ ಭೂಮಿ, ಕಾಡುಪ್ರಾಣಿಗಳ ಕಾಟದಿಂದಾಗಿ ಬದಲಿ ಬೆಳೆಗಳೂ ವೈಫಲ್ಯ ಕಂಡಮೇಲೆ ರೈತಾಪಿ ಜನರ ಬೇಡಿಕೆ, ಪ್ರತಿಭಟನೆಗಳ ಪರಿಣಾಮ ಸರಕಾರ ತೋಟಗಾರಿಕಾ ವಿ. ವಿ. ಗಳ ಮೂಲಕ ಈ ಕುರಿತು ಸಂಶೋಧನೆ ಪ್ರಾರಂಭಿಸಿತು.
ಸರಕಾರದ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಸಂಶೋಧನೆ ಮಾಡಿ ಮುಗಿಸಿದ ವಿಜ್ಞಾನಿಗಳು ಎನ್ನಲಾದ ವಿಜ್ಞಾನಿಗಳು ಕೈಚೆಲ್ಲಿ ಕುಳಿತಿದ್ದಾರೆ. ಮೊದಲಿಗೆ ಶಿವಮೊಗ್ಗದ ನವಿಲೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಾಯಿಲೆಗೆ ಫೈಟೋಪ್ಲಾಸ್ಮಾ ಎಂಬ ರೋಗಾಣುಗಳು ಕಾರಣವಿರಬಹುದು ಎಂದರಾದರೂ ಅದನ್ನು ಸಾಬೀತುಪಡಿಸಲಾರದೇ ತಿಣುಕಿದರು. ದ. ಕ. ದ ವಿಟ್ಲದಲ್ಲಿ ಸಂಶೋಧನೆ ನಡೆಯುತ್ತಲೇ ಇದೆ ಎನ್ನಲಾಗುತ್ತಿದೆಯಾದರೂ ಇದುವರೆಗೆ ಯಾವ ಫಲಿತಾಂಶವನ್ನೂ ಪಡೆಯಲು ಸಾಧ್ಯವಾಗಿಲ್ಲ.
ಅದೂ ಸಾಲದೆಂದು ಬಾಗಲಕೋಟೆ ತೋಟಗಾರಿಕಾ ಸಂಶೋಧನಾ ಕೇಂದ್ರದ ಘಟಕವೊಂದನ್ನು ಶೃಂಗೇರಿಯಲ್ಲೇ ತೆರೆಯಲಾಯಿತು. ಕೋಟ್ಯಾಂತರ ರೂ. ವ್ಯಯಿಸಿ ನಿರ್ಮಿಸಿದ ಸುಸಜ್ಜಿತ ಪ್ರಯೋಗಾಲಯವನ್ನೊಳಗೊಂಡ ಕಟ್ಟಡ ಈಗ ಪಾಳುಬಿದ್ದಿದೆ. ಸಿಬ್ಬಂದಿಯ ಕೊರತೆ, ಅನುದಾನದ ಕೊರತೆ ಎಂದು ಏನೇನೋ ನೆಪ ಹೇಳಲಾಗುತ್ತಿದೆ.
ಈ ಭಾಗದ ರೈತರು ಕಳೆದ ದಶಕದಲ್ಲಿ ನಡೆಸಿದ ತೀವ್ರ ಹೋರಾಟದ ಫಲವಾಗಿ ರಚನೆಗೊಂಡ ಡಾ. ಗೋರಕ್ ಸಿಂಗ್ ಆಯೋಗ ನೀಡಿದ ವರದಿಯನ್ನು ಜಾರಿಗೊಳಿಸುವಲ್ಲಿಯೂ ಸರಕಾರಗಳು ವಿಫಲವಾದವು. ನಂತರದ ಚುನಾವಣೆಗಳಲ್ಲಿ ಇದನ್ನೇ ವಿಷಯವಾಗಿಟ್ಟುಕೊಂಡು ಚುನಾವಣೆ ಎದುರಿಸಿದ್ದ ಈ ಭಾಗದ ಜನಪ್ರತಿನಿಧಿಗಳೂ ಆ ವಿಚಾರದಲ್ಲಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು! ಹೊಡೆದ ಬೊಬ್ಬೆಗಳೆಲ್ಲಾ ಅರಣ್ಯ ರೋದನವಾಗತೊಡಗಿದಮೇಲೆ ಸುಸ್ತಾದ ರೈತ ಸಂಘಟನೆಗಳೂ ವಿಶ್ರಾಂತಿಯಲ್ಲಿವೆ. ಆಳುವವರಿಗೆ ಬೇಕಾಗಿದ್ದೂ ಇದೇ ಅಲ್ಲವೇ?
ಈಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹಲವು ಸಾವಿರ ಎಕರೆ ತೋಟಗಳು ರೋಗಪೀಡಿತವಾಗಿ ನಾಶವಾಗಿವೆ. ಅಲ್ಲದೆ ನೆರೆಯ ನರಸಿಂಹ ರಾಜಪುರ ತಾಲ್ಲೂಕಿನ ಬಾಳೆಹೊನ್ನೂರು, ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಗಳಿಗೂ ವ್ಯಾಪಿಸಿದೆ. ಜನ ಎಚ್ಚೆತ್ತು ಪ್ರಶ್ನಿಸದಂತೆ, ರೈತರು ಒಗ್ಗಟ್ಟಾಗಿ ಬೀದಿಗಿಳಿಯದಂತೆ ರಾಜಕಾರಣ ಮಂಕುಬೂದಿ ಎರಚಿಬಿಟ್ಟಿದೆ. ಅಡಿಕೆ ತನ್ನ ತವರಿನಲ್ಲೇ ಕಣ್ಮರೆಯಾಗಲು ಹೆಚ್ಚು ಸಮಯ ಬೇಕಿಲ್ಲ.