ಅಡಿಕೆ, ತೆಂಗಿನ ತೋಟಗಳಲ್ಲಿ, ನದಿ ಅಂಚಿನಲ್ಲಿ ಕಾಣುವ ಹಳದಿ ಹೂ ಬಳ್ಳಿ ಬಗ್ಗೆ ಯಾರಿಗೂ ವಿವರಣೆ ಅಗತ್ಯ ವಿಲ್ಲ. ಕಿತ್ತಂತೆ ಮತ್ತೆ ಬೆಳೆಯುತ್ತಾ ಹಬ್ಬುತ್ತಾ ತನ್ನದೇ ಸಾಮ್ರಾಜ್ಯ ಕಟ್ಟುತ್ತದೆ . ಇದರಿಂದಾಗಿ ಕೆಲವು ರೈತರು ಹೈರಾಣಾಗಿ ಹೋಗಿದ್ದಾರೆ. ಒಮ್ಮೆ ತೋಟ ಸ್ವಚ್ಛ ಮಾಡಿ ತಿಂಗಳ ನಂತರ ನೋಡಿದರೆ ಮತ್ತದೇ ಸಮಸ್ಯೆ. ಈಗಂತೂ ಕಳೆನಾಶಕ ಹೊಡೆದು ನಿಯಂತ್ರಿಸುವ ಪ್ರಯತ್ನದಲ್ಲಿ ಹಲವರಿದ್ದಾರೆ.
ಇಲ್ಲಿ ನೋಡಿ, ಈ ಮಹಾ ಕಳೆ ಮೇಲೆ ಎಲೆಯಿಲ್ಲದ ಇನ್ನೊಂದು ಪರಾವಲಂಬಿ ಬಳ್ಳಿಯ ಆಟ ಶುರುವಾಗಿದೆ. ಹಳದಿ ಹೂ ಬಳ್ಳಿ ಸೋತು ಕೆಲವೆಡೆ ಸತ್ತಿದೆ. ನಿಸರ್ಗದ ಆಟ ಕಂಡು ಬಂದಿದ್ದು ಹೊರನಾಡು ರಸ್ತೆಯ ಕಾಫಿ ತೋಟದ ಅಂಚಿನಲ್ಲಿ!
ಹಳದಿ ಹೂ ಬಳ್ಳಿ ಸೋಲಿಸಿದ ದೈತ್ಯ ಇನ್ನು ಯಾವ ಆಟ ಆಡಲಿದೆಯೋ ಗೊತ್ತಿಲ್ಲ.
ಪೂರಕ ಕಥೆ
ಮಂಗಳೂರಿನ ವ್ಯಕ್ತಿ ದುಬೈ ನಿಂದ ವರ್ಷಕ್ಕೆ ಒಂದೆರಡು ಸಾರಿ ಬಂದು ತಮ್ಮ ತೆಂಗಿನ ತೋಟ ನಿರ್ವಹಿಸುತ್ತಾರೆ. ಬಂದಾಗೆಲ್ಲ ಹಳದಿ ಹೂ ಬಳ್ಳಿ ಕೀಳಿಸಿ ದುಬೈ ಹೋಗ್ತಾರೆ. ಮತ್ತೇ ಬಂದಾಗ ಅದೇ ಕೆಲಸ!
ಸಾರ್ ಈ ಬಳ್ಳಿಗೆ ಏನ್ ಮಾಡ್ಬೇಕು? ಎಂದು ನನಗೊಮ್ಮೆ ಸಮಾರು ವರ್ಷಗಳ ಹಿಂದೆ ಫೋನ್ ಮಾಡಿದ್ದರು. ನನಗೂ ಉತ್ತರ ಗೊತ್ತಿರಲಿಲ್ಲ. ಕೊನೆಗೆ ಅವರೇ ಒಂದು ಸ್ವಾರಸ್ಯಕರ ಪ್ರಸಂಗ ಹೇಳಿದರು. ಇಲ್ಲಿಂದ ದುಬೈ ಹೋಗುವಾಗ ಒಂದೇ ಒಂದು ತುಂಡು ಈ ಕಳೆ ಬಳ್ಳಿ ಹೇಗೋ ಅಲ್ಲಿಗೆ ಒಯ್ದರು. ರಸ್ತೆ ಅಂಚಿನ ಒಂದು ಉದ್ಯಾನಕ್ಕೆ ಎಸೆದರು. ಈಗ ಅಲ್ಲಿಯೂ ತನ್ನ ಸಾಮರ್ಥ್ಯ ತೋರಿಸಿದೆ, ಇದನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಕ್ಕಿದ್ದರು.