
ನಮ್ಮ ಸೊಪ್ಪಿನ ಬೆಟ್ಟದಲ್ಲಿ ನಾನು ನೆಟ್ಟ ಗಾಳಿ ಗಿಡವೊಂದು ಮರವಾಗಿದೆ. ಅದೇಕೋ ಈ ಸಸ್ಯದ ಕುರಿತ ಅಪಾರ ಪ್ರೀತಿಯಿಂದ ಮುನ್ನೂರಕ್ಕೂ ಹೆಚ್ಚು ಗಿಡಗಳನ್ನು ಕಳೆದ ವರ್ಷ ಕೂಡ ನೆಟ್ಟಿದ್ದೇನೆ. ಪ್ರತೀ ವರ್ಷ ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟದಲ್ಲಿ ಸುತ್ತಾಡುವಾಗ ಈ ಮರದ ಬುಡಕ್ಕೆ ಹೋಗಿ ಹಾಜರಿ ಹಾಕಿಯೇ ಮುಂದೆ ಸಾಗುತ್ತೇನೆ. ಇದು ಆರೆಂಟು ವರ್ಷಗಳ ಅಭ್ಯಾಸ. ಸೋಜಿಗದ ಸಂಗತಿ ಅಂದ್ರೆ ಗಾಳಿ ಹೂವುಗಳನ್ನು ಅರಳಿದಾಗ ಸುತ್ತಲಿನ ಸೀಮೆಯ ಚಿಟ್ಟೆಗಳು ಇಲ್ಲಿಗೆ ಬರುತ್ತವೆ. ಇವುಗಳ ಚಿತ್ರ ತೆಗೆಯುತ್ತಾ ನಿಲ್ಲುತ್ತೇನೆ. ಅದೊಂದು ನನ್ನ ಹಾಗೂ ಕೆಮರಾ ಪಾಲಿನ ದೊಡ್ಡ ಹಬ್ಬ.
ಈಗ ಮುಖ್ಯ ವಿಷಯಕ್ಕೆ ಬರಬೇಕು. ಕಳೆದ ವರ್ಷ 2024 ರಲ್ಲಿ ಈ ಮರ ಆಗಸ್ಟ್ 19 ರಂದು ಭರ್ಜರಿ ಹೂವುಗಳನ್ನು ಅರಳಿಸಿ ಚಿಟ್ಟೆಗಳ ಜಾತ್ರೆಗೆ ಸಾಕ್ಷಿಯಾಗಿತ್ತು. ಮಳೆ ಕಡಿಮೆಯಾಗುವ ಆಗಸ್ಟ್ ತಿಂಗಳಲ್ಲಿ ಹೂ ಅರಳುವುದು ಯಾವತ್ತೂ ಇದ್ದದ್ದೇ! ಕಳೆದ ಬಾರಿ ಸಿಕ್ಕ ಕೆಲವು ಚಿಟ್ಟೆಗಳ ಚಿತ್ರ ಸಾಕ್ಷಿ ಕೂಡಾ ಇಲ್ಲಿದೆ. ಆದರೆ ಈ ವರ್ಷ 2025 ಜುಲೈ 4 ನೇ ತಾರೀಕು ಹೂವುಗಳು ತುಂಬಿವೆ. ಅಷ್ಟೇ ಅಲ್ಲ, ಕೆಲವು ಕಾಯಿಗಳು ಆಗಿವೆ! ಚಿಟ್ಟೆಗಳ ಸಂಖ್ಯೆ ಇಲ್ಲ ಎನ್ನುವಷ್ಟು ಕಡಿಮೆಯಿದೆ.

ಕಳೆದ ವರ್ಷ ಈ ದಿನಕ್ಕೆ 986 ಮಿಲಿ ಮೀಟರ್ ಮಳೆ ಸುರಿದಿತ್ತು. ಈ ವರ್ಷ ಆಗಲೇ 1881 ಮಿಲಿ ಮೀಟರ್ ದಾಟಿದೆ. ವರ್ತಮಾನ, ಭವಿಷ್ಯದ. ಮಳೆ ವ್ಯತ್ಯಾಸ, ಹವಾಮಾನದ ಇನ್ನಿತರ ಏರುಪೇರು ಹೂವುಗಳು ಅರಳುವ ಗಾಳಿಯ ವೇಳಾಪಟ್ಟಿ ಬದಲಿಸಿರಬಹುದು. ಇದರಿಂದ ಚಿಟ್ಟೆಗಳ ಮೇಲೆ ಎಂಥ ಪರಿಣಾಮ ಆಗಿರಬಹುದು? ಸ್ವತಃ ಮರದ ಹೂ ಪರಾಗಸ್ಪರ್ಶ ಕ್ರಿಯೆ ಏನಾಗಿರಬಹುದು? ಗಮನಿಸಬೇಕಾದ ಸಂಗತಿ.
ಹವಾಮಾನ ಬದಲಾವಣೆಯಿಂದ ಗಿಡಮರಗಳ ಮೇಲೆ ಏನೆಲ್ಲಾ ಏರುಪೇರು ಆಗುತ್ತದೆಂದು ನಾವು ಗಮನಿಸಿದರೂ ಇದಕ್ಕೆ ಪರಿಹಾರ ಹುಡುಕಲು ಅಸಾಧ್ಯ. ಆದರೆ ಔಷಧ, ಆಹಾರಕ್ಕೆ ನೆರವಾಗುತ್ತಿದ್ದ ಒಂದು ಗಿಡಕ್ಕೆ ತೊಂದರೆ ಆದರೆ ನಾಳೆ ನಮ್ಮ ಮೇಲೂ ಪರಿಣಾಮ ಇರುತ್ತದೆ. ನಾವು ತೀರಾ ಸೆಖೆ ಆದ್ರೆ ಫ್ಯಾನ್ ಬಳಸ್ತೇವೆ, ಎಸಿ ಹಾಕಿ ತಂಪಾಗುವ ದಾರಿ ಹುಡುಕುತ್ತೇವೆ. ಇವು ಲಾಗಾಯ್ತಿನಿಂದ ಆಗಸ್ಟ್ ತಿಂಗಳಲ್ಲಿ ಅರಳುವ ಮುಹೂರ್ತ ಇಟ್ಟುಕೊಂಡು ಈ ಮಳೆಯಲ್ಲಿಯೇ ಅರಳಿದರೆ ಮರದ ಜೊತೆಗೆ ಜೀವಲೋಕದ ಸ್ನೇಹ ಸಂಭ್ರಮ ಸಾಧ್ಯವಿಲ್ಲ.
ನಿಂತ ಮರವನ್ನು ನೋಡಿ ಹೂವು ಕಾಲದ ಕಥೆ ಹೇಳ್ತಾ ಇರಬಹುದು, ಈ ವ್ಯತ್ಯಾಸದಿಂದ ಸದಾ ಹಾರಾಡುವ ಚೆಲುವೆಯರ ಬದುಕು ಹೇಗೋ? ಮಾತಾಡಿಸಲು ಮೈಕ್ ಹಿಡಿಯೋಣವೆಂದರೆ ಎಲ್ಲರೂ ನಾಪತ್ತೆ! ಚಿಟ್ಟೆ ಹಾರಾಟದ ನೂಕು ನುಗ್ಗಲು, ಗಡಿ ಜಗಳ ಯಾವುದೂ ಇಲ್ಲ. ಇಲ್ಲೇ ಇದ್ದು ಮರ ನೋಡ್ತಾ ಒಂದಿಷ್ಟು ಪರಿಸರ ಅರಿವು ಪಡೆದ ನಮಗೆ ಈಗೀಗ ನಿಸರ್ಗ ಮಾಯೆ ಅರ್ಥ ಆಗ್ತಾ ಇಲ್ಲ ಮಾರಾಯ್ರೆ.
ದೊಡ್ಡ ಭೂಮಿಯ ಸಣ್ಣ ಕಥೆ ಇದು. ಸಿದ್ದರಾಮಯ್ಯ ಇವತ್ತು ಏನು ಅಂದ್ರು? ಡಿಕೆಶಿ ಮಾತಾಡಿದ್ರಾ? ವಿಜಯೇಂದ್ರ ದೆಹಲಿಗೆ ಹೋದ್ರ? ಪ್ರಿಯಾಂಕಾ ಮಾತಿಗೆ ಎಷ್ಟು ಅಂಕ? ಸಿನೆಮಾ ಸುದ್ದಿ ಏನು? ಭೂಕುಸಿತ, ಹೃದಯಾಘಾತ, ಹಗರಣ ಹೀಗೆ ಮಾತಾಡಲು ಎಷ್ಟೋ ಸುದ್ದಿ ಇದೆ. ಮೊನ್ನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಸತ್ತ ಹುಲಿಗಳ ನೆನಪೂ ಇನ್ನೇನು ಮರೆತು ಹೋಗುತ್ತದೆ. ಅದರಲ್ಲಿ ಒಂದೂವರೆ ತಿಂಗಳ ಮುಂಚೆ ಹೂ ಅರಳಿಸಿದ ಸಣ್ಣ ಗಾಳಿ ಮಾತು, ಚಿಟ್ಟೆ ಕಥೆ ಯಾರಿಗ್ ಬೇಕು ಹೇಳಿ! ಆದ್ರೂ ಹೇಳೋದು ಹೇಳ್ತಾ ಇರಬೇಕು, ಇಲ್ಲಾ ಅಂದ್ರೆ ಇಂಥವನ್ನು ನೋಡೋದು ಮರೆತು ಹೋಗುತ್ತದೆ !



































