ಇಲ್ಲಿ ನಾನೀಗ ನಿಮಗೆ ಪರಿಚಯಿಸುತ್ತಿರುವುದು 37ಕ್ಕೂ ಹೆಚ್ಚು ದೇಶಗಳ ಪ್ರವಾಸ ಮಾಡಿ ಅಲ್ಲಿನ ವಿವಿಧ ಹಣ್ಣಿನ ಬೀಜಗಳನ್ನು ಸಂಗ್ರಹಿಸಿದ ವೈದ್ಯರು ಮತ್ತು ಅವರ ಪರಿಶ್ರಮದಿಂದ ಬಹು ಜೀವ ವೈವಿಧ್ಯತೆಯಿಂದ ಕೂಡಿದ ತೋಟ. ಇದೊಂದು ಸ್ಪೂರ್ತಿದಾಯಕ ಕಥೆ. ಇದು ಶಿವಮೊಗ್ಗದಿಂದ 10 ಕಿ.ಮಿ. ದೂರದಲ್ಲಿರುವ ಹೊಳೆ ಹನಸವಾಡಿ ಎಂಬ ಗ್ರಾಮದಲ್ಲಿರುವ ಮಲೆನಾಡ ತೋಟ,
ಈ ತೋಟದಲ್ಲಿ ಮಲೇಶಿಯನ್ , ಕಾಂಬೋಡಿಯಾ ಸೌತ್ ಅಮೇರಿಕ , ಮೆಕ್ಸಿಕೊ ಹೀಗೆ ಅನೇಕ ವಿದೇಶಿ ಹಣ್ಣುಗಳು ಕಣ್ಣುಬಿಟ್ಟಿವೆ. ಕೆಲವು ಜಾತಿಯ ಸಸ್ಯಗಳು ಹೊಸ ಆವಾಸಸ್ಥಾನಗಳನ್ನು ವಸಹಾತುವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ , ಆದರೆ ಸಸ್ಯಗಳು ಚಲಿಸುವುದಿಲ್ಲ , ಬೀಜಗಳು ಇತರ ಸ್ಥಳಗಳಿಗೆ ಚದುರಿಕೆಯಾಗಲು ಅವು ಅನೇಕ ಬೇರೆ ಬೇರೆ ವಿಧಾನಗಳನ್ನು ಕಂಡುಕೊಂಡಿವೆ ,ಅತ್ಯಂತ ಸಾಮಾನ್ಯವಾದ ವಿಧಾನಗಳೆಂದರೆ ಗಾಳಿ, ನೀರು, ಪ್ರಾಣಿಗಳು, ಸ್ಪೋಟ ಹಾಗು ಬೆಂಕಿ.
ಪ್ರಸಾರವಾದ ಬೀಜ ಹೊಸ ವಾಸಸ್ಥಾನಕ್ಕೆ ಹೊಂದಿಕೊಳ್ಳುವುದೂ ಒಂದು ವಿಕಾಸಾತ್ಮಕ ಪ್ರಕ್ರಿಯೆ , ಬೀಜ ಪ್ರಸರಣವು ಒಗ್ಗಿಕೊಳ್ಳುವಿಕೆಗೆ ಒಂದು ಉದಾಹರಣೆ. ಬಹುಪಾಲು ಬೀಜ ಪ್ರಸಾರವಾಗುವುದು ಹಕ್ಕಿಗಳಿಂದ. ಹಣ್ಣಿನ ಬೀಜಗಳು ವಲಸೆ ಹಕ್ಕಿಗಳಿಂದ ಸಾಗಿಸಲ್ಪಟ್ಟು ಅವು ತಲುಪಿದ ಸ್ಥಳದಲ್ಲಿ ಅವುಗಳ ಹಿಕ್ಕೆಗಳ ಮೂಲಕ ಆ ಪ್ರದೇಶದಲ್ಲಿ ಅಭಿವೃದ್ದಿಯಾಗುತ್ತವೆ. ಹೊಸ ಆವಾಸಸ್ಥಾನವು ಸಸ್ಯಗಳ ಅಭಿವೃದ್ದಿಗೆ ಅನುಕೂಲವಾದಲ್ಲಿ ಚದುರಿದ ಸಸ್ಯಗಳು ಯಶಸ್ವಿಯಾಗಿ ಈ ಪ್ರದೇಶವನ್ನು ವಸಹಾತುವನ್ನಾಗಿಸಿಕೊಂಡು ಬೆಳೆಯುತ್ತಾ ಸಸ್ಯಾಭಿವೃದ್ದಿಯಾಗುತ್ತದೆ.
ವೃತ್ತಿಯಲ್ಲಿ ದಂತವೈದ್ಯರಾದ ಡಾ. ಮಂಜುನಾಥರವರು ವೃತ್ತಿ – ಪ್ರವೃತ್ತಿ ಹಾಗು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿರುವ ಶಂಕರ ಕಣ್ಣಿನ ಆಸ್ಪತ್ರೆ ಆಡಳಿತ ಮಂಡಳಿ ನೇತೃತ್ವ ವಹಿಸಿದ್ದಾರೆ. ವಯಸ್ಸು 55ರೆಡೆಗಿದ್ದರೂ ಕೃಷಿಯೆಡೆಗೆ ಇವರದು ಇಪ್ಪತ್ತೈದರ ಹರೆಯ, ಹುಮ್ಮಸ್ಸು.
ವಿದೇಶಗಳಿಗೆ ತೆರಳಿದ ಸಂದರ್ಭಗಳಲ್ಲೆಲ್ಲ ಅಲ್ಲಿನ ಸಸ್ಯ ವೈವಿಧ್ಯತೆ ಪರಿಚಯ ಮಾಡಿಕೊಳ್ಳುವುದು, ಅದರಲ್ಲಿಯೂ ಹಣ್ಣಿನ ಸಸ್ಯಗಳ ಬಗ್ಗೆ ತಿಳಿದುಕೊಳ್ಳುವುದು ಇವರ ಹವ್ಯಾಸ. ಬಹುತೇಕರು ದುಬಾರಿ ವಸ್ತುಗಳನ್ನು ಜತೆಗೆ ತಂದರೆ ಇವರ ಜತೆಯಲ್ಲಿ ಅಲ್ಲಿನ ಹಣ್ಣಿನ ಬೀಜಗಳು ಬರುತ್ತವೆ. ಇದು ಕೂಡ ಬೆಲೆ ಕಟ್ಟಲಾಗದ ಸಸ್ಯ ಸಂಪತ್ತು.
ತಂದ ಹಣ್ಣಿನ ಬೀಜಗಳನ್ನು ಸೂಕ್ತ ಬೀಜೋಪಾಚಾರ ಮಾಡಿ ತೋಟದಲ್ಲಿ ಅವುಗಳಿಗೆ ಸೂಕ್ತ ಜಾಗಗಳನ್ನು ತೋರಿಸಿ ಬೆಳೆಸುವುದೆಂದರೆ ಎಲ್ಲಿಲ್ಲದ ಖುಷಿ. ಹೀಗೆ ಕಳೆದ 32 ವರ್ಷಗಳಿಂದ ಪ್ರಧಾನವಾಗಿ ಹಣ್ಣುಗಳೇ ಇರುವ ತೋಟವನ್ನು ಜತನದಿಂದ ನಿರ್ವಹಣೆ ಮಾಡುತ್ತಿದ್ದಾರೆ.
ಪ್ರತಿ ಗಿಡದ ಬೆಳವಣಿಗೆಯನ್ನು, ಅವುಗಳ ಹಣ್ಣಿನ ಸವಿ ರುಚಿಯನ್ನು ಸಹ ಇವರು ವಿವರಿಸುತ್ತಾರೆ . ವಿದೇಶದಿಂದ ತಂದು ಇಲ್ಲಿ ಬೆಳೆಸಲಾದ ಹಣ್ಣಿನ ಸಸಿಗಳು ಫಸಲು ಬಿಟ್ಟ ನಂತರ ಸ್ಥಳೀಯ ಪ್ರದೇಶದ ಹವಾಗುಣಕ್ಕೆ ಯಾವುದು ಸೂಕ್ತವಾಗಿ ಒಗ್ಗಿಕೊಳ್ಳಬಹುದು ಎಂಬುದನ್ನು ತಿಳಿಯುತ್ತಾರೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿಅವುಗಳ ಕೃಷಿಗೆ ಮುಂದಾಗುತ್ತಾರೆ.
ಇದರಿಂದಾಗಿ ಈ ತೋಟದಲ್ಲಿ ವೈವಿಧ್ಯಮಯ ಹಣ್ಣಿನ ಸಸ್ಯಾಭಿವೃದ್ಧಿ ಕಾರ್ಯ ಭಾರಿ ಮುತುವರ್ಜಿಯಿಂದ ನಡೆಯುತ್ತಿದೆ. ಬರೀ ಸಸ್ಯಗಳನ್ನು ಬೆಳೆಸುವುದಷ್ಟೇ ಅಲ್ಲದೇ ಅವುಗಳ ಬಗ್ಗೆ ತೋಟಗಾರಿಕೆಯಲ್ಲಿ ಆಸಕ್ತಿ ಇರುವ ಕೃಷಿಕರಿಗೆ ವಿವರಿಸುತ್ತಾರೆ. ಬೀಜ/ಗೆಲ್ಲುಗಳನ್ನು ವಿತರಿಸಿ ಸಸ್ಯಾಭಿವೃದ್ಧಿ ಮಾಡುವ ವಿಧಾನಗಳನ್ನು ತಿಳಿಸಿಕೊಡುತ್ತಾರೆ. ಆದ್ದರಿಂದ ಇದು ತೋಟಗಾರಿಕಾ ಪಾಠಶಾಲೆಯೂ ಆಗಿದೆ.
ಕ್ಯಾರಂಬೋಲ , ಮ್ಯಾಂಗೋಸ್ಟೀನ್ , ಸಿಹಿ ಅಮಟೆ, ಇಡೋನೇಷಿಯದ ಪುಮೆಲ್ಲೊ/ಚಕ್ಕೋತ , ಬಿಲಿಂಬಿ, ಬ್ರೆಡ್ ಪ್ರೋಟ್, 4 ತರದ ಬೆಣ್ಣೆ ಹಣ್ಣು/ ಅವಕೆಡೊ , ಎಗ್ ಫ್ರೂಟ್, ಸ್ನೇಕ್ ಫ್ರೂಟ್ , ಮಾದ್ರಫಲ, ಆಸ್ಟೇಲಿಯನ್ ಮಕೆಡೋಮಿಯ ನಟ್ , ಪೀ ನಟ್ , ವೇರಿಗೇಟೆಡ್ ಚಿಕ್ಕು , 7-8 ತರದ ವೇರಿಗೇಟೆಡ್ ಪೇರಲೆ , ಡ್ರ್ಯಾಗಾನ್ ಪ್ರೋಟ್ , ಪೆರು ಪೇರಲೆ , ಮಲಯನ್ ಸೇಬು , ಲೋಕಟ್ , ಕೇಪಲ್ , ದೂರಿಯನ್ , ಬಾರ್ಬೆಡೋಸ್ ಚರ್ರಿ , ಲಕ್ಷಮಣ ಫಲ , ವಿವಿಧ ರೀತಿಯ ಜಾಯಿಕಾಯಿ , ಫ್ಯಾಶನ್ ಫ್ರೂಟ್, ಕೆಂಪು ಹಾಗು ಟರ್ಕಿಶ್ ಅಂಜೂರ, ಹಲವು ವಿದೇಶಿ ಹಲಸಿನ ತಳಿಗಳು, ಹೀಗೇ ಇನ್ನೂ ಅನೇಕ ವಿದೇಶಿ ಹಣ್ಣಿನ ಗಿಡಗಳು ಇಲ್ಲಿವೆ.
ಹಣ್ಣಿನ ಗಿಡಗಳ ಜೊತೆಗೆ ಸಂಬಾರು ಬೆಳೆಗಳ ರಾಣಿ, ಕರಿ ಬಂಗಾರ ಕಾಳುಮೆಣಸಿನ 22 ತಳಿಗಳನ್ನು ಪ್ರಾಯೋಗಿಕವಾಗಿ ಬೆಳಯುತ್ತಿದ್ದಾರೆ. ಕೃಷಿಯೆಡೆಗಿನ ಇವರ ಒಲವು, ಆಸಕ್ತಿ, ಸಂಶೋಧನೆಯ ಪ್ರವೃತ್ತಿ ಹಾಗು ಈ ಪ್ರದೇಶದ ಜನರಿಗೆ ಈ ಹಣ್ಣುಗಳನ್ನು ಪರಿಚಯಿಸುವಿಕೆ, ಈ ಪ್ರದೇಶಕ್ಕೆ ಹೊಂದಿಕೊಳ್ಳಬಹುದಾದ ಹಣ್ಣಿನ ಗಿಡಗಳ ಸಸ್ಯಾಭಿವೃದ್ಧಿಗೆ ಇವರ ಕೊಡುಗೆ ಪ್ರಶಂಸನೀಯ.
ಸ್ವತಃ ತೋಟಗಾರಿಕೆ ಪದವೀಧರೆಯಾಗಿರುವ ನನಗೂ ಇಲ್ಲಿನ ಸಾಕಷ್ಟು ವಿದೇಶಿ ಹಣ್ಣುಗಳ ಬಗ್ಗೆ ಓದಿ ಗೊತ್ತಿತ್ತೆ ವಿನಃ ಅವುಗಳನ್ನು ಸ್ಪರ್ಶಿಸಿರಲಿಲ್ಲ. ಈ ತೋಟಕ್ಕೆ ಭೇಟಿ ಇತ್ತ ನಂತರ ಅವುಗಳ ಸಸ್ಯಗಳನ್ನು ಪ್ರತ್ಯಕ್ಷವಾಗಿ ನೋಡಿ ವಿವರವಾಗಿ ತಿಳಿದುಕೊಳ್ಳುವ ಅವಕಾಶವೂ ಲಭಿಸಿತು. ಇದು ಖಂಡಿತವಾಗಿಯೂ ತೋಟಗಾರಿಕೆ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸಲು ಸೂಕ್ತವಾದ ತೋಟ ಎಂದರೆ ಉತ್ಪ್ರೇಕ್ಷೆಯಲ್ಲ.