ಲೇಖಕಿ : ವಿದ್ಯಾ ಮಹೇಶ್

ಇಡೀ ಸೌರಮಂಡಲವನ್ನು ತನ್ನ ಗುರುತ್ವಾಕರ್ಷಣೆಯಲ್ಲಿ ಹಿಡಿದಿಟ್ಟಿರುವ ಸೂರ್ಯ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳ ಜೈವಿಕ, ರಾಸಾಯನಿಕ ಕ್ರಿಯೆಗಳ ರೂವಾರಿ.  ಸೂರ್ಯನ ಮಹತ್ವವನ್ನು ತಿಳಿದ ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿದ್ದಾರೆ. ಗಿಡ ಮರಗಳ ಸರ್ವತೋಮುಖ ಬೆಳವಣಿಗೆ, ದ್ಯುತಿ ಸಂಶ್ಲೇಷಣೆ, ಹೂ ಬಿಡುವಿಕೆಗೆ ಸೂರ್ಯನ ಕಿರಣ ಮತ್ತು ಶಾಖ ಅತ್ಯವಶ್ಯಕ.

ಸೂರ್ಯನು ಹೇಗೆ ಹಗಲು ರಾತ್ರಿಗೆ ಕಾರಣನೊ ಹಾಗೆಯೇ ವರ್ಷಂಪ್ರತಿ ಬದಲಾಗುವ ಹವಾಮಾನ, ಭೂಮಿಯ ತಾಪಮಾನ, ವಾರ್ಷಿಕ ಮಳೆಗೂ ಕಾರಣ. ದ್ಯುತಿ ಸಂಶ್ಲೇಷಣೆ ವೇಳೆ ಹೊರಸೂಸುವ ಆಮ್ಲಜನಕ, ಪ್ರತಿ ಜೀವಿಗಳ ಉಸಿರಾಟಕ್ಕೂ ಆಧಾರ.

ಕೃಷಿಯಲ್ಲಿ ಸೂರ್ಯನ ಪಾತ್ರವೇನು: ಅಗಾಧವಾಗಿ ದೊರೆಯುವ ಸೌರಶಕ್ತಿಯನ್ನು ವ್ಯವಸಾಯದಲ್ಲಿ ಸಮರ್ಥವಾಗಿ ಬಳಸಿಕೊಂಡು ಹೆಚ್ಚಿನ ಲಾಭವನ್ನು ಪಡೆಯಬಹುದು. ಸೌರಚಾಲಿತ ಮೋಟಾರ್ ಪಂಪ್ ಗಳಿಂದ ಕೃಷಿಭೂಮಿಗೆ ನೀರನ್ನು ಹಾಯಿಸಬಹುದು. ತೀರ ಇತ್ತೀಚೆಗೆ ಕೃಷಿಕರೊಬ್ಬರು ಸೌರಚಾಲಿತ ಕೀಟನಿಯಂತ್ರಕವನ್ನು ಆವಿಷ್ಕಾರಿಸಿ ಯಶಸ್ವಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

 

ಬೆಳೆದು ಕಟಾವು ಮಾಡಿದ ದವಸ ಧಾನ್ಯಗಳನ್ನು ಬಿಸಿಲಿಗೆ ಒಡ್ಡುವುದು ತುಂಬಾ ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಇದರಿಂದ ಅವುಗಳಲ್ಲಿ ನೀರಿನಾಂಶ ಇಲ್ಲವಾಗಿ ದೀರ್ಘಕಾಲದ ಬಾಳಿಕೆಗೆ ಶೇಖರಿಸಿಬಹುದು.  ಸೌರಚಾಲಿತ ಡಿಹೈಡ್ರೇಟರ್ ಗಳಿಂದ ದ್ರಾಕ್ಷಿ,, ಅಂಜೂರ ಹಾಗೂ ಇನ್ನಿತರ ಹಣ್ಣುಗಳನ್ನು ಒಣಗಿಸಿ ತುಂಬ ದಿನಗಳವರೆಗೆ ಶೇಖರಿಸಿಡಬಹುದು. ಇನ್ನೂ ಸಾಕಷ್ಟು ಉಪ ಉತ್ಪನ್ನಗಳ (ಉದಾಹರಣೆಗೆ  ಹಲಸಿನ ಹಪ್ಪಳ, ವಿವಿಧ ಬಗೆಯ ಸಂಡಿಗೆ,ಬಳಕದ ಮೆಣಸಿನಕಾಯಿ) ತಯಾರಿಕೆಯಲ್ಲಿ ಸೂರ್ಯನ ಶಾಖ ಅವಶ್ಯಕ.

ಸೂರ್ಯಶಕ್ತಿ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯವ ಬಗೆ ಹೇಗೆ: ಮಣ್ಣಿನಲ್ಲಿ ನಡೆಯುವ ಸಕಲ ಜೈವಿಕ ಕ್ರಿಯೆಗೂ ಸೂರ್ಯನ ಕಿರಣಗಳು ಬೇಕು. ಅಧ್ಯಯನಗಳ ಪ್ರಕಾರ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡಷ್ಟು ಬೆಳೆಗಳಲ್ಲಿ ಉತ್ತಮ ಇಳುವರಿ ದೊರೆಯುತ್ತದೆ. ವಾತಾವರಣದಲ್ಲಿರುವ ತೇವಾಂಶ, ಹರಡಿರುವ ಮೋಡಗಳು ಸೂರ್ಯನ ಕಿರಣಗಳನ್ನು ಬೆಳೆಗಳ ಮೇಲೆ ಬೀಳುವುದನ್ನು ಕಡಿಮೆಗೊಳಿಸುತ್ತವೆ.

ಸೂರ್ಯ ಕಿರಣಗಳು ಬೆಳೆಗಳಿಗೆ ಸಿಗದೇ ಇದ್ದರೆ !:  ಸೂರ್ಯನ ಶಾಖ ಹಾಗೂ ಕಿರಣಗಳು ಇಲ್ಲದೇ ಬೆಳೆಗಳು ಒಂದಷ್ಟು ತಾಸು ಜೀವಿಸಬಲ್ಲವು; ಆದರೆ ದೀರ್ಘಕಾಲದ ಜೀವಿಸುವಿಕೆ ಕಷ್ಟಸಾಧ್ಯ. ಸೂರ್ಯನ ಕಿರಣಗಳಿಲ್ಲದೆ ಬೆಳೆಗಳಲ್ಲಿ ದ್ಯುತಿ ಸಂಶ್ಲೇಷಣೆಗೆ ಬೇಕಾದ ಕ್ಲೊರೊಫಿಲ್ ಪಿಗ್ಮೆಂಟ್ ಉತ್ಪತ್ತಿ ನಿಂತು ಹೋಗಿ ಬೆಳೆಗಳು ಅಕಾಲಿಕವಾಗಿ ಸಾಯುತ್ತವೆ.

ಹೂವು ಹೊರಳುವುವು ಸೂರ್ಯನ ಕಡೆಗೆ:  ಇವು ಪದ್ಯದ ಸಾಲುಗಳಷ್ಟೆ ಅಲ್ಲ; ಸತ್ಯವು ಹೌದು. ಮೊಗ್ಗು ಹೂವಾಗಿ ಅರಳುವಿಕೆಯು ಸಹ ಸೂರ್ಯ ಕಿರಣಗಳ ಮೇಲೆ ಅವಲಂಬಿತ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೋಟೋ ಪಿರಿಯಾಡಿಸಂ (photoperiodism) ಎನ್ನುತ್ತಾರೆ.

ಕೆಲವೊಂದು ಬೆಳೆಗಳು ಗರಿಷ್ಠ ಹನ್ನೆರಡು ಗಂಟೆಗಳ ಕಾಲ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡರಷ್ಟೆ ಅವುಗಳಲ್ಲಿ ಹೂವು ಅರಳುವುದು. ಉದಾಹರಣೆಗೆ ಬಟಾಣಿ, ಗೋಧಿ, ಬಾರ್ಲಿ. ಕೆಲವೊಂದು ಕನಿಷ್ಠ ಆರರಿಂದ ಎಂಟು ಗಂಟೆಗಳ ಕಾಲ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡರೆ ಹೂ ಅರಳುವುದು. ಉದಾಹರಣೆಗೆ- ಹತ್ತಿ, ಭತ್ತ, ಜೋಳ, ಹೆಸರುಕಾಳು, ಸೋಯ ಇತ್ಯಾದಿ.

ಇನ್ನು ಸೌತೆ, ಗುಲಾಬಿ, ಟೊಮೆಟೊ ಬೆಳೆಗಳು ಕೇವಲ ಒಂದೆರಡು ಗಂಟೆಗಳ ಅವಧಿಯಷ್ಟು ಸೂರ್ಯನ ಕಿರಣಗಳಿಗೆ ಒಡ್ಡಿಕೊಡರೆ ಸಾಕು ಹೂ ಬಿಡುತ್ತವೆ.  ಆದರೆ ಮನೆಯ ಒಳಾಂಗಣದಲ್ಲಿ ಅಲಾಂಕರಕ್ಕೆಂದೇ ಬೆಳೆಯುವ ಗಿಡಗಳಿಗೆ ಸೂರ್ಯನ ಪ್ರಖರ ಕಿರಣಗಳ ಅವಶ್ಯಕತೆ ಇಲ್ಲ. ಹಾಗೆಯೇ ಸೂರ್ಯನ ಅಧಿಕ ಹಾಗು ಪ್ರಖರ ಕಿರಣ ಹಾಗು ಶಾಖಗಳಿಂದ ಬೆಳೆಗಳು ಹಾನಿಗೂ ಒಳಗಾಗುತ್ತದೆ. ಎಷ್ಟೇ ನೀರುಣಿಸಿದರೂ ನಿರ್ಜಲಿಕರಣದಿಂದಾಗಿ ಗಿಡಗಳು ಒಣಗಿ ಹೋಗುತ್ತವೆ.

LEAVE A REPLY

Please enter your comment!
Please enter your name here