ಬ್ರಹ್ಮಕಮಲ, ಇದಕ್ಕೆ ರಾತ್ರಿರಾಣಿ ಎಂಬ ಹೆಸರೂ ಇದೆ. ಕೆನೆ ಬಣ್ಣ ಮತ್ತು ಕೆಂಪು ಬಣ್ಣದ ರಾತ್ರಿರಾಣಿ ಹೂವುಗಳು ಅತ್ಯಾಕರ್ಷಣೀಯ… ಮೈಸೂರಿನ ಪ್ರಗತಿಪರ ಕೃಷಿಕ ಎ.ಪಿ. ಚಂದ್ರಶೇಖರ ಅವರ ತೋಟದಲ್ಲಿ ಕೆಂಪು ರಾತ್ರಿರಾಣಿ ಇದೆ.
ರಾತ್ರಿರಾಣಿ ಅಥವಾ ಬ್ರಹ್ಮಕಮಲ ಮಳೆಗಾಲದಲ್ಲಿ ಎರಡು ಬಾರಿ ಹೂ ಬಿಡುತ್ತದೆ. ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಈ ಹೂವನ್ನು ಕಣ್ತುಂಬಿಕೊಳ್ಳಲು ಅವಕಾಶ. ಹೂ ಅರಳುವ ದಿನ ನೋಡಲು ಮರೆತರೆ ಮತ್ತೆ ಹೂವಿಗಾಗಿ ಒಂದು ವರ್ಷ ಕಾಯಲೇ ಬೇಕು.
ಮೊಗ್ಗು ಕಾಣಲು ಶುರುವಾಗಿ 10ರಿಂದ 12 ದಿನಗಳಲ್ಲಿ ಹೂ ಅರಳುತ್ತದೆ. ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನಗಳಲ್ಲಿ ಮತ್ತು ಈ ದಿನಗಳ ಒಂದೆರಡು ದಿನ ಮೊದಲು ಹೂ ಅರಳುವುದು ವಿಶೇಷ. ಅಂದರೆ ಎಲ್ಲರ ಮನೆಗಳಲ್ಲೂ ಹೆಚ್ಚು ಕಡಿಮೆ ಒಂದೇ ದಿನ ಹೂವು ಕಾಣಿಸುತ್ತದೆ.
ರಾತ್ರಿ ಎಂಟು ಗಂಟೆಯಿಂದ ಮೊಗ್ಗು ಅರಳಲು ಪ್ರಾರಂಭವಾಗಿ ಸುಮಾರು 11, 11.30ರ ಹೊತ್ತಿಗೆ ಪೂರ್ಣ ಅರಳುತ್ತದೆ. ಅಷ್ಟೇ ನಿಧಾನವಾಗಿ ಮುದುಡಲು ಆರಂಭಿಸಿ ಬೆಳಿಗ್ಗೆ 6 ಗಂಟೆ ಹೊತ್ತಿಗೆ ಮುದುಡಿರುತ್ತದೆ. ಹೂ ಅರಳುವ ಹೊತ್ತಿಗೆ ಪರಿಸರದ ತುಂಬೆಲ್ಲ ಅದ್ಭುತವಾದ ಪರಿಮಳ… ಆ ಪರಿಮಳದಿಂದಲೇ ಇವತ್ತು ರಾತ್ರಿರಾಣಿ ಅರಳುತ್ತಿದೆ ಎಂಬುದು ಗೊತ್ತಾಗುತ್ತದೆ.
ಈ ಹೂವಿನ ಮೂಲ ಹಿಮಾಲಯದ ತಪ್ಪಲು. ಅತಿಯಾದ ಉಷ್ಣ ಪ್ರದೇಶದಲ್ಲಿ ಇದು ಬದುಕುವುದಿಲ್ಲ. ಇದು ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದ, ಯುನಾನಿ ಪದ್ಧತಿಗಳಲ್ಲಿ ಇದನ್ನು ಔಷಧವಾಗಿ ಬಳಸುತ್ತಾರೆ.
ಈ ಗಿಡವನ್ನು ಬೆಳೆಸುವುದು ಸುಲಭ. ಬಲಿತ ಒಂದು ಎಲೆಯನ್ನು ಪಾಟ್ ನಲ್ಲಿ ನೆಟ್ಟರೆ ಆಯಿತು. ತುಂಬ ಬಿಸಿಲು ಬೀಳುವ ಪ್ರದೇಶದಲ್ಲಿ ಇಡಬಾರದು. ವಾರಕ್ಕೆ ಮೂರು ಬಾರಿ ನೀರು ನೀಡಬೇಕು.
ನೆಟ್ಟ ಎರಡು ವರ್ಷಕ್ಕೆ ಹೂ ಬಿಡಲು ಪ್ರಾರಂಭವಾಗುತ್ತದೆ. ಕರಾವಳಿ ಮಲೆನಾಡು ಪ್ರದೇಶದಲ್ಲಿ ಪ್ರಾರಂಭದಲ್ಲಿ ಎರಡರಿಂದ ನಾಲ್ಕು ಮೊಗ್ಗುಗಳು ಬಿಟ್ಟರೂ ಅರಳುವುದು ಒಂದು ಅಥವಾ ಎರಡು. ಮಳೆ ಜಾಸ್ತಿಯಾದರೆ ಮೊಗ್ಗು ಉದುರಿ ಹೋಗುತ್ತದೆ.
ಗಿಡ ಬೆಳೆದಂತೆ ಮುಂದಿನ ವರ್ಷಗಳಲ್ಲಿ ಹೂವುಗಳು ಜಾಸ್ತಿ ಅರಳುತ್ತವೆ. ಈ ಗಿಡದಲ್ಲಿ ಒಂದೇ ದಿನ ಎಂಟು ಹೂವುಗಳು ಅರಳಿದರೆ ಅಷ್ಟಲಕ್ಷ್ಮಿಯರು ಒಲಿದಂತೆ ಎಂಬ ನಂಬಿಕೆಯು ಜನಮಾನಸದಲ್ಲಿದೆ. ನಂಬಿಕೆ ಏನೇ ಇರಲಿ, ಈ ಅಪರೂಪದ ಸೌಂದರ್ಯದ ಹೂವಿನ ಗಿಡವೆ ಒಂದು ಸಂಪತ್ತು ಎಂಬುದರಲ್ಲಿ ಎರಡು ಮಾತಿಲ್ಲ