ಬೆಂಗಳೂರು, ಜು.2: ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿ ಯೋಜನೆಯನ್ನು ಆಕ್ಷೇಪಣೆಯೊಂದಿಗೆ ರಾಜ್ಯ ಸರ್ಕಾರ ನಿನ್ನೆಯಿಂದಲೇ ಜಾರಿಗೆ ತಂದಿದೆ. ಆ ಸಂಬಂಧ ಇಂದೇ ಆದೇಶ ಹೊರಬೀಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಂದು ಸಚಿವ ಸಂಪುಟ ಸಭೆಯಲ್ಲಿ ವಿಬಿಜಿ ರಾಮ್ ಜಿಗೆ ರಾಜ್ಯದ ಪಾಲು ಭರಿಸುವ ಬಗ್ಗೆ ಚರ್ಚಿಸಲಾಗಿದೆ. ಇದರಿಂದ ಆರ್ಥಿಕ ಹೊರೆ ಬೀಳಲಿದೆ. ಆದರೂ ಬಡವರ, ದಲಿತರ, ವಂಚಿತರ, ರೈತರ, ಮಹಿಳೆಯರ ಹಿತ ಕಾಯಲು ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಬಹುತೇಕ ಇಂದೇ ಅಧಿಸೂಚನೆ ಹೊರಬೀಳಲಿದೆ. ರಾಜ್ಯ ಸರ್ಕಾರದ ಮೇಲೆ ವಿಬಿಜಿ ರಾಮ್ ಜೀಯಿಂದ 6 ಪಟ್ಟು ಹೆಚ್ಚಿನ ಹೊರೆ ಬೀಳುತ್ತದೆ ಎಂದರು.
ಈ ಹಿಂದೆ ಮಹಾತ್ಮಾಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದ್ದ 20 ವರ್ಷಗಳಲ್ಲಿ 90:10ರ ಅನುಪಾತದಲ್ಲಿ ಯೋಜನೆ ಜಾರಿಯಲ್ಲಿತ್ತು. ಮನ್ರೇಗಾಗೆ ವೆಚ್ಚವಾಗಿರುವ ಒಟ್ಟು 61 ಸಾವಿರ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ 56 ಸಾವಿರ ಕೋಟಿಗೂ ಅಧಿಕ ಹಣ ಭರಿಸಿತ್ತು. ರಾಜ್ಯ ಸರ್ಕಾರ 4800 ಕೋಟಿ ರೂ. ವೆಚ್ಚ ಮಾಡಿತ್ತು ಎಂದರು.
ಕೇಂದ್ರ ಸರ್ಕಾರ ಈ ವರ್ಷ ರಾಜ್ಯಕ್ಕೆ ವಿಬಿಜಿ ರಾಮ್ ಜಿ ಅಡಿ 5709 ಕೋಟಿ ರೂ. ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರ ಒಂದೇ ವರ್ಷದಲ್ಲಿ 3806 ಕೋಟಿ ವೆಚ್ಚ ಮಾಡಬೇಕಾಗಿ ಬಂದಿದೆ ಇದು ದೊಡ್ಡ ಹೊರೆಯಾಗಿದೆ. ಹೀಗಾಗಿ 90:10 ಅನುಪಾತವನ್ನೇಮುಂದುವರಿಸಲು ಕೇಂದ್ರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಸುಗ್ಗಿಯ ಕಾಲದಲ್ಲಿ ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಅಡಿ 60 ದಿನಗಳ ಬಿಡುವು ನೀಡಿದೆ. ಜುಲೈ 1ರಿಂದ ಯೋಜನೆ ಜಾರಿಯಾಗಿದೆ. ಈ 2 ತಿಂಗಳ ಬಿಡುವಿನ ಅವಧಿ ತೆಗೆದರೆ ಒಟ್ಟು ಉಳಿಯುವುದು ಕೇವಲ 9 ತಿಂಗಳು. ಈ ಅವಧಿಯಲ್ಲಿ ಯಾವುದೇ ರಾಜ್ಯ ತನ್ನ ಪಾಲಿನ ಶೇ.40ರಷ್ಟು ಹಣ ಭರಿಸಲು ಸಾಧ್ಯವಾಗದಿದ್ದರೆ ಕೇಂದ್ರದ ಪಾಲು ಬರುವುದೇ ಇಲ್ಲ. ಇದು ಯೋಜನೆಯ ಮೂಲ ಉದ್ದೇಶವನ್ನೇ ನಾಶ ಮಾಡುತ್ತದೆ ಎಂದರು.
ಈ ಬಗ್ಗೆ ಮೊನ್ನೆ ಅಂದರೆ ದಿನಾಂಕ 29ರಂದು ನಡೆದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಿದ್ದೇನೆ. ಜೊತೆಗೆ ಎಲ್ಲ ರಾಜ್ಯಗಳಿಗೆ ತಮ್ಮ ಆಯ್ಕೆಯಂತೆ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬುದು ರಾಜ್ಯದ ನಿಲುವಾಗಿದೆ ಎಂದರು.

































