ಲೇಖಕರು: ಸೌಮ್ಯ ಕೋಡೂರು

ಪ್ರಕೃತಿಯೊಂದಿಗೆ ಸದಾ ಒಡನಾಡುವ ಕೃಷಿಕರು ಹಂಗಾಮುಗಳಿನುಸಾರ ಅದರ ಚರಚರಾ ಜೀವಿಗಳಿಗೂ ಕೃತಜ್ಞತೆ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಇತ್ತೀಚೆಗೆ ಈ ಆಚರಣೆಗಳು ಕಡಿಮೆಯಾಗಿವೆಯಾದರೂ ನಿಂತಿಲ್ಲ. ಇನ್ನೊಂದು ವಿಶೇಷ ಸಂಗತಿಯೇಂದರೆ ಓದು, ಉದ್ಯೋಗ ನಿಮಿತ್ತ ನಗರಗಳಿಗೆ ತೆರಳಿದ ಗಮನಾರ್ಹ ಸಂಖ್ಯೆಯ ಯುವಜನತೆ ಸ್ವಗ್ರಾಮಗಳಿಗೆ ಬಂದು ಪಾಲ್ಗೊಳ್ಳುತ್ತಿರುವುದು.
ಈ ಆಚರಣೆ ಪರಿಚಯ ಇಲ್ಲದವರಿಗೆ “ಭೂಮಿತಾಯಿಗೆ ಬಯಕೆ ಹಾಕೋದು’” ಎನ್ನುವ ಮಾತೇ ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಮುಂಗಾರು ಹಂಗಾಮಿನಲ್ಲಿ ಬಿತ್ತಿದ/ನಾಟಿ ಮಾಡಿದ ವಿವಿಧ ಬೆಳೆಗಳು ಬಲು ಹಸಿರಾಗಿ ಬೆಳೆದು ಭೂಮ್ತಾಯಿ ಹಸಿರು ಸೀರೆಯುಟ್ಟು ಮುಗುಳ್ನಗೆ ಚೆಲ್ಲುತ್ತಿರುತ್ತಾಳೆ. ಇಂಥ ಸಂದರ್ಭವನ್ನು ಕೃಷಿಕರು ಮನೆಮಗಳಿಗೆ ಮಾಡುವ ಸೀಮಂತದ ಆಚರಣೆಯೆಂಬತೆ ಸಂಭ್ರಮಿಸುತ್ತಾರೆ.
ಆದ್ದರಿಂದಲೇ ಭೂಮಿ ಹುಣ್ಣಿಮೆ ದಿನ, ಭೂಮಣ್ಣಿ ಹಬ್ಬ, ಭೂಮ್ತಾಯ್ವನ ಹಬ್ಬ ಎಂದೆಲ್ಲ ಮಲೆನಾಡಿಗರು ಕರೆದರೆ ಇದೇ ಆಚರಣೆಯನ್ನು ಮಾಡುವ ಉತ್ತರ ಕರ್ನಾಟಕದ ಬೆಳುವಲ ನಾಡು, ಬಯಲುಸೀಮೆ, ಮಲೆನಾಡು, ಅರೆಮಲೆನಾಡಿನ ಕೃಷಿಕರು ಶೀಗೆ ಹುಣ್ಣಿಮೆ, ಶೀಗೆಹಬ್ಬ ಎಂದೆಲ್ಲ ಕರೆಯುತ್ತಾರೆ. ಆದರೆ ಇವೆರಡೆ ಆಶಯ ಮಾತ್ರ ಒಂದೇ ಆಗಿರುತ್ತದೆ.

ಚಿತ್ರಕೃಪೆ: ಮಲೆನಾಡ ಚಿತ್ತಾರ

ಹಾಗೆ ನೋಡುವುದಾದರೆ ಕೃಷಿ ಕಾಯಕದಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು. ಭೂಮ್ತಾಯಿಗೆ “ಬಯಕೆ ಹಾಕೋದು” ಆಚರಣೆಯಲ್ಲಿಯೂ ಇವರದೇ ಪ್ರಮುಖ ಪಾತ್ರ. ಅವರವರ ಶಕ್ತ್ಯಾನುಸಾರ ಬಗೆಬಗೆಯ ತಿನಿಸುಗಳನ್ನು ಮಾಡುತ್ತಾರೆ. ಹಿಂದಿನ ದಿನದಿಂದ ಹಿಡಿದು ಆಚರಣೆ ಮುಕ್ತಾಯವಾಗುವವರೆಗೂ ಇವರದು ಜಾಗರಣೆ ಅಂದರೆ ಇಡೀರಾತ್ರಿ ನಿದ್ದೆಗೆಟ್ಟಿರುತ್ತಾರೆ. ಆದರೂ ಮಾಡಿದ ಎಲ್ಲ ಪರಿಕರಗಳನ್ನು ಒಟ್ಟುಗೂಡಿಸಿಕೊಂಡು ಮನೆಯ ಗಂಡಸರನ್ನೂ ಹೊರಡಿಸಿಕೊಂಡು ಹೊಲ – ಗದ್ದೆ- ತೋಟಗಳತ್ತ ತೆರಳುವಾಗಲೂ ಆಯಾಸದ ಸುಳಿವೇ ಇಲ್ಲದಂತೆ ಹಸನ್ಮುಖಿಗಳಾಗಿರುತ್ತಾರೆ.

ನೇಸರ ಕಣ್ಣು ಬಿಡುವ ಮುಂಚೆಯೇ ಕತ್ತಲಿಯಲ್ಲಿಯೇ ‘ದೊಂದಿ’ ಹಚ್ಚಿಕೊಂಡು ಕೃಷಿಭೂಮಿಯತ್ತ ಸಡಗರದ ನಡಿಗೆ ಆರಂಭವಾಗುತ್ತದೆ. ತಯಾರಿಸಿರುವ ಭಕ್ಷ್ಯಗಳೆಲ್ಲವೂ ಇದಕ್ಕಾಗಿಯೇ ಪರಿಶ್ರಮದಿಂದ ಮಾಡಿದ ಅಲಂಕೃತ ಕುಕ್ಕೆಯಲ್ಲಿ(ಈಗೀಗ ಪ್ಲಾಸ್ಟಿಕ್ ಬುಟ್ಟಿಗಳು ಆ ಜಾಗವನ್ನ ತುಂಬಿವೆ ಅನ್ನೋದು ಬೇಸರದ ಸಂಗತಿ) ಕುಳಿತಿರುತ್ತವೆ.


ಕೃಷಿಭೂಮಿ ತಲುಪಿದ ನಂತರ ಆಯ್ದ ಜಾಗವನ್ನು ಸ್ವಚ್ಚಗೊಳಿಸಿ ತಂದಿರುವುದನ್ನೆಲ್ಲ ದೊಡ್ಡ ಬಾಳೆಲೆಗಳಲ್ಲಿ ಒಪ್ಪವಾಗಿ ಜೋಡಿಸುತ್ತಾರೆ. ತೋಟಗಳಲ್ಲಿ ಪೂಜೆ ಮಾಡುವಲ್ಲಿನ ಮುಂದಿನ ಮರ-ಗಿಡಕ್ಕೆ ಹಸಿರುಸೀರೆ ಉಡಿಸುವ ಪದ್ಧತಿಯೂ ಇದೆ. ಭತ್ತದ ಗದ್ದೆಗಳಲ್ಲಿ ಗಾಳಿಗೆ ತೊನೆದಾಡುತ್ತಿರುವ ತೆನೆಗಳನ್ನ ಒರಣವಾಗಿ ಜೋಡಿಸಿ ಕಟ್ಟುತ್ತಾರೆ. ಕೆಲವೆಡೆ ಒಡವೆಗಳನ್ನ ತೊಡಿಸಿ ಸಿಂಗಾರ ಮಾಡುವ ಪರಿಪಾಠವೂ ಇದೆ.
ಈ ಬಳಿಕ ಮನೆತನದ ಹಿರಿಯರು ಸಾವಧಾನವಾಗಿ ಪೂಜೆ ಮಾಡಿದ ನಂತರ ಹಾಜರಿರುವ ಪ್ರತಿಯೊಬ್ಬರೂ ತಮ್ಮನೆಲ್ಲ ಸಲುಹುತ್ತಿರುವ ಭೂಮ್ತಾಯಿಗೆ ಶ್ರದ್ಧೆಯಿಂದ ನಮಿಸುತ್ತಾರೆ. ಈ ಬಳಿಕ ಗದ್ದೆಗೆ ಚೆರು ಚೆಲ್ಲಿ, ಕೊಟ್ಟೆ ಕಡುಬನ್ನ ಗದ್ದೆಯಲ್ಲಿ ಹುಗ್ಗಿಯಲಾಗುತ್ತದೆ. ಉತ್ತರ ಕರ್ನಾಕದವರು ಜನಪದೀಯ ಹಾಡುಗಳನ್ನು ಹೇಳಿಕೊಂಡು ಗದ್ದೆ – ತೋಟದಲ್ಲಿ ಸುತ್ತುತ್ತಾ ಚರಗ ಚೆಲ್ಲುತ್ತಾರೆ.

ಈ ಆಚರಣೆಗಳಲ್ಲೆಲ್ಲ ಮುಗಿದ ನಂತರ ಪುರುಷರು, ಕಿರಿಯರೆಲ್ಲ ಪ್ರಸಾದ ಸ್ವೀಕರಿಸಲು ಕುಳಿತುಕೊಳ್ಳುತ್ತಾರೆ. ಹಿರಿಯ ಮಹಿಳೆಯರಿಗೆ ಎಂದಿನಂತೆ ಮೊದಲ ಪಂಕ್ತಿಯಲ್ಲಿ ಕುಳಿತವರಿಗೆ ಬಡಿಸುವ ಸಂಭ್ರಮ. ಇಷ್ಟೊತ್ತಿಗೆಲ್ಲ ನೇಸರ ಮೂಡಿ ನಮ್ಮ ಆಚರಣೆಗಳನ್ನು ನೋಡಿ ನಸುನಗುತ್ತಿದ್ದನೋ ಎಂಬಂತೆ ಎಳೆಬಿಸಿಲು ಚೆಲ್ಲತೊಡಗುತ್ತಾನೆ. ಆದರೆ ಇನ್ನೂ ಇರುವ ಚಳಿಯಲ್ಲಿಯೇ ಕುಳಿತು ಪ್ರಸಾದ ಸ್ವೀಕರಿಸುವ ಖುಷಿ ಅಪಾರ.


ಬೇರೆ.ಯಾವುದೇ ಹುಸಿ ತೋರುಗಾಣಿಕೆಯೂ ಇಲ್ಲದ, ಮಂತ್ರ ತಂತ್ರಗಳಿಲ್ಲದ ಭೂಮಿತಾಯಿ ಜೊತೆಗಿನ ನಮ್ಮದೇ ಮಾತುಕತೆ ಮಾತ್ರ ಅಲ್ಲಿರುತ್ತದೆ. ಹಸಿರನ್ನು ನೋಡುತ್ತಾ ತಿನಿಸುಗಳನ್ನು ಸವಿಯುವುದೂ ಚೆಂದ.. ಬೆಳಗ್ಗೆ ಅಷ್ಟೆಲ್ಲ ಭಕ್ಷ್ಯಗಳನ್ನು ತಿಂದಿದ್ದರೂ ಮಾಂಸಹಾರಿಗಳಿಗೆ ಮಧ್ಯಾಹ್ನಕ್ಕೆ ಅಡುಗೆಗೆ ಮೀನು ಸಾರು, ಅರಿಶಿನದ ಎಲೆ ಕಡುಬು ಆಗಲೇ ಬೇಕು. ಭೂಮ್ತಾಯಿ ಹಬ್ಬದ ಗುಂಗಿನಲ್ಲಿಯೇ ಇಡೀದಿನ ಕಳೆದು ಹೋಗುವುದೇ ಕ್ಷಣದಂತೆ ಭಾಸವಾಗುತ್ತದೆ.

1 COMMENT

LEAVE A REPLY

Please enter your comment!
Please enter your name here