ಟೊಮೆಟೊ ; ಏಕೆ ಸದಾ ಉತ್ತಮ ಬೆಲೆ ದೊರೆಯುವುದಿಲ್ಲ

1

ಮಾರುಕಟ್ಟೆಗೆ ಯಾವುದೇ ಕೃಷಿ ಉತ್ಪನ್ನದ, ಅದರಲ್ಲಿಯೂ ಬೇಗ ಕಳಿಯುವ (ಮಾಗುವ) ಹಾಗೂ ಕೊಳೆಯುವ ಕೃಷಿ ಉತ್ಪನ್ನಗಳು ಕಡಿಮೆ ಆವಕವಾದರೆ ಅವುಗಳ ಬೆಲೆ ಗಗನಕ್ಕೇರುತ್ತದೆ. ಆದರೆ ಈ ಲಾಭ ರೈತರಿಗೆ ಸಿಗುತ್ತಿದೆಯೇ ? ಅವರಿಗೆ ಸದಾ ಉತ್ತಮ ಜೊತೆಗೆ ಸುಸ್ಥಿರ ಬೆಲೆ ದೊರೆಯಲು ತೊಂದರೆಗಳೇನು ?

ಈ ಪ್ರಶ್ನೆಗೆ ಉತ್ತರಗಳ ಸರಮಾಲೆಯೇ ಇದೆ. ರೈತರು ಶ‍್ರಮಪಟ್ಟು ಬೆಳೆದ ಬೆಳೆಗೆ ಅಪರೂಪಕ್ಕೊಮ್ಮೆ ಉತ್ತಮ ಬೆಲೆ ದೊರೆಯಬಹುದಷ್ಟೆ. ಹಲವು ಸಂದರ್ಭಗಳಲ್ಲಿ ಲಾಭದಾಯಕ ಬೆಲೆ ದೊರೆಯುವುದಿಲ್ಲ. ಇನ್ನೂ ಕೆಲವು ಸಂದರ್ಭಗಳಲ್ಲಿ ಮಾರುಕಟ್ಟೆಗೆ ತಂದ ಕೃಷಿ ಉತ್ಪನ್ನಗಳ ಸಾಗಣೆ ಖರ್ಚೂ ದೊರೆಯುವುದಿಲ್ಲ. ಇದರ ಜೊತೆಗೆ ಶೀತಲ ಗೃಹಗಳ ಸರಪಣಿ, ಆಧುನಿಕ ಪ್ಯಾಕ್ ಹೌಸ್ ಗಳು, ಸಂಗ್ರಹಣೆ ಕೇಂದ್ರಗಳಂಥ ಸಮಸ್ಯೆಗಳು ಇನ್ನೂ ಬಗೆ ಹರಿದಿಲ್ಲ. ಕೊಯ್ಲು ಮಾಡಿದ ಉತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತರಲು ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆಯೂ ಇದೆ. ದರ ಏರಿರುವ ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸಲು ಸಾಗಣೆ ಮಾಡುವ ಖಾಸಗಿಯವರು ಒಂದಕ್ಕೆರಡು ರೇಟು ಕೇಳುತ್ತಾರೆ ಎಂಬ ದೂರುಗಳೂ ಇವೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 12016 – 17ರ ಸಾಲಿನ ಬಜೆಟಿನಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿತ್ತು. ಇದಕ್ಕಾಗಿ ಅಶೋಕ್ ದಳವಾಯಿ ಅವರ ನೇತೃತ್ವದ ಸಮಿತಿ ನೇಮಕ ಮಾಡಿತ್ತು. ಶೀಘ್ರದಲ್ಲೇ ಈ ಸಮಿತಿ ವರದಿ ನೀಡಿತು. ರೈತರ ಆದಾಯ ಉತ್ತಮ ರೀತಿ ಸುಸ್ಥಿರವಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಿತು. ಆದರೆ ಈ ವರದಿಯ ಬಹುತೇಕ ಅಂಶಗಳು ಜಾರಿಗೆ ಬಂದಿಲ್ಲ.

ಆಲೂಗೆಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳನ್ನು ಉತ್ತಮ ಬೆಲೆ ನೀಡಿ ಖರೀದಿ ಮಾಡಿ ಮಾರಾಟ ಮಾಡಲು ; ಈ ದಿಶೆಯಲ್ಲಿ ಬೆಳೆಗಾರರಿಗೆ ಸೂಕ್ತ ಸೌಲಭ್ಯಗಳನ್ನು ನೀಡಲು ಶಿಫಾರಸುಗಳನ್ನು ಮಾಡಿದೆ. ಈ ಸಮಿತಿ ಪ್ರಕಾರ, ಈ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮಾಡುವವರು ನೇರವಾಗಿ ಬೆಳೆಗಾರರಿಂದ ಖರೀದಿ ಮಾಡುವುದಿಲ್ಲ. ಹೀಗಾಗಿ ರೈತರು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುವ ಒತ್ತಡಕ್ಕೆ ಸಿಲುಕುತ್ತಾರೆ.

ವಾತಾವರಣದ ಪ್ರಭಾವದಿಂದ ಆಲೂಗೆಡ್ಡೆ, ಈರುಳ್ಳಿ, ಟೊಮೆಟೊ ಬೇಗ ಕೊಳೆಯುವುದರಿಂದ ಆದಷ್ಟು ಬೇಗ ಮಾರಾಟ ಮಾಡುವ ಸನ್ನಿವೇಶ ಎದುರಾಗುತ್ತದೆ. ಮಾರುಕಟ್ಟೆಗೆ ಹೆಚ್ಚು ಆವಕವಾದಾಗ ಬೆಲೆ ಕುಸಿಯುತ್ತದೆ. ಸರ್ಕಾರದ ಸಹಕಾರಿ ಸಂಸ್ಥೆಗಳಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಇನ್ನಿತರ ಸಂಸ್ಥೆಗಳಾಗಲಿ ಖರೀದಿಗೆ ಆಸಕ್ತಿ ತೋರುವುದಿಲ್ಲ.

ರೈತರ ಆದಾಯ ಮತ್ತು ಟೊಮೆಟೊ ನಷ್ಟದ ನಡುವಿನ ಸಂಬಂಧದ ಬಗ್ಗೆ ಸಮಿತಿ ವರದಿ ವಿಶೇಷ ಒತ್ತು ನೀಡಿದೆ. ಸಾಮೂಹಿಕ ಬಳಕೆಗೆ ಟೊಮೆಟೊ ಸೂಕ್ಷ್ಮ ಉತ್ಪನ್ನ ಎಂದು ಹೇಳಿದೆ. ಈ ದಿಶೆಯಲ್ಲಿ ಟೊಮೆಟೊ ಪೂರೈಕೆ ಸರಪಣಿಯನ್ನು ಬಲಪಡಿಸುವಂತೆ ಹೇಳಲಾಗಿದೆ. ಇದಕ್ಕಾಗಿಯೇ ನೇರವಾಗಿ ಗ್ರಾಹಕರಿಗೆ ತಲುಪಿಸುವ “ಆಪರೇಷನ್ ಗ್ರೀನ್” ಆರಂಭವಾಯಿತು. ಆದರೆ ಅದರ ಪರಿಣಾಮವಾಗಲಿಲ್ಲ.

ಗ್ರಾಮಗಳಿಂದ ಮಾರುಕಟ್ಟೆಗಳಿಗೆ ನೇರ ಸಾರಿಗೆ ವ್ಯವಸ್ಥೆ, ಕೋಲ್ಡ್ ಚೈನ್, ಆಧುನಿಕ ಪ್ಯಾಕ್ ಹೌಸ್ ಮತ್ತು ಸಂಗ್ರಹಣೆ ಕೇಂದ್ರಗಳಂಥ ಸಮಸ್ಯೆಗಳಿಗೆ ಸೂಕ್ತ ಗಮನ ನೀಡದಿರುವುದೇ ಇದಕ್ಕೆ ಕಾರಣ. ಜೊತೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳ ಸದಸ್ಯರುಗಳನ್ನು ಒಳಗೊಂಡ ತಜ್ಞರ ಸಮಿತಿಗಳನ್ನು ರಚಿಸಲಾಗಿಲ್ಲ. ಇದು ಕೂಡ ಸಮಸ್ಯೆಗೆ ಕಾರಣ. ಇಂಥ ಸಮಿತಿ ರಚಿತವಾದರೆ ಪ್ರತಿ ಹಂಗಾಮಿಗೂ ಮುಂಚಿತವಾಗಿ ಅವರು ಸೂಕ್ತ ಸಲಹೆಗಳನ್ನು ನೀಡುತ್ತಾರೆ.
ಗಗನಕ್ಕೇರಿದ ಬೆಲೆ

ಈ ಎಲ್ಲ ಸಮಸ್ಯೆಗಳು ಪರಿಹಾರವಾಗದೇ ಇರುವ ಕಾರಣ ಟೊಮೆಟೊ ಬೆಲೆ ಗಗನಕ್ಕೇರುವ ಇಲ್ಲವೇ ಪಾತಾಳಕ್ಕಿಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜೂನ್ 27, 2023ರಂದು ಉತ್ತರ ಭಾರತದ ಕೆಲವೆಡೆ ಒಂದು ಕೆಜಿ ಟೊಮೆಟೊ ಬೆಲೆ 122 ರೂಪಾಯಿ ತನಕ ತಲುಪಿದೆ. ಹೀಗಿದ್ದರೂ ಹಲವೆಡೆ ರೈತರಿಗೆ ಈ ಧಾರಣೆಯ ಪ್ರಯೋಜನ ಲಭ್ಯವಾಗುತ್ತಿಲ್ಲ. ಯಥಾ ಪ್ರಕಾರ ಅವರು ತಾವು ಬೆಳೆದ ಕೃಷಿ ಉತ್ಪನ್ನವನ್ನು ಖಾಸಗಿ ವ್ಯಾಪಾರಿಗಳಿಗೆ ಮಾರುವ ಒತ್ತಡಕ್ಕೆ ಸಿಲುಕಿದ್ದಾರೆ.

ಈ ಎಲ್ಲ ಸಮಸ್ಯೆಗಳ ನಡುವೆ ಕರ್ಲ್ ಲೀಪ್ ವೈರಸ್ ನಿಂದ ಟೊಮೆಟೊ ಬೆಳೆಗೆ ತೀವ್ರ ಹಾನಿ ಉಂಟಾಗುತ್ತಿದೆ. ಹಿಂದಿನ ಹಂಗಾಮಿನಲ್ಲಿಯೂ ಇದರ ದುಷ್ಪರಿಣಾಮ ಉಂಟಾಗಿದೆ. ದಕ್ಷಿಣ ಭಾರತದಲ್ಲಿ ಮಳೆಯ ಕಾರಣದಿಂದಲೂ ಬೆಳೆ ನಷ್ಟವಾಗಿದೆ. ಇವೆಲ್ಲದರಿಂದ ಬೆಳೆಗಾರರು ನಲುಗಿ ಹೋಗಿದ್ದಾರೆ.

ಬೆಳೆ ವೈಫಲ್ಯದಿಂದ ಟೊಮೆಟೊ ಬೆಲೆ ಏರಿಕೆ ಕಂಡಿದೆ. ಆದರೂ ಬೆಳೆಗಾರರಿಗೆ ಇದರ ಪ್ರಯೋಜನ ದಕ್ಕುತ್ತಿಲ್ಲ. ಮುಂದಿನ 10 ರಿಂದ 15 ದಿನಗಳಲ್ಲಿ ಮಾರುಕಟ್ಟೆಗೆ ಹೆಚ್ಚಿನ ಟೊಮೆಟೊ ಆವಕವಾಗುತ್ತದೆ. ಆಗ ಬೆಲೆ ಇಳಿಯುತ್ತದೆ ಎಂದು ಹೇಳಲಾಗಿದೆ.

ಹವಾಮಾನದ ಪರಿಸ್ಥಿತಿಗಳಿಂದಾಗಿ ಸೂಕ್ತ ಪ್ರಮಾಣದಲ್ಲಿ ಟೊಮೆಟೊ ಲಭ್ಯವಾಗಿಲ್ಲ. ಇದರಿಂದ ಆಗಾಗ ಬೆಲೆಯಲ್ಲಿ ಅಸಹಜ ಏರುಪೇರು ಉಂಟಾಗುತ್ತದೆ. ಹೊಸ ಬೆಳೆಯು ಮಾರುಕಟ್ಟೆಗೆ ಆವಕವಾದ ನಂತರ ಬೆಲೆಯು ಸಹಜ ಸ್ಥಿತಿಗೆ ಮರಳುತ್ತದೆ. ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಕಾರ, ಜೂನ್ನಲ್ಲಿ ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ವ್ಯತ್ಯಾಸವು ಕನಿಷ್ಠ 10 ರೂ.ನಿಂದ ಗರಿಷ್ಠ 122 ರೂ.ವರೆಗೆ ಏರಿಳಿತಗಳು ಉಂಟಾಗುತ್ತವೆ.

ಬೆಳೆಗಾರರ ಪ್ರಕಾರ, ಬೆಲೆಗಳಲ್ಲಿನ ಈ ಏರಿಳಿತಗಳಿಗೆ ಖಾಸಗಿ ವ್ಯಾಪಾರಿಗಳು ಕಾರಣರಾಗಿದ್ದಾರೆ. ಮುಂದಿನ 15 ರಿಂದ 20 ದಿನಗಳಲ್ಲಿ ಟೊಮೆಟೊ ಬೆಲೆ ಕಡಿಮೆಯಾಗಬಹುದು, ಆದರೆ ರೈತರು ವೆಚ್ಚವನ್ನು ಮರುಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here