ಈ ಹಣ್ಣಿನ ಜ್ಯೂಸ್‌ ಕುಡಿದು ಪ್ರಾಣ ಕಳೆದುಕೊಳ್ಳಬೇಡಿ

0

ಸಾವಿರಾರು ವರ್ಷಗಳ ಹಿಂದಿನೀಂದಲೂ ಕಾಡಿನಲ್ಲಿದ್ದ ಆದಿವಾಸಿಗಳು ಸುರಕ್ಷಿತ ಆಹಾರ ಅರಸಲು ಉಪಾಯ ಕಂಡುಕೊಂಡಿದ್ದರು. ಮಂಗಗಳು ಯಾವ ಹಣ್ಣು, ಕಾಯಿಗಳನ್ನು ಸೇವಿಸಿಯೂ ಸುರಕ್ಷಿತವಾಗಿ, ಆರೋಗ್ಯಕರವಾಗಿ ಇರುತ್ತವೆಯೋ ಅಂಥವುಗಳ ಸೇವನೆ ಮಾಡುತ್ತಿದ್ದರು. ಅವರು ಹಕ್ಕಿಪಕ್ಷಿಗಳ ಆಹಾರ ಸೇವನೆ ಅನುಕರಣೆ ಮಾಡುತ್ತಿರಲಿಲ್ಲ. ಏಕೆಂದರೆ ಅವುಗಳ ಜೀರ್ಣಾಂಗ ವ್ಯವಸ್ಥೆಗೂ ಮುನುಷ್ಯರ ಜೀರ್ಣಾಂಗ ವ್ಯವಸ್ಥೆಗೂ ವ್ಯತ್ಯಾಸವಿದೆ.

ಮಂಗಗಳ ಜೀರ್ಣಾಂಗ ವ್ಯವಸ್ಥೆಗೂ ಮುನುಷ್ಯರ ಜೀರ್ಣಾಂಗ ವ್ಯವಸ್ಥೆಗೂ ಹೋಲಿಕೆಯಿದೆ. ತಾವು ನೋಡಿದ್ದನ್ನು ಅವರು ತಮ್ಮ ಸಮುದಾಯಗಳ ಜೊತೆ ಹಂಚಿಕೊಳ್ಳುತ್ತಿದ್ದರು. ಮುಂದಿನ ಪೀಳಿಕೆಗಳಿಗೂ ದಾಟಿಸುತ್ತಿದ್ದರು. ಇದರಿಂದಾಗಿಯೇ ನಮಗೆ ಯಾವ ಹಣ್ಣು ತಿನ್ನಬೇಕು, ಯಾವ ಅಣಬೆ, ಯಾವ ಸೊಪ್ಪು ಸೇವಿಸಬೇಕು ಎಂಬ ಜ್ಞಾನವಿದೆ.

ಇವೆಲ್ಲದರ ನಡುವೆ ಮಿಸ್ಸಿಂಗ್‌ ಲಿಂಕ್‌ ಇದೆ. ಅತ್ತ ಕಾಡಿನ ಜ್ಞಾನವೂ ಇತ್ತ ಗ್ರಾಮೀಣವಾಸಿ ಜ್ಞಾನವೂ ಇಲ್ಲದ ಕಾರಣದಿಂದ ಅನಾಹುತಗಳು ನಡೆಯುತ್ತಿವೆ. ಎರಡು ವಾರದ ಹಿಂದೆ ಕರಾವಳಿಯಲ್ಲಿ ಒಂದು ದುರ್ಘಟನೆ ನಡೆಯಿತು. ಕಾಡಿನಲ್ಲಿ ಬೆಳೆಯುವ ಐರೋಳು ಎನ್ನುವ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿದ ಹೆಣ್ಮಗಳೊಬ್ಬಳು ಪ್ರಾಣಬಿಟ್ಟಳು. ತಂದೆ ತೀವ್ರ ಅನಾರೋಗ್ಯಕ್ಕೆ ಒಳಗಾದರು.

ನಮ್ಮ ಸುತ್ತಲಿನ ಗುಡ್ಡ ಕಾಡುಗಳಲ್ಲಿ ಕಿತ್ತಳೆ ಬಣ್ಣದ ಆಕರ್ಷಕ ರೂಪದಲ್ಲಿ ಗೊಂಚಲು ಗೊಂಚಲಾಗಿ ಬೆಳೆಯುವ ಈ ಹಣ್ಣು ಭಾರಿ ಅಪಾಯಕಾರಿ. ಮೇಲ್ನೋಟಕ್ಕೆ ಗಮನಸೆಳೆಯುವ ಈ ಹಣ್ಣನ್ನು ತಪ್ಪಾಗಿ ಗ್ರಹಿಸಿ ತಿಂದ ಕುಡಿದ ಪರಿಣಾಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.

ನಮ್ಮ ಕಾಡುಗಳಲ್ಲಿ ಲಭ್ಯ ಇರುವ ಈ ಹಣ್ಣಿನ ಗೆಡ್ಡೆ ಬೇರು ಎಲೆಯನ್ನು ಕರಾವಳಿಯಲ್ಲಿ ಪಂಜುರ್ಲಿ ದೈವದ ಸಂದರ್ಭದಲ್ಲಿ ಕೊಡಿಯಡಿಯಲ್ಲಿ ಇರಿಸುವ ಕ್ರಮವಿದೆ. ಇದರ ಬೇರು ಗೆಡ್ಡೆಯನ್ನು ಹಂದಿ ತಿನ್ನುವ ಕಾರಣಕ್ಕೋ ಏನೋ ಪಂಜುರ್ಲಿ ಆರಾಧನೆಯ ಸಂದರ್ಭದಲ್ಲಿ ಈ ಎಲೆಯನ್ನು ಸಮ್ಮುಖದಲ್ಲಿರುವ, ದೈವಕ್ಕೆ ಒಪ್ಪಿಸುವ ಕ್ರಮವಿದೆ. ( ಫೋಟೋ – ದಾಮು )

ಲೇಖಕರು: ನರೇಂದ್ರ ರೈ ದೇರ್ಲ

LEAVE A REPLY

Please enter your comment!
Please enter your name here