ಧರ್ಮಸ್ಥಳದಿಂದ ಕೊಕ್ಕಡಕ್ಕೆ ಹೋಗುವ ಮಾರ್ಗದಲ್ಲಿ ನಿಡ್ಲೆ ಗ್ರಾಮವಿದೆ. ನಿಡ್ಲೆ ಗ್ರಾಮದ ಹ್ಯಾಮ್ಲೆಟ್ ಬೂಡ್ಜಾಲು. ಇದು ಧರ್ಮಸ್ಥಳದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಅಲ್ಲಿ ಗುರೂಜಿಯವರ ತೋಟ, ಮನೆ ಇವೆ. ನನಗೂ ಗುರೂಜಿಯವರಿಗೂ ಒಳ್ಳೆಯ ಸ್ನೇಹ. ಅವರು ತುಂಬಾ ತಮಾಷೆಯ ವ್ಯಕ್ತಿ. ಅವರ ಮನೆಯಲ್ಲಿದ್ದ ಮಿಶ್ರತಳಿ ಹಸುಗಳಿಗೆ ಚಿಕಿತ್ಸೆ ನೀಡಲು ಕರೆದಾಗೆಲ್ಲ ಹೋಗುತ್ತಿದ್ದೆ. ಅವರ ಬಳಿ ಬಹಳ ಹಸುಗಳೇನಿರಲಿಲ್ಲ. ಎರಡು ಮೂರು ಹಸುಗಳು, ಒಂದೆರಡು ಕರುಗಳು ಮಾತ್ರ ಇದ್ದವು.
ಆ ಭಾಗಕ್ಕೆ ನಾನು ಯಾವಾಗ ಹೋದರೂ ಗುರೂಜಿಯವರ ಮನೆಗೂ ಹೋಗಿ ಸ್ವಲ್ಪ ಹೊತ್ತು ಮಾತಾಡಿ ಟೀ ಕುಡಿದು ಬರುತ್ತಿದ್ದೆ. ಗುರೂಜಿಯವರ ಶ್ರೀಮತಿಯವರು ಕುತೂಹಲದ ಮೂಟೆಯಾಗಿದ್ದರು. ಅವರ ಹೆಸರು ಪುಷ್ಪಕ್ಕ. ಅವರಿಗೆ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಕುತೂಹಲ. ಉದಾಹರಣೆಗೆ ನಾವು ಕೃತಕ ಗರ್ಭಧಾರಣೆಗೆ ಬಳಸುವ ವೀರ್ಯ ಕೃತಕವಾಗಿ ತಯಾರಾಗಿದ್ದೋ ಅಥವಾ ನೈಸರ್ಗಿಕವೊ? ಹೋರಿಯಿಂದ ಪಡೆದದ್ದಾದರೆ ವೀರ್ಯವನ್ನು ಹೇಗೆ ಹೊರತೆಗೆಯುತ್ತಾರೆ? ಹೇಗೆ ವೀರ್ಯವನ್ನು ನಳಿಕೆಗಳಲ್ಲಿ ಭರ್ತಿ ಮಾಡುತ್ತಾರೆ? ತಣ್ಣಗೆ ಕೊರೆಯುವ ದ್ರವಸಾರಜನಕದಲ್ಲಿ ಇಟ್ಟಿರುವ ವೀರ್ಯಾಣುಗಳು ಸಾಯುವುದಿಲ್ಲವೆ? ಇತ್ಯಾದಿ. ಕೆಲವು ವಿಚಾರಗಳನ್ನು ಹೇಳಲು ಮುಜುಗರವಾದರೂ ಅವರು ಬಿಡುತ್ತಿರಲಿಲ್ಲ. ಅವರ ಮೂರೂ ಜನ ಮಕ್ಕಳು ತಾಯಿಯಂತೆಯೇ ಪ್ರಶ್ನೆಗಳ ಬಣವೆಗಳಾಗಿದ್ದರು.
ಒಂದು ದಿನ ಬೆಳಿಗ್ಗೆ 10 ಗಂಟೆಗೆ ಫೋನ್ ಮಾಡಿ ಅವರ ಹೆಚ್ಎಫ್ ಹಸುವು ಕರು ಹಾಕಲು ಕಷ್ಟಪಡುತ್ತಿದೆ. ಕೂಡಲೇ ಬನ್ನಿ ಎಂದರು ಗುರೂಜಿ. ಕೆಲವು ವಿವರಗಳನ್ನು ಕೇಳಿದೆ. ಗುರೂಜಿಯವರಿಗೆ ಗೊತ್ತಿರಲಿಲ್ಲ. ಪಕ್ಕದಲ್ಲಿಯೇ ನಿಂತಿದ್ದ ಪುಷ್ಪಕ್ಕ ಫೋನ್ ಕಸಿದುಕೊಂಡು ನನ್ನೆಲ್ಲ ಪ್ರಶ್ನೆಗಳಿಗೆ ಕರಾರುವಾಕ್ಕಾದ ಉತ್ತರ ಕೊಟ್ಟರು.
ಹಸುಗೆ ದಿನ ತುಂಬಿದೆಯಾ? ನನ್ನ ಪ್ರಶ್ನೆ.
ಪುಷ್ಪಕ್ಕ ಓಹೋ!
ನೆತ್ತಿ ಚೀಲ ಒಡೆದಿದೆಯೆ? ನನ್ನ ಪ್ರಶ್ನೆ.
ಪುಷ್ಪಕ್ಕ ಓಹೋ!
(ನೆತ್ತಿಚೀಲ = ಆಮ್ನಿಯಾಟಿಕ್ ಸ್ಯಾಕ್) ಗರ್ಭದ ಅವಧಿಯಲ್ಲಿ ಕರು ಬೆಳೆಯುವುದು ಇದರಲ್ಲಿಯೇ. ಆಮ್ನಿಯಾಟಿಕ್ ದ್ರವ ಲೋಳೆಲೋಳೆಯಾಗಿರುತ್ತದೆ. ಕರು ಹಾಕುವಾಗ ಈ ಚೀಲ ಒಡೆದು ಕರು ಹೊರಬರುವ ಮಾರ್ಗ ಹಸಿಯಾಗಿ, ಲೋಳೆಲೋಳೆಯಾಗಿ ಜಾರುವಂತೆ ಮಾಡುತ್ತದೆ. ಆಗ ಕರು ಬರುವುದು ಸುಲಭವಾಗುತ್ತದೆ.
ಹಾಗಾದರೆ ಕರು ಕಾಣಿಸುತ್ತಿದೆಯೇ? ನನ್ನ ಪ್ರಶ್ನೆ.
ಪುಷ್ಪಕ್ಕ ಕಾಣಿಸುತ್ತದೆ ಸಾರ್, ಕೈಗಳು ಕಾಣಿಸುತ್ತವೆ, ಆದರೆ ತಲೆ ಕಾಣಿಸುತ್ತಿಲ್ಲ ಕರುಗಳು ಹೊರಬರುವಾಗ ಸಾಮಾನ್ಯವಾಗಿ ಮುಂದಿನ ಕಾಲುಗಳು ಮತ್ತು ತಲೆ ಜೊತೆಗೇ ಹೊರಬರುತ್ತವೆ. ಧರ್ಮಸ್ಥಳ ಭಾಗದಲ್ಲಿ ಜನರು ಮುಂದಿನ ಕಾಲುಗಳನ್ನು ಕೈಗಳೆನ್ನುತ್ತಾರೆ. ಅದಕ್ಕೇ ಪುಷ್ಪಕ್ಕ ಕೈಗಳು ಕಾಣಿಸುತ್ತವೆ ಎಂದಿದ್ದರು.
ಪುಷ್ಪಕ್ಕನವರು ಹಸುವಿನ ಇದುವರೆಗಿನ ಹೆರಿಗೆಯ ಹಂತಗಳನ್ನೆಲ್ಲ ಸವಿವರವಾಗಿ ಗಮನಿಸಿದ್ದರು. ಅವರಿಗೆ ಗೊತ್ತಿಲ್ಲದೇ ಇದ್ದದ್ದು ಯಾವುದೂ ಇಲ್ಲವೆನ್ನುವಂತಿತ್ತು. ಅವರು ಹಸುವಿನ ಯೋನಿಯಲ್ಲಿಯೂ ಕೈ ಹಾಕಿ ತಲೆ ಕಾಣಿಸದೇ ಇದ್ದದ್ದನ್ನೂ ಸಹ ಪರೀಕ್ಷಿಸಿದ್ದರು. ಅದನ್ನು ಫೋನಿನಲ್ಲಿ ಹೇಳಿದರು. ಕೂಡಲೇ ಬರುತ್ತೇನೆ ಎಂದು ಫೋನಿಟ್ಟು ಹೊರಟೆ. ಅರ್ಧಗಂಟೆಯಲ್ಲಿ ಗುರೂಜಿಯವರ ಮನೆ ಹತ್ತಿರ ಇದ್ದೆ. ನನ್ನನ್ನು ನೋಡಿದ ಕೂಡಲೆ ಆ ಗಂಡ ಹೆಂಡತಿಯರಿಬ್ಬರಿಗೆ ಖುಷಿಯೋ ಖುಷಿ. ಇಬ್ಬರೂ ಕಿವಿಯಿಂದ ಕಿವಿಗೆ ನಗುತ್ತ ದನದ ಕೊಟ್ಟಿಗೆಗೆ ದೌಡು ಹೊಡೆದರು. ನಾನು ಹಿಂಬಾಲಿಸಿದೆ. ಪುಷ್ಪಕ್ಕ, ಒಂದು ಬಕೆಟ್ ಬಿಸಿನೀರು, ಒಂದು ಬಕೆಟ್ ತಣ್ಣೀರು, ಟವಲ್ಲು, ಬಟ್ಟೆ ಸೋಪು, ಮೈ ಸೋಪು, ಪ್ಲಾಸ್ಟಿಕ್ ಮಗ್ಗು ಎಲ್ಲವನ್ನೂ ಜೋಡಿಸಿಟ್ಟಿದ್ದರು. ಒಂದು ಸ್ಟೀಲ್ ಪಾತ್ರೆಯಲ್ಲಿ ಚಳಮಳ ಕುದಿಯುತ್ತಿದ್ದ ಬಿಸಿ ನೀರಿದ್ದವು. ಅದು ಸಿರಿಂಜ್ ಸೂಜಿಗಳ ಸ್ಟೆರಿಲೈಸ್ ಮಾಡಲು. ಪಕ್ಕದ ಕಟ್ಟೆಯ ಮೇಲೆ ಹಳೆಯದಾದ ಆದರೆ ಸ್ವಚ್ಛವಾಗಿದ್ದ ನಾಲ್ಕೈದು ಹಳೆಯ ಬಟ್ಟೆ ಮತ್ತು ಗೋಣಿಚೀಲಗಳನ್ನು ಜೋಡಿಸಿಟ್ಟಿದ್ದರು. (ಹೆರಿಗೆಯ ಸಮಯದಲ್ಲಿ ಸುರಿಯಬಹುದಾದ ಮೂತ್ರ, ಸಗಣಿ, ರಕ್ತ, ಲೋಳೆಯಂತಹ ದ್ರವ ಮುಂತಾದವುಗಳನ್ನು ಒರೆಸಲು ಮತ್ತು ನಾನು ನೆಲದ ಮೇಲೆ ಹಾಸಿಕೊಂಡು ಕುಳಿತುಕೊಳ್ಳಲು ಬಟ್ಟೆಗಳನ್ನಿಟ್ಟಿದ್ದರು.)
ಹಟ್ಟಿಯ ಗಾರೆಯ ನೆಲವನ್ನು ನೀರಾಕಿ ನೀಟಾಗಿ ತೊಳೆದಿದ್ದರು. ಪಶುವೈದ್ಯರಾದ ನಾವು ಕೆಲಸ ನಿರ್ವಹಿಸುವ (ಚಿಕಿತ್ಸೆ ಇರಬಹುದು ಅಥವಾ ಶಸ್ತ್ರಚಿಕಿತ್ಸೆ ಇರಬಹುದು) ಜಾಗ ಇಷ್ಟು ನೀಟಾಗಿದ್ದದ್ದು ಅಪರೂಪವೇ ಸರಿ. ಪುಷ್ಪಕ್ಕನವರು ದನಗಳ ಮೇಲಿನ ಪ್ರೀತಿ ಮತ್ತು ಪಶುವೈದ್ಯರ ಮೇಲಿನ ಗೌರವದಿಂದ ಇಷ್ಟು ಮಾಡಿದ್ದರು. ಅಷ್ಟೇನೂ ದಪ್ಪಗಲ್ಲದೆ, ತೆಳ್ಳಗಲ್ಲದೆ, ಉದ್ದಕ್ಕೂ ಅಲ್ಲದೆ, ಗಿಡ್ಡಕ್ಕೂ ಅಲ್ಲದೆ ಮಟ್ಟಸವಾಗಿದ್ದರು. ವಿಪರೀತ ಚಟುವಟಿಕೆ ಮತ್ತು ಅಪರಿಮಿತ ಕುತೂಹಲವೇ ಅವರ ವ್ಯಕ್ತಿವಿಶೇಷವಾಗಿತ್ತು. ಮೂರು ಜನ ಮಕ್ಕಳೂ ಶಾಲೆಗಳಿಗೆ ಹೋಗಿದ್ದರಿಂದ ಗಲಾಟೆ ಇರಲಿಲ್ಲ.
ನಾನು ಶರ್ಟ್ ಬಿಚ್ಚಿ ಬನಿಯನ್ನಲ್ಲಿದ್ದೆ. ಉಟ್ಟಿದ್ದ ಪ್ಯಾಂಟಿನ ಮೇಲೆ ರೇನ್ಕೋಟಿನ ಪ್ಯಾಂಟನ್ನು ಹಾಕಿಕೊಂಡೆ. ಇದರಿಂದ ನಾನು ಉಟ್ಟಿದ್ದ ಪ್ಯಾಂಟು ಸಗಣಿ, ಗಂಜಲ, ರಕ್ತ, ಲೋಳೆ ದ್ರವದಿಂದ ಗಲೀಜಾಗುವುದು ಭಾಗಶಃ ತಪ್ಪುತ್ತಿತ್ತು. ಹಸು ನೆಲದ ಮೇಲೆ ಮಲಗಿ ಮೈಯೆಲ್ಲಾ ಬಿಗಿ ಮಾಡಿಕೊಂಡು ನಾಲ್ಕು ಕಾಲುಗಳನ್ನೂ ಶಟಿಸಿಕೊಂಡು ಒಂದೇ ಸಮನೆ ತಿಣುಕುತ್ತಿತ್ತು. ಇವನ್ನು ಗರ್ಭಕೋಶದ ಸಂಕುಚನಗಳು ಎನ್ನುತ್ತಾರೆ. ಹೀಗೆ ಸಂಕುಚನಗೊಂಡಾಗ ಗರ್ಭಕೋಶವು ಚಿಕ್ಕದಾಗಿ, ಒಳಗಿನ ಜಾಗ ಕಡಿಮೆಯಾಗಿ ಕರು ಹೊರನೂಕಲ್ಪಡುತ್ತದೆ. ಹಸು ತಿಣುಕಿದಾಗ ಗೊರಸಿನ ತನಕ ಕರುವಿನ ಮುಂದಿನ ಕಾಲುಗಳು ಹಸುವಿನ ಯೋನಿಯಿಂದಾಚೆ ಬರುತ್ತಿದ್ದವು. ಹಸು ತಿಣುಕುವುದನ್ನು ನಿಲ್ಲಿಸಿದ ಕೂಡಲೆ ಕಾಲುಗಳು ಒಳಗೆ ಹೋಗಿಬಿಡುತ್ತಿದ್ದವು. ಪುಷ್ಪಕ್ಕ ಇದೇನು ಸಾರ್, ಯಾಕೆ ಹೀಗೆ? ಎಂದರು.
ನಾನು ಹಸುವಿನ ಯೋನಿಯಲ್ಲಿ ಕೈಹಾಕಿ ಪರೀಕ್ಷಿಸಿದೆ. ಕರುವಿನ ಕತ್ತು ಮತ್ತು ತಲೆ ಸಂಪೂರ್ಣವಾಗಿ ಬಲಗಡೆಗೆ ತಿರುಗಿದ್ದವು. ತಲೆಯು ಸರಿಯಾದ ಸ್ಥಾನದಲ್ಲಿರದೆ ಬಲಗಡೆಗೆ ತಿರುಗಿದ್ದುದರಿಂದ ಕರು ಹೊರಗೆ ಬರುತ್ತಿಲ್ಲ ಎಂದು ಪುಷ್ಪಕ್ಕನವರಿಗೆ ತಿಳಿಸಿದೆ. ಎದುರೇ ಹಸು ಇದ್ದುದರಿಂದ ಗಂಡ ಹೆಂಡಿರಿಗೆ ಅರ್ಥ ಮಾಡಿಸುವುದು ಕಷ್ಟವಾಗಲಿಲ್ಲ. ಆದರೆ ಪುಷ್ಪಕ್ಕನವರಿಗೆ ನೂರಾರು ಕೆಟ್ಟ ಯೋಚನೆಗಳು ಒಮ್ಮೆಲೇ ನುಗ್ಗಿ ಅವರು ದಿಕ್ಕು ತಪ್ಪಿದಂತಾಗಿ ಕರು ಒಳಗೆ ಸತ್ತೋಗುತ್ತಾ? ಹಸು ಗತಿ? ಮುಂತಾಗಿ ಹತ್ತಾರು ಪ್ರಶ್ನೆಗಳನ್ನೆಸೆದು ಉತ್ತರಕ್ಕಾಗಿ ಕಾತರಿಸಿದರು.
ನಾನು ಎಡಗೈಯ್ಯಲ್ಲಿ, ಬಲಗೈಯ್ಯಲ್ಲಿ, ಎರಡೂ ಕೈಯ್ಯಲ್ಲಿ ಮತ್ತು ಹೇಗೆ ಅನುಕೂಲವಾಗುತ್ತದೋ ಹಾಗೆ ಕುಳಿತು ಕರುವಿನ ತಲೆಯನ್ನು ನೇರ ಮಾಡಲು ಪ್ರಯತ್ನಿಸತೊಡಗಿದೆ. ನಾನು ಹಸುವಿನ ಹಿಂದುಗಡೆ ಕುಕ್ಕರಗಾಲಲ್ಲಿ ಕುಳಿತುಕೊಂಡಿದ್ದೆ. ಪುಷ್ಪಕ್ಕನವರು ಓಡಿಹೋಗಿ ಮನೆಯೊಳಗಿನಿಂದ ಸಣ್ಣ ಪ್ಲಾಸ್ಟಿಕ್ ಸ್ಟೂಲನ್ನು ತಂದರು. ಅದನ್ನು ಹಾಕಿಕೊಂಡು ಕುಳಿತು ಭುಜದವರೆಗೆ ಕೈಹಾಕಿ ಕರುವಿನ ತಲೆಯ ಭಂಗಿ ಬದಲಾಯಿಸಲು ಪ್ರಯತ್ನಿಸಿದೆ. ಸ್ಟೂಲಿನ ಮೇಲೆ ಕುಳಿತುಕೊಂಡಿದ್ದುದರಿಂದ ನಾನು ಎತ್ತರದಲ್ಲಿದ್ದು ಕರುವಿನ ಕತ್ತು, ತಲೆ ತಗ್ಗಾದುದರಿಂದ ಕೆಲವೇ ನಿಮಿಷಗಳಲ್ಲಿ ನನ್ನ ಭುಜ, ಬೆನ್ನು, ಸೊಂಟದಲ್ಲಿ ನೋವು ಕಾಣಿಸಿಕೊಂಡಿತು.
ಕರು ಬರುವ ಮಾರ್ಗವು ಎಡವಟ್ಟು ಭಂಗಿಯಲ್ಲಿದ್ದ ಅದರ ಕತ್ತು, ತಲೆಗಳಿಂದಾಗಿ ಇಕ್ಕಟ್ಟಾಗಿತ್ತು. ನನ್ನ ಕೈಗಳನ್ನು ತೂರಿಸಿ ಕರುವಿನ ತಲೆ ಸರಿಪಡಿಸಲು ಸಾಧ್ಯವಾಗಲೇ ಇಲ್ಲ. ಆಗ ಸ್ಟೂಲನ್ನು ತೆಗೆದಿಟ್ಟು ಗೋಣಿಚೀಲ ಹಾಸಿಕೊಂಡು ಉದ್ದಕ್ಕೆ ಮಕಾಡೆ ಮಲಗಿ ಕರು ತಲೆಯ ತಿರುವತೊಡಗಿದೆ. ಉಹೂಂ. ನಾನು ಶಕ್ತಿಮೀರಿ ಪ್ರಯತ್ನಿಸಿದರೂ ತಲೆ ಒಂಚೂರೂ ಅಲ್ಲಾಡಲಿಲ್ಲ. ಗರ್ಭಚೀಲದೊಳಗೆ ಕರುಗಳ ತಲೆ, ಕತ್ತು, ಕಾಲುಗಳ ಭಂಗಿಗಳನ್ನು ಸರಿಪಡಿಸುವುದು ಯಮಸಾಹಸದ ಕೆಲಸ. ಏಕೆಂದರೆ ಕರುವನ್ನು ಹೊರಹಾಕಲು ಹಸುಗಳು ಶಕ್ತಿಬಿಟ್ಟು ಮುಲುಕುತ್ತಿರುತ್ತವೆ. ಗರ್ಭಚೀಲವು ಸಂಕುಚನಗೊಳ್ಳುತ್ತಿರುತ್ತದೆ.
ಆ ಸಂಕುಚನಗಳ ವಿರುದ್ಧವಾಗಿ ನಾವು ಗರ್ಭಚೀಲದ ಇಕ್ಕಟ್ಟಾದ ಜಾಗದಲ್ಲಿ ಕೈಹಾಕಿ ಕಾರ್ಯಶೀಲರಾಗಬೇಕಾಗುತ್ತದೆ. ಆ ಸಂಕುಚನಗಳು ಸಮುದ್ರದಲೆಗಳೋಪಾದಿಯಲ್ಲಿ ನಿರಂತರವಾಗಿ ಶಕ್ತಿಯುತವಾಗಿ ಬರುತ್ತಲೇ ಇರುತ್ತವೆ. ಅದರ ವಿರುದ್ಧ ನಾವು ಸೆಣಸಬೇಕಾಗಿರುತ್ತದೆ. ಈ ಕೆಲಸದಲ್ಲಿ ಮಗ್ನವಾಗಿಯೇ ಈ ಹೆರಿಗೆ ಎಂಬುದು ಇಷ್ಟೇಕೆ ಕಷ್ಟದ ಮತ್ತು ಸಂಕೀರ್ಣ ಕ್ರಿಯೆಯಾಗಿ ಪ್ರಕೃತಿಯಲ್ಲಿ ಉದ್ಭವವಾಗಿ ಬಂದಿದೆಯೋ? ಸುಲಭವಾದ ಕ್ರಿಯೆಯಾಗಿದ್ದರೆ ಉದಾಹರಣೆಗೆ ಸೀನಿದಂತೆ, ಕೆಮ್ಮಿದಂತೆ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ನಾನು ಬೆವೆತು ನೀರು ನೀರಾಗಿದ್ದೆ. ಬರೀ ಹೊರಗಿನಿಂದ ಕರು ಎಳೆಯುತ್ತಿರುವ ನನಗೇ ಇಷ್ಟು ಕಷ್ಟವಾಗಿದ್ದರೆ ಹೆರಿಗೆ ಕ್ರಿಯೆ ಅನುಭವಿಸುತ್ತಿರುವ ಹಸುವಿಗೆ ಎಷ್ಟು ಕಷ್ಟವಾಗುತ್ತಿರಬಹುದು? ಎಷ್ಟು ನೋವು? ಎಷ್ಟು ವೇದನೆ? ಎಷ್ಟು ವ್ಯಥೆ? ಇಂಥ ವೇಳೆಯಲ್ಲಿ ನನ್ನ ಸಹಾಯಕ್ಕೆ ಇನ್ನೊಬ್ಬರಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ನನ್ನ ಕಷ್ಟ ಅರ್ಧಕ್ಕರ್ಧ ಕಡಿಮೆಯಾಗುತ್ತಿತ್ತು. ಹಸುವಿನ ಕಷ್ಟಕರ ಅವಧಿಯೂ ಕಡಿಮೆಯಾಗುತ್ತಿತ್ತಲ್ಲ! ಆದರೆ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳೇ ವಿಪರೀತ. ಮಂಡ್ಯ ಜಿಲ್ಲೆಯ ಬೆಳ್ತೂರು ಪಶುಚಿಕಿತ್ಸಾಲಯದಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದಾಗ ಇದ್ದದ್ದು ನಾನೊಬ್ಬನೇ! ಕಸ ಗುಡಿಸಲು ಸಹ ಒಬ್ಬ ಸಹಾಯಕನಿರಲಿಲ್ಲ! ಆ ಕೆಲಸವನ್ನೂ ನಾನು ಮಾಡಿದ್ದೇನೆ.
ಆಗೊಮ್ಮೆ ಈಗೊಮ್ಮೆ ಹಸು ಹೊರಡಿಸುತ್ತಿದ್ದ ನೋವಿನ ನರಳಾಟ ಬಿಟ್ಟು ಬೇರೇನೂ ಶಬ್ದವಿಲ್ಲದ ಮೌನವೂ, ಅತ್ಯಂತ ಸೂಕ್ಷ್ಮ ಸನ್ನಿವೇಶದಿಂದಾದ ಗಂಭೀರತೆಯೂ ತುಂಬಿ ಹೋಗಿದ್ದ ಕೊಟ್ಟಿಗೆಯಲ್ಲಿ ಇದ್ದಕ್ಕಿದ್ದಂತೆ ನಿಟ್ಟುಸಿರುಗಳು, ಬಿಕ್ಕುವ ಶಬ್ದವೂ ಕೇಳಿ ಚಕಿತನಾದೆ. ಹಸು ಮುಲುಕಾಟದಿಂದ ಮುಂದಕ್ಕೆ ಹೊರಟಿದ್ದ ಎರಡೂ ಮುಂಗಾಲುಗಳನ್ನು ಸ್ವಲ್ಪ ಹಿಂದಕ್ಕೆ ನೂಕಿ, ಕರುವಿನ ತಲೆಯನ್ನು ತಿರುಗಿಸಿಕೊಳ್ಳಲು ಜಾಗ ಮಾಡಿಕೊಳ್ಳುತ್ತ ನನ್ನದೇ ಲೋಕದಲ್ಲಿ ಮುಳುಗಿದ್ದ ನನಗೆ ಯಾರೋ ಅಳುವ ಶಬ್ದದಿಂದ ಆಶ್ಚರ್ಯವಾಗಿ ಪಕ್ಕಕ್ಕೆ ತಿರುಗಿದರೆ ಪುಷ್ಪಕ್ಕ ನನ್ನ ಹಿಂದುಗಡೆ ಕುಳಿತು ಅಳುತ್ತಿದ್ದಾರೆ! ಎಷ್ಟು ಬಿಗಿ ಹಿಡಿದರೂ ಬಿಕ್ಕುಗಳು ನಿಶ್ಯಬ್ದವನ್ನು ಅಪ್ಪಳಿಸುತ್ತಿವೆ! ಮೂಗು ಸಡಿಲವಾಗಿದೆ! ಕಣ್ಣೀರು ಸುರಿಯುತ್ತಿವೆ!
ಏನು ನೆನೆಸಿಕೊಂಡು ಅಳುತ್ತಿರಬಹುದು ಪುಷ್ಪಕ್ಕ? ಹೆಣ್ಣಿನ ಕಷ್ಟವನ್ನೇ? ತಮ್ಮ ಹೆರಿಗೆಯಲ್ಲಾದ ನೋವನ್ನೇ? ನಿಸರ್ಗದ ನಿರ್ಭಾವುಕತೆಯನ್ನೇ? ತಮ್ಮ ಪ್ರೀತಿಯ ಹಸುವಿನ ಸಂಕಟವನ್ನೇ? ಯಾವಾಗ ನೋವಿನಿಂದ ಹಸುವಿಗೆ ಮುಕ್ತಿ ಎಂದು ಪರಿತಪಿಸುತ್ತಿರಬಹುದೇ? ಹೀಗೇ ಪರರಿಗೆ ಮಿಡಿಯುತ್ತಿದ್ದ ನನ್ನಮ್ಮ ನೆನಪಾದಳು. ಇಂತಹ ಸನ್ನಿವೇಶದಲ್ಲೂ ನನಗೆ ಬೇಕಾಗಿರುತ್ತಿದ್ದ ಟವಲ್ಲನ್ನೋ, ಸೋಪನ್ನೋ, ಬಟ್ಟೆಯನ್ನೋ ಕೇಳುವ ಮುಂಚೆಯೇ ಕೊಡುತ್ತ, ಬೆವರುತ್ತಿದ್ದ ನನಗೆ ಮಕ್ಕಳು ಪರೀಕ್ಷೆ ಬರೆಯುವ ರಟ್ಟಿನಲ್ಲಿ ಗಾಳಿ ಹಾಕುತ್ತ, ಹಸುವನ್ನು ಮಾತಾಡಿಸಿ ಸಮಾಧಾನಿಸುತ್ತ ಸಂಜೀವಿನಿಯಂತಿದ್ದರು ಪುಷ್ಪಕ್ಕ.
ಪುಷ್ಪಕ್ಕರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಮತ್ತು ಹಗುರಾಗಿಸಲು ಪುಷ್ಪಕ್ಕ ನನಗೀಗ ಒಂದರ್ಧ ಲೀಟರ್ ಪುನರ್ಪುಳಿ ಜ್ಯೂಸ್ ಮಾಡಿಕೊಡಿ. ನನ್ನ ಶಕ್ತಿಯೆಲ್ಲಾ ಬಸಿದು ಹೋಗಿದೆ ಎಂದೆ. ಕೂಡಲೇ ದನದ ಕೊಟ್ಟಿಗೆಯಿಂದ ಅಡಿಗೆ ಮನೆಯತ್ತ ಓಡುತ್ತಲೇ ಹೋದರು. ನಿಧಾನ, ಅವಸರ ಇಲ್ಲ ಎಂದು ಕೂಗಿದರು ಗುರೂಜಿ. ಗುರೂಜಿ ಅಡ್ಡ ಮಲಗಿದ್ದ ಹಸುವಿನ ಮೂಗುದಾರ ಹಿಡಿದು ಸಮಾಧಾನಿಸುತ್ತ ಕುಳಿತಿದ್ದರು. ಪರಿಸ್ಥಿತಿ ಗಂಭೀರವಾಗಿತ್ತು. ಇಲ್ಲದಿದ್ದರೆ ಅವರು ತಮಾಷೆ ಪ್ರಸಂಗಗಳನ್ನು ಪ್ರಾರಂಭಿಸುತ್ತಿದ್ದರು. ನಾನಲ್ಲದೆ ಬೇರೆ ಯಾರು ಏನು ಹೇಳಿದರೂ ಪುಷ್ಪಕ್ಕ ಹಸು ಬಿಟ್ಟು ಕದಲುತ್ತಿರಲಿಲ್ಲ. ಒಂದೆರಡು ಕ್ಷಣದ ಹಿಂದೆ ಅಳುತ್ತಿದ್ದ ಪುಷ್ಪಕ್ಕ ನನ್ನ ಮಾತನ್ನು ತಲೆಯ ಮೇಲೆ ಹೊತ್ತುಕೊಂಡು ಓಡುತ್ತಿದ್ದರು. ಸಕ್ಕರೆ ಸ್ವಲ್ಪ ಜಾಸ್ತಿ ಹಾಕಿ ಎಂದು ನಾನು ಕೂಗಿದೆ. ಆಯ್ತು ಎಂದರು ಪುಷ್ಪಕ್ಕ ಸಂಭ್ರಮದಿಂದ.
ಹೊರಗೆ ಹೊರಟಿದ್ದ ಕರುವಿನ ಕಾಲುಗಳನ್ನು ಸ್ವಲ್ಪ ಹಿಂದಕ್ಕೆ ತಳ್ಳಿ ಜಾಗ ಮಾಡಿಕೊಂಡು ಕರುವಿನ ತಲೆಯನ್ನು ಶಕ್ತಿ ಬಿಟ್ಟು ಮುಂದಕ್ಕೆಳೆದುಕೊಂಡೆ. ತಲೆ ನೇರ ಆಯಿತು. ಕೂಡಲೇ ಕಾಲುಗಳು ಮತ್ತು ತಲೆಯನ್ನು ಕೂಡಿಸಿ ಎಳೆದೆ. ಎಷ್ಟು ವರ್ಷದಿಂದ ಕಾದಿತ್ತೋ ಎಂಬಂತೆ, ಕೆಲವೇ ಕೆಲವು ಗ್ರಾಂಗಳಷ್ಟು ಹಗುರವಿದ್ದಂತೆ ಸುಂಯ್ಞನೆ ಹೊರಬಂದಿತು ಕರು. ಕರುವನ್ನು ನಾನು ಮತ್ತು ಗುರೂಜಿ ಎತ್ತಿಕೊಂಡು ನಿಧಾನಕ್ಕೆ ಪುಷ್ಪಕ್ಕನವರು ಸಿದ್ಧಪಡಿಸಿದ್ದ ಗೋಣಿಚೀಲದ ಸುಪ್ಪತ್ತಿಗೆಯ ಮೇಲೆ ಮಲಗಿಸಿದೆವು. ಕೈಯ್ಯಲ್ಲಿ ಪುನರ್ಪುಳಿ ಜ್ಯೂಸ್ ಹಿಡಿದು ಕೊಟ್ಟಿಗೆ ಪ್ರವೇಶಿಸಿದ ಪುಷ್ಪಕ್ಕನವರನ್ನು ಕರು ‘ಅಂಬಾ’ ಎಂದು ಕೂಗಿ ಸ್ವಾಗತಿಸಿತು.