ಭಾರಿ ಯಶಸ್ಸು ಕಂಡ ಕೃಷಿಮೇಳಕ್ಕೆ ತೆರೆ

0

ಬೆಂಗಳೂರು: (ಜಿಕೆವಿಕೆ – ಕೃಷಿಮೇಳ) ನಗರದ ಗಾಂಧಿ ವಿಜ್ಞಾನ ಕೇಂದ್ರದಲ್ಲಿ ನಾಲ್ಕುದಿನ ಜರುಗಿದ ಕೃಷಿಮೇಳ ಇಂದು ಸಂಜೆ ಮುಕ್ತಾಯಗೊಂಡಿದೆ.

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ನವೆಂಬರ್ 3 ರಿಂದ 6ರ ತನಕ ಕೃಷಿಮೇಳವನ್ನು ಆಯೋಜಿಸಿತ್ತು. ಆಯೋಜಕರು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿದ್ದು ಮತ್ತು ವಹಿವಾಟು ನಡೆದಿರುವುದು ಗಮನಾರ್ಹ

ಹಿಂದಿನ ಎರಡು ವರ್ಷ ಸೀಮಿತ ಪ್ರಮಾಣದಲ್ಲಿ ಭೌತಿಕವಾಗಿ ಕೃಷಿಮೇಳ ನಡೆದಿತ್ತು. ಇದರ ಆನ್ ಲೈನ್ ಪ್ರಸಾರವೂ ಆಗಿತ್ತು.  ಕೋವಿಡ್ ಆತಂಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಭಾರಿ ಪ್ರಮಾಣದಲ್ಲಿ ಮೇಳದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಕೃಷಿಕ್ಷೇತ್ರದ ವಿವಿಧ ಉದ್ದಿಮೆಗಳಿಂದಲೂ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಆಡಳಿತ ಏಳುನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಿತು ಎಂದು ವಿಶ್ವವಿದ್ಯಾಲಯದ ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಅವರು “ಅಗ್ರಿಕಲ್ಚರ್ ಇಂಡಿಯಾ” ಪ್ರತಿನಿಧಿಗೆ ತಿಳಿಸಿದರು.

ಹೈಟೆಕ್ ಸ್ಟಾಲ್ ಗಳು:

ಬಹುತೇಕ ಸ್ಟಾಲ್ ಗಳು ಹೈಟೆಕ್ ಆಗಿದ್ದು ವಿಶೇಷ. ಎಂಥಾ ಮಳೆಗಾಳಿ ಬಂದರೂ ಮಳಿಗೆಗಳಲ್ಲಿ ಇರುವವರು ಕೃಷಿ ಸಂಬಂಧಿತ ಉತ್ಪನ್ನಗಳು, ಸಂದರ್ಶಕರು ನೆನೆಯದಂತೆ ವ್ಯವಸ್ಥೆ ಮಾಡಲಾಗಿತ್ತು.

ನವೆಂಬರ್ 3ರ ಹಿಂದಿನ ದಿನಗಳಲ್ಲಿ ಮಳೆ ಬಂದಿದ್ದು ಆತಂಕಕ್ಕೆ ಕಾರಣವಾಯಿತು. ನವೆಂಬರ್ 3ರಂದು ಮೊದಲ ದಿನ ವರುಣಾಗಮನ ಆದರೂ ಜನಾಗಮವೇನೂ ಕಡಿಮೆಯಿರಲಿಲ್ಲ. 1.60 ಲಕ್ಷ ಮಂದಿ ಮೇಳಕ್ಕೆ ಆಗಮಿಸಿದ್ದರು. ಒಟ್ಟು ವಹಿವಾಟು 1. 62 ಕೋಟಿ ರೂಪಾಯಿ ಆಗಿತ್ತು. ವಿಶ್ವವಿದ್ಯಾಲಯ ವ್ಯವಸ್ಥೆ ಮಾಡಿದ್ದ ಮೈಸೂರು ಸೀಮೆ ಸಾಂಪ್ರದಾಯಿಕ ಶೈಲಿಯ ರಿಯಾಯತಿ ದರದ ಭೋಜನಾಲಯದಲ್ಲಿ  7. 65 ಸಾವಿರ ಮಂದಿ ಆಹಾರ ಸವಿದಿದ್ದರು.

ಎರಡನೇ ದಿನ ವರುಣಾಗಮನ ಸಂಜೆ ಸಮಯದಲ್ಲಿ ಆದ ಕಾರಣ ಆಗಮಿಸಿದವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಬಂದವರ ಸಂಖ್ಯೆ 2.45 ಲಕ್ಷ. ಆದ ವಹಿವಾಟು  2.10 ಕೋಟಿ ರೂಪಾಯಿ,  ರಿಯಾಯತಿ ದರದ ಸಾಂಪ್ರದಾಯಿ ಭೀಜನ ಸವಿದವರ ಸಂಖ್ಯೆ  11. 25 ಸಾವಿರ.

ಮೂರನೇ ದಿನ ಸಂದರ್ಶಕರ ಆಗಮನಕ್ಕೆ ವಾತಾವರಣವೂ ಸಹಕಾರಿಯಾಗಿತ್ತು. ಹಿಂದಿನ ಯಾವ ಕೃಷಿಮೇಳದಲ್ಲಿ ಒಂದೇ ದಿನ ಆಗಮಿಸಿದವರ ಸಂಖ್ಯೆಯನ್ನುಈ ಬಾರಿ ಮೂರನೇ ದಿನ ಬಂದವರ ಸಂಖ್ಯೆ ಮೀರಿಸಿತು. ಒಟ್ಟು 7. 16 ಲಕ್ಷ ಜನ ಕೃಷಿಮೇಳಕ್ಕೆ ಭೇಟಿ ನೀಡಿದ್ದರು. ಒಟ್ಟು 2. 85 ಕೋಟಿ ರೂಪಾಯಿ ವಹಿವಾಟು ನಡೆಯಿತು. ಸಾಂಪ್ರದಾಯಿಕ ಭೋಜನ ಸವಿದವರ ಸಂಖ್ಯೆ  12. 50 ಸಾವಿರ.

ನಾಲ್ಕನೇ ದಿನ ಬೆಳಗ್ಗೆಯಿಂದಲೂ ವಾತಾವರಣ ಸಹಕಾರಿಯಾಗಿತ್ತು. ಹಿಂದಿನ ಮೂರು ದಿನಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸುವ ನಿರೀಕ್ಷೆ ವಿಶ್ವವಿದ್ಯಾಲಯದ ಆಡಳಿತಕ್ಕಿತ್ತು. ಇಂದು ಆಗಮಿಸಿದವರ ಸಂಖ್ಯೆ  6. 14 ಲಕ್ಷ. ಮಧ್ಯಾಹ್ನ 2ರ ಹೊತ್ತಿಗೆ ಭಾರಿ ಪ್ರಮಾಣದಲ್ಲಿಯೇ ಮಳೆ ಸುರಿದಿದ್ದು ಆಗಮಿಸುವವರಿಗೆ ಹಿನ್ನಡೆಯಾಗಿಯೇ ಪರಿಣಮಿಸಿತು. ಈ ದಿನ ಆದ ವಹಿವಾಟು  2.94 ಕೋಟಿ ರೂಪಾಯಿ. ಭೋಜನ ಸವಿದವರ ಸಂಖ್ಯೆ  12. 10 ಸಾವಿರ.

ಆಸಕ್ತರು ಕೃಷಿಮೇಳದ ವಿವಿಧ ಕೃಷಿ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ವಿವಿಧ ವಿಧಾನಗಳಲ್ಲಿ ಜಲಕೃಷಿ ಮಾಡುವ ಪ್ರಾತ್ಯಕ್ಷಿಕೆ ಹೆಚ್ಚಿನ ಮಂದಿಯ ಗಮನ ಸೆಳೆಯಿತು. ಸೆನ್ಸಾರ್ ಆಧಾರಿತ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅನೇಕರು ಆಸಕ್ತಿ ವಹಿಸಿದ್ದು ಕಂಡು ಬಂತು.

LEAVE A REPLY

Please enter your comment!
Please enter your name here