ಪ್ರಪಂಚದ ಎಲ್ಲಾ ದೇಶಗಳು ಕೋವಿಡ್-19ರ ಪ್ರಭಾವದಿಂದ ಆರ್ಥಿಕವಾಗಿ ಕುಸಿದಿವೆ. ಭಾರತದ ಆರ್ಥಿಕ ವಹಿವಾಟಿನ ಮೇಲೆ ಇದರ ಪ್ರಭಾವ ಮತ್ತಷ್ಟೂ ಹೆಚ್ಚಿದೆ. ಕೊರೊನಾ ದುಷ್ಪರಿಣಾಮಕ್ಕೂ ಮೊದಲೇ ಇಲ್ಲಿನ ಆರ್ಥಿಕ ಸ್ಥಿತಿ ಕುಸಿಯತೊಡಗಿತ್ತು. ಸಣ್ಣ-ಮಧ್ಯಮ ಪ್ರಮಾಣದ ಕೈಗಾರಿಕೆಗಳ ಬಾಗಿಲು ಮುಚ್ಚತೊಡಗಿದವು. ಬೆಂಗಳೂರು ಮಹಾನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿಯೇ ಅನೇಕ ಕೈಗಾರಿಕೆಗಳು ಬಂದ್ ಆಗಿರುವುದು ನಿದರ್ಶನ.
ಉತ್ಪಾದನಾ ವಲಯ ಕುಸಿದಿದೆ. ನಿರುದ್ಯೋಗ ಏರಿಕೆಯಾಗಿದೆ. ಜನಗಳಿಗೆ ಕೆಲಸವಿಲ್ಲ. ಖರೀದಿಶಕ್ತಿ ಕುಸಿದಿದೆ. ಈ ಕಾರಣದಿಂದ ಮೊದಲೇ ಅದಾಯವಿಲ್ಲದ. 19 ಕೋಟಿ (ಬಡತನದ ರೇಖೆಗಿಂತ ಕೆಳಗಿನವರು) ಅಲ್ಲದೆ ಇನ್ನೊಂದು ೫೦ ಕೋಟಿ ಜನರಿಗೆ ಈಗ ಉದ್ಯೋಗವಿಲ್ಲ. ವ್ಯಾಪಾರದಿಂದ ಬರುವ ಜಿ.ಎಸ್.ಟಿ, ಅಬ್ಕಾರಿ ಡ್ಯೂಟಿ ಬರುವುದಿಲ್ಲ. ಇದರಿಂದ ಕೆಲವೊಂದು ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡುವ ಪರಿಸ್ಥಿತಿಯಲ್ಲಿ ಇಲ್ಲ.
ದುಡಿಯುವ ಜನರು ಕೆಲಸವಿಲ್ಲದೆ ತಮ್ಮ ಸ್ವಂತ ಗ್ರಾಮಗಳನ್ನು ಸೇರುತ್ತಿದ್ದಾರೆ. ಆರ್ಥಿಕ ಹಿಂಜರಿತವೆಂದರೆ. ಜನಗಳಿಗೆ ಕೆಲಸವಿರದು. ಕೆಲಸವಿಲ್ಲದೆ ಸಂಬಳವಿಲ್ಲ. ವ್ಯಾಪಾರಿಯಾದರೆ ವರಮಾನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗುತ್ತದೆ. ಇದರಿಂದಾಗಿ ಹಣಕಾಸಿನ ವ್ಯವಹಾರ ಕೂಡ ಮತ್ತಷ್ಟೂ ಕುಂಠಿತಗೊಳ್ಳುತ್ತಾ ಹೋಗುತ್ತದೆ.
ಹೇಗೆಂದರೆ. ಜನಗಳು ತಮ್ಮ ಉಪಯೋಗಕ್ಕಾಗಿ ಅಂದರೆ ಮನೆ, ಕಾರು ದ್ವಿಚಕ್ರವಾಹನ, ಗೃಹಪಯೋಗಿ ವಸ್ತುಗಳು ಇತ್ಯಾದಿಗಳನ್ನು ಕೊಳ್ಳಲು ಬ್ಯಾಂಕಿನಲ್ಲಿ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದು ಕಂತುಗಳಲ್ಲಿ ತೀರಿಸುತ್ತಾರೆ. ಆದರೆ ಈಗ ಕೋವಿಡ್ ೧೯ ರ ಪ್ರಭಾವದಿಂದ ಕೆಲಸಗಾರರಿಗೆ ಸಂಬ ಳವಿಲ್ಲದ ಕಾರಣ ಅವರಿಗೆ ಕಂತು ಕಟ್ಟಲು ಆಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಗಳು ಮೊರ್ಟ್ಟೋರಿಯಂ ವಿಧಾನವನ್ನು ಜಾರಿಗೆತಂದಿವೆ. ಇದರಿಂದಾಗಿ ಬ್ಯಾಂಕುಗಳಿಗೆ ಅಥವಾ ಹಣಕಾಸು ಸಂಸ್ಥೆಗಳಿಗೆ ಹಣದ ಹರಿವು ಸಿಗದ ಕಾರಣ ಬ್ಯಾಂಕುಗಳಲ್ಲಿ ವ್ಯವಹಾರವೂ ಕುಂಠಿತಗೊಳ್ಳುತ್ತದೆ.
ಇದಲ್ಲದೆ ಭಾರತದಲ್ಲಿ ಸ್ಥಾಪಿತವಾಗಿರುವ ಉತ್ಪಾದನಾ ಘಟಕಗಳು.ವಾಣಿಜ್ಯ ಸಂಸ್ಥೆಗಳು. ದೊಡ್ಡ ದೊಡ್ಡ ವ್ಯವಹಾರ ಸಂಸ್ಥೆಗಳು ಸಾಮಾನ್ಯವಾಗಿ ಸರಿಸುಮಾರು ಶೆ.೯೦ ರಷ್ಟು ಬ್ಯಾಂಕುಗಳಲ್ಲಿ ಅಥವಾ ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಸಾಲಪಡೆದಿರುತ್ತವೆ. ಈಗ ಕೊವಿಡ್-೧೯ ರ ಪರಿಣಾಮ ಇವರಲ್ಲಿ ಶೇ ೮೦ ಸಂಸ್ಥೆಗಳು ವ್ಯವಹಾರ ಇಲ್ಲದ ಕಾರಣ ಬಡ್ಡಿ, ಕಂತುಗಳನ್ನು ಕಟ್ಟಿರುವುದಿಲ್ಲ. ಬ್ಯಾಂಕುಗಳು ಸಾಮಾನ್ಯವಾಗಿ ಹಣಕಾಸಿನ ಆವರ್ತನ ಕೆಲಸ ಮಾಡುತ್ತವೆ. ಇವುಗಳಿಗೆ ಹಣದ ಒಳಹರಿವು ಇಲ್ಲವಾದಗ ತಮ್ಮ ಠೇವಣಿದಾರರಿಗೆ ಬಡ್ಡಿ ಸಹ ಕೊಡಲು ಕಷ್ಟವಾಗುತ್ತದೆ ಇವುಗಳು ಆರ್ಥಿಕ ಹಿಂಜರಿತದ ಪರಿಣಾಮಗಳು.
ಈಗ ಮುಖ್ಯ ವಿಷಯಕ್ಕೆ ಬರೋಣ. ವ್ಯಯಸಾಯ ಕ್ಷೇತ್ರವು ಈ ಆರ್ಥಿಕ ಹಿಂಜರಿತದ ತಲ್ಲಣಧಿಂದ ಹೊರಬರಲು ಯಾವ ಆರ್ಥಿಕ ಉಪಕ್ರಮಗಳು ನೆರವಾಗಬಲ್ಲವು ಎಂದು ಯೋಚಿಸಿದಾಗ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಪ್ರಯೋಜನ ಪಡೆಯಬಹುದು. ಮಳೆ ಚೆನ್ನಾಗಿ ಬೀಳುತ್ತಿದೆ. ಈ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಆಗಬಹುದು ಎಂದು ಅಂಧಾಜಿಸಲಾಗಿದೆ. ಈಗಾಗಲೇ ಪಟ್ಟಣ ಪ್ರದೇಶದಿಂದ ಕಾರ್ಮಿಕರು ಅವರವರ ಊರುಗಳಿಗೆ ತೆರಳಿದ್ದಾರೆ. ಕಾರ್ಮಿಕರು. ತಮ್ಮ ಊರುಗಳಲ್ಲಿ ಇರುವುದರಿಂದ ಸ್ವಂತ ಜಮೀನು ಹೊಂದಿರುವ ರೈತರು ಮತ್ತು ಜಮೀನು ಇಲ್ಲದ ರೈತ ಕಾರ್ಮಿಕರಿಗೂ ಕೆಲಸ ದೊರೆಯುತ್ತದೆ. ಈ ದಿಶೆಯಲ್ಲಿ ಉತ್ತಮ ಬೀಜ,ಗೊಬ್ಬರ, ಇತ್ಯಾದಿ ಸರಿಯಾದ ಸಮಯಕ್ಕೆ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಅನುಕೂಲ ಮಾಡಿ ಕೊಡಬೇಕು.
ಇಂಥ ವ್ಯವಸ್ಥೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಮತ್ತು ನಗರ ಪ್ರದೇಶಗಳಿಂದ ಹಿಂದಿರುಗಿದವರಿಗೂ ಉದ್ಯೋಗ ದೊರೆಯುತ್ತದೆ. ಹಣಕಾಸಿನ ಚಕ್ರ ತಿರುಗುತೊಡಗುತ್ತದೆ. ಜಮೀನಿಲ್ಲದ ಕೃಷಿಕಾರ್ಮಿಕರಿಗೆ ಉತ್ತಮ ಕೂಲಿ ದೊರೆಯುತ್ತದೆ. ಉದ್ಯಮಕಾರರಿಗೆ ಕಚ್ಚಾವಸ್ತು ಸಬರಾಜಾಗಿ ಅವರಿಗೂ ವರಮಾನ ಬರುತ್ತದೆ. ಒಂದಷ್ಟು ಕಾರ್ಖಾನೆಗಳೂ ಚಾಲನೆಯಾಗುತ್ತವೆ.
ರಾಷ್ಟ್ರದ ಜನಸಂಖ್ಯೆಯಲ್ಲಿ ಶೇಕಡ 60 ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿಯೇ ಇದೆ. ದುಡಿಯುವ, ಶಕ್ತಿ ಇರುವವರು, ನಿರಂತರವಾಗಿ ಆಹಾರಧಾನ್ಯ, ತರಕಾರಿ –ಹಣ್ಣುಗಳನ್ನು ಎಲ್ಲೆಡೆ ಪೂರೈಕೆ ಮಾಡುತ್ತಿದ್ದಾರೆ. ಕೊರೊನಾಕ್ಕೆ ಆತಂಕಪಟ್ಟು ಇವರು ತಮ್ಮ ದೈನಂದಿನ ಕೆಲಸಕಾರ್ಯ ನಿಲ್ಲಿಸಿಲ್ಲ. ಆದ್ದರಿಂದ ದುಡಿಯುವ ಗ್ರಾಮಣ ಜನರಿಗೆ ಈ ಮುಂದಿನ ಸೌಲಭ್ಯಗಳನ್ನು ನೀಡುವುದು ಅತ್ಯಗತ್ಯ.
೧.ಉತ್ತಮ ಮಾರುಕಟ್ಟೆ ಸೌಲಭ್ಯ. ೨. ಉತ್ತಮ ಸಾರಿಗೆ ೩. ಗೋದಾಮುಗಳು. ೪. ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ. ಇಷ್ಟು ಕನಿಷ್ಟ ಸೌಲಭ್ಯಗಳು ದೊರೆತರೆ ರೈತರು ಮತ್ತಷ್ಟೂ ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ. ಕೃಷಿಕಾರ್ಮಿಕರಗೂ ಉದ್ಯೋಗ –ವೇತನ ನೀಡಲು ಸಾಧ್ಯವಾಗುತ್ತದೆ. ಕೃಷಿಯುತ್ಪನ್ನ ಸರಕು ಸಾಗಣೆ ವಲಯದವರಿಗೂ ಕೆಲಸ ದೊರೆಯುತ್ತದೆ. ಮಹಾನಗರಗಳ ಮಾರುಕಟ್ಟೆ ವಲಯವೂ ಪುನಶ್ಚೇತನಗೊಳ್ಳುತ್ತದೆ. ಇವೆಲ್ಲದರ ಪರಿಣಾಮ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಣೆಯಾಗುತ್ತದೆ.