ಭಾರತೀಯ ಕೃಷಿಪದ್ಧತಿ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ವೈಜ್ಞಾನಿಕ ಇತಿಹಾಸ ಹೊಂದಿದೆ. ಇದನ್ನು ಪಾಶ್ಚಿಮಾತ್ಯ ವಿಜ್ಞಾನಿಗಳು ಹೇಳಿದ್ದಾರೆ. ಯಾವ ಹಂತದಲ್ಲಿ ಭೂಮಿ ಹರಗಬೇಕು, ಮಳೆ ನಕ್ಷತ್ರದಲ್ಲಿ ಬಿತ್ತನೆ / ನಾಟಿ ಮಾಡಬೇಕು, ಯಾವ ಹಂಗಾಮಿನಲ್ಲಿ ಯಾವ ಬೆಳೆ ಹಾಕಿದರೆ ಉತ್ತಮವಾಗಿ ಬರುತ್ತದೆ ಎಂಬುದನ್ನೆಲ್ಲ ಈ ಹಿಂದೆಯೇ ಕೃಷಿಕರು ಅಧ್ಯಯನ ಮಾಡಿ ಮಾದರಿ ಪದ್ಧತಿ ರೂಪಿಸಿದ್ದಾರೆ.
ಕೀಟಗಳ ಬಾಧೆಯನ್ನು ತಡೆಗಟ್ಟಲು ಸಹ ಅನೇಕ ಮಾದರಿಗಳನ್ನು ಬಳಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಥ ಮಾದರಿಗಳ ಬಳಕೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ದೇಶದಲ್ಲಿ ಆಹಾರ ಕೊರತೆಯಾದಾಗ ಅದನ್ನು ಸರಿದೂಗಿಸಿ ಯಾರು ಸಹ ಹಸಿವಿನಿಂದ ನರಳಬಾರದು ಎಂದು ಅಂದಿನ ಪ್ರಧಾನಿ ಜವಾಹರ್ ಲಾಲ್ ಅವರ ನೇತೃತ್ವದ ಸರ್ಕಾರ ನಿರ್ಧರಿಸಿತು. ಇದರ ಪರಿಣಾಮ ಹಸಿರು ಕ್ರಾಂತಿ ಕೈಗೊಳ್ಳಲು ನಿರ್ಧರಿಸಲಾಯಿತು. ಅದು ಯಶಸ್ವಿಯೂ ಆಯಿತು.
ರಸಗೊಬ್ಬರಗಳು, ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯಲಾಯಿತು. ಕೆಲವೇ ವರ್ಷಗಳಲ್ಲಿ ಆಹಾರ ಧಾನ್ಯಗಳ ವಿಷಯದಲ್ಲಿ ಭಾರತ ಸ್ವಾವಲಂಬಿಯೂ ಆಯಿತು. ಆದರೆ ಹಸಿರು ಕ್ರಾಂತಿ ಮುಂದಿನ ಎರಡು – ಮೂರು ದಶಕಗಳಲ್ಲಿಯೇ ದಶಕಗಳಲ್ಲಿ ತನ್ನ ದುಷ್ಪರಿಣಾಮ ತೋರಿಸಲಿದೆ ಎಂದು ಯಾರೂ ಎಣಿಸಿರಲಿಲ್ಲ. ಅವರ ಮುಂದೆ ಭಾರತ ತನ್ನ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಬೇಕು ಎಂಬ ಸದ್ದುದ್ದೇಶವಷ್ಟೆ ಇತ್ತು. ಆದ್ದರಿಂದ ಆಗಿ ಹೋಗಿರುವುದಕ್ಕೆ ಹಿಂದಿನ ಆಡಳಿತಗಾರರನ್ನು ದೂಷಿಸಿ ಪ್ರಯೋಜನವಿಲ್ಲ.
ಹಸಿರು ಕ್ರಾಂತಿಯ ದುಷ್ಪರಿಣಾಮಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅತಿಯಾದ ರಸಗೊಬ್ಬರ, ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ನೆಲ – ಜಲ – ಗಾಳಿ – ಬೆಳೆ ಎಲ್ಲವೂ ಕಲುಷಿತವಾಗಿದೆ. ಆರೋಗ್ಯವೂ ಹದಗೆಟ್ಟಿದೆ.
ಈ ವಿಷಯಗಳನ್ನು ಸಾಕಷ್ಟು ಸಲ ಹೇಳಿದ್ದೇವೆ. ಆದರೆ ಇವುಗಳಿಗೆ ಪರ್ಯಾಯಗಳನ್ನು ಕೊಡಲಾಗಿದೆಯೇ ಎಂದರೆ ಕೊಡಲಾಗಿದೆ ಆದರೆ ಅಗತ್ಯವಾದಷ್ಟು ಮಟ್ಟದಲ್ಲಿ ಆಗಿಲ್ಲ ಎಂದೇ ಹೇಳಬಹುದು.
ಸಾವಯವ ಗೊಬ್ಬರಗಳನ್ನು ವಿವಿಧ ರೀತಿಗಳಲ್ಲಿ ತಯಾರು ಮಾಡಬಹುದು. ಕೀಟಗಳನ್ನು ದೂರವಿರಿಸಲು ಸಸ್ಯಜನ್ಯ ಕೀಟನಾಶಕಗಳನ್ನು ತಯಾರಿಸಬಹುದು ಇತ್ಯಾದಿ ಅಂಶಗಳು ಸರಿ. ಆದರೆ ಎಲ್ಲ ಕೀಟಗಳನ್ನು ಸಹ ಸಸ್ಯಜನ್ಯ ಕೀಟನಾಶಕಗಳಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ ಹತ್ತಿಬೆಳೆಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಗುಲಾಬಿ ವರ್ಣದ ಕಾಂಡಕೊರಕ ಕೀಟವನ್ನು ನಿಯಂತ್ರಿಸುವುದು ಹೇಗೆ, ವೈರಸ್ , ಶಿಲೀಂಧ್ರ ಬಾಧೆಗಳು ಉಂಟಾದಾಗ ಅವುಗಳನ್ನು ಸಾವಯವ ಕ್ರಮದಲ್ಲಿ ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆಯೂ ಮಾಹಿತಿಗಳು ಬೇಕಿದೆ.
ಕರ್ನಾಟಕ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಾವಯವ ಕೃಷಿ ಕೇಂದ್ರಗಳಿವೆ. ಅಲ್ಲಿ ನೂತನವಾಗಿ ನಡೆದಿರುವ ಸಂಶೋಧನೆಗಳೇನು ? ರೈತರ ಹೊಲದಲ್ಲಿ ಅವುಗಳ ಬಳಸಿದಾಗ ಆಬಂದಿರುವ ಫಲಿತಾಂಶಗಳೇನು ? ಎಂಬುದರ ಮಾಹಿತಿಗಳು ಅಗತ್ಯವಾಗಿವೆ.
ಅತೀ ಕಡಿಮೆ ನೀರು, ಅತೀ ಕಡಿಮೆ ಸಾವಯವ ಪೋಷಕಾಂಶ ಬಳಸಿ ಅತೀ ಕಡಿಮೆ ಜಾಗದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಅತೀ ಕಡಿಮೆ ಖರ್ಚಿನಲ್ಲಿ ಬೆಳೆಯುವುದೇಗೆ ಎಂಬ ಸಂಶೋಧನೆಗಳು ಅಗತ್ಯವಾಗಿವೆ. ಒಂದು ವೇಳೆ ಈಗಾಗಲೇ ನಮ್ಮ ಕೃಷಿ ವಿಜ್ಞಾನಿಗಳು ಇಂಥ ಆವಿಷ್ಕಾರಗಳನ್ನು ಮಾಡಿದ್ದರೆ ಅವುಗಳ ಮಾಹಿತಿಗಳನ್ನು ಹಂಚಿಕೊಳ್ಳಬೇಕಾದ ಅವಶ್ಯಕತೆಯಿದೆ.