ಬೆಂಗಳೂರು: ಮಾ 11ಸರ್ಕಾರದ ಕೆಪಿಟಿಟಿ ನಿಯಮಾವಳಿ ಪ್ರಕಾರ 5ಲಕ್ಷ ರೂ.ಗಿಂತಲೂ ಹೆಚ್ಚಿನ ಕಾಮಗಾರಿಗೆ ಇ-ಟೆಂಡರ್ ಮೂಲಕ ಹಾಗೂ 5ಲಕ್ಷದೊಳಗಿನ ಕಾಮಗಾರಿಗೆ ರಾಜ್ಯದಲ್ಲಿ 1500 ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಟ್ಟದಲ್ಲಿ ಜಲಾನಯನ ಸಮಿತಿಗಳಿವೆ.ಆ ಸಮಿತಿಯಿಂದ ಒಪ್ಪಿಗೆ ಪಡೆದು ಟೆಂಡರ್ ಕರೆಯಲಾಗುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಇಂದು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯ ಎನ್.ಅಪ್ಪಾಜಿಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,ಕಳೆದ ಮೂರು ವರ್ಷಗಳಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಡಿ 359 ಚೆಕ್ ಡ್ಯಾಂಗಳ ನಿರ್ಮಾಣ ಮಾಡಲಾಗಿದೆ. ಒಂದು ಚೆಕ್ ಡ್ಯಾಂ ನಿರ್ಮಾಣ ಮಾಡಲು ಸ್ಥಳ ಸೂಕ್ತತೆಗನುಗುಣವಾಗಿ ಗರಿಷ್ಠ 5ಲಕ್ಷದವರೆಗೆ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದರು.
ಚೆಕ್‌ಡ್ಯಾಂ ನಿರ್ಮಾಣ ಮಾಡಲು ಸ್ಥಳದ ಹಳ್ಳದ ಎರಡು ದಂಡೆಗಳು ಸ್ಫುಟವಾಗಿರಬೇಕು. ಚೆಕ್ ಡ್ಯಾ ಗೆ ನೀರು ಹರಿದು ಬರುವ ಕ್ಷೇತ್ರವು ಸಾಕಷ್ಟಿರಬೇಕು. ಚೆಕ್‌ಡ್ಯಾಂ ನಲ್ಲಿ ಸಾಕಷ್ಟು ನೀರು ಸಂಗ್ರಹಣೆಗೆ ಅವಕಾಶವಿರಬೇಕು. ಯೋಜನಾ ವ್ಯಾಪ್ತಿಯ ಸಹಾಯಕ ಕೃಷಿ ಅಧಿಕಾರಿಯು ಜಾಗವನ್ನು ಗುರುತಿಸಿ ನಿಯಮಾನುಸಾರ ಅಂದಾಜುಪಟ್ಟಿ ತಯಾರಿಸಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಪರಿಶೀಲನೆಯೊಂದಿಗೆ ಮಂಜೂರಾತಿಗಾಗಿ ಉಪನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ. ನಂತರ ಸಂಬಂಧಪಟ್ಟ ಉಪ ಕೃಷಿ ನಿರ್ದೇಶಕರು ಪ್ರದತ್ತವಾದ ಅಧಿಕಾರದನ್ವಯ ಸದರಿ ಅಂದಾಜುಪಟ್ಟಿಗಳನ್ನು ಪರಿಶೀಲಿಸಿ ತಾಂತ್ರಿಕ ಮಂಜೂರಾತಿ ನೀಡಲಾಗುತ್ತದೆ ಎಂದರು.
ಅನುಷ್ಠಾನ ಮಾಡಲಾದ ಚೆಕ್ ಡ್ಯಾಂಗಳ ವೆಚ್ಚ ರೂ. 5ಲಕ್ಷ ಒಳಗಿರುವುದರಿಂದ ಕೆಟಿಪಿಪಿ ಅನ್ವಯ ಟೆಂಡರ್ ಕರೆಯುವ ಅವಶ್ಯಕತೆಯಿಲ್ಲದಿರುವ ಕಾರಣ ಟೆಂಡರ್ ಕರೆಯಲಾಗುವುದಿಲ್ಲ ಎಂದು ಸಚಿವರು ಹೇಳಿದರು.