ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸುವ ನೇರ ಮಾರ್ಕೆಟಿಂಗ್ ಮಾಡಬೇಕು. ಕೃಷಿಗೆ ಕೃಷಿ ವಿಜ್ಞಾನಿಗಳು ಕೃಷಿ ಅಧಿಕಾರಿಗಳೇ ವೈದ್ಯರಾಗಬೇಕು. ವಿಶ್ವವಿದ್ಯಾಲಯದ ಜ್ಞಾನ ರೈತನಿಗೂ ಬಳಕೆಯಾಗಬೇಕು.. ಕೃಷಿ ವಿಶ್ವವಿದ್ಯಾಲಯಗಳು ಬರೀ ಕಾಂಪಾಂಡ್ಗಳಿಗೆ ಮಾತ್ರ ಮೀಸಲಾಗದೇ ರೈತಸ್ನೇಹಿಗಳಾಗಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಪಾದಿಸಿದರು.
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಜಿಕೆವಿಕೆಯಲ್ಲಿ ಆವರಣದಲ್ಲಿನ ಕೃಷಿಮೇಳ ಸಮಾರೋಪ ಸಮಾರಂಭದಲ್ಲಿ ಅವರು ನೂತನ ತಳಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಮಗ್ರ ಕೃಷಿ ನೀತಿಯನ್ನು ಬಳಸಿ ವಿವಿಧ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಒತ್ತುಕೊಡಬೇಕು. ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು. ನವೀನ ತಂತ್ರಜ್ಞಾನ ಅಳವಡಿಕೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಕೃಷಿ ವಲಯದ ಮೂಲ ಸೌಕರ್ಯಕ್ಕೆ ಪ್ರಧಾನಿ ಮೋದಿ ಹೆಚ್ಚು ಒತ್ತು ನೀಡಿದ್ದಾರೆ.ಅಲ್ಲದೇ ಆಹಾರ ಸಂಸ್ಕರಣೆಗೂ ಹೆಚ್ಚು ಅನುದಾನ ನೀಡಿದ್ದಾರೆ ಎಂದರು.
ಕೋವಿಡ್ ನಿಂದ ಉಂಟಾದ ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ, ಕೃಷಿ ಉತ್ಪನ್ನ ಪರಿಕರ ಮಾರಾಟ ಸರಬರಾಜಿಗೆ ಅಡ್ಡಿಯಾಗದಂತೆ ಅಗ್ರಿರೂಮ್ ತೆರೆದು ಗ್ರೀನ್ ಪಾಸ್ ವಿತರಿಸಲಾಯಿತು ಎಂದರು. ಇಡೀ ರಾಜ್ಯದಲ್ಲಿ ಮಳೆಯಾಗಿದೆ. ಶೇಕಡ 104% ಬಿತ್ತನೆ ಈ ಬಾರಿ ಆಗಿದೆ. ಪ್ರವಾಹದಿಂದ ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕದ ಕೆಲವೆಡೆ ಕೆಲವು ತೊಂದರೆಯೂ ಆಗಿದೆ. ಇದರ ಪರಿಹಾರಕ್ಕೆ ಸರ್ಕಾರ ಕ್ರಮಕೈಗೊಂಡಿದೆ ಎಂದರು.
ಕೃಷಿ ಸಚಿವನಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕೃಷಿ ತಜ್ಞರು ಪಂಡಿತರು ಸೇರಿದಂತೆ ಹಲವರ ಜೊತೆ ರೈತರ ಆತ್ಮಹತ್ಯೆ ಸಂಬಂಧ ಚರ್ಚೆ ಮಾಡಲಾಯಿತು.ಕೋಲಾರದಲ್ಲಿ ಸಮಗ್ರ ಕೃಷಿ ನೀತಿ ಅಳವಡಿಸಿದ ರೈತರು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದರು. ಅಂತೆಯೇ ಕೋಲಾರದ ಸಮಗ್ರ ಕೃಷಿ ರೈತರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ತೋಟಗಾರಿಕಾ ಸಚಿವ ನಾರಾಯಣಗೌಡ ಮಾತನಾಡಿ,ಕೃಷಿ ಕುಟುಂಬದಲ್ಲಿ ಜನ್ಮ ಪಡೆದ ಬಿ.ಸಿ.ಪಾಟೀಲ್ ಇಚ್ಛೆಪಟ್ಟು ಖುಷಿಖುಷಿಯಿಂದ ಕೃಷಿ ಸಚಿವರಾಗಿದ್ದಾರೆ.ಲಾಕ್ಡೌನ್ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳನ್ನು ಸುತ್ತಾಡಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಡಕಾಗದಂತೆ ನೋಡಿಕೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಕೃಷಿ ಸಚಿವರು ನಾಳೆಯಿಂದ “ರೈತರೊಂದಿಗೆ ಒಂದು ದಿನ” ಹೆಸರಿನಲ್ಲಿ ಮಂಡ್ಯ ಜಿಲ್ಲೆಯಿಂದ ಆರಂಭಿಸಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನೂರು ಶೀಥಲೀಕರಣ ಘಟಕ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ರಜ್ಯದಲ್ಲಿ ತೋಟಗಾರಿಕೆ ಕ್ರಾಂತಿಗೆ ನಾಂದಿ ಹಾಡಿದ ಮರಿಗೌಡರ ಹೆಸರಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಆರಂಭಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆನ್ಲೈನ್ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿಯೂ ರೈತರು ಎದೆಗುಂದದೇ ಕೂಡ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಶೇಕಡ ಸಾಮಾನ್ಯಕ್ಕಿಂತ ಶೇಕಡ 40ರಷ್ಟು ಹೆಚ್ಚು ರಾಸಾಯನಿಕ ಗೊಬ್ಬರಗಳು ಬಳಕೆಯಾಗಿವೆ. ಕೇಂದ್ರ ಸರ್ಕಾರ, ರೈತನ ಆದಾಯ ದ್ವಿಗುಣಗೊಳಿಸಲುದ್ದೇಶಿಸಿದೆ.ಇತ್ತೀಚಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾಯಿದೆ ತಿದ್ದುಪಡಿ ತರುವ ಮೂಲಕ ರೈತನನ್ನು ಸ್ವಾಭಿಮಾನಿಯನ್ನಾಗಿಸಿದೆ. ಕೃಷಿ ವಿಶ್ವವಿದ್ಯಾಲಯಗಳು ನವೀನ ತಳಿ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಈ ಬಾರಿ ಕೃಷಿ ಉತ್ಪನ್ನಗಳು ಹೆಚ್ಚಾಗಿವೆ ಎಂದರು.
ಸಮಾರೋಪದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹೆಚ್.ಡಿ.ದೇವೇಗೌಡ, ಬೈರೇಗೌಡ,ಎಂ.ಮರಿಗೌಡ, ಅತ್ಯುತ್ತಮ ರೈತ, .ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗಳನ್ನು ಹಾಗೂ ಉತ್ತಮ ಕೃಷಿಕ ಮಹಿಳೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಮೇಲ್ಮನೆ ಸದಸ್ಯ ಅ.ದೇವೇಗೌಡ, ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ, ಕೃಷಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ, ಷಡಕ್ಷರಿ ವಿವಿ ಸಿಂಡಿಕೇಟ್ ಸದಸ್ಯರು, ಕೃಷಿವಿಜ್ಞಾನಿಗಳು ಹಾಜರಿದ್ದರು.