ಕೃಷಿಭೂಮಿಯ ಮಣ್ಣಿನ ಗುಣಮಟ್ಟ ಕಾಪಾಡಲು ಕರೆ

0

ನಮ್ಮ ದೇಶದಲ್ಲಿ 141 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯಿದೆ. 60 ಮಿಲಿಯನ್ ಹೆಕ್ಟೇರ್ ಕೃಷಿಭೂಮಿಯ ಮಣ್ಣಿನ ಗುಣಮಟ್ಟ ತೀರಾ ಕುಸಿದಿದೆ. ಅಲ್ಲಿಯ ಮಣ್ಣು ಆಮ್ಲೀಯ, ಸವುಳಾಗಿದೆ. ಕೃಷಿಯೋಗ್ಯವಾಗಿ ಉಳಿದಿಲ್ಲ. ಇದೆಲ್ಲ ಸಮರ್ಪಕವಾಗಿ ನಿರ್ವಹಣೆ ಮಾಡಲಾಗದ ಕಾರಣದಿಂದ ಆಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಡಾ. ಎಸ್. ಎ. ಪಾಟೀಲ ವಿಷಾದಿಸಿದರು.
ಡಾ. ಎಸ್.ಎ. ಪಾಟೀಲ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೆರೆಕೋಡಿಯಲ್ಲಿರುವ ಕೃಷಿ ಯಂತ್ರೋಪಕರಣ ತಜ್ಞ ಡಾ. ನಾಗರಾಜ್ ನೇತೃತ್ವದ “ಮಾರುತಿ ಕೃಷಿ ಉದ್ಯೋಗ್ ಲಿಮಿಟೆಡ್” ಗೆ ಡಿಸೆಂಬರ್ 8 ರಂದು ಭೇಟಿ ನೀಡಿದ್ದರು.


ಪ್ರಾಯೋಗಿಕ ಕೃಷಿ ತಾಕಿನಲ್ಲಿ ತಾವು ಮಾಡುತ್ತಿರುವ ಕೃಷಿ ಪ್ರಯೋಗಗಳನ್ನು ಡಾ. ನಾಗರಾಜ್ ಅವರು ಡಾ. ಎಸ್.ಎ. ಪಾಟೀಲ್ ಅವರಿಗೆ ವಿವರಿಸುತ್ತಿರುವುದು

ಭಾರತದ 12ನೇ ಪಂಚವಾರ್ಷಿಕ ಯೋಜನೆಯ ಕೃಷಿ ಕರಡು ಸಮಿತಿ ಅಧ‍್ಯಕ್ಷರಾಗಿ ಕೆಲಸ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು ಅವರು ಮಾತನಾಡಿದರು. ಕೃಷಿಭೂಮಿಯ ಮಣ್ಣಿನ ಗುಣಮಟ್ಟ ಕಾಪಾಡಲು ರೈತರು, ಕೃಷಿವಿಜ್ಞಾನಿಗಳು ಶ್ರಮಿಸಬೇಕು ಎಂದು ಹೇಳಿದರು.
ಭಾರತೀಯ ಪಾರಂಪಾರಿಕ ಕೃಷಿ ತಂತ್ರಜ್ಞಾನ, ಕೃಷಿವಿಶ್ವವಿದ್ಯಾಲಯಗಳ ವಿಜ್ಞಾನಿಗಳ ತಂತ್ರಜ್ಞಾನ ಸಮ್ಮಿಳಿತವಾಗಬೇಕು. ಇದರಿಂದ ಬಹಳಷ್ಟು ಪ್ರಯೋಜನಗಳಿವೆ. ಇಂಥ ಸಂಯೋಜಿತ ತಂತ್ರಜ್ಞಾನ ಬಳಸಿಕೊಂಡು ಭಾರತದಲ್ಲಿರುವ ಕೃಷಿಭೂಮಿಯಿಂದ ಇಡೀ ಜಗತ್ತಿಗೆ ಆಹಾರ ಪೂರೈಸಬಹುದು ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಕಾರಣ ಭಾರತ ಉಪಖಂಡದಲ್ಲಿರುವ ಅನುಕೂಲಕರ ಹವಾಗುಣ ಜಗತ್ತಿನ ಬೇರೆಡೆ ವಿರಳ. ಕೆನಡಾ ದೇಶದಲ್ಲಿ ವರ್ಷದಲ್ಲಿ ಏಪ್ರಿಲ್ ನಿಂದ ಅಕ್ಟೋಬರ್ ತನಕ ಬೆಳೆಗಳನ್ನು ಬೆಳೆಯಬಹುದು. ಅಮೆರಿಕಾದಲ್ಲಿ ಇದರ ಅವಧಿ ಇದಕ್ಕಿಂತ ತುಸು ಹೆಚ್ಚು. ಆದರೆ ಭಾರತದಲ್ಲಿ ವರ್ಷದ 12 ತಿಂಗಳು ವೈವಿಧ್ಯ ಬೆಳೆಗಳನ್ನು ಕೃಷಿ ಮಾಡಬಹುದು ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮಾರುತಿ ಕೃಷಿ ಉದ್ಯೋಗ್ ಲಿ. ವಿನ್ಯಾಸಗೊಳಿಸಿ, ರೂಪಿಸುತ್ತಿರುವ “ಬಹುಪಯೋಗಿ ಅಂತರ ಬೇಸಾಯ” ಯಂತ್ರ ತಯಾರಿಕಾ ಘಟಕಕ್ಕೂ ಭೇಟಿ ನೀಡಿ ತಯಾರಿಕೆಯ ಹಂತಗಳನ್ನು ವೀಕ್ಷಿಸಿದರು. ಈ ಬಳಿಕ ಘಟಕದ ಪ್ರಾಯೋಗಿಕ ಹೊಲದ ತಾಕಿನಲ್ಲಿ ಯಂತ್ರವನ್ನು ಸ್ವತಃ ಚಾಲನೆ ಮಾಡಿದರು. ಅದರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾವು ಮಾಡುತ್ತಿರುವ ಕೃಷಿ ಪ್ರಯೋಗಗಳ ವಿಚಾರಗಳನ್ನು ಡಾ. ನಾಗರಾಜ್ ಅವರು ಡಾ. ಎಸ್.ಎ. ಪಾಟೀಲ್ ಅವರಿಗೆ ವಿವರಿಸುತ್ತಿದ್ದಾರೆ.

ಯಂತ್ರದ ವಿವಿಧ ಉಪಯೋಗಗಳ ಬಗ್ಗೆ ಡಾ. ನಾಗರಾಜ್ ಅವರು ವಿವರಿಸಿದಾಗ ಅದರ ಕಾರ್ಯಕ್ಷಮತೆ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇದರ ಸದುಪಯೋಗವನ್ನು ಕೃಷಿಕ ಸಮುದಾಯ ಹೆಚ್ಚೆಚ್ಚು ಪಡೆಯಬೇಕು ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಡಾ. ನಾಗರಾಜ್ ಅವರು ಬೆಳೆ ಬೆಳೆಯುವ ವಿಧಾನಗಳಲ್ಲಿ ಅಳವಡಿಸಿರುವ ವಿನೂತನ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡ ಅವರು ಇದರ ಪ್ರಾಯೋಗಿಕ ಹಂತಗಳ ಬಳಿಕ ಈ ತಂತ್ರಜ್ಞಾನಗಳು ರೈತ ಸಮುದಾಯಕ್ಕೂ ದೊರೆಯಲಿ ಎಂದು ಹೇಳಿದರು.

LEAVE A REPLY

Please enter your comment!
Please enter your name here