
- ಬಿದಿರು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ.
- ಬಿದಿರು ಮರವಲ್ಲ; ಒಂದು ಹುಲ್ಲಿನ ಜಾತಿ ಸಸ್ಯ! ಬಿದಿರಿಗೆ ಮರದಂತೆ ತಾಯಿ ಬೇರುಗಳಿಲ್ಲ. ಇತರ ಹುಲ್ಲುಗಳಂತೆ ಅತಿಯಾದ ಆಳಕ್ಕೆ ಹೋಗದೆ, ಹಲವು ತಂತು ಬೇರುಗಳ ಗುಂಪು ಇರುತ್ತದೆ.
- ಬೇಸಿಗೆಯಲ್ಲಿ ಬಿದಿರು ಸುತ್ತಮುತ್ತಲಿನ ವಾತಾವರಣವನ್ನು 8 ಡಿಗ್ರಿಗಳಷ್ಟು ತಂಪಾಗಿಸುತ್ತದೆ! ಇದು ನಮ್ಮ ಉದ್ಯಾನ ಮತ್ತು ಸಮೀಪದಲ್ಲಿರುವ ಯಾವುದೇ ಕಟ್ಟಡಗಳಿಗೆ ನೈಸರ್ಗಿಕ ಹವಾನಿಯಂತ್ರಣವಾಗಿ ಕಾರ್ಯನಿರ್ವಹಿಸುತ್ತದೆ.
- ಬಿದಿರು ಗಿಡಮರಗಳಂತೆ ಪ್ರತಿವರ್ಷ ಹೂವು ಮತ್ತು ಬೀಜ ಬಿಡುವುದಿಲ್ಲ. ಇದು ಬಹುವಾರ್ಷಿಕವಾಗಿ ಫಲ ಬಿಡುವ ಸಸ್ಯ. ಸಾಮಾನ್ಯವಾಗಿ 40- 50 ವರ್ಷಕ್ಕೆ ಒಮ್ಮೆ ಮಾತ್ರ ಫಲ ಬಿಡುತ್ತದೆ. ಒಂದೇ ಜಾತಿಯ ಬಿದಿರುಗಳು ಪ್ರಪಂಚದಾದ್ಯಂತ ಒಮ್ಮೆಲೇ ಫಲ ಬಿಡುತ್ತವೆ. ಹೀಗೆ ಫಲ ಬಿಟ್ಟಾದ ಇಡೀ ಬಿದಿರಿನ ಸಮೂಹವೇ ಸಾಮೂಹಿಕವಾಗಿ ಒಣಗಿ ನಾಶವಾಗುತ್ತದೆ. ಭತ್ತದ ತರಹವೇ ಇರುವ ಇದರ ಬೀಜಗಳನ್ನು ‘ಬಿದಿರಕ್ಕಿ’ ಎಂದೇ ಕರೆಯಲಾಗುತ್ತದೆ. ಹಿಂದೆ ಬರಗಾಲದ ಸಂಧರ್ಭದಲ್ಲಿ ಗ್ರಾಮೀಣ ಭಾಗದ ಜನ ಈ ಬಿದಿರಕ್ಕಿಯನ್ನೆ ಆಹಾರವಾಗಿ ಸೇವಿಸುತ್ತಿದ್ದರು.
- ಪಾಂಡಾ ಪ್ರಾಣಿಗಳ 99% ಆಹಾರ ಬಿದಿರಿನ್ನೇ ಒಳಗೊಂಡಿದೆ. ಬಿದಿರಿನ ಚಿಗುರು, ಕಳಲೆ (Rhizome), ಎಲೆಗಳನ್ನು ಇವು ತಿನ್ನುತ್ತವೆ.
- ಬಿದಿರು ಇತರ ಯಾವುದೇ ಸಸ್ಯಕ್ಕಿಂತ ಶೇ.30 ರಷ್ಟು ಪರಿಣಾಮಕಾರಿಯಾಗಿ ಗಾಳಿಯನ್ನು ಶುದ್ಧೀಕರಿಸುತ್ತದೆ; ಹೆಚ್ಚಿನ ಇಂಗಾಲ ಹೀರಿ, ಹೆಚ್ಚಿನ ಆಮ್ಲಜನಕ ಬಿಡುಗಡೆ ಮಾಡುತ್ತವೆ.
- ಬಿದಿರಿನ ಗಳಗಳು (Poles) ಅತ್ಯಂತ ಗಟ್ಟಿಮುಟ್ಟಾದವು (ಕೆಲವು ಕಬ್ಬಿಣದಷ್ಟೆ ಬಲಶಾಲಿಯಾದವು) ನಮ್ಮ ದೇಶ ಸೇರಿ ಪ್ರಪಂಚದಾದ್ಯಂತ ಮನೆ, ಪೀಠೋಪಕರಣ, ವಿವಿಧ ಮನೆಬಳಕೆ ವಸ್ತುಗಳು ಸೇರಿ ವಿವಿಧ ವಸ್ತುಗಳನ್ನು ಬಿದಿರಿನಿಂದ ನಿರ್ಮಿಸಲಾಗುತ್ತಿದೆ.
- ಮಣ್ಣಿನ ಸ್ಥಿರತೆ ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ ಬಿದಿರು ಅತ್ಯಂತ ಪರಿಣಾಮಕಾರಿ. ನದಿಗಳ ದಂಡೆ, ತೊರೆ ಅಥವಾ ಅಣೆಕಟ್ಟು ಗೋಡೆಗಳು, ಕಡಿದಾದ ಉದ್ಯಾನಗಳಲ್ಲಿ ಮಣ್ಣಿನ ಕುಸಿತ ತಡೆಯಲು ಬಿದಿರು ಅತ್ಯಂತ ಉಪಯುಕ್ತಕಾರಿ.
- ವಿವಿಧ ಜಾತಿಯ ಬಿದಿರುಗಳು ವಿವಿಧ ಆಕಾರ, ಗಾತ್ರಗಳು ಮತ್ತು ಬಣ್ಣಗಳನ್ನು ಹೊಂದಿದ್ದು, ಅಲಂಕಾರಿಕ ಸಸ್ಯ (Ornamental plant) ವಾಗಿಯೂ ಬಿದುರು ಪ್ರಸಿದ್ದಿ.
- ಬಿದಿರಿರುವ ಜಾಗದಲ್ಲಿ ಹಾವುಗಳು ಹೆಚ್ಚಾಗಿ ಇರುವುದಿಲ್ಲ. ಶೀತರಕ್ತ ಪ್ರಾಣಿಯಾದ ಹಾವುಗಳು ತಣ್ಣನೆಯ ಬಿದಿರಿನ ಜಾಗವನ್ನು ಹೆಚ್ಚು ಇಷ್ಟಪಡುವುದಿಲ್ಲ.