ನನ್ನ ಪೂರ್ಣ ಹೆಸರು ಮೈತ್ರಿ ಶಂಕರ್. ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದಿದ್ದು , ಮಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ. ಮದುವೆ ಆದ ಮೇಲೆ 15 ವರ್ಷ ಯುಎಸ್ ನಲ್ಲಿ ಇದ್ದೆವು. ಬೆಂಗಳೂರಿಗೆ ಹಿಂದಿರುಗಿ 10 ವರ್ಷವಾಗಿದೆ. ಪ್ರಸ್ತುತ ಆ್ಯಸ್ಟರ್ ಸಿಎಂಐ ಹೆಬ್ಬಾಳದಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಮೆಡಿಸಿನ್, ಕ್ಯಾನ್ಸರ್, ಹಾರ್ಟ್ ಡಿಸೀಸ್ ರೇಡಿಯೋಲಜಿ ವೈದ್ಯೆ. ನ್ಯೂಕ್ಲಿಯರ್ ಮೆಡಿಸನ್ ವಿಭಾಗದ ನೇತೃತ್ವ ವಹಿಸಿದ್ದೇನೆ.
ತೋಟಗಳೆಂದರೆ ಯಾವಾಗಲೂ ಪ್ರೀತಿ. ಅಮರಿಕಾದಲ್ಲಿ ಇದ್ದಾಗಲೂ ವಿಶಾಲವಾಗಿದ್ದ ಮನೆ ಆವರಣದಲ್ಲಿ ತೋಟಗಾರಿಕೆ ಮಾಡುತ್ತಿದ್ದೆ. ಬೆಂಗಳೂರಿಗೆ ಬಂದಮೇಲೆ ಟೆರಸ್ ಗಾರ್ಡನಿಂಗ್ ಮಾಡುತ್ತಿದ್ದೆ. ಮನೆಕಟ್ಟಿದ ಮೇಲೆ ಸಾಕಷ್ಟು ಜಾಗ ಉಳಿದಿತ್ತು. ಆ ನಂತರ ತಾರಸಿ ತೋಟ ಬಿಟ್ಟು ಆವರಣದಲ್ಲಿಯೇ ತೋಟಗಾರಿಕೆ ಮಾಡಲು ನಿಶ್ಚಯಿಸಿದೆ. ಮನೆಕಟ್ಟಿದ ನಂತರ ಇಟ್ಟಿಗೆ , ಹೆಂಚು, ಸೀಮೆಂಟ್ ಎಲ್ಲವೂ ಉಳಿದಿತ್ತು. ಲ್ಯಾಂಡ್ ಸ್ಕೇಪಿಂಗ್ ಆರ್ಕಿಟೆಕ್ಟ್ ಮಾಡಲು ಕೇಳಿದಾಗ ಹೆಚ್ಚು ಖರ್ಚಾಗುತ್ತೆ ಎಂದು ಹೇಳಿದರು.
ತೋಟಗಾರಿಕೆ ಗುಂಪೊಂದರಲ್ಲಿ ಕಾರ್ಯಾಗಾರ ನಡೆಯುತ್ತಿತ್ತು. ಅದರಲ್ಲಿ ಭಾಗಿಯಾದಾಗ ನಿಮ್ಮ ಮನೆಯಲ್ಲಿ ಹುಲ್ಲುಗಾವಲು ಇದೆಯೇ ಎಂದು ಕೇಳಿದರು. ಆಗ ನನಗೆ ಮನೆಯ ವಿಶಾಲ ಆವರಣದಲ್ಲಿಯೇ ತೋಟ ಮಾಡುವ ಬಗ್ಗೆ ಆಸಕ್ತಿ ಬಂತು. ಆ ಬಗ್ಗೆ ಓದಿ ತಿಳಿದುಕೊಂಡೆ. ಸ್ನೇಹಿತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡೆ. ಆರಂಭದಲ್ಲಿ ಪಾರಿಜಾತ, ಸಂಪಿಗೆ, ತಾಳೆ ಗಿಡಗಳನ್ನು ನೆಡಲಾಯಿತು. ಮನೆ ಹತ್ತಿರ ಹಣ್ಣಿನ ಬೀಜಗಳನ್ನು ಬಿತ್ತಲಾಯಿತು. ಕೆಲವಾರು ಸ್ನೇಹಿತರು ಸಸಿ-ಗಿಡಗಳನ್ನು ಕಾಣಿಕೆಯನ್ನಾಗಿ ಕೊಟ್ಟಿದ್ದಾರೆ. ಪರಿಸರ ದಿನಾಚರಣೆಯಲ್ಲಿ ಪನ್ನೇರಳೆಹಣ್ಣು ಸಸಿ ಬಹುಮಾನವಾಗಿ ಬಂತು. ಕೊಡಗಿನಲ್ಲಿರುವ ಗೆಳೆಯರೊಬ್ಬರು ಕಿತ್ತಳೆ ಗಿಡ ಕೊಟ್ಟರು. ಹೀಗೆ ಮನೆಯ ಜಾಗದಲ್ಲಿ ವೈವಿಧ್ಯಮಯ ತೋಟಗಾರಿಕೆಗೆ ಸಸ್ಯಗಳು ಸಂಗ್ರಹವಾಗುತ್ತಾ ಹೋದವು.
ಧೂಮಪಾನ ಮಾಡದೇ ಇದ್ದರೂ ಕ್ಯಾನ್ಸರ್ ಹೇಗೆ ಬಂತು ಎಂದು ಅನೇಕ ರೋಗಿಗಳು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ನಮ್ಮ ಹವಾಮಾನ, ಸುತ್ತಲಿನ ವಾತಾವರಣವೂ ಕಾರಣ. ಹೆಚ್ಚಾಗಿ ಬಳಸುವ ರಾಸಾಯನಿಕ ವಸ್ತುಗಳು, ರಾಸಾಯನಿಕಯುಕ್ತ ಆಹಾರಗಳು ಕ್ಯಾನ್ಸರಿಗೆ ಕಾರಣವೆಂದು ಹಲವು ಸಂಶೋಧನೆಗಳೇ ಹೇಳಿವೆ. ಸ್ವೀಡನ್ ದೇಶದಲ್ಲಿಯೂ ರಾಸಾಯನಿಕಯುಕ್ತ ಆಹಾರವೇ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ರಾಸಾಯನಿಕಮುಕ್ತ ತರಕಾರಿಗಳು – ಹಣ್ಣಿನಗಿಡಗಳನ್ನು ಬೆಳೆಸಲು ನಿರ್ಧರಿಸಿದೆವು. ಆಹಾರ ತ್ಯಾಜ್ಯಗಳು, ಆವರಣದಲ್ಲಿರುವ ಸಸ್ಯಗಳ ಉದುರಿದ ಎಲೆಗಳನ್ನು ಬಳಸಿ ಗೊಬ್ಬರ ಮಾಡುತ್ತೇವೆ. ಈ ರೀತಿ ಸಾವಯವ ಗೊಬ್ಬರವನ್ನೇ ತೋಟಕ್ಕೆ ನೀಡುವುದು ಬಹುಮುಖ್ಯ. ನಿಸರ್ಗದಲ್ಲಿ ನೀರು, ಆಹಾರ, ಹವಾಮಾನ ಎಲ್ಲವೂ ಒಂದಕ್ಕೊಂದು ಪೂರಕ ಸಂಬಂಧವನ್ನು ಹೊಂದಿವೆ.
ಮೊದಲು ಕಾಂಪೌಂಡ್ ಸನಿಹವೇ ಗಿಡಗಳನ್ನು ಬೆಳೆಸಲಾಯಿತು. ಅಡುಗೆ ಮನೆ ಹತ್ತಿರವೇ ಕರಿಬೇವು. ಹೀಗೆ ಅನುಕೂಲಕ್ಕೆ ತಕ್ಕಂತೆ ಕಸ ಆಗದ ಹಾಗೆ ಗಿಡಗಳನ್ನು ಬೆಳೆಸಿದ್ದೇವೆ. ನಮಗೆ ಏನು ಬೇಕೋ ಅವೆಲ್ಲವನ್ನು ಬೆಳೆದುಕೊಳ್ಳುತ್ತಿದ್ದೇವೆ. ವೆನಿಲ್ಲಾ, ನವರತ್ನ ದಾಸವಾಳ, ಜಾಜಿ, ಗುಲಾಬಿ, ಮಲ್ಲಿಗೆ, ಹೂಗಳ ಗಿಡದ ಮಧ್ಯೆ ದೇವರ ಮೂರ್ತಿಯೂ ಇದೆ. ಹಾಗಾಗಿ ನೈಸರ್ಗಿಕವಾಗಿ ಪೂಜೆ ಸಲ್ಲಿಕೆ ಆಗುತ್ತದೆ.
20 ಜಾತಿಯ ಹಣ್ಣಿನ ಮರಗಳು, ದಾಳಿಂಬೆ, ಪಪ್ಪಾಯಿ, ಪೇರಲೆ, ಸ್ಟ್ರಾಬೆರಿ, ದ್ರಾಕ್ಷಿ, ಮಾವು, ಲೀಚಿ, ನೆಲ್ಲಿ, ಚಿಕ್ಕು, ಪನ್ನೇರಳೆ, ಸೀತಾಫಲ, ಕಿತ್ತಳೆ, ಮೋಸಂಬಿ, ಎಲ್ಲ ರೀತಿಯ ತರಕಾರಿಗಳು, ಹಲವು ವಿಧದ ಕುಂಬಳಕಾಯಿ, ಬಾಳೆಹಣ್ಣು, ಸೂರ್ಯಕಾಂತಿ, ತೊಗರಿಬೇಳೆ, ಸೋರೆಕಾಯಿ, ಪಡವಲಕಾಯಿ, ವಿವಿಧ ರೀತಿಯಸೊಪ್ಪು, ಪಾಲಕ್ ,ಮೆಂತೆ, ಕೊತ್ತಂಬರಿ ಸೊಪ್ಪು , ಬಸಳೆ, ನಿಂಬೆಹುಲ್ಲು, ಲೆಮನ್ ಗ್ರಾಸ್, ಪುದಿನಾ ಬೆಳೆದುಕೊಳ್ಳುತ್ತೇವೆ. ಯಾವುದೇ ಬೆಳೆಯ ಫಸಲು ವ್ಯರ್ಥವಾಗಬಾರದು. ಉಪಯೋಗವಾಗಬೇಕು. ನಮ್ಮ ದೈನಂದಿನ ಬಳಕೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆದುಕೊಳ್ಳುತ್ತೇವೆ.
ಮೊದಲು ತೋಟಗಾರಿಕೆ ಮಾಡಬೇಕು. ಸಸ್ಯಗಳನ್ನು ಬೆಳೆಸಬೇಕೆಂದು ಗಟ್ಟಿ ಸಂಕಲ್ಪ ಮಾಡಬೇಕು. ಮಳೆಕೊಯ್ಲು ಇದ್ದರೆ ಉತ್ತಮ. ಓಪನ್ ಪಿಟ್ ಮೆಥೆಡ್ ಕಾಂಪೋಸ್ಟಿಂಗ್ ಉತ್ತಮ. ನಮ್ಮ ಜಾಗ ಎಷ್ಟಿದೆ. ಯಾವುದನ್ನು ಬೆಳೆಯಬಹುದು. ಹೇಗೆ ಎಂಬ ಯೋಜನೆ ಮಾಡಿಕೊಳ್ಳಬೇಕು. ಪುರುಸೊತ್ತು ಮಾಡಿಕೊಂಡು ಗಮನ ಕೊಡಬೇಕು. ಯಾವುದೇ ಸಸ್ಯತ್ಯಾಜ್ಯ ವ್ಯರ್ಥವಾಗಬಾರದು. ಗಿಡಮರಗಳಿಗೆ ಪೋಷಕಾಂಶವಾಗಿ ಮನೆಯ ಗೊಬ್ಬರವೇ ಸಾಕು. ಉತ್ತಮ ಗುಣಮಟ್ಟದ ಗೊಬ್ಬರವಾಗಲು ಆರು ತಿಂಗಳು ಬೇಕು. ಒಂದು ವರ್ಷಕ್ಕೆ 2 ಬಾರಿ ಕಾಂಪೋಸ್ಟ್ ಗೊಬ್ಬರ ನೀಡುತ್ತೇವೆ. ನಾವೇ ಜೀವಾಮೃತ ತಯಾರು ಮಾಡಿಕೊಳ್ಳುತ್ತೇವೆ. ಮನೆಯ ಸುತ್ತಮುತ್ತಲಿನ ಈ ತೋಟ, ಮನಸಿಗೂ, ಕಣ್ಣಿಗೂ ಖುಷಿ ಕೊಡುತ್ತದೆ. ಸ್ವಲ್ಪ ಪ್ರೀತಿ, ಸ್ವಲ್ಪ ಕಾಳಜಿ ಮತ್ತು ಸ್ವಲ್ಪವೇ ಜ್ಞಾನ ತೋಟಗಾರಿಕೆ ಮಾಡಲು ಸಾಕು.
Fantastic Information on Gardening at Home.Please Keep posting useful Information on Gardening.
Thanks
Prof K.Prasad.
I like the idea of your ability