ಆಹಾರ ಉತ್ಪಾದನೆ ಎಷ್ಟಾಗಿದೆ ? ರೈತರ ಪಾಡು ಏನಾಗಿದೆ ?

3
ಲೇಖಕರು: ಪ್ರಶಾಂತ್‌ ಜಯರಾಮ್‌

ಭಾರತ ದೇಶದಲ್ಲಿ ಆಹಾರ ಉತ್ಪಾದನೆ ಏರಿಕೆಯಾದಂತೆ ರೈತರ ಆದಾಯ ಕುಸಿತವಾಗುತ್ತಿದೆ.ದೇಶಕ್ಕೆ ‘ಆಹಾರ ಭದ್ರತೆ’ ನೀಡುತ್ತಿರುವ ರೈತರಿಗೆ ‘ಆರ್ಥಿಕ ಭದ್ರತೆ’ ಇಲ್ಲದೇ ಹೋಗುತ್ತಿರುವ ಬಗ್ಗೆ ಗಂಭೀರವಾಗಿ ಯೋಚಿಸಿ ಕೃಷಿ ಕ್ಷೇತ್ರವನ್ನು ರೈತರು ಹೇಗೆ ಪರಿಗಣಿಸಬೇಕು?ಕೃಷಿಯನ್ನು ಪೂರ್ಣಕಾಲಿಕ ಉದ್ಯೋಗವಾಗಿ ಮತ್ತು ರೈತರ ಜೀವನಕ್ಕೆ ಬೇಕಾಗುವ ಸಂಪೂರ್ಣ ಆದಾಯದ ಮೂಲವಾಗಿ ತೆಗೆದುಕೊಳ್ಳಬಹುದೇ? ಕೃಷಿಯನ್ನು ಆಹಾರ ಭದ್ರತೆ ದೃಷ್ಟಿಯಿಂದ ಮುಂದುವರೆಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ರೈತರ ಆರ್ಥಿಕ ಭದ್ರತೆಯನ್ನು ನೋಡುವುದು ಅನಿವಾರ್ಯವಾಗಿದೆ.

ಆಹಾರ ಭದ್ರತೆ ಹೆಸರಿನಲ್ಲಿ ಪ್ರತಿಯೊಂದು ದೇಶಗಳು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡುತ್ತಿರುವುದರಿಂದ ಮತ್ತು ಉತ್ಪಾದನೆ ಮಟ್ಟ ಗರಿಷ್ಠ ಮಟ್ಟ ತಲುಪಿ ಆಹಾರ ಪೂರೈಕೆ -ಬೇಡಿಕೆ ನಡುವೆ ಸಾಕಷ್ಟು ವ್ಯತ್ಯಾಸ ಇರುವುದರಿಂದ ಆಹಾರಕ್ಕೆ ಬೇಡಿಕೆ ಇಲ್ಲವಾಗಿ ಬೆಲೆ ಕುಸಿತವಾಗುತ್ತಿದೆ, ರೈತರು ಬೆಳೆ ಬೆಳೆದು ಆರ್ಥಿಕವಾಗಿ ನಷ್ಟ ಹೊಂದುತ್ತಿದ್ದಾರೆ.

ಭಾರತ ದೇಶದ 138 ಕೋಟಿ ಜನಸಂಖ್ಯೆಗೆ 40 ಕೋಟಿ ಎಕರೆ ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಆಹಾರ ಧಾನ್ಯ (ಭತ್ತ:10, ಗೋಧಿ:12,ರಾಗಿ, ಜೋಳ, ಸಿರಿಧಾನ್ಯ:4.5, ಬೇಳೆಕಾಳು:2.5, (ಕೋಟಿ ಟನ್ ಗಳಲ್ಲಿ )):ಒಟ್ಟಾರೆ 30 ಕೋಟಿ ಟನ್, ಸಕ್ಕರೆ :04 ಕೋಟಿ ಟನ್, ಹಾಲು :20 ಕೋಟಿ ಟನ್,ತರಕಾರಿ :20 ಕೋಟಿ ಟನ್, ಹಣ್ಣು :10 ಕೋಟಿ ಟನ್.

138 ಕೋಟಿ ಜನಸಂಖ್ಯೆಗೆ ಉತ್ಪಾದನೆ ಮಾಡಲಾಗುತ್ತಿರುವ ಆಹಾರವನ್ನು ಪ್ರತಿಯೊಬ್ಬ ವ್ಯಕ್ತಿಗೆ ಸಮಾನವಾಗಿ ಹಂಚಿಕೆ ಮಾಡಿದಾಗ ಪ್ರತಿ ವ್ಯಕ್ತಿಗೆ ಪ್ರತಿ ವರ್ಷಕ್ಕೆ/ಪ್ರತಿ ದಿನಕ್ಕೆ ದೊರೆಯುವ ಆಹಾರದ ಪ್ರಮಾಣ:
#ಆಹಾರ ಧಾನ್ಯ :220 ಕೆಜಿ/600 ಗ್ರಾಂ
#ಸಕ್ಕರೆ :30 ಕೆಜಿ/80 ಗ್ರಾಂ #ತರಕಾರಿ :150 ಕೆಜಿ/400 ಗ್ರಾಂ
#ಹಣ್ಣು :75 ಕೆಜಿ/200ಗ್ರಾಂ #ಹಾಲು :150 ಲೀಟರ್/400 ಎಂ. ಎಲ್.

ನಾವು ದಿನನಿತ್ಯ ಬಳಸುವ ಮತ್ತು ಲಭ್ಯತೆ ಪ್ರಮಾಣಕ್ಕೂ ಬಹಳಷ್ಟು ವ್ಯತ್ಯಾಸವಿರುವುದನ್ನು ಕಾಣಬಹುದು.ಮುಕ್ತ ವ್ಯಪಾರ ನೀತಿಯಿಂದ ಹೊರದೇಶಗಳಿಂದ ಆಹಾರ ಅಮದು ಮಾಡಿಕೊಳ್ಳುತ್ತಿರುವ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು.

ಈಗಿನ ಜನಸಂಖ್ಯೆಗೆ ಬೇಕಿರುವ ಆಹಾರದ ಅವಶ್ಯಕತೆಗಿಂತ ಸುಮಾರು 1.5 ಪಟ್ಟು ಹೆಚ್ಚು ಉತ್ಪಾದನೆಯಾಗುತ್ತಿದೆ.ಈಗ ಬೆಳೆಯಲಾಗುತ್ತಿರುವ ಆಹಾರವನ್ನು ಸೂಕ್ತ ಸಾಗಾಟ ಮತ್ತು ಶೇಖರಣೆ ವ್ಯವಸ್ಥೆ ಮಾಡಿ 200 ಕೋಟಿಗಿಂತ ಅಧಿಕ ಜನಸಂಖ್ಯೆಗೆ ಆಹಾರ ಒದಗಿಸಬಹುದಾಗಿದೆ.ಪ್ರತಿ ವರ್ಷ ಬಳಕೆಯಾಗಿ ಉಳಿಯುವ ಆಹಾರದ ಪ್ರಮಾಣ ಕೂಡ ಏರಿಕೆಯಾಗುತ್ತ ಹೋಗುತ್ತದೆ.

ರೈತರು ಹೆಚ್ಚು ಬೆಳೆದಂತೆಲ್ಲ ಹೆಚ್ಚು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದ್ದು,ಕೃಷಿ ಕ್ಷೇತ್ರಕ್ಕೆ ಹೊಸದಾಗಿ ಹೆಚ್ಚು ಜನರನ್ನು ಸೇರ್ಪಡೆ ಮಾಡುವುದರಿಂದ ಅವರಿಗೆ ಕೃಷಿಯಲ್ಲಿ ಸುಸ್ಥಿರ ಜೀವನ ಮತ್ತು ಆದಾಯ ಪಡೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗಬೇಕಿದೆ.ಕೃಷಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಡೆಯಬಹುದಾದ/ ಗಳಿಸಬಹುದಾದ ಇತಿಮಿತಿಗಳ ಬಗ್ಗೆ ಸ್ಪಷ್ಟ ಆರಿವು ಮೂಡಿಸುವ ಕೆಲಸವಾಗಬೇಕಿದೆ.

ಕೃಷಿ ಹೊರತುಪಡಿಸಿ ಬೇರೆ ಆದಾಯ ಮೂಲವಿರುವ ಜನರಿಗೆ ಕೃಷಿಯಲ್ಲಿ ಬರುವ ಅಲ್ಪ ಲಾಭವು ಕೂಡ ಅವರಿಗೆ ಲಾಭದಾಯಕವಾಗಿ ಕಾಣಬಹುದು. ಉದಾಹರಣೆಗೆ ಒಂದು ಲಕ್ಷ ಬಂಡವಾಳ ಹಾಕಿ ಅದರ ಮೇಲೆ 5 ರಿಂದ 10 ಸಾವಿರ ಲಾಭ ಕಂಡರು ಅವರಿಗೆ ಬ್ಯಾಂಕ್ ಬಡ್ಡಿ ಲೆಕ್ಕಾಚಾರದಲ್ಲಿ ಲಾಭದಂತೆ ಕಂಡು ಬರುತ್ತದೆ.ಬೇರೆ ಆದಾಯದ ಮೂಲವಿಲ್ಲದೇ ಬರೀ ಕೃಷಿ ಆದಾಯದ ಮೂಲವನ್ನು ನಂಬಿಕೊಂಡಿರುವ ರೈತರಿಗೆ ಅದು ಲಾಭದಾಯಕವಾಗುವುದಿಲ್ಲ.

ದೊಡ್ಡ ಮಟ್ಟದ ಕಾರ್ಪೊರೇಟ್ ಕಂಪನಿಗಳು ಎಲ್ಲ ರೀತಿಯ ಉತ್ಪಾದನಾ ಮತ್ತು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಕೂಡ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರ ಪ್ರವೇಶ ಮಾಡಿಲ್ಲ. ಕೃಷಿ ಕ್ಷೇತ್ರ ಲಾಭದಾಯಕವಾಗಿದರೆ ಬಹುತೇಕ ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕರಿಂದ ಶೇರ್ ಮೊತ್ತ ಸಂಗ್ರಹಿಸಿ ಕೃಷಿಯಿಂದ ರೈತರನ್ನು ಈಗಾಗಲೇ ಓಡಿಸಿಬಿಟ್ಟಿರುತ್ತಿದ್ದರು.

ಕೃಷಿ ಕುಟುಂಬದ ಆದಾಯದ ಮೂಲಗಳ ಮಾಹಿತಿಯನ್ನು ನೋಡಿದಾಗ ಬೆಳೆ ಬೆಳೆಯುವ ಮೂಲಕ ಶೇ 35%, ಪಶುಪಾಲನೆ ಮೂಲಕ ಶೇ 15%, ಕೂಲಿ /ಸಂಬಳದ ಮೂಲಕ ಶೇ 40%, ಉಳಿಕೆ ಶೇ 10 % ಕೃಷಿಯೇತರ ಚಟುವಟಿಕೆ, ಗುತ್ತಿಗೆ, ಬಡ್ಡಿ, ಪಿಂಚಣಿ.ಈ ಅಂಕಿ ಅಂಶಗಳು ಕೃಷಿ ಜೊತೆಗೆ ಕೃಷಿಯೇತರ ಆದಾಯದ ಅನಿವಾರ್ಯತೆ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡುತ್ತದೆ.

ಕೃಷಿ ಆದಾಯ ಮತ್ತು ಕೃಷಿ ಜೀವನ ಕುರಿತು ಇಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಮೀಡಿಯಾದಲ್ಲಿ ಬರುವ ಅತಿ ರಂಜನೀಯ ಸುದ್ದಿಗಳನ್ನು ನೋಡಿ ರೋಮಾಂಚನಗೊಂಡು,ಇರುವ ಉದ್ಯೋಗಗಳನ್ನು ಬಿಟ್ಟು ಕೃಷಿಯಲ್ಲಿ ನಿರೀಕ್ಷಿತ ಆದಾಯ ಪಡೆಯಲಾಗದೆ ನಿರಾಶೆ ಹೊಂದಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೃಷಿ ಜೊತಗೆ ಕೃಷಿಗೆ ಪೂರಕವಾದ ಅಥವಾ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕೃಷಿಯನ್ನು ಇತರೆ ಉದ್ಯೋಗ/ವೃತ್ತಿಯ ಜೊತೆಗೆ ಅವಶ್ಯಕ ಆದಾಯ ಸರಿ ಹೊಂದಿಸಲು ಹೆಚ್ಚುವರಿ ಆದಾಯದ ಮೂಲವಾಗಿ ಕೃಷಿಯನ್ನು ನೆಡೆಸುವುದು ಅನಿವಾರ್ಯ.

ಪ್ರಶಾಂತ್ ಜಯರಾಮ್
ಕೃಷಿಕರು, ಸತ್ಯಗಾಲ, ಕೊಳ್ಳೇಗಾಲ ತಾಲ್ಲೂಕ್, ಚಾಮರಾಜನಗರ ಜಿಲ್ಲೆ

3 COMMENTS

  1. ಹೆಚ್ಚಿನ 1.5 ಪಟು ಆಹಾರವನ್ನು ಚರ್ಚಿಸಿ ಹೊರದೇಶಕೆ ಕಳಿಸಿ ರೈತರ ಆದಾಯ ಹೆಚ್ಚಿಸಬೇಕು, ಸರ್

  2. Good information, food security is must, food is not like industry based product to manufacture whenever need arises. However government must think and develop legal framework to protect farmers income and their produce. And farmers must take a control of market through FPOs by disconnecting the Commission Agent & Trader cartel.

LEAVE A REPLY

Please enter your comment!
Please enter your name here