ಮಳೆಗಾಲದಲ್ಲಿ ಮಾತ್ರ ದೊರೆಯುವ ಅಪರೂಪದ ಕಾಡು ತರಕಾರಿ ಮಡೆಹಾಗಲ ಕಾಯಿ.. ಮಲೆನಾಡಿನ ಕಾಡುಗಳಲ್ಲಿ ಹೆಚ್ಚಾಗಿ, ಕರಾವಳಿ ಪ್ರದೇಶದಲ್ಲಿಯೂ ವಿರಳವಾಗಿ ಕಂಡು ಬರುವ ಮಡೆಹಾಗಲಕ್ಕೆ ಕಾಟುಪೀರೆ, ಪೂಪೀರೆ ಎಂಬ ಹೆಸರುಗಳೂ ಇವೆ. ಇಂಗ್ಲಿಷ್ನಲ್ಲಿ ಸ್ಪಿನ್ ಗಾರ್ಡ್ ಎಂದು ಕರೆಯುತ್ತಾರೆ. ಕರಾವಳಿ, ಮಲೆನಾಡಿಗರಿಗೆ ಇದರ ಪರಿಚಯ ಇರುತ್ತದೆ.
ಇದರ ವೈಜ್ಞಾನಿಕ ಹೆಸರು ಮೊಮೊರ್ಡಿಕ, ಕ್ಯುಕುರ್ಬಿಟೇಸಿಯೆ ಕುಟುಂಬಕ್ಕೆ ಸೇರಿದೆ. ಇದರ ತವರು ಭಾರತ. ಈಗ ಶ್ರೀಲಂಕಾ, ಮಾಯನ್ಮಾರ್, ಚೀನಾ, ಜಪಾನ್, ದಕ್ಷಿಣ ಪೂರ್ವ ಏಷ್ಯಾ, ಆಫ್ರಿಕಾಗಳಲ್ಲಿ, ದಕ್ಷಿಣ ಅಮೆರಿಕಾದಲ್ಲಿಯೂ ಕಂಡು ಬರುತ್ತದೆ. ಭಾರತದ ಅಸ್ಸಾಂ, ಮೇಘಾಲಯ, ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.
ಉತ್ತಮ ಪೌಷ್ಟಿಕಾಂಶವುಳ್ಳ ತರಕಾರಿ ಇದಾಗಿದೆ. ಅನೇಕ ಔಷಧೀಯ ಗುಣಗಳೂ ಮಡೆಹಾಗಲದಲ್ಲಿದೆ. ಹೆಸರು ಮಡೆಹಾಗಲ ಎಂದ ಮಾತ್ರಕ್ಕೆ ಹಾಗಲದಂತೆ ಕಹಿ ಇರುವುದಿಲ್ಲ. ಹೀರೆಕಾಯಿಯಂತೆ ಸಿಹಿಯಾದ ತರಕಾರಿ ಇದು.
ಭಾರತದಲ್ಲಿ ಸಾವಿರಾರು ವರ್ಷಗಳಿಂದ ಔಷಧಿಯಾಗಿ, ಆಹಾರವಾಗಿ ಬಳಕೆಯಲ್ಲಿದೆ.. ಆಯುರ್ವೇದ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಇದರ ಗಡ್ಡೆಗಳನ್ನು, ಬೇರನ್ನು ಉಪಯೋಗಿಸಿ ಮೂಲವ್ಯಾಧಿ ಸೇರಿದಂತೆ ವಿವಿಧ ರೋಗಗಳಿಗೆ ಔಷಧಿಗಳನ್ನು ತಯಾರಿಸುತ್ತಾರೆ.
ಮಡೆಹಾಗಲದಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಪೊಟಾಸಿಯಂ, ಪ್ರೋಟೀನ್, ಫೈಬರ್, ಕಾರ್ಬೊಹೈಡ್ರೇಟ್, ಕಬ್ಬಿಣ, ಮ್ಯಾಂಗನೀಸ್ ಅಂಶಗಳಲ್ಲದೆ ಕೆರೊಟಿನ್ ಅತ್ಯಧಿಕ ಪ್ರಮಾಣದಲ್ಲಿದೆ. ಪೌಷ್ಟಿಕಾಂಶಗಳ ಆಗರವೇ ಆಗಿರುವ ಮಡೆಹಾಗಲದಿಂದ ಸಾಂಬಾರ್, ಪಲ್ಯ, ಬಜ್ಜಿ ಮುಂತಾದ ಖಾದ್ಯಗಳನ್ನು ತಯಾರಿಸಬಹುದು. ಅದ್ಬುತವಾದ ರುಚಿಯನ್ನು ಹೊಂದಿರುವ ಮಡೆಹಾಗಲದಲ್ಲಿ ನಕ್ಷತ್ರಾಕಾರದ ಬೀಜಗಳಿರುತ್ತವೆ. ಬೀಜಗಳು ಕೂಡ ಅತ್ಯಂತ ಪುಷ್ಟಿಕರವಾಗಿವೆ. ಬೀಜ ಸಹಿತ ತಿನ್ನಬಹುದಾದ ತರಕಾರಿ ಇದು. ಇದರ ಒಂದು ಬೀಜ ಒಂದು ಲೋಟ ತುಪ್ಪಕ್ಕೆ ಸಮಾನವಾದ ಪೌಷ್ಟಿಕಾಂಶಗಳನ್ನು ಹೊಂದಿದೆ ಎನ್ನುತ್ತಾರೆ ಹಿರಿಯರು.
ಬೆಳೆಸುವ ವಿಧಾನ:
ಇದು ಕಾಡು ತರಕಾರಿಯಾದರೂ ಇದು ನಾಡಿನಲ್ಲಿಯೂ ಬೆಳೆಯುತ್ತದೆ. ಮನೆ ಅಂಗಳದ ಕೈತೋಟದಲ್ಲಿ ಬೆಳೆಸಬಹುದು.. ಬಲಿತು ಹಣ್ಣಾದ ಮಡೆಹಾಗಲದ ಬೀಜಗಳನ್ನು ಮಳೆಗಾಲದ ಆರಂಭದಲ್ಲಿ ಬಿತ್ತಬೇಕು. ಒಂದು ತಿಂಗಳ ಬಳಿಕ ಸಾವಯವ ಗೊಬ್ಬರ ನೀಡಿದರೆ ಹುಲುಸಾಗಿ ಹಬ್ಬಿಕೊಂಡು ಬೆಳೆಯುತ್ತದೆ. ಆಧಾರಕ್ಕೆ ಚಪ್ಪರ ಹಾಕಬೇಕು. ಬೀಜ ಬಿತ್ತಿದ 90 ದಿನಗಳಲ್ಲಿ ಫಸಲು ದೊರೆಯುತ್ತದೆ.
ಹೀರೆಕಾಯಿಯ ಹೂವಿನಂತೆಯೇ ಹಳದಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಒಮ್ಮೆ ನೆಟ್ಟರೆ ಪ್ರತಿ ವರ್ಷ ನೆಡುವ ಅಗತ್ಯವಿಲ್ಲ. ಮಳೆಗಾಲ ಕಳೆದ ನಂತರ ಬಳ್ಳಿ ಒಣಗಿ ಸಾಯುತ್ತದೆ. ಆದರೆ ಮಣ್ಣಿನಲ್ಲಿ ಗಡ್ಡೆಗಳಿರುತ್ತವೆ. ಮಳೆ ಬಿದ್ದಾಗ ಗಡ್ಡೆಗಳು ಚಿಗುರಿ ಪುನಃ ಫಸಲು ನೀಡಲು ಪ್ರಾರಂಭಿಸುತ್ತದೆ. ಅಕ್ಟೋಬರ್, ನವೆಂಬರ್ ಅಂತ್ಯದವರೆಗೂ ಕಾಯಿಗಳು ಹೇರಳವಾಗಿ ದೊರೆಯುತ್ತವೆ.
ಸುಮಾರು ಏಳೆಂಟು ಸೆಂಟಿ ಮೀಟರ್ನಷ್ಟು ಉದ್ದದ ಹಸಿರು ಬಣ್ಣದ ಪುಟ್ಟ ಕಾಯಿಗಳಲ್ಲಿ ರಂಬುಟಾನ್ ಹಣ್ಣಿನಲ್ಲಿರುವಂತೆ ದೊರಗು ಮುಳ್ಳಿನಂತಹ ರಚನೆಗಳಿರುತ್ತವೆ. ಹಾಗೆಂದು ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ಸಿಪ್ಪೆ ಮತ್ತು ತಿರುಳು, ಬೀಜದ ಸಹಿತ ಉಪಯೋಗಿಸಬೇಕು.
ಇದನ್ನು ಕೃಷಿಕರು ಬೆಳೆಸುವುದು ಕಡಿಮೆ. ಆದರೆ ಕಾಡಿನಿಂದ ಆಯ್ದು ತಂದು ಕೆಲವರು ಮಂಗಳೂರು, ಬಿ.ಸಿ.ರೋಡ್ ಮಾರುಕಟ್ಟೆಗಳಲ್ಲಿ ಮಾರುತ್ತಾರೆ. ಬೆಂಗಳೂರಿನಲ್ಲಿಯೂ ಮಾರಾಟ ಮಾಡುವುದು ಕಂಡು ಬರುತ್ತದೆ. ರುಚಿಕರ, ಔಷಧೀಯುಕ್ತವಾದ ಮಡೆಹಾಗಲಕ್ಕೆ. ಮಾರುಕಟ್ಟೆಯಲ್ಲಿ ಕಿಲೋ ಒಂದಕ್ಕೆ 150ರಿಂದ 200 ರೂ.ವರೆಗೂ ಧಾರಣೆ ಇರುವುದರಿಂದ ಕೃಷಿಕರು ಇದರ ಕೃಷಿ ಮಾಡಿ ಲಾಭ ಗಳಿಸಬಹುದಾಗಿದೆ.
-ಅನೂಷಾ ಹೊನ್ನೇಕೂಲು
Madhagala beeja beku yelli sigatthe nan edanne santhe yella kelthidde